ADVERTISEMENT

ಸುಸ್ಥಿರ ದಾರಿ– ಪ್ರಗತಿಯ ಹೊಸ ಮಾದರಿ

ಮಂಗಳೂರು ವಿಶ್ವವಿದ್ಯಾನಿಲಯದ 42ನೇ ಘಟಿಕೋತ್ಸವದಲ್ಲಿ ಪ್ರೊ.ಸಚಿನ್ ಚತುರ್ವೇದಿ ಪ್ರತಿಪಾದನೆ

​ಪ್ರಜಾವಾಣಿ ವಾರ್ತೆ
Published 16 ಜೂನ್ 2024, 4:42 IST
Last Updated 16 ಜೂನ್ 2024, 4:42 IST

ಮಂಗಳೂರು: ‘ಕಾರ್ಬನ್‌ ಹೆಜ್ಜೆ ಗುರುತು ಕಡಿಮೆಗೊಳಿಸಲು ಎಲ್ಲರೂ ಬದುಕಿನ ಶೈಲಿಯನ್ನು ಬದಲಾಯಿಸಿಕೊಳ್ಳಬೇಕು.  ಪದವೀಧರರೆಲ್ಲರೂ ಸುಸ್ಥಿರ ಜೀವನ ವಿಧಾನ ಅಳವಡಿಸಿಕೊಳ್ಳಬೇಕು. ಅದನ್ನೇ ಅಭಿವೃದ್ಧಿಯ ಹೊಸ ಮಾದರಿಯನ್ನಾಗಿ ಪರಿಗಣಿಸಬೇಕು’ ಎಂದು ಅಭಿವೃದ್ಧಿ ‌ಹೊಂದುತ್ತಿರುವ ದೇಶಗಳ ಸಂಶೋಧನೆ ಮತ್ತು ಮಾಹಿತಿ ವ್ಯವಸ್ಥೆಯ ಮಹಾನಿರ್ದೇಶಕ ಪ್ರೊ.ಸಚಿನ್ ಚತುರ್ವೇದಿ ಹೇಳಿದರು.

ಮಂಗಳೂರು ವಿಶ್ವವಿದ್ಯಾನಿಲಯದ 42ನೇ ಘಟಿಕೋತ್ಸವದಲ್ಲಿ ಅವರು ಶನಿವಾರ ಮಾತನಾಡಿದರು.

‘ಪರಿಸರಕ್ಕಾಗಿ ಜೀವನಶೈಲಿ (ಲೈಫ್‌) ಅಭಿಯಾನದ ಮುಖ್ಯ ಉದ್ದೇಶ ಸುಸ್ಥಿರ ಜೀವನಶೈಲಿಯನ್ನು ಸಾಮೂಹಿಕ ಅಭಿಯಾನವನ್ನಾಗಿ ರೂಪಿಸುವುದು. ವಿಜ್ಞಾನ ಮತ್ತು ಸಾಮಾಜಿಕ ವಿಜ್ಞಾನ ಕ್ಷೇತ್ರಗಳಲ್ಲಿ ಸಂಶೋಧನೆಯ ಹೊಸ ಸಾಧ್ಯತೆಗಳನ್ನು ಕಂಡುಕೊಳ್ಳಲು ಇದು ನೆರವಾಗಲಿದೆ. ಈ ನಿಟ್ಟಿನಲ್ಲಿ ವಿಶ್ವವಿದ್ಯಾನಿಲಯಗಳಂತೆ ಪ್ರಮುಖ ಜ್ಞಾನ ಕೇಂದ್ರಗಳು ಮುಂದಾಲೋಚನೆಯಿಂದ ಕಾರ್ಯನಿರ್ವಹಿಸುವ ಅಗತ್ಯವಿದೆ‘ ಎಂದರು.  

ADVERTISEMENT

ರಾಜ್ಯಪಾಲ ಥಾವರಚಂದ್ ಗೆಹಲೋತ್‌, ‘ತರಗತಿಗಳಲ್ಲಿ ಕಲಿತ ಜ್ಞಾನವು ಮನುಕುಲದ ಒಳತಿಗೆ ಬಳಕೆಯಾಗಬೇಕು. ಪರಿಸರ ಕಾಳಜಿ ಬೆಳೆಸುವಲ್ಲಿ ಪದವೀಧರರು ಹೆಚ್ಚಿನ ಹೊಣೆ ನಿಭಾಯಿಸಬೇಕು. ಸೌರಶಕ್ತಿಯಂತಹ ಸುಸ್ಥಿರ ಇಂಧನ ಬಳಕೆಗೆ ಆದ್ಯತೆ ನೀಡಬೇಕು‘ ಎಂದರು.

ಉದ್ಯಮಿಗಳಾದ ಎಂಆರ್‌ಜಿ ಬಳಗದ ಉದ್ಯಮಿ ಎಂಜಿಆರ್ ಸಮೂಹದ ಸಂಸ್ಥಾಪಕ ಕೆ.ಪ್ರಕಾಶ್‌ ಶೆಟ್ಟಿ ಹಾಗೂ ಉದ್ಯಮಿ ರೊನಾಲ್ಡ್ ಕೊಲಾಸೊ ಅವರಿಗೆ ಗೌರವ ಡಾಕ್ಟರೇಟ್ ಪ್ರದಾನ ಮಾಡಲಾಯಿತು. ಗೌರವ ಡಾಕ್ಟರೇಟ್‌ಗೆ ಆಯ್ಕೆಯಾಗಿದ್ದ  ಉದ್ಯಮಿ ತುಂಬೆ ಮೊಯ್ದಿನ್ ಗೈರಾಗಿದ್ದರು.

ಕುಲಪತಿ ಪ್ರೊ.ಪಿ.ಎಲ್.ಧರ್ಮ, ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್, ಕುಲಸಚಿವ ರಾಜು ಮೊಗವೀರ, ಕುಲಸಚಿವ (ಮೌಲ್ಯಮಾಪನ) ಪ್ರೊ.ಎಚ್.ದೇವೇಂದ್ರಪ್ಪ, ಹಣಕಾಸು ಅಧಿಕಾರಿ ಪ್ರೊ.ಸಂಗಪ್ಪ ವೈ. ವಿವಿಧ ನಿಖಾಯಗಳ ಮುಖ್ಯಸ್ಥರು ಭಾಗವಹಿಸಿದ್ದರು. ರ‍್ಯಾಂಕ್‌ ವಿಜೇತರಿಗೆ, ಪದಕ ವಿಜೇತ ವಿದ್ಯಾರ್ಥಿಗಳಿಗೆ ರಾಜ್ಯಪಾಲರು ಪ್ರಮಾಣಪತ್ರ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.