ನೆಲ್ಯಾಡಿ(ಉಪ್ಪಿನಂಗಡಿ): ಎಂಡೋಸಲ್ಫಾನ್ ಬಾಧೆಯಿಂದ ಕಾಡಿದ ಅಂಗವೈಕಲ್ಯವನ್ನು ಮೀರಿ ನಿಂತ ಕಡಬ ತಾಲ್ಲೂಕು ಗೋಳಿತ್ತೊಟ್ಟು ಗ್ರಾಮದ ಬರಮೇಲು ಶಾಂತಿನಗರದ ಪ್ರದೀಪ್, ಪದವಿ ಶಿಕ್ಷಣ ಪೂರೈಸಿದ್ದು, ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕು ಕಚೇರಿಯಲ್ಲಿ ಗ್ರಾಮಕರಣಿಕರಾಗಿ ನೇಮಕಗೊಂಡಿದ್ದಾರೆ.
ಜನಾರ್ದನ ಗೌಡ ಹಾಗೂ ಬೇಬಿ ದಂಪತಿಯ ಪುತ್ರ ಪ್ರದೀಪ್ ಹುಟ್ಟಿನಿಂದಲೇ ಅಂಗವಿಕಲತೆಗೆ ತುತ್ತಾಗಿದ್ದರು. ಎರಡೂ ಕಾಲುಗಳ ಸ್ವಾಧೀನ ಕಳೆದುಕೊಂಡು ನಡೆದಾಡಲು ಸಾಧ್ಯವಾಗದ ಸ್ಥಿತಿಗೆ ತಲುಪಿದ್ದರು. ಎಡ ಕೈಯ ಬಲವೂ ಕಳೆದುಕೊಂಡರು.
ಶಾಲೆಗೆ ಹೋಗುವುದೇ ದುಸ್ತರವಾದಾಗ, ಛಲ ತೊಟ್ಟ ತಂದೆ ವಿದ್ಯಾಭ್ಯಾಸ ಕೊಡಿಸಿದ್ದರು. ಪೋಷಕರ ಇಚ್ಛೆಗೆಸ್ಪಂದಿಸಿದ ಪ್ರದೀಪ್ ಎಸ್ಸೆಸ್ಸೆಲ್ಸಿಯಲ್ಲಿ 518 ಅಂಕ ಪಡೆದರು. ಮಗನ ಕಲಿಕೆಯ ಆಸಕ್ತಿಗೆ ಬೆನ್ನೆಲುಬಾದ ತಂದೆ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಲ್ಲಿ ತಾನು ನಿರ್ವಹಿಸುತ್ತಿದ್ದ ಮೇಲ್ವಿಚಾರಕ ಹುದ್ದೆಗೆ ರಾಜೀನಾಮೆ ಕೊಟ್ಟು ಮಗನಿಗೆ ಸಹಾಯಕನಾಗಿ ನಿಂತಿದ್ದರು.
ಉಪ್ಪಿನಂಗಡಿ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ವಾಣಿಜ್ಯ ವಿಭಾಗದಲ್ಲಿ ಕಲಿತ ಪ್ರದೀಪ್, 536 ಅಂಕ ಪಡೆದರು. ಪದವಿಯನ್ನು ಶೇ 79.16 ಅಂಕದೊಂದಿಗೆ ಉತ್ತೀರ್ಣರಾದರು. ದೂರಶಿಕ್ಷಣ ಮೂಲಕ ಎಂ.ಕಾಂ. ಮಾಡುತ್ತಿದ್ದಾರೆ. ಈ ನಡುವೆ ಗ್ರಾಮಕರಣಿಕರಾಗಿ ಸರ್ಕಾರಿ ಕೆಲಸ ಪಡೆದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.