ಮಂಗಳೂರು: ಸಹಕಾರಿ ತೋರಣದಿಂದ ಕಂಗೊಳಿಸುತ್ತಿರುವ ಕಡಲತಡಿಯ ನಗರಿ ಮಂಗಳೂರು ಸಹಕಾರಿ ಉತ್ಸವಕ್ಕೆ ಸಜ್ಜಾಗಿದೆ. 71ನೇ ಅಖಿಲ ಭಾರತ ಸಹಕಾರಿ ಸಪ್ತಾಹದ ಅಂಗವಾಗಿ ಶನಿವಾರ ನಡೆಯಲಿರುವ ಕಾರ್ಯಕ್ರಮದಲ್ಲಿ 15 ಸಾವಿರಕ್ಕೂ ಅಧಿಕ ಮಂದಿ ಪಾಲ್ಗೊಳ್ಳುವ ನಿರೀಕ್ಷೆ ಇದೆ ಎಂದು ಸಂಘಟಕರು ತಿಳಿಸಿದ್ದಾರೆ.
ಉತ್ಸವ ನಡೆಯಲಿರುವ ಕರಾವಳಿ ಉತ್ಸವ ಮೈದಾನದಲ್ಲಿ ಆಕರ್ಷಕವಾಗಿ ಅಲಂಕೃತಗೊಂಡಿರುವ ವೇದಿಕೆ ಮತ್ತು ಇತರ ಸಿದ್ಧತೆಗಳನ್ನು ಕಾರ್ಯಕ್ರಮದ ನೇತೃತ್ವ ವಹಿಸಿರುವ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಅಧ್ಯಕ್ಷ ಎಂ.ಎನ್. ರಾಜೇಂದ್ರ ಕುಮಾರ್ ಶುಕ್ರವಾರ ವೀಕ್ಷಿಸಿದರು.
ಕಾರ್ಯಕ್ರಮದ ಅಂಗವಾಗಿ ವಸ್ತು ಪ್ರದರ್ಶನ ಮತ್ತು ಸಹಕಾರ ಜಾಥಾ ನಡೆಯಲಿದ್ದು ಜಾಥಾಗೆ 32 ಕಲಾ ತಂಡಗಳು ರಂಗು ತುಂಬಲಿವೆ. ಜಿಲ್ಲೆಯ ಉತ್ತಮ ಸಹಕಾರಿ ಸಂಘಗಳಿಗೆ ಈ ಸಾಲಿನಿಂದ ಸಹಕಾರ ಮಾಣಿಕ್ಯ ಪ್ರಶಸ್ತಿ ನೀಡಲು ನಿರ್ಧರಿಸಲಾಗಿದೆ. ಆಯ್ಕೆಯಾದ ಸಂಘಕ್ಕೆ 5 ಗ್ರಾಂ ಚಿನ್ನದ ಪದಕ, ₹ 10 ಸಾವಿರ ನಗದು ಹಾಗೂ ಪಾರಿತೋಷಕ ಸಿಗಲಿದೆ.
ಸಹಕಾರ ಜಾಥಾ ಬೆಳಿಗ್ಗೆ 9 ಗಂಟೆಗೆ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಆವರಣದಿಂದ ಆರಂಭವಾಗಲಿದ್ದು ಕರಾವಳಿ ಉತ್ಸವ ಮೈದಾನದಲ್ಲಿ ಮುಕ್ತಾಯಗೊಳ್ಳಲಿದೆ.
ಸಹಕಾರಿ ರಥ, ಚೆಂಡೆ, ಕೊಂಬು, ಸಹಕಾರಿ ಬಣ್ಣದ ಕೊಡೆ, ಮೊಳಹಳ್ಳಿ ಶಿವರಾವ್, ಬ್ಯಾಂಕಿಂಗ್ ವ್ಯವಹಾರ, ಹೈನುಗಾರಿಕೆ, ಮೀನುಗಾರಿಕೆ, ಕೃಷಿ ಉಪಕರಣಗಳ ಮಾರಾಟ, ನಂದಿನಿ ಆನ್ ವ್ಹೀಲ್, ರಾಣಿ ಅಬ್ಬಕ್ಕ, ರಬ್ಬರ್ ಟ್ಯಾಪಿಂಗ್, ನವೋದರ ಗುಂಪು, ಪತ್ತಿನ ಸಂಘಗಳ ಹಣಕಾಸಿನ ವ್ಯವಹಾರ, ಗ್ರಾಮೀಣ ಬ್ಯಾಂಕಿಂಗ್ ಚಟುವಟಿಕೆ, ಭುವನೇಶ್ವರಿ ದೇವಿ, ನೇತ್ರಾವತಿ ಮತ್ತು ಕುಮಾರಧಾರ ನದಿಯ ಸಂಗಮ, ಪ್ರಾಥಮಿಕ ಪತ್ತಿನ ಸಂಘ, ಅಕ್ಕಿ ಮಿಲ್, ರಸಗೊಬ್ಬರ ಮಾರಾಟ, ಕೃಷಿ ಚಟುವಟಿಕೆ, ತುಳುನಾಡ ವೈಭವ, ಕಂಬಳ, ಹಳ್ಳಿಮನೆ, ಎಸ್‌ಸಿಡಿಸಿಸಿ ಬ್ಯಾಂಕ್‌ನ ಮೊಬೈಲ್ ಬ್ಯಾಂಕ್ ವಾಹನದ ಸ್ತಬ್ಧಚಿತ್ರಗಳು, ಹೊನ್ನಾವರ ಬ್ಯಾಂಡ್, ಚೆಂಡೆ ಇತ್ಯಾದಿಗಳು ಇರಲಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.