ಮಂಗಳೂರು: ತಾಲ್ಲೂಕಿನ ವಿವಿಧೆಡೆ ಸ್ವಾಮಿ ಕೊರಗಜ್ಜ ದೈವಸ್ಥಾನವನ್ನು ಅಪವಿತ್ರಗೊಳಿಸಿದ ಪ್ರಕರಣದ ಆರೋಪಿ ಜೋಕಟ್ಟೆಯ ನವಾಜ್ ಈಚೆಗೆ ಅನಾರೋಗ್ಯದಿಂದ ಮೃತಪಟ್ಟಿದ್ದು, ಇನ್ನಿಬ್ಬರು ಆರೋಪಿಗಳಾದ ಜೋಕಟ್ಟೆಯ ರಹೀಂ ಮತ್ತು ತೌಫಿಕ್ ಬುಧವಾರ ಇಲ್ಲಿನ ಎಮ್ಮೆಕರೆ ದೈವಸ್ಥಾನದಲ್ಲಿ ಸ್ವತಃ ತಪ್ಪೊಪ್ಪಿಗೆ ನೀಡಿದ್ದಾರೆ. ಆರೋಪಿಗಳನ್ನು ವಶಕ್ಕೆ ಪಡೆದ ಪೊಲೀಸರು ವಿಚಾರಣೆ ಮುಂದುವರಿಸಿದ್ದಾರೆ.
ದೈವಾರಾಧನೆಯ ‘ಸ್ವಾಮಿ ಕೊರಗಜ್ಜ’ ದೈವಸ್ಥಾನಗಳು ಕರಾವಳಿಯಲ್ಲಿ ಹಲವು ಇದ್ದು, ಕಾರ್ಣಿಕ (ಮಹಿಮೆ) ಕ್ಷೇತ್ರಗಳು ಎಂದೇ ಪ್ರಸಿದ್ಧಿ ಪಡೆದಿವೆ. ಈ ಪೈಕಿ ಕೆಲವು ಕ್ಷೇತ್ರಗಳ ಕಾಣಿಕೆ ಹುಂಡಿಗೆ ಅಶ್ಲೀಲ ಬರಹ, ಆಕ್ಷೇಪಾರ್ಹ ವಸ್ತುಗಳನ್ನು ಹಾಕಲಾಗಿತ್ತು. ಎಮ್ಮೆಕೆರೆ ‘ನೇಮೋತ್ಸವ’ (ಆರಾಧನಾ ಮಹೋತ್ಸವ)ಕ್ಕೆ ಬುಧವಾರ ಸ್ವತಃ ಬಂದ ರಹೀಂ ಮತ್ತು ತೌಫಿಕ್ ತಪ್ಪೊಪ್ಪಿಗೆ ನೀಡಿದ್ದಾರೆ.
ಈ ಬಗ್ಗೆ ಮಾಹಿತಿ ನೀಡಿರುವ ನಗರ ಪೊಲೀಸ್ ಕಮಿಷನರ್ ಶಶಿಕುಮಾರ್ ಎನ್., ‘ಸ್ವಾಮಿ ಕೊರಗಜ್ಜ ದೈವಸ್ಥಾನಗಳನ್ನು ಅಪವಿತ್ರಗೊಳಿಸಿದ ಬಗ್ಗೆಕಳೆದ ಮೂರು ತಿಂಗಳಲ್ಲಿ ನಗರದ ಪಾಂಡೇಶ್ವರ, ಉಳ್ಳಾಲ ಮತ್ತು ಕದ್ರಿ ಪೊಲೀಸ್ ಠಾಣೆಗಳಲ್ಲಿ ಐದು ಪ್ರಕರಣಗಳು ದಾಖಲಾಗಿದ್ದವು. ರಹೀಂ ಹಾಗೂ ತೌಫಿಕ್ ಕೆಲ ದಿನಗಳ ಹಿಂದೆ ಎಮ್ಮೆಕೆರೆ ದೈವಸ್ಥಾನದ ಪೂಜಾರಿ (ಅರ್ಚಕ) ಅವರನ್ನು ಸಂಪರ್ಕಿಸಿದ್ದು, ಬುಧವಾರ ತಪ್ಪೊಪ್ಪಿಗೆ ನೀಡಿದ್ದಾರೆ. ಬಳಿಕ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದು, ವಿಚಾರಣೆ ನಡೆಸಲಾಗುತ್ತಿದೆ’ ಎಂದರು.
‘ನವಾಜ್ ಕಳೆದ ತಿಂಗಳು ತೀವ್ರ ಅನಾರೋಗ್ಯಕ್ಕೆ ತುತ್ತಾಗಿ ಮೃತಪಟ್ಟಿದ್ದನು. ಈಚೆಗೆ ತೌಫಿಕ್‌ಗೂ ತೀವ್ರವಾದ ಆರೋಗ್ಯ ಸಮಸ್ಯೆ ಕಾಣಿಸಿಕೊಂಡಿತ್ತು. ಇದರಿಂದ ತೌಫಿಕ್ ಹಾಗೂ ರಹೀಂ ಭಯಗೊಂಡಿದ್ದರು’ ಎಂದರು.
‘ನವಾಜ್ ಪ್ರಮುಖ ಆರೋಪಿಯಾಗಿದ್ದು,ಮೂರು ಕ್ಷೇತ್ರಗಳನ್ನು ಅಪವಿತ್ರಗೊಳಿಸಿದ ಸಂದರ್ಭದಲ್ಲಿ ರಹೀಂ ಮತ್ತು ತೌಫಿಕ್ ನೆರವಾಗಿದ್ದರು ಎಂದು ಪ್ರಾಥಮಿಕ ತನಿಖೆ ವೇಳೆ ತಿಳಿದು ಬಂದಿದೆ’ ಎಂದು ವಿವರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.