ADVERTISEMENT

ಮಾರುಕಟ್ಟೆ ನೋಟ | ಆವಕ ಇಳಿಕೆ: ಹೆಚ್ಚಿದ ಧಾರಣೆ

ಮಳೆಯ ಕಾರಣದಿಂದ ಹಾಳಾಗುತ್ತಿರುವ ಬೆಳೆ

​ಪ್ರಜಾವಾಣಿ ವಾರ್ತೆ
Published 25 ಅಕ್ಟೋಬರ್ 2024, 8:02 IST
Last Updated 25 ಅಕ್ಟೋಬರ್ 2024, 8:02 IST
ಮಾರುಕಟ್ಟೆಯಲ್ಲಿ ಮಾರಾಟಕ್ಕೆ ಇಟ್ಟಿರುವ ತರಕಾರಿ
ಮಾರುಕಟ್ಟೆಯಲ್ಲಿ ಮಾರಾಟಕ್ಕೆ ಇಟ್ಟಿರುವ ತರಕಾರಿ   

ಮಂಗಳೂರು: ನವರಾತ್ರಿ ಬಳಿಕ ದೀಪಾವಳಿ ಹಬ್ಬಕ್ಕೆ ಸುಮಾರು 10 ದಿನಗಳ ಅಂತರ ಇರುವುದರಿಂದ, ಈ ಅವಧಿಯಲ್ಲಿ ತರಕಾರಿ ಧಾರಣೆ ಇಳಿಕೆ ಆಗಬಹುದು ಎಂಬ ಗ್ರಾಹಕರ ನಿರೀಕ್ಷೆ ಹುಸಿಯಾಗಿದೆ. ರಾಜ್ಯದ ವಿವಿಧ ಭಾಗಗಳಲ್ಲಿ ಮಳೆಯ ಕಾರಣ ಬೆಳೆ ಹಾನಿಯಾಗಿ ಮಾರುಕಟ್ಟೆಗೆ ಆವಕ ಕಡಿಮೆಯಾಗಿ ಧಾರಣೆ ಏರುಗತಿಯಲ್ಲೇ ಸಾಗಿದೆ.

ದಸರಾ ವೇಳೆ ಏರಿಕೆಯಾಗಿದ್ದ ತರಕಾರಿ ಬೆಲೆ ಹಬ್ಬದ ನಂತರವೂ ಇಳಿಕೆಯಾಗದೆ ಗ್ರಾಹಕರ ಜೇಬಿಗೆ ಹೊರೆಯಾಗಿದೆ. ಮಂಗಳೂರಿಗೆ ಹಾಸನ, ಚಿಕ್ಕಮಗಳೂರು ಹಾಗೂ ಬೆಂಗಳೂರು ಭಾಗದಿಂದ ಹೆಚ್ಚಿನ ಪ್ರಮಾಣದಲ್ಲಿ ತರಕಾರಿ ಆವಕವಾಗುತ್ತದೆ. ಆ ಭಾಗಗಳಲ್ಲಿ ಭಾರಿ ಮಳೆ ಆಗಿರುವುದರಿಂದ ತರಕಾರಿ ಕೊಳೆತು ಹೋಗಿದೆ. ಆದ್ದರಿಂದ ಆವಕ ಕಡಿಮೆಯಾಗಿದ್ದಷ್ಟೇ ಅಲ್ಲ, ಬರುವ ತರಕಾರಿಯ ಗುಣಮಟ್ಟವೂ ಅಷ್ಟು ಚೆನ್ನಾಗಿಲ್ಲ. ದೀಪಾವಳಿ ವೇಳೆಗೆ ತರಕಾರಿ ದರ ಮತ್ತಷ್ಟು ಹೆಚ್ಚಬಹುದು ಎಂದು ತರಕಾರಿ ವ್ಯಾಪಾರಿ ಮಹಮ್ಮದ್ ಇರ್ಫಾನ್ ಹೇಳಿದರು.

ಸೊಪ್ಪು ಸುಸ್ತು: ಮಳೆಯಿಂದಾಗಿ ಸೊಪ್ಪು ತರಕಾರಿ ಬೆಳೆಗೆ ಭಾರಿ ಪ್ರಮಾಣದಲ್ಲಿ ಹಾನಿಯಾಗಿದೆ ಎಂಬುದಕ್ಕೆ ಸೊಪ್ಪಿನ ಮಾರುಕಟ್ಟೆ ಚಿತ್ರಣ ಸಾಕ್ಷಿಯಾಗಿದೆ. ಮಾರುಕಟ್ಟೆಯಲ್ಲಿ ಸೊಪ್ಪಿನ ವ್ಯಾಪಾರಿಗಳ ಸಂಖ್ಯೆಯೇ ಕಡಿಮೆ ಇದೆ. ಇದ್ದರೂ ಉತ್ತಮ ಗುಣಮಟ್ಟದ ಸೊಪ್ಪು ಸಿಗುತ್ತಿಲ್ಲ. ಸೊಪ್ಪು ಚೆನ್ನಾಗಿಲ್ಲ ಎಂದು ದೂರಿದರೆ, ‘ನಮಗೆ ಬಂದಿರುವುದೇ ಇದು. ಮಳೆಯಿಂದಾಗಿ ಬೆಳೆ ಹಾಳಾಗಿದೆ’ ಎಂದು ಕಾರಣ ಹೇಳುತ್ತಾರೆ ಎಂದು ಬಜಿಲಕೇರಿಯ ಮಾಲತಿ ತಿಳಿಸಿದರು.

ADVERTISEMENT

ಕೆಂಪು ಹರಿವೆ ಕಟ್ಟಿಗೆ ₹40, ಮೆಂತೆ ₹40, ಪಾಲಕ್‌ ಕೆ.ಜಿಗೆ ₹60, ಕರಿಬೇವು ಕೆ.ಜಿಗೆ ₹60, ಕೊತ್ತಂಬರಿ ಸೊಪ್ಪಿನ ದರ ಕೆ.ಜಿಗೆ ₹160ಕ್ಕೆ ಏರಿಕೆಯಾಗಿದೆ.

ಬೆಳ್ಳುಳ್ಳಿ ಗಗನಮುಖಿ: ತೀವ್ರವಾಗಿ ಏರಿಕೆ ಕಂಡು ನಂತರ ಇಳಿಕೆಯತ್ತ ಸಾಗಿದ್ದ ಬೆಳ್ಳುಳ್ಳಿ ಬೆಲೆ ಮತ್ತೆ ಗಗನಮುಖಿಯಾಗಿದೆ. ಸೆಂಟ್ರಲ್ ಮಾರುಕಟ್ಟೆಯಲ್ಲಿ ಕೆ.ಜಿ ಬೆಳ್ಳುಳ್ಳಿ ಬೆಲೆ ₹350–400ಕ್ಕೆ ಜಿಗಿದಿದೆ. ಚಿಲ್ಲರೆ ಮಾರುಕಟ್ಟೆಯಲ್ಲಿ ಇನ್ನೂ ಹೆಚ್ಚಿನ ಬೆಲೆಗೆ ಮಾರಾಟ ಮಾಡಲಾಗುತ್ತಿದೆ. ಸಾಮಾನ್ಯ ಜನರು ಕೊಳ್ಳಲಾಗದ ಸ್ಥಿತಿಗೆ ಬೆಳ್ಳುಳ್ಳಿ ಬೆಲೆ ತಲುಪಿದೆ.

ಈರುಳ್ಳಿಯೂ ದುಬಾರಿ: ಹಿಂದಿನ ವಾರ ₹45ರಿಂದ 50ರ ದರದಲ್ಲಿ ಲಭಿಸುತ್ತಿದ್ದ ಈರುಳ್ಳಿಯ ಬೆಲೆ ಈ ವಾರ ₹60–65ಕ್ಕೆ ಜಿಗಿದಿದೆ. ಪ್ರತಿ ವಾರವೂ ಹಾವು– ಏಣಿ ಆಟ ಮುಂದುವರಿದಿದ್ದು, ಗ್ರಾಹಕರ ತಲೆ ಬಿಸಿ ಹೆಚ್ಚಿಸಿದೆ.

ಟೊಮೆಟೊ ಸಹ ದುಬಾರಿಯಾಗುತ್ತಿದ್ದು ಹಿಂದಿನ ವಾರಕ್ಕೆ ಹೋಲಿಸಿದರೆ ಕೆ.ಜಿಗೆ ₹5ರಷ್ಟು ಹೆಚ್ಚಳವಾಗಿದೆ. ಬೀನ್ಸ್, ನುಗ್ಗೆಕಾಯಿಗೆ ಬೇಡಿಕೆ ಹೆಚ್ಚಾಗಿದ್ದು ಬೀನ್ಸ್ ದರ ಕೆ.ಜಿ. ₹160ಕ್ಕೆ ತಲುಪಿದೆ. ಸುವರ್ಣಗೆಡ್ಡೆ , ಬೆಂಡೆಕಾಯಿ, ತೊಂಡೆಕಾಯಿ, ಮೆಣಸಿನ ಕಾಯಿ ಮತ್ತಷ್ಟು ದುಬಾರಿಯಾಗಿದೆ. ಬಹುತೇಕ ಎಲ್ಲಾ ತರಕಾರಿ ಧಾರಣೆ ಈ ವಾರ ಹೆಚ್ಚಳವಾಗಿದೆ ಎನ್ನುತ್ತಾರೆ ತರಕಾರಿ ವ್ಯಾಪಾರಿಗಳು.

ಸಾಂಬಾರ್ ಸೌತೆ ₹40, ಸೀಮೆ ಬದನೆ ₹60, ಕ್ಯಾಪ್ಸಿಕಂ ₹120, ಹಸಿ ಮೆಣಸು ₹130, ಬೆಂಡೆಕಾಯಿ ₹60, ತೊಂಡೆಕಾಯಿ ₹70, ನುಗ್ಗೆಕಾಯಿ ₹160, ಸೋರೆಕಾಯಿ ₹60, ಬದನೆಕಾಯಿ ₹80, ಸುವರ್ಣಗೆಡ್ಡೆ ₹100, ಗೆಣಸು ₹80, ಪಡುವಲಕಾಯಿ ₹60, ಮೂಲಂಗಿ ₹60, ಆಲೂಗಡ್ಡೆ 45, ಮರಗೆಣಸು ₹60, ಸಿಹಿಕುಂಬಳ ₹40, ಕುಂಬಳಕಾಯಿ ₹50, ಮುಳ್ಳುಸೌತೆ ₹160, ಬೆಳ್ಳುಳ್ಳಿ ₹400, ಶುಂಠಿ ₹120‌, ನಿಂಬೆಹಣ್ಣಿನ ದರ ₹200ಕ್ಕೆ ಏರಿಕೆಯಾಗಿದೆ.

ಮಸಾಲೆ ಪದಾರ್ಥ: ಮಸಾಲೆ ಪದಾರ್ಥಗಳ ದರ ಅಲ್ಪ ಪ್ರಮಾಣದಲ್ಲಿ ಹೆಚ್ಚಳವಾಗಿದ್ದು, ಕೊತ್ತಂಬರಿ, ಮೆಣಸಿನಕಾಯಿ, ಮೆಂತ್ಯ, ಚಕ್ಕೆ ದರ ಏರಿಕೆಯಾಗಿದೆ. ಗುಣಮಟ್ಟದ ಹುಣಸೆ ಹಣ್ಣು ಕೆ.ಜಿ ₹200ಕ್ಕೆ ತಲುಪಿದ್ದು, ಒಣ ಮೆಣಸು, ಜೀರಿಗೆ ಅಲ್ಪ ಅಗ್ಗವಾಗಿದೆ.

ಹಣ್ಣುಗಳ ದರ ಹೆಚ್ಚಳ

ಕಳೆದ ಕೆಲವು ವಾರಗಳಿಂದ ಯಥಾಸ್ಥಿತಿ ಕಾಯ್ದುಕೊಂಡಿದ್ದ ಹಣ್ಣುಗಳ ಧಾರಣೆ ಏರಿಕೆಯತ್ತ ಮುಖ ಮಾಡಿದೆ. ಕಿತ್ತಳೆ ಪಪ್ಪಾಯ ಹೊರತುಪಡಿಸಿದರೆ ಉಳಿದ ಹಣ್ಣುಗಳು ದುಬಾರಿಯಾಗಿವೆ. ದಾಳಿಂಬೆ ಕೆ.ಜಿಗೆ ₹170 ದಾಟಿದ್ದು ದ್ರಾಕ್ಷಿ ದರ ₹200ಕ್ಕೆ ಏರಿಕೆಯಾಗಿದೆ. ಪಪ್ಪಾಯ ₹60 ಮೂಸಂಬಿ ₹80 ಕಿತ್ತಳೆ ₹70 ಕಪ್ಪು ದಾಕ್ಷಿ ₹80 ಕರಬೂಜ ₹80 ಸೇಬು ₹150 ಸೀಬೆ ₹120 ಮಾವು ₹250 ಸೀತಾಫಲ ₹100 ಚಿಕ್ಕು ₹70 ಪೈನಾಪಲ್‌ ₹60 ಡ್ರ್ಯಾಗನ್‌ ₹150 ಲಿಚಿ ₹280 ಕಿವಿ ₹130 ರಂಬುಟಾನ್‌ ₹300ಕ್ಕೆ ತಲುಪಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.