ADVERTISEMENT

ಮಿಸ್ ಯೂನಿವರ್ಸ್ ಸ್ಪರ್ಧಾಳು ದಿವಿತಾ ರೈಗೆ ಹುಟ್ಟೂರ ಅಭಿನಂದನೆ

ದೇಶವನ್ನು ಪ್ರತಿನಿಧಿಸಲಿರುವ ಮಂಗಳೂರಿನ ಚೆಲುವೆ

​ಪ್ರಜಾವಾಣಿ ವಾರ್ತೆ
Published 6 ಸೆಪ್ಟೆಂಬರ್ 2022, 14:48 IST
Last Updated 6 ಸೆಪ್ಟೆಂಬರ್ 2022, 14:48 IST
ಲಿವಾ ಮಿಸ್ ಯೂನಿವರ್ಸ್ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸುತ್ತಿರುವ ಮಂಗಳೂರಿನ ಚೆಲುವೆ ದಿವಿತಾ ರೈ ಅವರನ್ನು ತೆರೆದ ವಾಹನದಲ್ಲಿ ಮೆರವಣಿಗೆ ಮೂಲಕ ಕರೆತರಲಾಯಿತು
ಲಿವಾ ಮಿಸ್ ಯೂನಿವರ್ಸ್ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸುತ್ತಿರುವ ಮಂಗಳೂರಿನ ಚೆಲುವೆ ದಿವಿತಾ ರೈ ಅವರನ್ನು ತೆರೆದ ವಾಹನದಲ್ಲಿ ಮೆರವಣಿಗೆ ಮೂಲಕ ಕರೆತರಲಾಯಿತು   

ಮಂಗಳೂರು: ಲಿವಾ ಮಿಸ್ ಯೂನಿವರ್ಸ್ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸುತ್ತಿರುವ ಮಂಗಳೂರಿನ ಚೆಲುವೆ ದಿವಿತಾ ರೈ ಅವರಿಗೆ ಹುಟ್ಟೂರ ಅಭಿನಂದನಾ ಕಾರ್ಯಕ್ರಮ ಮಂಗಳವಾರ ನಡೆಯಿತು.

ನಗರದ ಅಂಬೇಡ್ಕರ್‌ (ಜ್ಯೋತಿ) ವೃತ್ತದಿಂದ ತೆರೆದ ವಾಹನದಲ್ಲಿ 23 ವರ್ಷದ ದಿವಿತಾ ರೈ ಅವರನ್ನು ಮೆರವಣಿಗೆಯಲ್ಲಿ ಬಂಟ್ಸ್‌ಹಾಸ್ಟೆಲ್‌ನ ಗೀತಾ ಶೆಟ್ಟಿ ಮೆಮೊರಿಯಲ್ ಸಭಾಂಗಣಕ್ಕೆ ಕರೆತರಲಾಯಿತು. ಕೇರಳದ ಚೆಂಡೆಗಳು, ವಾದ್ಯಸಂಗೀತ, ಹುಲಿವೇಷ ಕುಣಿತ ಮೆರವಣಿಗೆಗೆ ಮೆರುಗು ನೀಡಿದವು.

ಬಿಳಿ ಬಣ್ಣದ ಸೀರೆಯಲ್ಲಿ ಕಂಗೊಳಿಸುತ್ತಿದ್ದ ದಿವಿತಾ ರೈ ಅವರನ್ನು ಮಹಿಳೆಯರು ಪೂರ್ಣಕುಂಭದೊಂದಿಗೆ ಬರಮಾಡಿಕೊಂಡರು. ಸುಮಂಗಳಿಯರು ಆರತಿ ಬೆಳಗಿ, ತಿಲಕವಿಟ್ಟು, ಮಲ್ಲಿಗೆ ಹಾರವನ್ನು ಹಾಕಿ ಸಾಂಪ್ರದಾಯಿಕವಾಗಿ ಸ್ವಾಗತಿಸಿದರು. ಮೆರವಣಿಗೆಯುದ್ದಕ್ಕೂ ದಿವಿತಾ ರೈ ಅವರು ಜನರತ್ತ ಕೈಬೀಸಿ, ನಮಸ್ಕರಿಸುತ್ತಾ ಮುಗುಳ್ನಗೆ ಬೀರಿದರು.

ADVERTISEMENT

ಬಂಟರ ಮಾತೃ ಸಂಘ ಹಾಗೂ ಮಂಗಳೂರು ರಾಮಕೃಷ್ಣ ವಿದ್ಯಾರ್ಥಿನಿ ವಸತಿ ನಿಲಯದ ಅಮೃತೋತ್ಸವ ಸಮಿತಿ ವತಿಯಿಂದ ನಡೆದ ಅಭಿನಂದನಾ ಸಮಾರಂಭದಲ್ಲಿ ದಿವಿತಾ ರೈ ಅವರನ್ನು ತುಳುನಾಡಿನ ಸಂಪ್ರದಾಯದಂತೆ ವೀಳ್ಯದೆಳೆ, ಅಡಿಕೆ ನೀಡಿ, ಸೀರೆ, ಕೃಷ್ಣನ ಮೂರ್ತಿ ಕೊಟ್ಟು ಅಭಿನಂದಿಸಲಾಯಿತು.

‘ಹುಟ್ಟೂರಿನ ಹೃದಯಸ್ಪರ್ಶಿ ಅಭಿನಂದನೆ ಎಂದೂ ಮೆರೆಯಲಾಗದ ಕ್ಷಣ. ನನ್ನ ಮೇಲೆ ಹುಟ್ಟೂನ ಜನರಿಗೆ ಭಾರೀ ನಿರೀಕ್ಷೆಯಿದ್ದು, ನಿಮ್ಮೆಲ್ಲರ ಆಶೀರ್ವಾದದಿಂದ ಅದನ್ನು ತಲುಪಲು ಶಕ್ತಿಮೀರಿ ಪ್ರಯತ್ನಿಸುತ್ತೇನೆ. ನಾನು ಓದಿದ್ದು ವಾಸ್ತುಶಿಲ್ಪವಾದರೂ ಮಾಡೆಲಿಂಗ್‌ ಕ್ಷೇತ್ರ ನನ್ನನ್ನು ಆಕರ್ಷಿಸಿತು. ಯಾವುದೇ ಗುರಿ ಮುಟ್ಟಲು ಸ್ವಸಾಮರ್ಥ್ಯದ ಮೇಲೆ ನಂಬಿಕೆ, ಆತ್ಮವಿಶ್ವಾಸ ಮುಖ್ಯ ಎಂಬುದು ನನ್ನ ನಂಬಿಕೆ’ ಎಂದು ಹೇಳಿದರು.

ಬಂಟರ ಯಾನೆ ನಾಡವರ ಮಾತೃಸಂಘದ ಅಧ್ಯಕ್ಷ ಅಜಿತ್ ಕುಮಾರ್ ರೈ ಮಾಲಾಡಿ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಕಾವು ಹೇಮನಾಥ ಶೆಟ್ಟಿ, ಕೋಶಾಧಿಕಾರಿ ಕೃಷ್ಣಪ್ರಸಾದ್‌, ಪ್ರಮುಖರಾದ ಶಾಲಿನಿ ಶೆಟ್ಟಿ, ಸವಿತಾ ಶೆಟ್ಟಿ, ಆಶಾಜ್ಯೋತಿ,ವೀಣಾ ಟಿ. ಶೆಟ್ಟಿ ಇದ್ದರು.

ಮಂಗಳೂರು ನಿವಾಸಿಗಳಾಗಿದ್ದು, ಸದ್ಯ ಮುಂಬೈಯಲ್ಲಿ ನೆಲೆಸಿರುವ ದಿವಿತಾ ರೈ ತಂದೆ ದಿಲೀಪ್‌ ರೈ, ತಾಯಿ ಪ್ರಮಿತಾ ರೈ ಹಾಗೂ ಅವರ ಸಂಬಂಧಿಕರು ಸಂಭ್ರಮದಲ್ಲಿ ಪಾಲ್ಗೊಂಡರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.