ADVERTISEMENT

ಮಂಗಳೂರು | ತ್ರಿವಳಿ ತಲಾಖ್ ಆರೋಪ: ಪತಿ ಬಂಧನ

​ಪ್ರಜಾವಾಣಿ ವಾರ್ತೆ
Published 22 ನವೆಂಬರ್ 2024, 14:34 IST
Last Updated 22 ನವೆಂಬರ್ 2024, 14:34 IST
<div class="paragraphs"><p>ಬಂಧನ </p></div>

ಬಂಧನ

   

(ಸಾಂದರ್ಭಿಕ ಚಿತ್ರ)

ಮಂಗಳೂರು: ಪತ್ನಿಗೆ ಮಾನಸಿಕ, ದೈಹಿಕ ಕಿರುಕುಳ ನೀಡಿ ತ್ರಿವಳಿ ತಲಾಖ್ ನೀಡಿರುವ ಆರೋಪದ ಮೇಲೆ ಪತಿಯನ್ನು ಇಲ್ಲಿನ ಮಹಿಳಾ ಠಾಣೆ ಪೊಲೀಸರು ಬಂಧಿಸಿದ್ದಾರೆ.

ADVERTISEMENT

ಉಳ್ಳಾಲ ಸಮ್ಮರ್ ಸ್ಯಾಂಡ್ ಸಮೀಪದ ನಿವಾಸಿ ಮೊಹಮ್ಮದ್ ದಿಲ್ಫಾಜ್ ಬಂಧಿತ ಆರೋಪಿ. ಆತನ ಪತ್ನಿ ಉಳ್ಳಾಲ ಮಾಸ್ತಿಕಟ್ಟೆಯ ಹೀನಾ ಫಾತಿಮಾ ಗುರುವಾರ ನೀಡಿದ ದೂರಿನ ಮೇಲೆ ಮುಸ್ಲಿಂ ಮಹಿಳೆಯರ ವಿವಾಹ ಹಕ್ಕುಗಳ ಸಂರಕ್ಷಣೆ ಕಾಯ್ದೆ ಅಡಿಯಲ್ಲಿ ಪಾಂಡೇಶ್ವರ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

‘ಪ್ರೀತಿಸಿ ಮದುವೆಯಾಗಿದ್ದ ದಿಲ್ಫಾಜ್ ಮತ್ತು ಹೀನಾ ಕೆಲವು ಸಮಯ ಚೆನ್ನಾಗಿಯೇ ಸಂಸಾರ ನಡೆಸಿದ್ದಾರೆ. ನಂತರ ಈತ ಅನ್ಯ ಮಹಿಳೆ ಜೊತೆ ಅನೈತಿಕ ಸಂಬಂಧ ಹೊಂದಿರುವ ಬಗ್ಗೆ ಪತ್ನಿ ಪ್ರಶ್ನಿಸಿದ್ದಾರೆ. ಈ ಕಾರಣಕ್ಕೆ ಆರೋಪಿಯು ಪತ್ನಿ ಮೇಲೆ ದೈಹಿಕ ಹಲ್ಲೆ ನಡೆಸಿದ್ದಾನೆ. ಪತ್ನಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದು ಬಂದ ಮೇಲೆ, ಕುಟುಂಬದ ಹಿರಿಯರು ಸೇರಿ ದಿಲ್ಫಾಜ್‌ಗೆ ಬುದ್ಧಿವಾದ ಹೇಳಿದ್ದರು. ನಂತರವೂ ಸುಧಾರಿಸದ  ದಿಲ್ಫಾಜ್‌ನನ್ನು, ನ.8ರಂದು ಹೀನಾ ಫಾತಿಮಾ ತಂದೆ ಸಬೀಲ್ ಅಹಮ್ಮದ್ ಪ್ರಶ್ನಿಸಿದಾಗ, ಪತ್ನಿ ಮೇಲೆ ಹಲ್ಲೆ ನಡೆಸಿದ್ದಾನೆ. ಅದೇ ದಿನ ರಾತ್ರಿ ಸಬೀಲ್ ಅಹಮ್ಮದ್ ಅವರನ್ನು ತನ್ನ ಮನೆಗೆ ಕರೆದು, ಅವರ ಎದುರಿನಲ್ಲಿ ಪತ್ನಿ ಹೀನಾಗೆ ಮೂರು ಬಾರಿ ತಲಾಖ್ ಹೇಳಿ ‘ನೀನು ನನ್ನ ಪತ್ನಿಯಲ್ಲ’ ಎಂದು ಹೇಳಿ ಮನೆಯಿಂದ ಹೊರ ಹಾಕಿದ್ದಾನೆ’ ಎಂದು ಪೊಲೀಸ್ ಮೂಲಗಳು ಮಾಹಿತಿ ನೀಡಿವೆ.

‘2019ರಲ್ಲಿ ನಮ್ಮ ಮದುವೆಯಾಗಿದ್ದು, ಆ ವೇಳೆ ನನ್ನ ತಂದೆ 22 ಪವನ್ ಚಿನ್ನ, ದಿಲ್ಫಾಜ್‌ಗೆ ವಾಚ್ ಖರೀದಿಸಲು ₹50 ಸಾವಿರ ನಗದು ನೀಡಿದ್ದರು. ನನ್ನ ತಂದೆ ಕೈತುಂಬಾ ವರದಕ್ಷಿಣೆ ನೀಡಿಲ್ಲವೆಂದು ದಿಲ್ಫಾಜ್ ತಂದೆ ಉಮರಬ್ಬ ಕೂಡ ಆಗಾಗ ಮಾನಸಿಕ ಕಿರುಕುಳ ನೀಡುತ್ತಿದ್ದರು’ ಎಂದು ಹೀನಾ ಫಾತಿಮಾ, ದಿಲ್ಫಾಜ್ ಮತ್ತು ಉಮರಬ್ಬ ವಿರುದ್ಧ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.