ಮಂಗಳೂರು: ಕುದ್ರೋಳಿ ಗೋಕರ್ಣನಾಥ ಕ್ಷೇತ್ರದಲ್ಲಿ ಭಾನುವಾರದಿಂದ (ನಾಳೆಯಿಂದ) ಅ.9ರವರೆಗೆ ನವರಾತ್ರಿ ಮಹೋತ್ಸವ ಮತ್ತು ‘ಮಂಗಳೂರು ದಸರಾ’ ಅದ್ಧೂರಿಯಾಗಿ ನಡೆಯಲಿದೆ. ಈ ನಿಟ್ಟಿನಲ್ಲಿ ಕ್ಷೇತ್ರಕ್ಕೆ ಸುಣ್ಣಬಣ್ಣದ ಲೇಪನ, ವಿದ್ಯುತ್ ದೀಪಗಳ ಅಲಂಕಾರ ಮತ್ತಿತರ ಪೂರ್ವ ತಯಾರಿ ಕೆಲಸಗಳು ಭರದಿಂದ ನಡೆಯುತ್ತಿದೆ.
ಕ್ಷೇತ್ರದ ನವೀಕರಣದ ರೂವಾರಿ ಬಿ.ಜನಾರ್ದನ ಪೂಜಾರಿ ಮತ್ತು ಕ್ಷೇತ್ರಾಡಳಿತ ಮಂಡಳಿಯ ಕೋಶಾಧಿಕಾರಿ ಪದ್ಮರಾಜ್ ಆರ್. ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘29ರಂದು ಬೆಳಿಗ್ಗೆ 11.20ಕ್ಕೆ ನವದುರ್ಗೆಯರ ಹಾಗೂ ಶಾರದಾ ಮಾತೆಯ ಪ್ರತಿಷ್ಠಾಪನೆ ನಡೆಯಲಿದೆ. ಅಂದು ನವರಾತ್ರಿ ಉತ್ಸವಕ್ಕೆ ಮಂಗಳೂರು ಪೊಲೀಸ್ ಕಮಿಷನರ್ ಡಾ.ಪಿ.ಎಸ್.ಹರ್ಷ ಚಾಲನೆ ನೀಡುವರು.ಬಳಿಕ ಪ್ರತಿದಿನ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. 11 ದಿನ ನಡೆಯುವ ಉತ್ಸವದಲ್ಲಿ 10 ಲಕ್ಷಕ್ಕೂ ಅಧಿಕ ಮಂದಿ ಭಾಗವಹಿಸುವ ನಿರೀಕ್ಷೆಯಿದೆ’ ಎಂದು ಹೇಳಿದರು.
30ರಂದು ಬೆಳಿಗ್ಗೆ 10ಕ್ಕೆ ದುರ್ಗಾ ಹೋಮ, ಅ.1ರಂದು ಆರ್ಯ ದುರ್ಗಾ ಹೋಮ, 2ರಂದು ಭಗವತೀ ದುರ್ಗಾ ಹೋಮ, 3ರಂದು ಕುಮಾರಿ ದುರ್ಗಾ ಹೋಮ, 4ರಂದು ಅಂಬಿಕಾ ದುರ್ಗಾ ಹೋಮ, 5ರಂದು ಮಹಿಷ ಮರ್ಧಿನಿ ದುರ್ಗಾ ಹೋಮ, 6ರಂದು ಚಂಡಿಕಾ ಹೋಮ, ಹಗಲೋತ್ಸವ, 7ರಂದು ಸರಸ್ವತಿ ದುರ್ಗಾ ಹೋಮ, ಶತಸೀಯಾಳಾಭಿಷೇಕ, 8ರಂದು ವಾಗೀಶ್ವರಿ ದುರ್ಗಾಹೋಮ ನಡೆಯಲಿದೆ. ಪ್ರತಿದಿನ ಪುಷ್ಪಾಲಂಕಾರ, ಮಹಾಪೂಜೆ, ಭಜನಾ ಕಾರ್ಯಕ್ರಮ, ರಾತ್ರಿ ಉತ್ಸವ ನಡೆಯಲಿದೆ ಎಂದು ತಿಳಿಸಿದರು.
ಅ.8ರಂದು ಸಂಜೆ 4 ಗಂಟೆಗೆ ಮಂಗಳೂರು ದಸರಾ ಮಹೋತ್ಸವದ ಭವ್ಯ ಮೆರವಣಿಗೆ ಹೊರಡಲಿದೆ. ಶ್ರೀ ಕ್ಷೇತ್ರದಿಂದ ಹೊರಟು ಕಂಬ್ಳಾ ರಸ್ತೆ, ಮಣ್ಣಾಗುಡ್ಡ ಮಾರ್ಗವಾಗಿ ಲೇಡಿಹಿಲ್ ವೃತ್ತ, ಲಾಲ್‌ಬಾಗ್, ಬಲ್ಲಾಳ್‌ಬಾಗ್, ಪಿವಿಎಸ್ ವೃತ್ತ, ನವಭಾರತ್ ವೃತ್ತ, ಕೆ.ಎಸ್.ರಾವ್.ರಸ್ತೆ, ಹಂಪನಕಟ್ಟೆ, ವಿ.ವಿ. ಕಾಲೇಜು ವೃತ್ತದಿಂದ ಬಲಕ್ಕೆ ತಿರುಗಿ ಗಣಪತಿ ಹೈಸ್ಕೂಲ್ ಮಾರ್ಗವಾಗಿ ಶ್ರೀ ವೆಂಕಟರಮಣ ದೇವಸ್ಥಾನದ ಮುಂಭಾಗದಿಂದ ರಥಬೀದಿ, ಚಿತ್ರ ಟಾಕೀಸ್, ಅಳಕೆಯಾಗಿ ಕ್ಷೇತ್ರಕ್ಕೆ ಬರಲಿದೆ. 9ರಂದು ನಸುಕಿನ 4 ಗಂಟೆಗೆ ಶ್ರೀ ಶಾರದಾ ಮೂರ್ತಿಯ ವಿಸರ್ಜನೆ, ಅವಭೃತ ಸ್ಥಾನ ನಡೆಯಲಿದೆ ಎಂದು ಮಾಹಿತಿ ನೀಡಿದರು.
ವೃದ್ಧರಿಗೆ ಪ್ರತ್ಯೇಕ ವ್ಯವಸ್ಥೆ: ನವರಾತ್ರಿ ಸಂದರ್ಭ ಕ್ಷೇತ್ರಕ್ಕೆ ಲಕ್ಷಾಂತರ ಭಕ್ತರು ಬರಲಿದ್ದು, ವೃದ್ಧರಿಗೆ, ಅಂಗವಿಕಲರಿಗೆ ಮತ್ತು ಪುಟ್ಟಮಕ್ಕಳ ತಾಯಂದಿರಿಗೆ ಪ್ರತ್ಯೇಕ ಸರದಿ ವ್ಯವಸ್ಥೆಯನ್ನು ಮಾಡಲಾಗುತ್ತದೆ. ಶಾರದಾ ಮಾತೆಯ ದರ್ಶನ, ಕುದ್ರೋಳಿ ಗೋಕರ್ಣನಾಥನ ದರ್ಶನ ಮತ್ತು ಅನ್ನಸಂತರ್ಪಣೆಯಲ್ಲಿ ಪ್ರತ್ಯೇಕ ವ್ಯವಸ್ಥೆ ಮಾಡಲಾಗುತ್ತದೆ. ಸೌಟ್ಸ್ ಮತ್ತು ಗೈಡ್ಸ್‌ನ ವಿದ್ಯಾರ್ಥಿಗಳು ಹಾಗೂ ವಿವಿಧ ಸಂಘಸಂಸ್ಥೆಗಳ ಪದಾಧಿಕಾರಿಗಳು ಸ್ವಯಂಸೇವಕರಾಗಿ ಭಾಗವಹಿಸುವರು ಎಂದು ಹೇಳಿದರು.
ಗೋಷ್ಠಿಯಲ್ಲಿ ಕ್ಷೇತ್ರಾಡಳಿತ ಮಂಡಳಿ ಅಧ್ಯಕ್ಷ ಎಚ್.ಎಸ್.ಸಾಯಿರಾಂ, ಕಾರ್ಯದರ್ಶಿ ಬಿ.ಮಾಧವ ಸುವರ್ಣ, ಸದಸ್ಯರಾದ ರವಿಶಂಕರ್ ಮಿಜಾರ್, ಕೆ.ಮಹೇಶ್ಚಂದ್ರ, ಕ್ಷೇತ್ರಾಭಿವೃದ್ಧಿ ಸಮಿತಿ ಉಪಾಧ್ಯಕ್ಷೆ ಉರ್ಮಿಳಾ ರಮೇಶ್ ಕುಮಾರ್, ಸದಸ್ಯರಾದ ದೇವೇಂದ್ರ ಪೂಜಾರಿ, ಹರಿಕೃಷ್ಣ ಬಂಟ್ವಾಳ್, ಡಾ.ಬಿ.ಜಿ.ಸುವರ್ಣ, ಎಂ.ಶೇಖರ ಪೂಜಾರಿ, ಕೆ.ಚಿತ್ತರಂಜನ್ ಗರೋಡಿ, ಜತಿನ್ ಅತ್ತಾವರ್, ಡಾ.ಅನಸೂಯ, ಲೀಲಾಕ್ಷ ಬಿ.ಕರ್ಕೇರ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.