ಪುತ್ತೂರು: ನಗರದ ಹೊರವಲಯದಲ್ಲಿ 9 ವರ್ಷಗಳ ಹಿಂದೆ ಅಪ್ರಾಪ್ತ ವಯಸ್ಸಿನ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣದಲ್ಲಿ ಕಬಕ ಗ್ರಾಮದ ವಿದ್ಯಾಪುರ ನಿವಾಸಿ ಮಹಮ್ಮದ್ ಮುಸ್ತಾಫ ಅಲಿಯಾಸ್ ಮುಸ್ತಾಫ ಶೇಖ್‌ಗೆ ಇಲ್ಲಿನ ಪೋಕ್ಸೊ ವಿಶೇಷ ನ್ಯಾಯಾಲಯವು ಮೂರು ವರ್ಷಗಳ ಸಾದಾ ಕಾರಾಗೃಹ ಶಿಕ್ಷೆ ವಿಧಿಸಿದೆ.
ವಿದ್ಯಾರ್ಥಿನಿಯೊಬ್ಬಳ ಕಿವಿಯೋಲೆ ಶಾಲೆಯಲ್ಲಿ ತುಂಡಾಗಿ ಬಿದ್ದಿತ್ತು. ಕಿವಿಯೋಲೆ ಖರೀದಿಸಲೆಂದು ವಿದ್ಯಾರ್ಥಿನಿಯು 2015ರ ಡಿಸೆಂಬರ್ 4ರಂದು ಅಂಗಡಿಯೊಂದಕ್ಕೆ ಕಾಲು ದಾರಿಯಾಗಿ ತೆರಳುತ್ತಿದ್ದ ವೇಳೆ ಮಹಮ್ಮದ್ ಮುಸ್ತಾಫ ಆಕೆಯನ್ನು ತಡೆದು ನಿಲ್ಲಿಸಿ ಕೈ ಹಿಡಿದು ಎಳೆದು ತಬ್ಬಿಕೊಂಡು ಮುಖಕ್ಕೆ ಚುಂಬಿಸಲು ಮುಂದಾಗಿದ್ದ. ಬಾಲಕಿಯು ಆತನನ್ನು ದೂಡಿ ಹಾಕಿ ಬೊಬ್ಬೆ ಹಾಕಿದ್ದಳು. ಬೊಬ್ಬೆ ಕೇಳಿ ಇತರರು ಅಲ್ಲಿಗೆ ಧಾವಿಸಿದಾಗ ಆರೋಪಿ ಅಲ್ಲಿಂದ ಓಡಿ ಹೋಗಿದ್ದ.‘
ಸಂತ್ರಸ್ತ ಬಾಲಕಿಯ ತಾಯಿ ನೀಡಿದ್ದ ದೂರಿನಂತೆ ಪುತ್ತೂರು ನಗರದ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದರು. ಮಹಮ್ಮದ್ ಮುಸ್ತಾಫನ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.
ಪೊಕ್ಸೊ ವಿಶೇಷ ನ್ಯಾಯಾಲಯದ ನ್ಯಾಯಧೀಶರಾದ ಸರಿತಾ ಡಿ. ಅವರು, ಮಹಮ್ಮದ್ ಮುಸ್ತಾಫನಿಗೆ ಬಾಲಕಿಯ ಮಾನಭಂಗಕ್ಕೆ ಯತ್ನಿಸಿದ್ದಕ್ಕೆ ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 354 ಮತ್ತು ಲೈಂಗಿಕ ದೌರ್ಜನ್ಯದಿಂದ ಮಕ್ಕಳ ರಕ್ಷಣೆ (ಪೊಕ್ಸೊ) ಕಾಯ್ದೆಯ ಸೆಕ್ಷನ್ 8ರ ಅಡಿ 3 ವರ್ಷಗಳ ಸಾದಾ ಜೈಲು ಶಿಕ್ಷೆ ಮತ್ತು ₹20 ಸಾವಿರ ದಂಡ ವಿಧಿಸಿದ್ದಾರೆ. ದಂಡ ತೆರಲು ತಪ್ಪಿದಲ್ಲಿ ಅಪರಾಧಿಯು 6 ತಿಂಗಳ ಜೈಲು ಶಿಕ್ಷೆ ಅನುಭವಿಸಬೇಕು ಎಂದು ಆದೇಶ ಮಾಡಿದ್ದಾರೆ.
ಐಪಿಸಿ ಸೆಕ್ಷನ್ 341ರ ಅಡಿ (ಬಾಲಕಿಯನ್ನು ಬಲವಂತವಾಗಿ ತಬ್ಬಿದ್ದು) 1ತಿಂಗಳ ಸಾದಾ ಜೈಲು ಶಿಕ್ಷೆ ಮತ್ತು ₹ 500 ದಂಡ ವಿಧಿಸಿದ್ದಾರೆ. ದಂಡ ತೆರಲು ತಪ್ಪಿದಲ್ಲಿ ಹೆಚ್ಚುವರಿಯಾಗಿ ಒಂದು ವಾರ ಸಾದಾ ಜೈಲು ಶಿಕ್ಷೆ ಅನಭವಿಸಬೇಕು ಎಂದು ಆದೇಶ ಮಾಡಿದ್ದಾರೆ. ಸಂತ್ರಸ್ತ ಬಾಲಕಿಗೆ ₹15 ಸಾವಿರ ಪರಿಹಾರ ನೀಡುವಂತೆಯೂ ಆದೇಶಿಸಿದ್ದಾರೆ.
ಈ ಪ್ರಕರಣ ಸಂಬಂಧ ಒಟ್ಟು 14 ಸಾಕ್ಷಿದಾರರನ್ನು ವಿಚಾರಣೆ ನಡೆಸಲಾಗಿತ್ತು. ಪೋಕ್ಸೊ ವಿಶೇಷ ನ್ಯಾಯಾಲಯದಲ್ಲಿ ಸಂತ್ರಸ್ತೆಯ ಪರ ಸರ್ಕಾರಿ ವಕೀಲ ಕುದ್ರಿಯ ಪುಷ್ಪರಾಜ ಅಡ್ಯಂತಾಯ ವಾದಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.