ADVERTISEMENT

ಮಂಗಳೂರು ವಿಶ್ವವಿದ್ಯಾನಿಲಯ: 3 ಕೋರ್ಸ್‌ಗಳಿಗೆ ಪ್ರವೇಶ ಇಲ್ಲ

ಸಂಧ್ಯಾ ಕಾಲೇಜಿನ ಬಿ.ಎ, ಬಿ.ಕಾಂ, ಬಿ.ಸಿ.ಎ ಭವಿಷ್ಯ ಡೋಲಾಯಮಾನ

​ಪ್ರಜಾವಾಣಿ ವಾರ್ತೆ
Published 28 ಆಗಸ್ಟ್ 2024, 5:55 IST
Last Updated 28 ಆಗಸ್ಟ್ 2024, 5:55 IST
ಹಂಪನಕಟ್ಟ ಕಾಲೇಜು
ಹಂಪನಕಟ್ಟ ಕಾಲೇಜು   

ಮಂಗಳೂರು: ನಗರದ ಹಂಪನಕಟ್ಟೆಯಲ್ಲಿರುವ ವಿಶ್ವವಿದ್ಯಾನಿಲಯ ಸಂಧ್ಯಾ ಕಾಲೇಜಿನ ಬಿ.ಎ, ಬಿ.ಕಾಂ ಹಾಗೂ ಬಿಸಿಎ ಕೋರ್ಸ್‌ಗಳ ಭವಿಷ್ಯ ಡೋಲಾಯಮಾನವಾಗಿದೆ. ಈ ಮೂರೂ ಕೋರ್ಸ್‌ಗಳಿಗೆ ನಿರೀಕ್ಷಿತ ಪ್ರಮಾಣದಲ್ಲಿ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸದ ಕಾರಣ, ಕೋರ್ಸ್‌ಗಳಿಗೆ 2024–25ನೇ ಸಾಲಿನ ಮೊದಲ ವರ್ಷದ ತರಗತಿಗಳ ಪ್ರವೇಶ ಪ್ರಕ್ರಿಯೆಯನ್ನು ವಿಶ್ವವಿದ್ಯಾನಿಲಯವು ಸ್ಥಗಿತಗೊಳಿಸಿದೆ.

ಪದವಿ ಕೋರ್ಸ್‌ಗೆ ಕನಿಷ್ಠ 20 ಹಾಗೂ ಸ್ನಾತಕೋತ್ತರ ಕೋರ್ಸ್‌ಗೆ ಕನಿಷ್ಠ 15 ವಿದ್ಯಾರ್ಥಿಗಳ ಪ್ರವೇಶಾತಿ ಕಡ್ಡಾಯ ಎಂದು ವಿಶ್ವವಿದ್ಯಾಲಯವು ಜಾರಿ ಮಾಡಿರುವ ನಿಯಮ ಈ ಕಾಲೇಜಿನ ಮೂರು ಪದವಿ ಕೋರ್ಸ್‌ಗಳನ್ನು ಮುಂದುವರಿಸುವುದಕ್ಕೆ ತೊಡಕಾಗಿದೆ. ಅನೇಕ ಬಡ ವಿದ್ಯಾರ್ಥಿಗಳು ದಿನದಲ್ಲಿ ಕೆಲಸ ಮಾಡಿಕೊಂಡು ಸಂಜೆ ನಂತರ ಈ  ಕಾಲೇಜಿನಲ್ಲಿ ಪದವಿ ವಿದ್ಯಾಭ್ಯಾಸ ಪಡೆಯುತ್ತಿದ್ದರು. ಈ ವರ್ಷ ಮೊದಲ ವರ್ಷದ ಪದವಿ ಕೋರ್ಸ್‌ಗೆ ಸೇರ ಬಯಸಿದ್ದ ವಿದ್ಯಾರ್ಥಿಗಳು ಈ ಅವಕಾಶದಿಂದ ವಂಚಿತರಾಗಲಿದ್ದಾರೆ.

‘ಈ ವರ್ಷದ ಬಿ.ಎ ಕೋರ್ಸ್‌ಗೆ 11 ವಿದ್ಯಾರ್ಥಿಗಳು ಅರ್ಜಿ ಪಡೆದಿದ್ದರು., ಅವರಲ್ಲಿ 5 ಮಂದಿ ಮಾತ್ರ ಅರ್ಜಿ ಸಲ್ಲಿಸಿದ್ದರು. ಬಿ.ಕಾಂ. ಕೋರ್ಸ್‌ಗೆ  5 ಅಭ್ಯರ್ಥಿಗಳು ಅರ್ಜಿ ಒಯ್ದಿದ್ದು, ಮೂವರು ಮಾತ್ರ ಅರ್ಜಿ ಸಲ್ಲಿಸಿದ್ದರು. ಬಿಸಿಎ ಕೋರ್ಸ್‌ಗೆ 18  ಮಂದಿ ಅರ್ಜಿ ಒಯ್ದಿದ್ದು, 11 ಮಂದಿ ಅರ್ಜಿ ಸಲ್ಲಿಸಿದ್ದರು. ಬೇರೆ ಕಾಲೇಜಿನಲ್ಲಿ ಪ್ರವೇಶ ಪಡೆಯುವಂತೆ ಈ ವಿದ್ಯಾರ್ಥಿಗಳಿಗೆ ಸೂಚಿಸಿದ್ದೇವೆ’ ಎಂದು ಕಾಲೇಜಿನ ಮೂಲಗಳು ತಿಳಿಸಿವೆ. ಬಿ.ಎ ಹಾಗೂ ಬಿ.ಕಾಂಗೆ ಅರ್ಜಿ ಸಲ್ಲಿಸಿದ್ದ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾನಿಲಯ (ಹಗಲು) ಕಾಲೇಜಿನಲ್ಲಿ ಪ್ರವೇಶ ನೀಡಲಾಗಿದೆ. ಬಿಸಿಎಗೆ ಪ್ರವೇಶ ಬಯಸಿದ್ದ ವಿದ್ಯಾರ್ಥಿಗಳು ರಥಬೀದಿಯ ದಯಾನಂದ ಪೈ, ಸತೀಶ ಪೈ ಪ್ರಥಮ ದರ್ಜೆ ಕಾಲೇಜಿನಲ್ಲಿ ಪ್ರವೇಶ ಪಡೆದಿದ್ದಾರೆ.

ADVERTISEMENT

‘ತರಗತಿಯಲ್ಲಿ 20ಕ್ಕಿಂತ ಕಡಿಮೆ ವಿದ್ಯಾರ್ಥಿಗಳಿರುವ ಪದವಿ ಕೋರ್ಸ್‌ಗಳನ್ನು ನಡೆಸುವುದು ಬೇಡ ಎಂದು ವಿಶ್ವವಿದ್ಯಾಲಯವೇ ನಿರ್ಧಾರ ಕೈಗೊಂಡಿದೆ. ಹಾಗಾಗಿ ಅನಿವಾರ್ಯವಾಗಿ ಈ ಕೋರ್ಸ್‌ಗಳಿಗೆ ಈ ವರ್ಷ ವಿದ್ಯಾರ್ಥಿಗಳನ್ನು ದಾಖಲು ಮಾಡಿಕೊಂಡಿಲ್ಲ. ಮುಂದಿನ ವರ್ಷ 20ಕ್ಕಿಂತ ಹೆಚ್ಚು ವಿದ್ಯಾರ್ಥಿಗಳು ಪ್ರವೇಶ ಕೋರಿ ಅರ್ಜಿ ಸಲ್ಲಿಸಿದರೆ ಈ ಕೋರ್ಸ್‌ಗಳನ್ನು ಮುಂದುವರಿಸಲಿದ್ದೇವೆ’ ಎಂದು ಕಾಲೇಜಿನ ಪ್ರಾಂಶುಪಾಲರಾದ ಲಕ್ಷ್ಮೀದೇವಿ ಎಲ್‌. ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ಪದವಿ ಕೋರ್ಸ್‌ಗಳಿಗೆ ಮೊದಲ ವರ್ಷದ ಪ್ರವೇಶಾತಿ ಸ್ಥಗಿತಗೊಳಿಸಿದ ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಮಂಗಳೂರು ವಿಶ್ವವಿದ್ಯಾಲಯಯ ಕುಲಸಚಿವ ರಾಜು ಮೊಗವೀರ, ‘ಪದವಿ ತರಗತಿಯಲ್ಲಿ 20ಕ್ಕಿಂತ ಕಡಿಮೆ ವಿದ್ಯಾರ್ಥಿಗಳಿದ್ದರೆ, ಆ ಕೋರ್ಸ್‌ ನಡೆಸುವುದು ಕಷ್ಟ. ಸಂಧ್ಯಾ ಕಾಲೇಜಿನ ಅಧ್ಯಾಪಕರ ವೇತನಾನುದಾನಕ್ಕೆ ‌ಸರ್ಕಾರ ಇನ್ನೂ ಮಂಜೂರಾತಿ ನೀಡಿಲ್ಲ. ಇಲ್ಲಿ ಅತಿಥಿ ಉಪನ್ಯಾಸಕರನ್ನು ಬಳಸಿಕೊಂಡು ಈ ಕೋರ್ಸ್‌ಗಳನ್ನು ನಿರ್ವಹಿಸಬೇಕಾಗಿದೆ. ವಿದ್ಯಾರ್ಥಿಗಳ ಸಂಖ್ಯೆ ಗಣನೀಯವಾಗಿ ಕುಸಿತವಾಗಿರುವುದರಿಂದ ಸಂಧ್ಯಾ ಕಾಲೇಜಿ ಬಿ.ಎ, ಬಿ.ಕಾಂ ಹಾಗೂ ಬಿಸಿಎ ತರಗತಿಗಳಿಗೆ ಈ ವರ್ಷ ಪ್ರವೇಶಾತಿ ಸ್ಥಗಿತಗೊಳಿಸಿದ್ದೇವೆ’ ಎಂದರು. 

ಪದವಿಯ ಈ ಕೋರ್ಸ್‌ಗಳ ದ್ವಿತೀಯ ಹಾಗೂ ತೃತೀಯ ವರ್ಷದ ತರಗತಿಗಳಲ್ಲೂ ವಿದ್ಯಾರ್ಥಿಗಳ ತಲಾ 20ಕ್ಕಿಂತ ಕಡಿಮೆ ಇದೆ. ಆದರೂ ಅವುಗಳನ್ನು ವಿವಶ್ವವಿದ್ಯಾಲಯ ಮುಂದುವರಿಸಿದೆ. 

ತುಳು ಕೊಂಕಣಿ ಎಂ.ಎ– ಸ್ಥಗಿತದ ಭೀತಿ

ವಿಶ್ವವಿದ್ಯಾನಿಲಯ ಸಂಧ್ಯಾ ಕಾಲೇಜಿನಲ್ಲಿ ತುಳು ಮತ್ತು ಕೊಂಕಣಿ ಎಂ.ಎ. ಕೋರ್ಸ್‌ಗಳೂ ಲಭ್ಯ ಇವೆ. ತುಳು ಎಂ.ಎ.ಗೆ ಕೋರ್ಸ್‌ನಲ್ಲಿ ದ್ವಿತೀಯ ವರ್ಷದಲ್ಲಿ 14 ಹಾಗೂ ಕೊಂಕಣಿ ಎಂ.ಎ.ನಲ್ಲಿ ದ್ವಿತೀಯ ವರ್ಷದಲ್ಲಿ ನಾಲ್ವರು ವಿದ್ಯಾರ್ಥಿಗಳು ಮಾತ್ರ ಕಲಿಯುತ್ತಿದ್ದಾರೆ. ಸ್ನಾತಕೋತ್ತರ ತರಗತಿಗಳ ಮೊದಲ ವರ್ಷದ ಪ್ರವೇಶ ಪ್ರಕ್ರಿಯೆ ಈಗಷ್ಟೇ ಆರಂಭವಾಗಿದೆ. ನಿಗದಿತ ಪ್ರಮಾಣದಲ್ಲಿ ವಿದ್ಯಾರ್ಥಿಗಳು ಪ್ರವೇಶ ಪಡೆಯದಿದ್ದರೆ ಈ ಕೋರ್ಸ್‌ಗಳನ್ನೂ ಸ್ಥಗಿತಗೊಳ್ಳುವ ಆತಂಕ ಎದುರಾಗಿದೆ. ಕಾಲೇಜಿನಲ್ಲಿರುವ ಎಂ.ಕಾಂ ಹಾಗೂ ಎಂಬಿಎ (ಇಂಟರ್‌ನ್ಯಾಷನಲ್ ಬಿಜಿನೆಸ್‌) ಕೋರ್ಸ್‌ಗಳಿಗೆ ಬೇಡಿಕೆ ಇದೆ. 

ಪಿ.ಜಿ ಕೋರ್ಸ್‌ ವಿ.ವಿ. ಪ್ರಾಂಗಣಕ್ಕೆ

ನಗರದ ಹಂಪನಕಟ್ಟೆಯಲ್ಲಿರುವ ಮಂಗಳೂರು ವಿಶ್ವವಿದ್ಯಾನಿಲಯ (ಹಗಲು) ಕಾಲೇಜಿನಲ್ಲಿ ಅರ್ಥಶಾಸ್ತ್ರ ಇತಿಹಾಸ ಹಾಗೂ ಯೋಗ ವಿಜ್ಞಾನ ಸ್ನಾತಕೋತ್ತರ ಕೋರ್ಸ್‌ಗಳನ್ನು ಸ್ಥಗಿತಗೊಳಿಸಿ ವಿದ್ಯಾರ್ಥಿಗಳಿಗೆ ಮಂಗಳಗಂಗೋತ್ರಿಯ ಪ್ರಾಂಗಣದಲ್ಲೇ ತರಗತಿ ಮುಂದುವರಿಸಲು ವಿಶ್ವವಿದ್ಯಾಲಯ ನಿರ್ಧರಿಸಿದೆ.

‘ಈ ಮೂರೂ ಕೋರ್ಸ್‌ಗಳೂ ಮಂಗಳಗಂಗೋತ್ರಿಯ ಪ್ರಾಂಗಣದಲ್ಲಿ ಲಭ್ಯ ಇವೆ. ಯಾವ ಉದ್ದೇಶದಿಂದ ಹಂಪನಕಟ್ಟೆಯ ವಿಶ್ವವಿದ್ಯಾನಿಲಯ ಕಾಲೇಜಿನಲ್ಲೂ ಈ ಕೋರ್ಸ್‌ಗಳನ್ನು ಆರಂಭಿಸಲಾಗಿತ್ತೋ ತಿಳಿಯದು. ಈಗ ಮಂಗಳೂರು ವಿಶ್ವವಿದ್ಯಾಲಯದಲ್ಲೇ ಈ ಕೋರ್ಸ್‌ಗಳಿಗೆ ವಿದ್ಯಾರ್ಥಿಗಳ ಸಂಖ್ಯೆ ಗಣನೀಯವಾಗಿ ಕಡಿಮೆ ಆಗಿದೆ. ಒಂದು ಕೋರ್ಸ್‌ ನಿರ್ವಹಣೆಗೆ ವರ್ಷಕ್ಕೆ ಕನಿಷ್ಠ  25 ಲಕ್ಷ ವೆಚ್ಚವಾಗುತ್ತದೆ. ವಿದ್ಯಾರ್ಥಿಗಳಿಂದ ವರ್ಷಕ್ಕೆ ₹ 1500 ಟ್ಯೂಷನ್‌ ಶುಲ್ಕ ಪಡೆಯಲಾಗುತ್ತಿದ್ದು ಇದು ಕೋರ್ಸ್‌ಗಳ ನಿರ್ವಹಣೆಗೆ ಏನೇನೂ ಸಾಲದರು. ಎರಡೆರಡು ಕಡೆ ತರಗತಿಗಳನ್ನು ನಡೆಸುವ ಬದಲು ಒಂದೇ ಕಡೆ ತರಗತಿಗಳನ್ನು ನಡೆಸಲು ನಿರ್ಧರಿಸಿದ್ದೇವೆ’ ಎಂದು ಕುಲಸಚಿವ ರಾಜು ಮೊಗವೀರ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.