ಮಂಗಳೂರು: ನಗರದ ನೂತನ ಮೇಯರ್ ಆಗಿ ಮನೋಜ್ ಕುಮಾರ್ ಅವಿರೋಧವಾಗಿ ಗುರುವಾರ ಆಯ್ಕೆಯಾದರು.
ಪರಿಶಿಷ್ಟ ಜಾತಿಗೆ ಮೀಸಲಿದ್ದ ಮೇಯರ್ ಹುದ್ದೆಗೆ ಬಿಜೆಪಿ ಸದಸ್ಯ ಮನೋಜ್ ಅವರು ಮಾತ್ರ ನಾಮಪತ್ರ ಸಲ್ಲಿಸಿದ್ದರು. ಕಾಂಗ್ರೆಸ್ ನಲ್ಲಿ ಪರಿಶಿಷ್ಟ ಜಾತಿಯ ಯಾವುದೇ ಸದಸ್ಯರಿಲ್ಲ. ಹಾಗಾಗಿ ಕಾಂಗ್ರೆಸ್ನಿಂದ ಯಾವುದೇ ನಾಮಪತ್ರ ಸಲ್ಲಿಕೆ ಆಗಿರಲಿಲ್ಲ. ಹಾಗಾಗಿ ಬಿಜೆಪಿಯ ಮನೋಜ್ ಕುಮಾರ್ ಅವಿರೋಧವಾಗಿ ಗೆಲುವು ಸಾಧಿಸಿದ್ದಾರೆ ಎಂದು ಚುನಾವಣಾಧಿಕಾರಿಯಾಗಿದ್ದ ಪ್ರಾದೇಶಿಕ ಆಯುಕ್ತ ರಮೇಶ್ ಘೋಷಿಸಿದರು.
ಉಪ ಮೇಯರ್ ಹುದ್ದೆಗೆ ಕಾಂಗ್ರೆಸ್ ನ ಜೀನತ್ ಶಂಸುದ್ದೀನ್, ಬಿಜೆಪಿಯ ಭಾನುಮತಿ ಪಿ.ಎಸ್ ಹಾಗೂ ವನಿತಾ ಪ್ರಸಾದ್ ನಾಮಪತ್ರ ಸಲ್ಲಿಸಿದ್ದರು. ಮೂವರ ನಾಮಪತ್ರಗಳು ಕ್ರಮಬದ್ಧವಾಗಿದ್ದವು. ವನಿತಾ ಪ್ರಸಾದ್ ನಾಮಪತ್ರ ಹಿಂಪಡೆದರು
ಜೀನತ್ ಸಂಶುದ್ದೀನ್ ಪರ ಕಾಂಗ್ರೆಸ್ ನ 14 ಸದಸ್ಯರು ಹಾಗಿ ಬಿಜೆಪಿಯ 47 ಸದಸ್ಯರು ವಿರುದ್ಧವಾಗಿ ಮತ ಚಲಾಯಿಸಿದರು. ಭಾನುಮತಿ ಅವರ ಪರವಾಗಿ ಬಿಜೆಪಿಯ 47, ವಿರುದ್ಧವಾಗಿ ಕಾಂಗ್ರೆಸ್ ನ 14 ಸದಸ್ಯರು ಮತ ಚಲಾಯಿಸಿದರು. ಎಸ್ಡಿಪಿಐ ಸದಸ್ಯೆ ತಟಸ್ಥವಾಗಿ ಉಳಿದರು.
ಅತಿಹೆಚ್ಚು ಮತ ಪಡೆದ ಭಾನುಮತಿ ಅವರು ಉಪಮೇಯರ್ ಆಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಪ್ರಕಟಿಸಿದರು.
ಪಾಲಿಕೆಯಲ್ಲಿ 60 ಚುನಾಯಿತ ಸದಸ್ಯರು ಇದ್ದಾರೆ. ಇವರಲ್ಲಿ 44 ಮಂದಿ ಬಿಜೆಪಿಯವರು, 14 ಮಂದಿ ಕಾಂಗ್ರೆಸ್ ಹಾಗೂ ಇಬ್ಬರು ಎಸ್ ಡಿಪಿಐ ಸದಸ್ಯರು. ಮೇಯರ್ ಉಪಮೇಯರ್ ಚುನಾವಣೆಯಲ್ಲಿ ಮತದಾನದ ಹಕ್ಕು ಹೊಂದಿದ್ದ ಸಂಸದ ಕ್ಯಾ. ಬ್ರಿಜೇಶ್ ಚೌಟ, ನಗರ ದಕ್ಷಿಣ ಕ್ಷೇತ್ರದ ಶಾಸಕ ಡಿ.ವೇದವ್ಯಾಸ ಕಾಮತ್, ನಗರ ಉತ್ತರ ಕ್ಷೇತ್ರದ ಶಾಸಕ ಡಾ.ವೈ.ಭರತ್ ಶೆಟ್ಟಿ ಮತದಾನ ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದರು. ಮತದಾನದ ಹಕ್ಕು ಹೊಂದಿದ್ದ ವಿಧಾನ ಪರಿಷತ್ ಸದಸ್ಯರಾದ ಮಂಜುನಾಥ ಭಂಡಾರಿ ಹಾಗೂ ಐವನ್ ಡಿಸೋಜ ಗೈರಾಗಿದ್ದರು. ಎಸ್ ಡಿಪಿಐನ ಒಬ್ಬ ಸದಸ್ಯ ಗೈರಾಗಿದ್ದರು. ನಾಲ್ಕು ಸ್ಥಾಯಿ ಸಮಿತಿಗಳ ಸದಸ್ಯರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.