ADVERTISEMENT

ವೈಭವ ಕಣ್ತುಂಬಿಕೊಂಡ ಜನಸಾಗರ

‘ಮಂಗಳೂರು ದಸರಾ’ ವಿಜೃಂಭಣೆಯ ಶೋಭಾಯಾತ್ರೆ

​ಪ್ರಜಾವಾಣಿ ವಾರ್ತೆ
Published 8 ಅಕ್ಟೋಬರ್ 2019, 19:31 IST
Last Updated 8 ಅಕ್ಟೋಬರ್ 2019, 19:31 IST
‘ಮಂಗಳೂರು ದಸರಾ’ ಅಂಗವಾಗಿ ಮಂಗಳೂರಿನ ಕುದ್ರೋಳಿ ಗೋಕರ್ಣನಾಥ ದೇವಸ್ಥಾನದಲ್ಲಿ ಪ್ರತಿಷ್ಠಾಪಿಸಿದ್ದ ಶಾರದೆಯ ಮೂರ್ತಿಯನ್ನು  ಮಂಗಳವಾರ ಮೆರವಣಿಗೆಯ ಮೂಲಕ ಶೋಭಾಯಾತ್ರೆಗೆ ತರಲಾಯಿತು. ಪ್ರಜಾವಾಣಿ ಚಿತ್ರ
‘ಮಂಗಳೂರು ದಸರಾ’ ಅಂಗವಾಗಿ ಮಂಗಳೂರಿನ ಕುದ್ರೋಳಿ ಗೋಕರ್ಣನಾಥ ದೇವಸ್ಥಾನದಲ್ಲಿ ಪ್ರತಿಷ್ಠಾಪಿಸಿದ್ದ ಶಾರದೆಯ ಮೂರ್ತಿಯನ್ನು  ಮಂಗಳವಾರ ಮೆರವಣಿಗೆಯ ಮೂಲಕ ಶೋಭಾಯಾತ್ರೆಗೆ ತರಲಾಯಿತು. ಪ್ರಜಾವಾಣಿ ಚಿತ್ರ   

ಮಂಗಳೂರು: ವಿಶೇಷವಾಗಿ ಅಲಂಕೃತ ವಾಹನಗಳಲ್ಲಿ ಕುಳಿತ ನವದುರ್ಗೆಯರ ದರ್ಶನ ಪಡೆಯಲು ರಸ್ತೆಯ ಇಕ್ಕೆಲಗಳಲ್ಲಿ ಸಾವಿರಾರು ಭಕ್ತರು ಸೇರಿದ್ದರು. ದಾರಿಯುದ್ದಕ್ಕೂ ಝಗಮಗಿಸುವ ವಿದ್ಯುತ್ ದೀಪ, ಚೆಂಡೆ, ತಾಸೆಯ ತಾಳಕ್ಕೆ ಕುಣಿಯುವ ಹುಲಿ ವೇಷಧಾರಿಗಳ ತಂಡ, ವೈವಿಧ್ಯಮಯ ಸ್ತಬ್ಧಚಿತ್ರಗಳು, ಮೆರವಣಿಗೆಯ ನಡುವೆ ಭಕ್ತರ ಜೈಘೋಷಗಳು...

ಮಂಗಳವಾರ ಕುದ್ರೋಳಿ ಶ್ರೀ ಗೋಕರ್ಣನಾಥ ದೇವಸ್ಥಾನದಿಂದ ಆರಂಭಗೊಂಡ ಮಂಗಳೂರು ದಸರಾ ಶೋಭಾಯಾತ್ರೆಯ ವೈಭವವಿದು.

ನವದುರ್ಗೆಯರ ಸಂಭ್ರಮದ ಶೋಭಾಯಾತ್ರೆಯನ್ನು ಕಣ್ತುಂಬಿಕೊಳ್ಳಲು ಕುದ್ರೋಳಿ ದೇವಸ್ಥಾನದಿಂದ ಎಂ.ಜಿ.ರಸ್ತೆಯವರೆಗೆ ಜನಸಾಗರವೇ ಸೇರಿತ್ತು. ಮಂಗಳವಾರ ಬೆಳಿಗ್ಗೆ ದೇವಸ್ಥಾನದಲ್ಲಿ ವಾಗೀಶ್ವರಿ ದುರ್ಗಾಹೋಮ, ಮಧ್ಯಾಹ್ನ ಶಿವಪೂಜೆ, ಶ್ರೀ ದೇವಿ ಪುಷ್ಪಾಲಂಕಾರ ಮಹಾಪೂಜೆ, ಉತ್ಸವಗಳು ನಡೆದವು. ಸಂಜೆ 5 ಗಂಟೆಯ ನಂತರ ಶಾರದಾ ಮೂರ್ತಿ ವಿಸರ್ಜನೆಗೆ ಚಾಲನೆ ನೀಡಲಾಯಿತು.

ADVERTISEMENT

ಭಕ್ತ ಸಮೂಹದ ಜಯಘೋಷದೊಂದಿಗೆ ಮಹಾಗಣಪತಿಯ ವಿಗ್ರಹಕ್ಕೆ ಪೂಜೆ ನೆರವೇರಿಸಿ, ಶೋಭಾಯಾತ್ರೆಯ ಮುಂಭಾಗದ ಅಲಂಕೃತ ವಾಹನದಲ್ಲಿ ಇರಿಸಲಾಯಿತು. ಬಳಿಕ ಹೂವು, ವಿದ್ಯುತ್ ದೀಪಗಳಿಂದ ಅಲಂಕರಿಸಲಾದ ಲಾರಿಗಳಲ್ಲಿ ನವದುರ್ಗೆಯರಾದ ಶೈಲಪುತ್ರಿ, ಬ್ರಹ್ಮಚಾರಿಣಿ, ಚಂದ್ರಘಂಟ, ಕೂಷ್ಮಾಂಡಿನಿ, ಸ್ಕಂದಮಾತಾ, ಕಾತ್ಯಾಯಿನಿ, ಮಹಾಕಾಳಿ, ಮಹಾಗೌರಿ, ಸಿದ್ಧಿದಾತ್ರಿ ಮತ್ತು ಆದಿಶಕ್ತಿಯರೊಂದಿಗೆ ಶಾರದಾ ಮಾತೆಯ ವಿಗ್ರಹ ಮತ್ತು ನಾರಾಯಣ ಗುರುಗಳ ಚಿತ್ರಗಳನ್ನು ಇಟ್ಟು ಮೆರವಣಿಗೆ ಆರಂಭಿಸಲಾಯಿತು. ದೇವಿಯರ ವಿಗ್ರಹಗಳನ್ನು ಮಂಟಪದಿಂದ ಹೊರ ತರುತ್ತಿದ್ದಂತೆಯೇ, ಭಕ್ತ ಸಮೂಹ ಜಯಘೋಷ ಮೊಳಗಿಸಿತು.

ಶೋಭಾಯಾತ್ರೆಯಲ್ಲಿ ಈ ಬಾರಿಯೂ ಜನತೆ ಸಂಭ್ರಮ ಸಡಗರಗಳಿಂದ ಪಾಲ್ಗೊಂಡಿದ್ದರು. ಮೆರವಣಿಗೆ ಸಾಗಿ ಬರುವ ಬೀದಿಗಳೆಲ್ಲವೂ ವರ್ಣರಂಜಿತ ದೀಪಗಳು, ನಾರಾಯಣ ಗುರು ಭಾವಚಿತ್ರವಿರುವ ಹಳದಿ ಬಣ್ಣದ ಪತಾಕೆಗಳ ತೋರಣ, ಸಾಲುಸಾಲು ತ್ರಿಶೂರು ಶೈಲಿ ಕೊಡೆಗಳಿಂದ ಅಲಂಕೃತವಾಗಿದ್ದವು.

ವಿವಿಧ ಬೊಂಬೆಗಳು, ಜಾನಪದ ವೈವಿಧ್ಯ ಸಾರುವ ಡೊಳ್ಳುಕುಣಿತ, ನರ್ತನಗಳೊಂದಿಗೆ ಕೇರಳ ಚೆಂಡೆ, ಸ್ಥಳೀಯ ಚೆಂಡೆಗಳು, ಲಾರಿ ತುಂಬ ಕೇಕೆ ಹಾಕುವ ಹುಲಿವೇಷಗಳು, ಪುರಾಣ ಕಥೆಗಳನ್ನು ಹೇಳುವ 75ಕ್ಕೂ ಅಧಿಕ ಸ್ತಬ್ಧಚಿತ್ರ, ಬ್ಯಾಂಡ್‌ಸೆಟ್‌ಗಳು ಮೆರವಣಿಗೆಯ ಮೆರುಗು ಹೆಚ್ಚಿಸಿದವು.

ಕ್ಷೇತ್ರ ನವೀಕರಣದ ರೂವಾರಿ ಬಿ.ಜನಾರ್ದನ ಪೂಜಾರಿ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕ್ಷೇತ್ರದ ಅಧ್ಯಕ್ಷ ಎಚ್.ಎಸ್.ಸಾಯಿರಾಂ, ಖಜಾಂಚಿ ಪದ್ಮರಾಜ್ ಆರ್, ರಾಘವೇಂದ್ರ ಕೂಳೂರು, ಮಾಧವ ಸುವರ್ಣ, ಬಿ.ಕೆ.ತಾರಾನಾಥ್, ರವಿಶಂಕರ್ ಮಿಜಾರು, ಕೆ.ಮಹೇಶ್ಚಂದ್ರ, ಅಭಿವೃದ್ಧಿ ಸಮಿತಿಯ ಜಯ ಸಿ.ಸುವರ್ಣ, ಊರ್ಮಿಳಾ ರಮೇಶ್ ಕುಮಾರ್, ಸದಸ್ಯರಾದ ಹರಿಕೃಷ್ಣ ಬಂಟ್ವಾಳ, ಡಾ.ಬಿ.ಜಿ. ಸುವರ್ಣ ಮತ್ತಿತರರು ಇದ್ದರು.

ಮೆರವಣಿಗೆಯಲ್ಲಿ ಮಾರ್ಪಾಡು:

ವರ್ಷದಿಂದ ವರ್ಷಕ್ಕೆ ಮಂಗಳೂರು ದಸರಾ ಶೋಭಾಯಾತ್ರೆಯ ವೈಭವ ಹೆಚ್ಚಾಗುತ್ತಿದ್ದು, ಈ ಬಾರಿ ಶೋಭಾಯಾತ್ರೆಯಲ್ಲಿ ಮಾರ್ಪಾಡು ಮಾಡಲಾಗಿದೆ.

ಶೋಭಾಯಾತ್ರೆಯ ಮುಂಚೂಣಿಯಲ್ಲಿ ಗಣಪತಿ ಮೂರ್ತಿ ಇದ್ದು, ಬಳಿಕ ನಾರಾಯಣ ಗುರುಗಳ ಭಾವಚಿತ್ರ, ನಂತರ ನವದುರ್ಗೆಯರ ಮೂರ್ತಿಗಳು, ನಂತರ ಶಾರದಾ ಮಾತೆಯ ವಿಗ್ರಹಗಳನ್ನು ತರಲಾಯಿತು. ಕೊನೆಯಲ್ಲಿ ಟ್ಯಾಬ್ಲೋಗಳಿಗೆ ಅವಕಾಶ ನೀಡಲಾಗಿತ್ತು. ಇದರಿಂದಾಗಿ ಶಾರದಾ ಮಾತೆಯ ಹಾಗೂ ನವದುರ್ಗೆಯ ದರ್ಶನಕ್ಕೆ ಭಕ್ತರು ಬಹು ಹೊತ್ತಿನವರೆಗೆ ಕಾಯುವುದು ತಪ್ಪಿದಂತಾಗಿತ್ತು.

ಇಂದು ವಿಸರ್ಜನೆ:

ವರ್ಣರಂಜಿತ ಮಂಗಳೂರು ದಸರಾ ಮೆರವಣಿಗೆ ಮಣ್ಣಗುಡ್ಡೆ, ಲೇಡಿಹಿಲ್, ಲಾಲ್‌ಬಾಗ್‌, ಎಂ.ಜಿ.ರಸ್ತೆ, ಕೆ.ಎಸ್.ರಾವ್ ರಸ್ತೆ, ವಿಶ್ವವಿದ್ಯಾಲಯ ಕಾಲೇಜು, ಗಣಪತಿ ಹೈಸ್ಕೂಲ್‌ ರಸ್ತೆ, ರಥಬೀದಿ, ಅಳಕೆ ಮೂಲಕ ಸುಮಾರು 9 ಕಿ.ಮೀ. ಸಾಗಿ, ಕುದ್ರೋಳಿ ಕ್ಷೇತ್ರ ತಲುಪಲಿದೆ.

ಬುಧವಾರ ಬೆಳಿಗ್ಗೆ ಕುದ್ರೋಳಿ ಗೋಕರ್ಣನಾಥ ದೇವಸ್ಥಾನ ಆವರಣದ ಪುಷ್ಕರಣಿಯಲ್ಲಿ ಮೂರ್ತಿಗಳ ವಿಸರ್ಜನೆ ನಡೆಯಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.