ADVERTISEMENT

ಮಂಗಳೂರು | ರಸ್ತೆ ಗುಂಡಿ: 15 ದಿನಗಳಲ್ಲಿ ತೇಪೆ ಕಾರ್ಯ ಶುರು: ಮೇಯರ್‌ ಭರವಸೆ

​ಪ್ರಜಾವಾಣಿ ವಾರ್ತೆ
Published 20 ನವೆಂಬರ್ 2024, 5:50 IST
Last Updated 20 ನವೆಂಬರ್ 2024, 5:50 IST
<div class="paragraphs"><p>ಪಾಲಿಕೆ ಹಮ್ಮಿಕೊಂಡಿದ್ದ ಫೋನ್ ಇನ್ ಕಾರ್ಯಕ್ರಮದಲ್ಲಿ ಮೇಯರ್ ಮನೋಜ್‌ ಕುಮಾರ್‌ ಅವರು ಸಾರ್ವಜನಿಕರ ಅಹವಾಲುಗಳನ್ನು ಮಂಗಳವಾರ ಆಲಿಸಿದರು.</p></div>

ಪಾಲಿಕೆ ಹಮ್ಮಿಕೊಂಡಿದ್ದ ಫೋನ್ ಇನ್ ಕಾರ್ಯಕ್ರಮದಲ್ಲಿ ಮೇಯರ್ ಮನೋಜ್‌ ಕುಮಾರ್‌ ಅವರು ಸಾರ್ವಜನಿಕರ ಅಹವಾಲುಗಳನ್ನು ಮಂಗಳವಾರ ಆಲಿಸಿದರು.

   

-ಪ್ರಜಾವಾಣಿ ಚಿತ್ರ 

ಮಂಗಳೂರು: 'ನಗರದ ರಸ್ತೆಗಳ ಗುಂಡಿ ಮುಚ್ಚಲು ಅಲ್ಪಾವಧಿ ಟೆಂಡರ್‌ ಕರೆದು ಕೆಲಸ ಶುರು ಮಾಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಇನ್ನು 15 ದಿನಗಳಲ್ಲಿ ರಸ್ತೆ ಗುಂಡಿಗಳನ್ನು ಮುಚ್ಚುವ ಕಾರ್ಯ ಆರಂಭವಾಗಲಿದೆ' ಎಂದು ಮೇಯರ್ ಮನೋಜ್‌ ಕುಮಾರ್‌ ತಿಳಿಸಿದರು.

ADVERTISEMENT

ಪಾಲಿಕೆ ವತಿಯಿಂದ ಇಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಫೋನ್‌ ಇನ್ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ರಸ್ತೆ ಗುಂಡಿಗಳಿಂದಾಗಿ ಸಾರ್ವಜನಿಕರು ಎದುರಿಸುತ್ತಿರುವ ಸಮಸ್ಯೆ ಬಗ್ಗೆ ಅನೇಕರು ಅಹವಾಲು ತೋಡಿಕೊಂಡಿದ್ದರು.

‘ಎಲ್ಲ ವಾರ್ಡ್‌ಗಳ ರಸ್ತೆ ಗುಂಡಿ ಮುಚ್ಚುವ ಕಾಮಗಾರಿಯನ್ನು ಏಕಕಾಲದಲ್ಲಿ ನಿರ್ವಹಿಸುವುದಿಲ್ಲ. 6 ರಿಂದ 10 ವಾರ್ಡ್‌ಗಳಿಗೆ ಒಂದು ಪ್ಯಾಕೇಜ್‌ ರೂಪಿಸಿ ಏಳು ದಿನಗಳ ಅಲ್ಪಾವಧಿ  ಟೆಂಡರ್‌ ಕರೆಯಲು ಸಿದ್ಧತೆ ನಡೆದಿದೆ. ಹಂತ ಹಂತವಾಗಿ ಎಲ್ಲ ವಾರ್ಡ್‌ಗಳ ರಸ್ತೆಗಳೂ ಗುಂಡಿಗಳಿಂದ ಮುಕ್ತವಾಗಲಿವೆ’ ಎಂದು ಮೇಯರ್‌ ಭರವಸೆ ನೀಡಿದರು.

ಪಡೀಲ್‌– ಪಂಪ್‌ವೆಲ್‌ ರಸ್ತೆಯ ವಿಸ್ತರಣೆ ಹಾಗೂ ಕಾಂಕ್ರೀಟೀಕರಣದ ₹ 64 ಕೋಟಿ ಮೊತ್ತದ ಕಾಮಗಾರಿ ಆಮೆಗತಿಯಲ್ಲಿ ಸಾಗುತ್ತಿರುವ ಕುರಿತು ಪ್ರತಿಕ್ರಿಯಿಸಿದ ಮೇಯರ್‌, ‘ಇಲ್ಲಿ ಕುಡಿಯುವ ನೀರಿನ ಮುಖ್ಯ ಕೊಳವೆ ಸ್ಥಳಾಂತರವಾಗಬೇಕಿದ್ದ ಕಾರಣಕ್ಕೆ ಕಾಮಗಾರಿ ವಿಳಂಬವಾಗಿದೆ. ಕುಡಿಯುವ ನೀರಿನ ಕೊಳವೆ ಸ್ಥಳಾಂತರಕ್ಕೆ ಕ್ರಮ ವಹಿಸಿದ್ದೇವೆ. ಎರಡು ದಿನಗಳಿಂದ ಮಾರ್ಗದ ಒಂದು ಪಾರ್ಶ್ವದ ಕಾಮಗಾರಿ ನಡೆಯುತ್ತಿದೆ. ಈ ಕಾಮಗಾರಿಯನ್ನು ಆದಷ್ಟು ಶೀಘ್ರ ಪೂರ್ಣಗೊಳಿಸಲಿದ್ದೇವೆ’ ಎಂದರು.

‘ಪಂಪ್‌ವೆಲ್‌– ಕಂಕನಾಡಿ–ಬೆಂದೂರ್‌ವೆಲ್‌ ರಸ್ತೆ ಅಭಿವೃದ್ಧಿ ಕಾಮಗಾರಿಯನ್ನು ಲೋಕೋಪಯೋಗಿ ಇಲಾಖೆಯವರೇ ನಿರ್ವಹಿಸಲಿದ್ದಾರೆ. ಇಲ್ಲೂ ಕುಡಿಯುವ ನೀರು ಪೂರೈಸುವ 1 ಮೀ. ಸುತ್ತಳತೆಯ ಕೊಳವೆ ಮಾರ್ಗವನ್ನು ಸ್ಥಳಾಂತರಿಸುವ ಅಗತ್ಯ‌ವಿದೆ. ಈ ಕೊಳವೆಯ ಸ್ಥಳಾಂತರಕ್ಕೆ ಕ್ರಮಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಈ ರಸ್ತೆ ವಿಸ್ತರಣೆ ಕಾಮಗಾರಿಯೂ ಶೀಘ್ರವೇ ಶುರುವಾಗಲಿದೆ’ ಎಂದು ಮೇಯರ್‌ ತಿಳಿಸಿದರು.

‘ನಂತೂರು ವೃತ್ತದಲ್ಲಿ ಮೇಲ್ಸೇತುವೆ ಕಾಮಗಾರಿ ಸಲುವಾಗಿ ರಸ್ತೆ ಪಕ್ಕದ ದಿಣ್ಣೆಗಳನ್ನು ಸಮತಟ್ಟು ಗೊಳಿಸಲಾಗಿದೆ. ಇಲ್ಲಿ ರಸ್ತೆಯಲ್ಲಿರುವ ಗುಂಡಿಗಳನ್ನು ಮುಚ್ಚಿ ಸಮತಟ್ಟು ಮಾಡುವಂತೆ  ಎನ್‌ಎಚ್‌ಎಐ ಅಧಿಕಾರಿಗಳಿಗೆ ಸೂಚನೆ ನೀಡುತ್ತೇನೆ’ ಎಂದರು.

ಕಾವೂರಿನಲ್ಲಿ ಬೀದಿ ಬದಿ ವ್ಯಾಪಾರಿಗಳು ಪಾದಚಾರಿ ಮಾರ್ಗ ಒತ್ತುವರಿ ಮಾಡಿಕೊಂಡಿದ್ದಾರೆ ಎಂದು ಸ್ಥಳೀಯರು ಗಮನ ಸೆಳೆದರು. ಪಣಂಬೂರು ಕಡಲ ಕಿನಾರೆ ರಸ್ತೆಯಲ್ಲಿ ದೂಳಿನ ಮಸ್ಯೆ ಹಾಗೂ ಬೀದಿ ನಾಯಿ ಹಾವಳಿ ಇದೆ ಎಂದು ಸ್ಥಳೀಯರೊಬ್ಬರು ಅಹವಾಲು ಹೇಳಿಕೊಂಡರು. ಜಲ್ಲಿಗುಡ್ಡೆಯ ಜಯನಗರದಲ್ಲಿ  ಕೊಳಚೆ ನೀರನ್ನು ರಸ್ತೆಗೆ ಬಿಡಲಾಗುತ್ತಿದೆ ಎಂದು ಸ್ಥಳೀಯ ನಿವಾಸಿಯೊಬ್ಬರು ದೂರಿದರು.  ಮಾಲಾಡಿ ಪರಿಸರದಲ್ಲಿ ಒಳಚರಂಡಿ ನೀರುಕಟ್ಟಿಕೊಂಡು ಇಡೀ ಪರಿಸರ ದುರ್ನಾತ ಬೀರುತ್ತಿದೆ ಎಂದು ಭಾಗೀರಥಿ ದೂರಿದರು.

ಉಪಮೇಯರ್‌ ಭಾನುಮತಿ ಪಿ.ಎಸ್‌., ವಿವಿಧ ಸ್ಥಾಯಿಸಮಿತಿಗಳ ಅಧ್ಯಕ್ಷರಾದ ಮನೋಹರ್ ಕದ್ರಿ, ವೀಣಾ ಮಂಗಳಾ ಹಾಗೂ ಅಧಿಕಾರಿಗಳು ಭಾಗವಹಿಸಿದ್ದರು. ‌

ಜನರ ಅಹವಾಲುಗಳಿಗೆ ಮೇಯರ್‌ ಸ್ಪಂದನೆ

ಸರಿತಾ: ವಾರ್ಡ್‌ ಸಮಿತಿ ಸಭೆಗಳು ನಿಯಮಿತವಾಗಿ ನಡೆಯುತ್ತಿಲ್ಲ.

ಮೇಯರ್‌: ವಾರ್ಡ್‌ ಸಮಿತಿ ಸಭೆ ನಡೆಸಲು ಕ್ರಮವಹಿಸುತ್ತೇನೆ.

ಹೇಮಲತಾ: ಸ್ಟೇಟ್‌ಬ್ಯಾಂಕ್ ಪರಿಸರದಲ್ಲಿ ಬೀದಿಬದಿ ವ್ಯಾಪಾರಿಯಾಗಿರುವ ನಾನು ಅರ್ಜಿ ಸಲ್ಲಿಸಿದರೂ ಇನ್ನೂ ಗುರುತಿನ ಚೀಟಿ ನೀಡಿಲ್ಲ

ಮೇಯರ್‌: ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ವಿವರ ಕಲೆಹಾಕಿ. ಗುರುತಿನ ಚೀಟಿ ವಿತರಿಸಲು ಕ್ರಮ ವಹಿಸಬೇಕು ನೇಮು ಕೊಟ್ಟಾರಿ: ಗುಜ್ಜರಕೆರೆಯ ಮಧ್ಯೆ ತೀರ್ಥಮಂಟಪ ನಿರ್ಮಿಸಬೇಕು. ಪರಿಸರದ ಒಳಚರಂಡಿ ನೀರು ಸೇರಿ ಗುಜ್ಜರಕೆರೆಯ ನೀರು ಕಲುಷಿತಗೊಳ್ಳುತ್ತಿದ್ದು, ಅದನ್ನು ತಡೆಯಬೇಕು.

ಮೇಯರ್‌: ಗುಜ್ಜರಕೆರೆಗೆ ಎಲ್ಲಿಂದ ಕೊಳಚೆ ನೀರು ಸೋರಿಕೆ ಆಗುತ್ತಿದೆ ಎಂಬುದನ್ನು ಪತ್ತೆಹಚ್ಚಿ ತಡೆಯಲು  ಅಧಿಕಾರಿಗಳು ಶೀಘ್ರವೇ ಕ್ರಮಕೈಗೊಳ್ಳಬೇಕು.

ನಿಶಾನ್‌ ಡಿಸೋಜ: ಬಂಗ್ರಕೂಳೂರು ವಾರ್ಡ್‌ನ ದಂಬೇಲ್ ಕಿರು ಸೇತುವೆ ಶಿಥಿಲಗೊಂಡಿದೆ  ಮೇಯರ್‌: ಈ ಸೇತುವೆ ದುರಸ್ತಿಗೆ ಅನುದಾನ ಮೀಸಲಿಡುತ್ತೇವೆ

‘ಕಾಟಿಪಳ್ಳ: ನಾಲ್ಕು ದಿನಕ್ಕೊಮ್ಮೆ ನೀರು’

‘ಕಾಟಿಪಳ್ಳ ಪರಿಸರಕ್ಕೆ ಕುಡಿಯುವ ನೀರು ಸರಿಯಾಗಿ ಪೂರೈಕೆ ಆಗುತ್ತಿಲ್ಲ. ಎರಡು ತಿಂಗಳೂಗಳಿಂದ ನೀರಿನ ಸಮಸ್ಯೆ ಉಲ್ಬಣಿಸಿದೆ. ನಾಲ್ಕು ದಿನಕ್ಕೊಮ್ಮೆ ನೀರು ಬಂದರೆ ಜಾಸ್ತಿ. ವಾರದಲ್ಲಿ ಎರಡು ಸಲ ₹ 900 ತೆತ್ತು ಟ್ಯಾಂಕರ್‌ ನೀರು ತರಿಸಿಕೊಳ್ಳಬೇಕಾಗಿದೆ. ಕುಡಿಯುವ ನೀರಿನ ಬವಣೆ ನೀಗಿಸಿ’  ಎಂದು ಸ್ಥಳೀಯ ನಿವಾಸಿ ನೀತಾ ನಿವೇದಿಸಿಕೊಂಡರು.

‘ಈ ಪರಿಸರಕ್ಕೆ ಟ್ಯಾಂಕರ್‌ ನೀರನ್ನು ಉಚಿತವಾಗಿ ಪೂರೈಸಬೇಕು. ಹಾಗೂ ನೀರು ಸಮರ್ಪಕವಾಗಿ ಪೂರೈಕೆ ಆಗದಿರುವುದಕ್ಕೆ ಕಾರಣ ಪತ್ತೆಹಚ್ಚಿ ಸಮಸ್ಯೆ ಬಗೆಹರಿಸಬೇಕು’ ಎಂದು ಅಧಿಕಾರಿಗಳಿಗೆ ಮೇಯರ್‌ ಸೂಚನೆ ನೀಡಿದರು. 

‘ನಿಷೇಧಿತ ಪ್ಲಾಸ್ಟಿಕ್‌ ಬಳಕೆ ವಿರುದ್ಧ ಕ್ರಮ’

ಮಂಗಳೂರು ನಗರವನ್ನು ಪ್ಲಾಸ್ಟಿಕ್‌ ಮುಕ್ತ ಗೊಳಿಸುವ ಸರ್ಕಾರದ ಆಶಯ ಈಡೇರದೇ ಇರುವುದನ್ನು ಮೇಯರ್‌ ಒಪ್ಪಿಕೊಂಡರು.  ‘ನಿಷೇಧಿತ ಪ್ಲಾಸ್ಟಿಕ್ ಬಳಸದಂತೆ ಜನಜಾಗೃತಿ ಮೂಡಿಸುವ ಅಗತ್ಯವಿದೆ. ಆ ಬಳಿಕವೂ ಪ್ಲಾಸ್ಟಿಕ್ ಬಳಕೆ ನಿಯಂತ್ರಣಕ್ಕೆ ಬಾರದಿದ್ದರೆ ಇಂತಹ ಪ್ಲಾಸ್ಟಿಕ್‌ ಅನ್ನುಗ್ರಾಹಕರಿಗೆ ನೀಡುವ ವರ್ತಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಿದ್ದೇವೆ’ ಎಂದು ಮೇಯರ್‌ ತಿಳಿಸಿದರು.

‘ನಗರಕ್ಕೆ ಎಲ್ಲಿಂದ ಪ್ಲಾಸ್ಟಿಕ್‌ ಪೂರೈಕೆ ಆಗುತ್ತಿದೆ ಎಂದು ಪತ್ತೆ ಹಚ್ಚುವುದು ಸವಾಲಿನ ಕೆಲಸ. ಪ್ಲಾಸ್ಟಿಕ್‌ ತೊಟ್ಟೆಗಳನ್ನು ತಯಾರಿಸುವ ಕಾರ್ಖಾನೆಗಳೂ ನಗರಲ್ಲೂ ಇವೆ. ಇಂತಹ ಕೈಗಾರಿಕೆಗಳಿಗೆ ದಿಢೀರ್‌ ದಾಳಿ ನಡೆಸಿ ಪರಿಶೀಲಿಸಿ ಕ್ರಮ ವಹಿಸುತ್ತೇವೆ.  ಅಂಗಡಿಗಳಿಗೂ ದಿಢೀರ್‌ ಭೇಟಿ ನೀಡುತ್ತೇವೆ. ನಿಷೇಧಿತ ಪ್ಲಾಸ್ಟಿಕ್‌ ಬಳಕೆ ಕಂಡುಬಂದರೆ ದಂಡ ವಿಧಿಸಲಿದ್ದೇವೆ’ ಎಂದರು.

‘ಪ್ಲಾಸ್ಟಿಕ್‌ ಮುಕ್ತ ನಗರ ಕಾರ್ಯಕ್ರಮದ ಮಹತ್ವದ ಬಗ್ಗೆ ವಿವರಿಸಲು ಅಂಗಡಿ ಹೋಟೆಲ್ ಮಾಲೀಕರು ಕೇಟರಿಂಗ್‌ ಸೇವೆ ಒದಗಿಸುವವರು ಸೇರಿದಂತೆ ನಿಷೇಧಿತ ಪ್ಲಾಸ್ಟಿಕ್‌  ಬಳಸುವವರನ್ನು ಕರೆದು ಇದೇ 21ರಂದು ಸಭೆ ನಡೆಸಲಿದ್ದೇವೆ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.