ಮಂಗಳೂರು: ಮಾನವ ಹಕ್ಕುಗಳ ಹೋರಾಟಗಾರ ಪಿ.ಬಿ.ಡೆಸಾ (83) ಅವರು ವಯೋಸಹಜ ಅನಾರೋಗ್ಯದಿಂದ ಮಂಗಳವಾರ ನಿಧನರಾದರು.
ಪೀಪಲ್ಸ್ ಯೂನಿಯನ್ ಫಾರ್ ಸಿವಿಲ್ ಲಿಬರ್ಟೀಸ್ (ಪಿಯುಸಿಎಲ್) ಸಂಘಟನೆಯ ರಾಜ್ಯ ಘಟಕದ ಅಧ್ಯಕ್ಷರಾಗಿ ಈ ಹಿಂದೆ ಕಾರ್ಯನಿರ್ವಹಿಸಿದ್ದ ಅವರು ಕರಾವಳಿಯ ವಿವಿಧ ಸಾಮಾಜಿಕ ಸಂಘಟನೆಗಳ ಹೋರಾಟಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು. ಬಡವರ, ತುಳಿತಕ್ಕೊಳಗಾದವರ ಪರವಾಗಿ ಧ್ವನಿ ಎತ್ತುತ್ತಿದ್ದರು. ಅನೇಕ ಪೊಲೀಸ್ ದೌರ್ಜನ್ಯ ಪ್ರಕರಣಗಳಲ್ಲಿ ಸಂತ್ರಸ್ತರ ಪರವಾಗಿ ಕಾನೂನು ಹೋರಾಟ ನಡೆಸಿದ್ದರು. ಕೋಮುವಾದಿ ರಾಜಕಾರಣದ ವಿರುದ್ಧ ಗಟ್ಟಿ ಧ್ವನಿಯಾಗಿದ್ದರು. ಈ ಕಾರಣಕ್ಕಾಗಿಯೇ ಒಮ್ಮೆ ಅವರ ಕೊಲೆಯತ್ನವೂ ನಡೆದಿತ್ತು.
ದಿ.ಜಾನ್ ಎಫ್.ಎಂ ಡೆಸಾ– ಪೌಲಿನ್ ರೇಗೊ ದಂಪತಿಯ ಪುತ್ರನಾದ ಪಿ.ಬಿ.ಡೆಸಾ ಅವರಿಗೆ ಪತ್ನಿ ವಿನ್ನಿಫ್ರೆಡ್ ಡೆಸಾ, ಪುತ್ರರಾದ ಪ್ರೇಮ್, ಪ್ರವೀಣ್ ಹಾಗೂ ಪುತ್ರಿಯರಾದ ಪ್ರೀತಿಕಾ, ಪ್ರಿಯಾ ಹಾಗೂ ಮೊಮ್ಮಕ್ಕಳು ಇದ್ದಾರೆ.
ದೇಹದಾನ: ಡೆಸಾ ಅವರ ಇಚ್ಛೆಯಂತೆಯೇ ಅವರ ದೇಹವನ್ನು ವೈದ್ಯಕೀಯ ಶಿಕ್ಷಣ ಮತ್ತು ಸಂಶೋಧನೆಗಾಗಿ ದಾನ ಮಾಡಲು ಕುಟುಂಬಸ್ಥರು ನಿರ್ಧರಿಸಿದ್ದಾರೆ ಎಂದು ಆಪ್ತ ಮೂಲಗಳು ತಿಳಿಸಿವೆ.
ಪಿ.ಬಿ.ಡೆಸಾ ಅವರಿಗೆ ನಗರದ ರೋಶನಿ ನಿಲಯದ ಎದುರಿನ ‘ಎನ್‌ಫೋರ್ಸ್ ಪೌಲೀನ್’ನಲ್ಲಿ ಬುಧವಾರ ಬೆಳಿಗ್ಗೆ 9.30ರಿಂದ ಮಧ್ಯಾಹ್ನ 11.30ರವರೆಗೆ ಅಂತಿಮ ಗೌರವ ಸಲ್ಲಿಸಲು ಅವಕಾಶ ಕಲ್ಪಿಸಲಾಗುತ್ತದೆ. ಅವರ ಇಚ್ಛೆಯಂತೆ ಅಂತಿಮ ಗೌರವ ಸಲ್ಲಿಸಲು ಕುಟುಂಬಸ್ಥರು ಕ್ರಮವಹಿಸಿದ್ದು, ಯಾವುದೇ ಧಾರ್ಮಿಕ ವಿಧಿಗಳನ್ನು ನೆರವೇರಿಸುತ್ತಿಲ್ಲ. ಹೂವು, ಹೂಗುಚ್ಛ ಅರ್ಪಿಸುವ ಬದಲು, ಸಾಮಾಜಿಕ ಕಾರ್ಯಗಳಿಗೆ ದೇಣಿಗೆ ನೀಡುವ ಮೂಲಕ ಅವರಿಗೆ ಅಂತಿಮ ಗೌರವ ಸಲ್ಲಿಸಬಹುದು ಎಂದು ಆಪ್ತಮೂಲಗಳು ತಿಳಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.