ADVERTISEMENT

ಮಂಗಳೂರು ಬಂದರು: 3ನೇ ಹಂತದ ವಿಸ್ತರಣೆ ಶೀಘ್ರ ಆರಂಭ

ಮೀನುಗಾರರ ಮುಖಂಡರ ನಿಯೋಗಕ್ಕೆ ಸರ್ಕಾರ ಭರವಸೆ

​ಪ್ರಜಾವಾಣಿ ವಾರ್ತೆ
Published 22 ಅಕ್ಟೋಬರ್ 2024, 6:37 IST
Last Updated 22 ಅಕ್ಟೋಬರ್ 2024, 6:37 IST

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಮೀನುಗಾರರ ಸಮಸ್ಯೆಗಳಿಗೆ ತ್ವರಿತ ಪರಿಹಾರ ಕಂಡುಕೊಳ್ಳುವ ಕುರಿತು ಚರ್ಚಿಸಲು ವಿಧಾನ ಸಭಾಧ್ಯಕ್ಷ ಯು.ಟಿ.ಖಾದರ್‌ ಹಾಗೂ ಬಂದರು ಮತ್ತು ಮೀನುಗಾರಿಕಾ ಸಚಿವ ಮಂಕಾಳ ವೈದ್ಯ ನೇತೃತ್ವದಲ್ಲಿ ಉನ್ನತ ಮಟ್ಟದ ಸಭೆಯು ಬೆಂಗಳೂರಿನಲ್ಲಿ ಸೋಮವಾರ ನಡೆಯಿತು. 

ಇಲ್ಲಿನ ಮೀನುಗಾರಿಕಾ ಬಂದರಿನಲ್ಲಿ 1500ಕ್ಕೂ ಹೆಚ್ಚು ಮೀನುಗಾರಿಕಾ ದೋಣಿಗಳಿದ್ದರೂ,  500 ದೋಣಿಗಳಿಗೆ ಅಗತ್ಯವಿರುವಷ್ಟು ಸೌಕರ್ಯಗಳು ಮಾತ್ರ ಇವೆ. ಇದರಿಂದ ಮೀನುಗಾರರು ಸಾಕಷ್ಟು ಸಮಸ್ಯೆ ಎದುರಿಸುತ್ತಿದ್ದಾರೆ. 2023 ನೇ ಸಾಲಿನಲ್ಲಿ ಬಂದರಿನ ಮೂರನೇ ಹಂತದ ಅಭಿವೃದ್ಧಿಗೆ ₹ 49.50 ಕೋಟಿ ಮಂಜೂರಾಗಿತ್ತು. ಇದರ ಟೆಂಡರ್‌ ಪ್ರಕ್ರಿಯೆಯನ್ನು ತ್ವರಿತವಾಗಿ ಪೂರ್ಣಗೊಳಿಸಿ ಕಾಮಗಾರಿಯನ್ನು ಪ್ರಾರಂಭಿಸಬೇಕು.  ಅದು ವರ್ಷದೊಳಗೆ  ಬಳಕೆಗೆ ಲಭ್ಯವಾಗಬೇಕು ಎಂದು ಮೀನುಗಾರರು ಒತ್ತಾಯಿಸಿದರು.

ಮೀನುಗಾರಿಕಾ ಬಂದರಿನಲ್ಲಿ ಒಂದನೇ ಮತ್ತು ಎರಡನೇ ಹಂತದ ವಿಸ್ತರಣೆ ವೇಳೆ ನಿರ್ಮಾಣವಾದ ಸೌಕರ್ಯಗಳ ಆಧುನೀಕರಣಕ್ಕೆ ಪ್ರಧಾನ ಮಂತ್ರಿ ಮತ್ಸ್ಯ ಸಂಪದ ಯೋಜನೆಯಡಿ ವರ್ಷದ ಹಿಂದೆ ₹ 37.50 ಕೋಟಿ ಮಂಜೂರಾಗಿದೆ. ಇದಕ್ಕೆ ರಾಜ್ಯ ಸರ್ಕಾರದ ಮಟ್ಟದಲ್ಲಿ ಕೆಲವೊಂದು ಅನುಮೋದನೆ ಹಾಗೂ ಕರಾವಳಿ ನಿಯಂತ್ರಣ ವಲಯ ಪ್ರಾಧಿಕಾರದ ಅನುಮತಿ ಬಾಕಿ ಇದೆ. ಈ ಅನುಮತಿಗಳನ್ನೂ ಒದಗಿಸಿ, ಕಾಮಗಾರಿ ಆರಂಭಿಸಲು ಕ್ರಮ ವಹಿಸಬೇಕು ಎಂದು ಮನವಿ ಮಾಡಿದರು.

ADVERTISEMENT

ಈ ಎರಡೂ ಕಾಮಗಾರಿಗಳು ನಡೆಯುವಾಗ ಬಂದರಿನಲ್ಲಿ ಮೀನುಗಾರಿಕಾ ಚಟುವಟಿಕೆಗಳಿಗೆ ಅಡಚಣೆ ಉಂಟಾಗಲಿದೆ. ಈ ಕಾಮಗಾರಿಗಳು ಪೂರ್ಣಗೊಳ್ಳುವವರೆಗೆ ಪರ್ಯಾಯ ವ್ಯವಸ್ಥೆಯಾಗಿ ಬಂದರು ಇಲಾಖೆಯ ವಾಣಿಜ್ಯ ದಕ್ಷಿಣ ಧಕ್ಕೆಯ  200 ಮೀ. ಉದ್ದದ ಜೆಟ್ಟಿಯನ್ನು ಬಳಸಲು ಮೀನುಗಾರರಿಗೆ ಅನುವು ಮಾಡಿಕೊಡಬೇಕು ಎಂದು ಕೋರಿದರು.

ಬಂದರಿನ ಅಳಿವೆ ಭಾಗದಲ್ಲಿ ಹೂಳು ತುಂಬಿದ್ದು, ಹಲವಾರು ದೋಣಿಗಳು ಇಲ್ಲಿ  ಮಗುಚಿ ಬಿದ್ದಿವೆ. ಐದಾರು ವರ್ಷಗಳಿಂದಲೂ ಅಧಿಕಾರಿಗಳು ₹ 29 ಕೋಟಿ ವೆಚ್ಚದಲ್ಲಿ ಹೂಳೆತ್ತುವ  ಭರವಸೆ ನೀಡುತ್ತಲೇ ಬರುತ್ತಿದ್ದಾರೆ.  ಆದರೆ,  ಈ ವರೆಗೂ ಈ ಕಾಮಗಾರಿಯೂ ಪ್ರಾರಂಭವಾಗಿಲ್ಲ ಎಂದು ಗಮನ ಸೆಳೆದರು.  ಈ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಬ್ರೇಕ್‌ ವಾಟರ್‌ ವಿಸ್ತರಿಸಬೇಕು ಎಂದು ಸಲಹೆ ನೀಡಿದರು.

ಬಂದರಿನಲ್ಲಿ ನಿತ್ಯ ₹ 100 ಕೋಟಿಗೂ ಅಧಿಕ ಹಣಕಾಸು ವ್ಯವಹಾರ ನಡೆಯುತ್ತಿದೆ. ಬಂದರಿನಲ್ಲಿ ಮೀನುಗಾರರ, ಮಹಿಳಾ ಮೀನುಗಾರರ ಸುರಕ್ಷತೆಗೆ, ಕಳವು ಹಾಗೂ ಇನ್ನಿತರ ಕಾನೂನುಬಾಹಿರ ಚಟುವಟಿಕೆ ತಡೆಯಲು ಅಲ್ಲಲ್ಲಿ ಸಿ.ಸಿ.ಟಿ.ವಿ. ಕ್ಯಾಮೆರಾ ವ್ಯವಸ್ಥೆ ಅಳವಡಿಸಬೇಕು. ಇಲ್ಲಿಗೆ ಪೊಲೀಸ್‌ ಸಿಬ್ಬಂದಿಯನ್ನು ನಿಯೋಜಿಸ ಬೇಕು ಎಂದು ಒತ್ತಾಯಿಸಿದರು

ರಖಂ ಮತ್ತು ಕಮಿಷನ್‌ ಮೀನು ಮಾರಾಟ ಬಂದರಿನ ಒಳಭಾಗದಲ್ಲೇ ನಡೆಯುತ್ತಿದೆ.  ಅನ್ಯ ರಾಜ್ಯಗಳಿಂದ ಬರುವ 200 ಕ್ಕೂ ಹೆಚ್ಚಿನ ವಾಹನಗಳಿಂದ ಇಲ್ಲಿ ವಾಹನ ದಟ್ಟಣೆ ಉಂಟಾಗಿ ಬಂದರಿನ ದೈನಂದಿನ ಚಟುವಟಿಕೆಗೆ ತೊಡಕಾಗುತ್ತಿದೆ. ನಗರದ ಹೊರಭಾಗದಲ್ಲಿ ಹೆದ್ದಾರಿಯ ಪಕ್ಕದಲ್ಲಿ ಜಾಗ ಗುರುತಿಸಿ ಈ ಮಾರುಕಟ್ಟೆಯನ್ನು ಸ್ಥಳಾಂತರಿಬೇಕು ಎಂದು ಆಗ್ರಹಿಸಿದರು.

 10 ವರ್ಷಗಳಿಂದ ಜಿಲ್ಲೆಯಲ್ಲಿ ಗಣನೀಯವಾಗಿ ಮೀನುಗಾರಿಕಾ ಬೋಟುಗಳು, ಹೆಚ್ಚುತ್ತಿದ್ದರೂ ಜೆಟ್ಟಿ ವಿಸ್ತರಣೆಗೆ ಕ್ರಮಕೈಗೊಂಡಿಲ್ಲ. ಬಂದರಿನಲ್ಲಿ ದೋಣಿಗಳ ದಟ್ಟಣೆ ಸಮಸ್ಯೆಗಳನ್ನು ನಿವಾರಿಸಲು  ತೋಟ ಬೆಂಗ್ರೆ, ಬೊಕ್ಕಪಟ್ಣ, ಬೆಂಗ್ರೆ, ಕೋಟೆಪುರಗಳಲ್ಲಿ   ತಲಾ 200 ಮೀ ಉದ್ದದ ಜೆಟ್ಟಿ  ಹಾಗೂ ಪೂರಕ ಸೌಲಭ್ಯ ಕಲ್ಪಿಸಬೇಕು ಎಂದರು.

‘ನಮ್ಮ ಬಹುತೇಕ ಬೇಡಿಕೆಗಳನ್ನು ಈಡೇರಿಸಲು ಕ್ರಮವಹಿಸುವುದಾಗಿ ಸಚಿವರು ಹಾಗೂ ಉನ್ನತ ಅಧಿಕಾರಿಗಳು ಭರವಸೆ ನೀಡಿದ್ದಾರೆ’ ಎಂದು ಮೀನುಗಾರರ ನಿಯೋಗದಲ್ಲಿದ್ದ ಟ್ರಾಲ್‌ ಬೋಟ್‌ ಮೀನುಗಾರರ ಸಂಘದ ಅಧ್ಯಕ್ಷ ಚೇತನ್ ಬೆಂಗ್ರೆ ಅವರು ‘ಪ್ರಜಾವಾಣಿ‘ಗೆ ತಿಳಿಸಿದರು.

ಟ್ರಾಲ್‌ ಬೋಟ್‌ ಮೀನುಗಾರರ ಸಂಘದ ಉಪಾಧ್ಯಕ್ಷ ಇಬ್ರಾಹಿಂ, ಖಜಾಂಚಿ ರಾಜೇಶ್ ಪುತ್ರನ್‌, ಪರ್ಸೀನ್ ಮೀನುಗಾರರ ಸಂಘದ ಅಧ್ಯಕ್ಷ ಅನಿಲ್ ಕುಮಾರ್‌, ಮಾಜಿ ಅಧ್ಯಕ್ಷ ಮೋಹನ ಬೆಂಗ್ರೆ, ಮೀನುಗಾರರ ಸಂಘಟನೆಯ ರಾಷ್ಟ್ರೀಯ ಸಂಘಟನೆಯ ಮುಖಂಡ ಮನೋಹರ ಬೋಳೂರು ಅವರು ಮೀನುಗಾರರ ನಿಯೋಗದಲ್ಲಿದ್ದರು. ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಎಲ್‌.ಕೆ.ಅತೀಕ್‌ ಹಾಗೂ ಮೀನುಗಾರಿಕೆ ಹಾಗೂ ಬಂದರು ಇಲಾಖೆಗಳ ಉನ್ನತ ಅಧಿಕಾರಿಗಳು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.