ಮಂಗಳೂರು: ‘ರಾಜ್ ಸೌಂಡ್ಸ್ ಆ್ಯಂಡ್ ಲೈಟ್ಸ್’ ತುಳು ಸಿನಿಮಾದ ಶತದಿನೋತ್ಸವ ಸಂಭ್ರಮ ಕಾರ್ಯಕ್ರಮ ನಗರದ ಕುದ್ಮುಲ್ ರಂಗರಾವ್ ಪುರಭವನದಲ್ಲಿ ಗುರುವಾರ ನಡೆಯಿತು.
ಸಿನಿಮಾದಲ್ಲಿ ಬಣ್ಣ ಹಚ್ಚಿದ ಕಲಾವಿದರನ್ನು, ತಂತ್ರಜ್ಞರನ್ನು, ವಿವಿಧ ವಿಭಾಗಗಳಲ್ಲಿ ಕಾರ್ಯ ನಿರ್ವಹಿಸಿದರನ್ನು ಸನ್ಮಾನಿಸಲಾಯಿತು. ಇದೇ ವೇಳೆ ತುಳು ಬಾವುಟವನ್ನು ಅನಾವರಣ ಮಾಡಿ, ತುಳು ಭಾಷೆ, ತುಳು ಲಿಪಿಯ ಜಾಗೃತಿಗಾಗಿ ಕೆಲಸ ಮಾಡುತ್ತಿರುವ ಸಂಘ ಸಂಸ್ಥೆಗಳನ್ನು ಗೌರವಿಸಲಾಯಿತು.
ಚಲನಚಿತ್ರ ನಿರ್ದೇಶಕ ದೇವದಾಸ್ ಕಾಪಿಕಾಡ್ ಮಾತನಾಡಿ, ‘ತುಳು ಭಾಷೆಯ ಬೆಳವಣಿಗೆಯಲ್ಲಿ ತುಳು ಚಿತ್ರದ ಕೊಡುಗೆ ಅಪಾರವಾದುದು. ತುಳುವರು ತುಳು ಚಿತ್ರವನ್ನು ಬೆನ್ನುತಟ್ಟಿ ಪ್ರೋತ್ಸಾಹಿಸಿದಾಗ ಇನ್ನಷ್ಟು ಉತ್ತಮ ಚಿತ್ರಗಳು ಬರುತ್ತವೆ’ ಎಂದು ಹೇಳಿದರು.
ಮಂಗಳೂರಿನ ಎ.ಜೆ. ಆಸ್ಪತ್ರೆಯ ಎಂ.ಡಿ. ಡಾ.ಪ್ರಶಾಂತ್ ಮಾರ್ಲ ಮಾತನಾಡಿ, ‘ಉತ್ತಮ ಗುಣಮಟ್ಟದ ಚಿತ್ರವನ್ನು ಪ್ರೇಕ್ಷಕರು ಮೆಚ್ಚಿಕೊಳ್ಳುತ್ತಾರೆ ಎಂಬುದಕ್ಕೆ ರಾಜ್ ಸೌಂಡ್ಸ್ ಆ್ಯಂಡ್ ಲೈಟ್ಸ್ ಚಿತ್ರ ಉತ್ತಮ ಉದಾಹರಣೆ. ಈ ಚಿತ್ರ ತಂಡವು ತುಳು ಸಿನಿಮಾದ ಮಾರುಕಟ್ಟೆಯ ವ್ಯಾಪ್ತಿಯನ್ನು ಇನ್ನಷ್ಟು ವಿಸ್ತರಿಸಿದೆ’ ಎಂದು ಹೇಳಿದರು.
ಮಂಗಳೂರು ದಕ್ಷಿಣ ಶಾಸಕ ಡಿ.ವೇದವ್ಯಾಸ ಕಾಮತ್, ಮೇಯರ್ ಪ್ರೇಮಾನಂದ ಶೆಟ್ಟಿ, ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ದಯಾನಂದ ಕತ್ತಲ್‌ಸರ್, ಕುದ್ರೋಳಿ ಗೋಕರ್ಣನಾಥ ಕ್ಷೇತ್ರದ ಕೋಶಾಧಿಕಾರಿ ಪದ್ಮರಾಜ್ ಆರ್, ಕಲಾವಿದರಾದ ಸತೀಶ್ ಬಂದಲೆ, ಸಾಯಿಕೃಷ್ಣ ಕುಡ್ಲ, ಪ್ರಕಾಶ್ ಧರ್ಮನಗರ, ವಿಸ್ಮಯ ವಿನಾಯಕ್ ಮೈಮ್ ರಾಮ್‌ದಾಸ್, ಬಿಜೆಪಿ ಮುಖಂಡರಾದ ಸತೀಶ್ ಕುಂಪಲ, ಅಭಿಲಾಷ್ ಶೆಟ್ಟಿ, ವಿಖ್ಯಾತ್ ಶೆಟ್ಟಿ, ನಿರ್ಮಾಪಕರಾದ ದೇವದಾಸ್ ಪಾಂಡೇಶ್ವರ, ಧನರಾಜ್, ಫ್ರಾಂಕ್ ಫರ್ನಾಂಡಿಸ್, ರವಿ ರೈ. ಕಳಸ, ಪ್ರಕಾಶ್ ಪಾಂಡೇಶ್ವರ, ಕೆಎಂಸಿ ಆಸ್ಪತ್ರೆಯ ರವಿರಾಜ್, ರಾಕೇಶ್ ಕುಮಾರ್, ಡೈಲಿವಲ್ಡ್ ವಾಹಿನಿಯ ನಿರ್ದೇಶಕ ವಾಲ್ಟರ್ ನಂದಳಿಕೆ, ನಮ್ಮ ಕುಡ್ಲ ವಾಹಿನಿಯ ನಿರ್ದೇಶಕ ಲೀಲಾಕ್ಷ ಕರ್ಕೇರಾ, ಅಶ್ವಿತ್ ಕೊಟ್ಟಾರಿ, ಸದಾನಂದ ಉಪಾಧ್ಯಾಯ, ಕಲಾ ನಿರ್ದೇಶಕ ತಮ್ಮ ಲಕ್ಷ್ಮಣ, ಆಕಾಶ್ ಜೈನ್, ಕಿಶೋರ್ ಕೊಟ್ಟಾರಿ, ಟಿ.ಎ.ಶ್ರೀನಿವಾಸ್, ಸಂದೇಶ್ ಇದ್ದರು.
‘ರಾಜ್ ಸೌಂಡ್ಸ್ ಆ್ಯಂಡ್ ಲೈಟ್ಸ್’ ಚಿತ್ರದ ನಿರ್ಮಾಪಕ ಆನಂದ ಎನ್.ಕುಂಪಲ, ನಿರ್ದೇಶಕ ರಾಹುಲ್ ಅಮಿನ್, ಅಶೋಕ್ ಕುಮಾರ್, ನಾಯಕನಟ ವಿನೀತ್ ಕುಮಾರ್ ಸಹಕರಿಸಿದರು. ಲಘು ಸಂಗೀತ ಹಾಗೂ ವೈವಿಧ್ಯಮಯ ಮನರಂಜನಾ ಕಾರ್ಯಕ್ರಮ ನಡೆಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.