ADVERTISEMENT

ಮಂಗಳೂರು | ಪಾಲಿಕೆಯಲ್ಲಿ ಕಿಡಿ ಹೊತ್ತಿಸಿದ ಬಡವರ ‘ಸೂರು’

​ಪ್ರಜಾವಾಣಿ ವಾರ್ತೆ
Published 29 ನವೆಂಬರ್ 2023, 14:57 IST
Last Updated 29 ನವೆಂಬರ್ 2023, 14:57 IST
ಬುಧವಾರ ನಡೆದ ಮಂಗಳೂರು ಮಹಾನಗರ ಪಾಲಿಕೆ ಸಭೆಯಲ್ಲಿ ವಿರೋಧ ಪಕ್ಷದ ಆರೋಪಕ್ಕೆ ಆಡಳಿತ ಪಕ್ಷದ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು – ಪ್ರಜವಾಣಿ ಚಿತ್ರ
ಬುಧವಾರ ನಡೆದ ಮಂಗಳೂರು ಮಹಾನಗರ ಪಾಲಿಕೆ ಸಭೆಯಲ್ಲಿ ವಿರೋಧ ಪಕ್ಷದ ಆರೋಪಕ್ಕೆ ಆಡಳಿತ ಪಕ್ಷದ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು – ಪ್ರಜವಾಣಿ ಚಿತ್ರ   

ಮಂಗಳೂರು: ಬಡವರಿಗೆ ಸೂರು ಕಲ್ಪಿಸುವ ವಸತಿ ಯೋಜನೆಯ ವಿಚಾರವು ಮಹಾನಗರ ಪಾಲಿಕೆಯ ಆಡಳಿತ ಮತ್ತು ವಿಪಕ್ಷಗಳ ನಡುವೆ ತೀವ್ರ ವಾಗ್ವಾದಕ್ಕೆ ಕಾರಣವಾಯಿತು.

ಬುಧವಾರ ನಡೆದ ಪಾಲಿಕೆಯ ಸಾಮಾನ್ಯ ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ವಿಪಕ್ಷ ನಾಯಕ ಪ್ರವೀಣ್‌ಚಂದ್ರ ಆಳ್ವ, ‘ಬಡಜನರು ವಸತಿ ಯೋಜನೆಯ ಮನೆಗಳ ವಿಚಾರಿಸಿ ಪಾಲಿಕೆ ಸದಸ್ಯರ ಬಳಿ ಬರುತ್ತಾರೆ. ಈವರೆಗೆ ಎಷ್ಟು ಜನರು ವಸತಿಮನೆಗೆ ಅರ್ಜಿ ಸಲ್ಲಿಸಿದ್ದಾರೆ ಎಂಬ ಮಾಹಿತಿ ಒದಗಿಸಬೇಕು. ಆರು ವರ್ಷಗಳ ಹಿಂದೆ ಪುರಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ 900 ಜನರಿಗೆ ಮನೆಯ ಹಕ್ಕುಪತ್ರ ನೀಡಲಾಗಿತ್ತು. ಆನಂತರ ಯಾರಿಗೂ ಮನೆ ನೀಡಿಲ್ಲ. ನಿಮ್ಮ ಶಾಸಕರು ಏನು ಮಾಡುತ್ತಿದ್ದಾರೆ’ ಎಂದಾಗ, ಕೆರಳಿದ ಆಡಳಿತ ಪಕ್ಷದ ಸದಸ್ಯರಾದ ಜಗದೀಶ್ ಶೆಟ್ಟಿ, ಶಕೀಲಾ ಕಾವ, ಕಿಶೋರ್ ಕೊಟ್ಟಾರಿ ಅವರು, ‘ಶಾಸಕರ ಹೆಸರನ್ನು ತಂದಿದ್ದು ಯಾಕೆ’ ಎಂದು ಪ್ರಶ್ನಿಸಿದರು.

‘ಬಡವರ ಬಗ್ಗೆ ನಮಗೂ ಕಾಳಜಿ ಇದೆ. ಈ ಬಗ್ಗೆ ಸಭೆ ನಡೆಸಿ ಚರ್ಚಿಸೋಣ. ರಾಜಕೀಯ ಮಾಡುವ ಉದ್ದೇಶದಿಂದ ಶಾಸಕರ ಹೆಸರು ಪ್ರಸ್ತಾಪಿಸಲಾಗಿದೆ. ಈ ವಿಷಯ ಮೇಯರ್ ವ್ಯಾಪ್ತಿಗೆ ಬರಲ್ಲ. ಆಗ ಅಧಿಕಾರದಲ್ಲಿದ್ದ ನಿಮ್ಮ ಶಾಸಕರು ಚುನಾವಣೆಯ ಸಂದರ್ಭದಲ್ಲಿ ಅನುಮೋದನೆ ಸಿಗುವ ಮೊದಲೇ ಶಕ್ತಿನಗರದ ನಿವೇಶನದ ಹಕ್ಕುಪತ್ರ ವಿತರಿಸಿದ್ದರು’ ಎಂದು ಮುಖ್ಯ ಸಚೇತಕ ಪ್ರೇಮಾನಂದ ಶೆಟ್ಟಿ ಆರೋಪಿಸಿದರು.

ADVERTISEMENT

‘ನಾವು ರಾಜಕೀಯ ಮಾಡುತ್ತಿಲ್ಲ. ಬಡಜನರಿಗೆ ಮನೆ ನೀಡುವುದು ನಮ್ಮ ಆದ್ಯತೆಯಾಗಬೇಕು. ಆರು ವರ್ಷಗಳಲ್ಲಿ ನಿಮ್ಮ ಶಾಸಕರು ಎಷ್ಟು ಬಡವರಿಗೆ ಮನೆ ನೀಡಿದ್ದಾರೆ’ ಎಂದು ಪ್ರವೀಣ್‌ಚಂದ್ರ ಆಳ್ವ ಮರುಪ್ರಶ್ನಿಸಿದರು. ಇದಕ್ಕೆ ಸದಸ್ಯ ವಿನಯ್‌ರಾಜ್ ದನಿಗೂಡಿಸಿದರು.

ಪಾಲಿಕೆ ಆಯುಕ್ತ ಆನಂದ್ ಮಾಹಿತಿ ನೀಡಿ, ‘ಸುರತ್ಕಲ್ ಇಡ್ಯಾದ ಸರ್ವೆ ಸಂಖ್ಯೆ 16ಪಿ 1ರಲ್ಲಿ ಜಿ+3 ಮಾದರಿಯ 600 ಮನೆಗಳ ವಸತಿ ಸಂಕೀರ್ಣ ನಿರ್ಮಾಣವಾಗುತ್ತಿದೆ. ಇವುಗಳಲ್ಲಿ 330 ಸಾಮಾನ್ಯ, 58 ಎಸ್ಸಿ, 13 ಎಸ್‌ಟಿ 13 ಹಾಗೂ 199 ಅಲ್ಪಸಂಖ್ಯಾತರು ಸೇರಿದಂತೆ 600 ಫಲಾನುಭವಿಗಳನ್ನು ಗುರುತಿಸಲಾಗಿದೆ. ಇವುಗಳಲ್ಲಿ 392 ಫಲಾನುಭವಿಗಳು ಆರಂಭಿಕ ಮೊತ್ತ ಪಾವತಿಸಿದ್ದು, ಅವರಿಗೆ ಬ್ಯಾಂಕ್‌ನಿಂದ ಸಾಲ ಮಂಜೂರು ಆಗಬೇಕಾಗಿದೆ. ಇಡ್ಯಾದ ಇನ್ನೊಂದು ಸರ್ವೆ ಸಂಖ್ಯೆಯಲ್ಲಿ 192 ಮನೆಗಳ ಸಮುಚ್ಚಯದಲ್ಲಿ 186 ಸಾಮಾನ್ಯ, ಐದು ಎಸ್ಸಿ, ಒಂದು ಎಸ್ಟಿ ಫಲಾನುಭವಿಗಳನ್ನು ಗುರುತಿಸಲಾಗಿದೆ. ಪದವು ಶಕ್ತಿನಗರದ ಸರ್ವೆ ಸಂಖ್ಯೆ 82ರಲ್ಲಿ 930 ಮನೆಗಳ ಸಂಕೀರ್ಣಕ್ಕಾಗಿ 859 ಸಾಮಾನ್ಯ, 62 ಎಸ್ಸಿ, 9 ಎಸ್ಟಿ ಫಲಾನುಭವಿಗಳನ್ನು ಗುರುತಿಸಲಾಗಿದೆ’ ಎಂದರು.

ಮಂಗಳೂರು ಸಮಗ್ರ ಮಹಾಯೋಜನೆ (ಸಿಡಿಪಿ) 2019ರಲ್ಲೇ ಸಿದ್ಧವಾಗಿ, ಅನುಮೋದನೆ ಪಡೆಯಬೇಕಿತ್ತು. ಪ್ರಸ್ತುತ ತಯಾರಾಗಿರುವ ಯೋಜನೆಯಲ್ಲಿ ಹಲವಾರು ಲೋಪದೋಷ ಇವೆ. ಪ್ರತ್ಯೇಕ ಸಮಿತಿ ರಚಿಸಿ, ಇದನ್ನು ಸರಿಪಡಿಸಬೇಕು ಎಂದು ಸದಸ್ಯ ಅಬ್ದುಲ್ ಲತೀಫ್ ಸಲಹೆ ನೀಡಿದರು.

‘ಸಿಡಿಪಿಯನ್ನು ಪ್ರತಿ 10 ವರ್ಷಗಳಿಗೊಮ್ಮೆ ಸಿದ್ಧಪಡಿಲಾಗುತ್ತದೆ. ಸರಿಯಾದ ಯೋಜನೆ ರೂಪಿಸಿ, ರಾಜ್ಯ ಸರ್ಕಾರಕ್ಕೆ ಕಳುಹಿಸಬೇಕು’ ಎಂದು ಸಲಹೆ ನೀಡಿದ ಸದಸ್ಯ ಶಶಿಧರ್ ಹೆಗ್ಡೆ, ಮೂಡ ಪ್ರತಿನಿಧಿಗಳು ಸಭೆಯಲ್ಲಿ ಗೈರಾಗಿರುವ ಬಗ್ಗೆ ಗಮನ ಸೆಳೆದಾಗ, ಉಳಿದ ಸದಸ್ಯರೂ ಇದಕ್ಕೆ ಅಸಮಾಧಾನ ವ್ಯಕ್ತಪಡಿಸಿದರು.

ವಾರ್ಡ್‌ ಸದಸ್ಯರ ಸಲಹೆ ನಡೆದು ಯೋಜನೆ ರೂಪಿಸಿ, ಅಂತಿಮಗೊಂಡ ಯೋಜನೆಯನ್ನು ಪಾಲಿಕೆಯಲ್ಲಿ ಮಂಡಿಸಿ ಅನುಮೋದನೆ ಪಡೆದ ನಂತರವೇ ಸರ್ಕಾರಕ್ಕೆ ಕಳುಹಿಸಲಾಗುವುದು ಎಂದು ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು ಭರವಸೆ ನೀಡಿದರು.

ಹಲವಾರು ವಾರ್ಡ್‌ಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಇದ್ದು, ಪರಿಹರಿಸಬೇಕು ಎಂದು ಸದಸ್ಯರಾದ ಜಗದೀಶ್ ಶೆಟ್ಟಿ, ಪೂರ್ಣಿಮಾ ಒತ್ತಾಯಿಸಿದರು. ದಂಬೇಲ್ ಭಾಗದಲ್ಲಿ ಕುಡಿಯುವ ನೀರಿನ ಸಮಸ್ಯೆ ಇದ್ದು, ಬೋರ್‌ವೆಲ್‌ಗೆ ಪ್ರಸ್ತಾವ ಸಲ್ಲಿಸಿ ಐದು ತಿಂಗಳು ಕಳೆದರೂ ಅಧಿಕಾರಿಗಳು ಟೆಂಡರ್‌ ಹಂತದಲ್ಲಿ ಎಂದು ಸಬೂಬು ಹೇಳುತ್ತಾರೆ ಎಂದು ಸದಸ್ಯ ಕಿರಣ್ ಕೋಡಿಕಲ್ ಆರೋಪಿಸಿದರು.

ನಗರದ ಟ್ರಾಫಿಕ್ ಸಮಸ್ಯೆ ನಿವಾರಣೆಗೆ ಪೊಲೀಸ್ ಇಲಾಖೆ ಜೊತೆ ಸಭೆ ನಡೆಸಿ, ಕ್ರಮವಹಿಸಬೇಕು ಎಂದು ಸದಸ್ಯ ನವೀನ್ ಡಿಸೋಜ ಒತ್ತಾಯಿಸಿದರು.

‘ಪ್ರಾಂಜಲ್‌’ ಹೆಸರಿಗೆ ಅನುಮೋದನೆ

ಉಗ್ರರ ಜೊತೆಗೆ ಕಾದಾಟದಲ್ಲಿ ಹುತಾತ್ಮರಾದ ಕ್ಯಾಪ್ಟನ್ ಪ್ರಾಂಜಲ್ ಅವರ ಹೆಸರನ್ನು ಕೊಟ್ಟಾರ ಚೌಕಿ ಜಂಕ್ಷನ್‌ಗೆ ಇಡಲು ಹಾಗೂ ಚೊಕ್ಕಬೆಟ್ಟು ಜಂಕ್ಷನ್ ಗಣೇಶಪುರ ಕೈಕಂಬ– ಕಾಟಿಪಳ್ಳ ಜಂಕ್ಷನ್ ಕೃಷ್ಣಾಪುರ– ಚೊಕ್ಕಬೆಟ್ಟು ವರ್ತುಲ ರಸ್ತೆಗೆ ‘ಕ್ಯಾಪ್ಟನ್ ಪ್ರಾಂಜಲ್ ರಸ್ತೆ ಎಂದು ನಾಮಕರಣ ಮಾಡುವಂತೆ ಶಾಸಕ ಡಾ. ಭರತ್ ಶೆಟ್ಟಿ ನೀಡಿದ್ದ ಪ್ರಸ್ತಾವಕ್ಕೆ ಸರ್ವ ಸದಸ್ಯರು ಸಮ್ಮತಿಸಿ ಸರ್ಕಾರಕ್ಕೆ ಪ್ರಸ್ತಾವ ಕಳುಹಿಸಲು ನಿರ್ಧಾರ ಕೈಗೊಂಡರು. ಎ.ಬಿ. ಶೆಟ್ಟಿ ವೃತ್ತದಿಂದ ಮಾರ್ನಮಿ ಕಟ್ಟೆ ಸೇತುವೆವರೆಗಿನ 2.5 ಕಿ.ಮೀ ಉದ್ದದ ರಸ್ತೆಗೆ ಮಂಗಳಾದೇವಿ ರಸ್ತೆ ಎಂದು ನಾಮಕರಣ ಮಾಡಲು ಸರ್ಕಾರದ ಆದೇಶ ಬಂದಿದೆ. ಆದಷ್ಟು ಶೀಘ್ರ ನಾಮಫಲಕ ಅಳವಡಿಸುವ ಕೆಲಸ ಆಗಬೇಕು ಎಂದು ಪ್ರೇಮಾನಂದ ಶೆಟ್ಟಿ ಹೇಳಿದರು.

ಬುಧವಾರ ನಡೆದ ಮಂಗಳೂರು ಮಹಾನಗರ ಪಾಲಿಕೆ ಸಭೆಯಲ್ಲಿ ವಿರೋಧ ಪಕ್ಷದ ಆರೋಪಕ್ಕೆ ಆಡಳಿತ ಪಕ್ಷದ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು – ಪ್ರಜವಾಣಿ ಚಿತ್ರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.