ADVERTISEMENT

ಮಂಗಳೂರು | ಕೋಮುದ್ವೇಷದಿಂದ ಕೊಲೆ: ನಾಲ್ವರಿಗೆ ಜೀವಾವಧಿ ಶಿಕ್ಷೆ

​ಪ್ರಜಾವಾಣಿ ವಾರ್ತೆ
Published 30 ಏಪ್ರಿಲ್ 2024, 12:46 IST
Last Updated 30 ಏಪ್ರಿಲ್ 2024, 12:46 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ಮಂಗಳೂರು: ಕೋಮುದ್ವೇಷದಿಂದ ಕೊಲೆ ಮಾಡಿದ ನಾಲ್ವರು ಅಪರಾಧಿಗಳಿಗೆ ಇಲ್ಲಿನ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ.

ಬಂಟ್ವಾಳ ತಾಲ್ಲೂಕು ಮಂಚಿ ಗ್ರಾಮದ ಮಂಚಿ ಬಾವ ಮನೆಯ ವಿಜೇತ್‌ ಕುಮಾರ್‌, ಮಂಗಳೂರು ತಾಲ್ಲೂಕು ಬಡಗ ಉಳಿಪ್ಪಾಡಿ ಗ್ರಾಮದ ಮಳಲಿ ಮಟ್ಟಿ ಮನೆಯ ಕಿರಣ್‌ ಪೂಜಾರಿ, ಮಂಗಳೂರು ತಾಲ್ಲೂಕು ತಿರುವೈಲು ಗ್ರಾಮದ ಅನೀಶ್‌ (ಧನು), ಬಂಟ್ವಾಳ ತಾಲ್ಲೂಕು ಮಂಚಿಗುತ್ತು ಮನೆಯ ಅಭಿ (ಅಭಿಜಿತ್‌) ಶಿಕ್ಷೆಗೊಳಗಾದವರು.

ADVERTISEMENT

2015ರ ಆಗಸ್ಟ್‌ 6ರಂದು ರಾತ್ರಿ ಆಟೊದಲ್ಲಿ ಹೋಗುತ್ತಿದ್ದ ಮೊಹಮ್ಮದ್‌ ಮುಸ್ತಾಫ್ ಮತ್ತು ನಾಸೀರ್‌ ಅಲಿಯಾಸ್‌ ಮೊಹ್ಮದ್‌ ನಾಸೀರ್‌ ಅವರ ಮೇಲೆ ಇವರು ತಲವಾರಿನಿಂದ ಹಲ್ಲೆ ಮಾಡಿದ್ದರು. ತೀವ್ರ ಗಾಯಗೊಂಡಿದ್ದ ನಾಸೀರ್‌ ಮಂಗಳೂರಿನ ಆಸ್ಪತ್ರೆಯಲ್ಲಿ ಮರುದಿನ ಮೃತಪಟ್ಟಿದ್ದರು.

ಮೊಹಮ್ಮದ್‌ ಮುಸ್ತಾಫ ಅವರು ತಮ್ಮ ಮಾವನ ಹೆಂಡತಿಯನ್ನು ಆಟೊ ರಿಕ್ಷಾದಲ್ಲಿ ಕರೆದುಕೊಂಡು ಹೆರಿಗೆಗಾಗಿ ಬಂಟ್ವಾಳ ಆಸ್ಪತ್ರೆಗೆ ಬಿಟ್ಟು ರಾತ್ರಿ ಬರುತ್ತಿದ್ದರು. ತಮ್ಮ ಪತ್ನಿಯ ಮನೆಗೆ ಹೋಗುವ ಸಲುವಾಗಿ ನಾಸೀರ್‌ ಅವರು ಮೆಲ್ಕಾರ್‌ ಬಳಿ ಈ ಆಟೊ ಹತ್ತಿದ್ದರು. ಮೆಲ್ಕಾರ್‌ ನಿಂದ ಮುಡಿಪು ಕಡೆಗೆ ಆಟೊ ರಿಕ್ಷಾ ಹೋಗುತ್ತಿರುವುದನ್ನು ಕಂಡ ಆರೋಪಿಗಳು, ಬೈಕ್‌ನಲ್ಲಿ ಬೆನ್ನಟ್ಟಿ ಅದರಲ್ಲಿ ಇರುವವರು ಮುಸ್ಲಿಂರು ಎನ್ನುವುದನ್ನು ಖಚಿತಪಡಿಸಿಕೊಂಡು ಅವರ ಮೇಲೆ ತಲವಾರಿನಿಂದ ದಾಳಿ ಮಾಡಿದ್ದರು.

ಇದಕ್ಕೂ ಮುನ್ನಾ ದಿನ 2015ರ ಆಗಸ್ಟ್‌ 5ರಂದು ರಾತ್ರಿ ವಿಟ್ಲ ಪೊಲೀಸ್‌ ಠಾಣೆ ವ್ಯಾಪ್ತಿಯ ಆಲಬೆ ಎಂಬಲ್ಲಿ ವಿಜೇತ್‌ ಕುಮಾರ್‌ ಮತ್ತು ಅಭಿ ಮೇಲೆ ಮುಸ್ಲಿಂ ಸಮುದಾಯದ 4–5 ಯುವಕರು ಹಲ್ಲೆ ಮಾಡಿದ್ದರು. ಇದರಿಂದಾಗಿ ರೊಚ್ಚಿಗೆದ್ದಿದ್ದ ಈ ಇಬ್ಬರು, ತಮ್ಮ ಇನ್ನಿಬ್ಬರು ಮಿತ್ರರನ್ನು ಕರೆಯಿಸಿಕೊಂಡು, ಪಾಣೆ ಮಂಗಳೂರು ಬಳಿ ಮುಸ್ಲಿಂ ಯುವಕನೊಬ್ಬನನ್ನು ಕೊಲೆ ಮಾಡುವ ಉದ್ದೇಶ ಹೊಂದಿದ್ದರು. ಅದರಂತೆ ದಾರಿಯಲ್ಲಿ ಸಿಕ್ಕ ಇವರನ್ನು ಕೊಲೆ ಮಾಡಿದರು ಎಂದು ಪ್ರಕರಣದ ವಿಚಾರಣೆ ನಡೆಸಿದ್ದ ಇನ್‌ಸ್ಪೆಕ್ಟರ್‌ ಕೆ.ಯು. ಬೆಳ್ಳಿಯಪ್ಪ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.

ಪ್ರಕರಣದ ವಿಚಾರಣೆ ನಡೆಸಿದ 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಲಯದ ನ್ಯಾಯಾಧೀಶ ಮಲ್ಲಿಕಾರ್ಜುನ ಸ್ವಾಮಿ ಎಚ್‌.ಎಸ್‌. ಅವರು ಅಪರಾಧಿಗಳಿಗೆ ಶಿಕ್ಷೆ ವಿಧಿಸಿ ಮಂಗಳವಾರ ತೀರ್ಪು ನೀಡಿದ್ದಾರೆ.

ಸರ್ಕಾರದ ಪರವಾಗಿ ಶೇಖರ ಶೆಟ್ಟಿ ಸಾಕ್ಷಿ ವಿಚಾರಣೆ ಮಾಡಿದ್ದು, ಜುಡಿತ್‌ ಓಲ್ಗಾ ಮಾರ್ಗರೇಟ್‌ ಕ್ರಾಸ್ತಾ ವಾದ ಮಂಡಿಸಿದ್ದರು.

ನಾಲ್ವರೂ ಆರೋಪಿಗಳಿಗೆ ತಲಾ ₹30 ಸಾವಿರ ದಂಡ ವಿಧಿಸಲಾಗಿದೆ. ದಂಡದ ಮೊತ್ತದಲ್ಲಿ ₹1.20 ಲಕ್ಷವನ್ನು ಮೃತ ನಾಸೀರ್‌ ಅವರ ಪತ್ನಿ ರಹಮತ್‌ ಅವರಿಗೆ ನೀಡಬೇಕು ಹಾಗೂ ಕಾನೂನು ಸೇವಾ ಪ್ರಾಧಿಕಾರದ ವತಿಯಿಂದ ಸಂತ್ರಸ್ತರ ಪರಿಹಾರ ಯೋಜನೆ ಅಡಿಯಲ್ಲಿಯೂ ರಹಮತ್‌ ಅವರಿಗೆ ಪರಿಹಾರ ನೀಡಬೇಕು ಎಂದು ತೀರ್ಪಿನಲ್ಲಿ ನಿರ್ದೇಶನ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.