ADVERTISEMENT

ಭಕ್ತರ ಮನತಣಿಸಿದ ಮಂಗಳೂರು ದಸರಾ

ಇರುಳ ಬೆಳಿಕಿನಲ್ಲಿ ವೈಭವದ ಶೋಭಾಯಾತ್ರೆ– ಕಂಗೊಳಿಸಿದ ಹೊಳಪು ಕಂಗಳ ಶಾರದೆ, ನವದುರ್ಗೆಯರು

​ಪ್ರಜಾವಾಣಿ ವಾರ್ತೆ
Published 14 ಅಕ್ಟೋಬರ್ 2024, 4:26 IST
Last Updated 14 ಅಕ್ಟೋಬರ್ 2024, 4:26 IST
ಮಂಗಳೂರು ದಸರಾ ಅಂಗವಾಗಿ ಕುದ್ರೋಳಿ ಶ್ರೀಗೋಕರ್ಣನಾಥೇಶ್ವರ ದೇವಸ್ಥಾನದಲ್ಲಿ ಪೂಜೆಗೊಂಡ ಶ್ರೀಶಾರದೆಯ ಶೋಭಾಯಾತ್ರೆ ಭಾನುವಾರ ನೆರವೇರಿತು: ಪ್ರಜಾವಾಣಿ ಚಿತ್ರ : ಫಕ್ರುದ್ದೀನ್ ಎಚ್
ಮಂಗಳೂರು ದಸರಾ ಅಂಗವಾಗಿ ಕುದ್ರೋಳಿ ಶ್ರೀಗೋಕರ್ಣನಾಥೇಶ್ವರ ದೇವಸ್ಥಾನದಲ್ಲಿ ಪೂಜೆಗೊಂಡ ಶ್ರೀಶಾರದೆಯ ಶೋಭಾಯಾತ್ರೆ ಭಾನುವಾರ ನೆರವೇರಿತು: ಪ್ರಜಾವಾಣಿ ಚಿತ್ರ : ಫಕ್ರುದ್ದೀನ್ ಎಚ್   

ಮಂಗಳೂರು: ಝಗಮಗಿಸುವ ವಿದ್ಯುದ್ದೀಪಗಳಿಂದ ಸಿಂಗಾರಗೊಂಡ ಮಂಟಪದಲ್ಲಿ ವಿರಾಜಮಾನವಾಗಿದ್ದ ಶ್ರೀಶಾರದೆ, ನವದುರ್ಗೆಯರ ಮನಮೊಹಕ ಮೂರ್ತಿಗಳು ನಗರದ ಪ್ರಮುಖ ಬೀದಿಗಳಲ್ಲಿ ಭಾನುವಾರದ ಇರುಳು ಹೊತ್ತಿನಲ್ಲಿ ಸಾಲಾಗಿ ಸಾಗಿಬರುತ್ತಿದ್ದ ದೃಶ್ಯಗಳನ್ನು ಕಣ್ತುಂಬಿಕೊಂಡ ಭಕ್ತರು ಮೂಕವಿಸ್ಮಿತರಾದರು.

ಕುದ್ರೋಳಿ ಕ್ಷೇತ್ರದಲ್ಲಿ ಹತ್ತು ದಿನಗಳ ಕಾಲ ಪೂಜೆಗೊಂಡ ಗಣಪತಿ, ನವದುರ್ಗೆಯರ ಮೂರ್ತಿಗಳನ್ನು ಶೋಭಾಯಾತ್ರೆ ಸಲುವಾಗಿ ಸಭಾಂಗಣದಿಂದ ಹೊರಗೆ ತರುವಾಗಲೇ ದೇವಸ್ಥಾನದ ಪ್ರಾಂಗಣವು ಜನರಿಂದ ತುಂಬಿ ಹೋಗಿತ್ತು. ಮುಸ್ಸಂಜೆ ಹೊತ್ತಿನಲ್ಲಿ ಶಾರದೆಯ ಮೂರ್ತಿ ಸಭಾಂಗಣದಿಂದ ಹೊರಗೆ ಬರುವ ದೃಶ್ಯವನ್ನು ಕಂಡು ಭಕ್ತರು ಪುನೀತರಾದರು.  

ಮುಡಿ ತುಂಬಾ ಮಲ್ಲಿಗೆ ಮುಡಿದು, ಕರದಲ್ಲಿ ಬೆಳ್ಳಿಯ ವೀಣೆಯ ಪಿಡಿದು, ನೇರಳೆ ಬಣ್ಣದ ಸೀರೆಯ ಧರಿಸಿ, ಬಗೆ ಬಗೆಯ ಬಂಗಾರದ ಒಡವೆಗಳಿಂದ ಸಿಂಗಾರಗೊಂಡಿದ್ದ ಹೊಳಪು ಕಂಗಳ ಶಾರದೆಯನ್ನು ಮತ್ತೆ ಮತ್ತೆ ನೋಡಲು ಭಕ್ತರು ಹಾತೊರೆಯುತ್ತಿದ್ದುದು ಕಂಡು ಬಂತು. ಗಣಪತಿ, ಆದಿಶಕ್ತಿ, ಬ್ರಹ್ಮಚಾರಿಣಿ, ಚಂದ್ರಘಂಟಾ, ಕೂಷ್ಮಾಂಡಿನಿ, ಸ್ಕಂದಮಾತಾ, ಕಾತ್ಯಾಯಿನಿ, ಮಹಾಗೌರಿ, ಮಹಾಕಾಳಿ, ಸಿದ್ಧಿಧಾತ್ರಿ,  ಶೈಲಪುತ್ರಿ ಮೂರ್ತಿಗಳು ಒಂದರ ಹಿಂದೆ ಒಂದಾಗಿ ಸಾಗಿ ಬರುವ ದೃಶ್ಯಗಳನ್ನು ಭಕ್ತರು ಮನ ತುಂಬಿಕೊಂಡರು. ಅಷ್ಟಕ್ಕೇ ತೃಪ್ತರಾಗದೇ ತಮ್ಮ ಮೊಬೈಲ್‌ಗಳಲ್ಲಿ ಈ ವೈಭವದ ದೃಶ್ಯವನ್ನು ಸೆರೆ ಹಿಡಿದರು. ಅವುಗಳ ನಡುವೆ ನಾರಾಯಣ ಗುರುಗಳ ಭಾವಚಿತ್ರವಿದ್ದ ಸ್ತಬ್ಧಚಿತ್ರವೂ ಸಾಗಿಬಂತು. 

ADVERTISEMENT

ಕಲಾ ತಂಡಗಳು: ಬಣ್ಣದ ಕೊಡೆಗಳು, ನಗಾರಿ, ಗೊಂಡ ಡಕ್ಕೆ, ಕೊಂಬು–ಕಹಳೆ, ಡೊಳ್ಳು ಕುಣಿತ, ಕಂಗೀಲು, ತಮಟೆ, ವೀರಗಾಸೆ, ಹಗಲು ವೇಷ, ಕುರುಬರ ಡೊಳ್ಳು ಮೊದಲಾದ ಕಲಾ ತಂಡಗಳು ದಸರಾ ಶೋಭಾಯಾತ್ರೆಯ ವಿಶೇಷ ಮೆರುಗು ತುಂಬಿದವು.  

ಮಂಗಳೂರು ದಸರಾದ ಸೊಬಗನ್ನು ವೈವಿಧ್ಯಮಯ ಟ್ಯಾಬ್ಲೊಗಳು ಮತ್ತಷ್ಟು ಹೆಚ್ಚಿಸಿದವು. ಪೌರಾಣಿಕ ಕಥಾನಕಗಳನ್ನು ಸಾರುವ ಸ್ತಬ್ಧ ಚಿತ್ರಗಳ ವೈಭವಕ್ಕೆ ಜನ ಮಾರು ಹೋದರು. ಶಿವಫ್ರೆಂಡ್ಸ್‌, ಗ್ರೀನ್‌ ಪಾರ್ಕ್‌ ಜ್ಯೂನಿಯರ್‌ ಬಾಯ್ಸ್‌, ಬಲ್ಲಾಳ್‌ಬಾಗ್‌ ಫ್ರೆಂಡ್ಸ್‌, ಸತ್ಯ ಸಾರಾಮಾನಿ, ಯುವ ಸಂಗಮ್‌ ಕುದ್ರೋಳಿ, ಬಿರುವೆರ್‌ ಕುಡ್ಲ, ಕುಡ್ಲ ಬ್ರದರ್ಸ್‌ ಪಾಂಡೇಶ್ವರ, ಪಾದುವಾ ಫ್ರೆಂಡ್ಸ್‌ ಸೇರಿದಂತೆ ವಿವಿಧ ತಂಡಗಳು, ಸಂಘ ಸಂಸ್ಥೆಗಳ ಸ್ತಬ್ಧಚಿತ್ರಗಳು ಗಮನ ಸೆಳೆದವು.

ಹುಲಿವೇಷ ಮಂಗಳೂರು ದಸರಾದ ವಿಶೇಷ ಆಕರ್ಷಣೆ. ವಾಹನ ಮೇಲೆಯೇ ನಾನಾ ಕಸರತ್ತು ಪ್ರದರ್ಶಿಸಿದ ಹುಲಿವೇಷಗಳ ಅಬ್ಬರ ದಸರಾ ಮೆರವಣಿಗೆಯು ನೆನಪಿನಂಗಳದಲ್ಲಿ ಅಚ್ಚಳಿಯದೆ ಉಳಿಯುವಂತೆ ಮಾಡಿತು. ಶಾರದಾದೇವಿಯ ಮೂರ್ತಿ ಸಾಗಿದ ಬಳಿಕ  ಮೊದಲ ಮರ್ಯಾದೆಯ ಮಂಜನಬೈಲ್‌ ತಂಡ, ಎರಡನೇ ಮರ್ಯಾದೆಯ ಕಾಳಿಚರಣ್‌, ಮೂರ್ನೇ ಮರ್ಯಾದೆಯ ಬರ್ಕೆ ಫ್ರೆಂಡ್ಸ್‌ ತಂಡಗಳ ಹುಲಿವೇಷಧಾರಿಗಳಿದ್ದ ವಾಹನಗಳು ಸಾಗಿಬಂದವು. ಹುಲಿ ವೇಷ ಧಾರಿಗಳ ರೋಮಾಂಚನಕಾರಿ ಪ್ರದರ್ಶನಕ್ಕೆ ಪ್ರೇಕ್ಷಕರು ಮಾರು ಹೋದರು. ತಾಸೆಯ ಪಟ್ಟಿನ ಲಯಕ್ಕೆ ಪ್ರೇಕ್ಷಕರೂ ಹೆಜ್ಜೆ ಹಾಕಿದರು.

ಶೋಭಾಯಾತ್ರೆ ಸಾಗಿದ ಬೀದಿಯನ್ನು ಅಲಂಕರಿಸಿದ್ದ ಇದ್ಯುದ್ದೀಪಗಳು ನಗರದಲ್ಲಿ ಬೆಳಕಿನ ಲೋಕವನ್ನೇ ಸೃಷ್ಟಿಸಿದ್ದವು. ವಿದ್ಯುದ್ದೀಪಗಳ ಸಾಲುಗಳ ನಡುವೆ ಸಾಗಿಬಂದ ಮಂಗಳೂರು ದಸರಾ ಮೆರವಣಿಗೆಯನ್ನು ವೀಕ್ಷಿಸಲು ಊರ, ಪರವೂರ ಭಕ್ತರ ದಂಡು ರಸ್ತೆಯ ಇಕ್ಕೆಲಗಳಲ್ಲಿ ನೆರೆದಿತ್ತು. ಶಾಸಕ ವೇದವ್ಯಾಸ ಕಾಮತ್‌, ಮಾಜಿ ಸಂಸದ ನಳಿನ್‌ ಕುಮಾರ್‌ ಕಟೀಲ್‌, ಕುದ್ರೋಳಿ ಕ್ಷೇತ್ರದ ಆಡಳಿತ ಸಮಿತಿ ಅಧ್ಯಕ್ಷ ಎಚ್‌.ಎಸ್‌. ಸಾಯಿರಾಮ್‌, ಉಪಾಧ್ಯಕ್ಷೆ ಉರ್ಮಿಳಾ ರಮೇಶ್‌, ಖಜಾಂಚಿ ಆರ್‌.ಪದ್ಮರಾಜ್‌ ದೇವಸ್ಥಾನದ ಕಾರ್ಯದರ್ಶಿ ಮಾಧವ ಸುವರ್ಣ, ಟ್ರಸ್ಟಿಗಳು, ದೇವಸ್ಥಾನದ ಅಭಿವೃದ್ಧಿ ಸಮಿತಿ ಸದಸ್ಯರು ಭಾಗವಹಿಸಿದ್ದರು.

ಶಾರದೆ ಹಾಗೂ ನವದುರ್ಗೆಯರ ಶೋಭಾಯಾತ್ರೆಯಲ್ಲಿ ಪಾಲ್ಗೊಂಡ ಜನಾರ್ದನ ಪೂಜಾರಿ, ‘ಶಾರದಾ ದೇವಿಗೆ ಈ ಬಾರಿ ಪುತ್ರ ಸಂತೋಷ್‍ ಸಹಾಯದಿಂದ ಬೆಳ್ಳಿಯ ವೀಣೆ ಮಾಡಿಸಿದ್ದೇನೆ. ದೇವರು ಮನಸ್ಸು ಮಾಡಿದರೆ ಮುಂದಿನ ಬಾರಿ ಬಂಗಾರದ ವೀಣೆ ಮಾಡಿಸುವ ಸಂಕಲ್ಪ ಮಾಡಿದ್ದೇನೆ’ ಎಂದು ಹೇಳಿದರು.

ಮಂಗಳೂರಿನ ಮಂಗಳಾದೇವಿ ದೇವಸ್ಥಾನದ ರಥೋತ್ಸವವು ಭಾನುವಾರ ವಿಜೃಂಭಣೆಯಿಂದ ನೆರವೇರಿತು: ಪ್ರಜಾವಾಣಿ ಚಿತ್ರ

ಮಂಗಳಾದೇವಿ ರಥೋತ್ಸವ

ನಗರದ ಅಧಿದೇವತೆ ಮಂಗಳಾದೇವಿ ದೇವಸ್ಥಾನದ ರಥೋತ್ಸವವು ವಿಜಯದಶಮಿಯ ಪರ್ವ ದಿನವಾದ ಭಾನುವಾರ ವಿಜೃಂಭಣೆಯಿಂದ ನೆರವೇರಿತು.  ಈ ಇತಿಹಾಸ ಪ್ರಸಿದ್ಧ ದೇವಸ್ಥಾನದ ರಥೋತ್ಸವದಲ್ಲಿ ಭಕ್ತರು ಶ್ರದ್ಧೆ ಭಕ್ತಿಯಿಂದ ಭಾಗವಹಿಸಿದರು. ಸೋಮವಾರ ಶ್ರೀಕ್ಷೇತ್ರದ ಅವಭೃತ ಮಂಗಳ ಸ್ನಾನ ನಡೆಯಲಿದೆ.

ಪರ್ತಗಾಳಿ ಶಾಖಾ ಮಠ:

ಶಾರದೋತ್ಸವ ಸಂಪನ್ನ ವೀರ ಬಾಲಕರ ಶ್ರೀಶಾರದಾ ಮಹೋತ್ಸವ ಸಮಿತಿ ವತಿಯಿಂದ ನಗರದ ರಥಬೀದಿಯ ಗೋಕರ್ಣ ಪರ್ತಗಾಳಿ ಶಾಖಾ ಮಠದಲ್ಲಿ ಪೂಜೆಗೊಂಡ ಶಾರದಾ ಮಾತೆಯ ವಿಗ್ರಹದ ವಿಸರ್ಜನಾ ಮೆರವಣಿಗೆ ಭಾನುವಾರ ನೆರವೇರಿತು. ಭವ್ಯ ಮೆರವಣಿಗೆ ಬಳಿಕ ಶಾರದೆಯ ಪೂರ್ಣಾಲಂಕೃತ ಮೂರ್ತಿಯನ್ನು ಶ್ರೀಮಹಾಮಾಯ ತೀರ್ಥದಲ್ಲಿ ಜಲಸ್ತಾಂಭನ ಮಾಡಲಾಯಿತು.

ಅರ್ಕ ಮಹಾಗಣಪತಿ ದೇವಸ್ಥಾನದ ಶಾರದೆ ವಿಸರ್ಜನೆ

ನಗರದ ಕೊಡಿಯಾಲ್‌ಬೈಲ್‌ನ ಅರ್ಕ ಮಹಾಗಣಪತಿ ದೇವಸ್ಥಾನದಲ್ಲಿ 50ನ ವರ್ಷದ ಶಾರದೋತ್ಸವದ ಅಂಗವಾಗಿ ಪೂಜೆಗೊಂಡ ಶಾರದೆಯ ವಿಸರ್ಜನಾ ಮೆರವಣಿಗೆ ಭಾನುವಾರ ನೆರವೇರಿತು. ಡೊಂಗರಕೇರಿ ವೆಂಕಟರಮಣ ದೇವಸ್ಥಾನ– ಚಿತ್ರಾ ಟಾಕೀಸ್‌– ರಥಬೀದಿ ಮಾರ್ಗವಾಗಿ  ಶೋಭಾಯಾತ್ರೆ ಸಾಗಿತು. ಬಳಿಕ ದೇವಸ್ಥಾನದ ಕೆರೆಯಲ್ಲಿ ಶಾರದೆಯ ವಿಗ್ರಹವನ್ನು ಜಲಸ್ತಂಭನ ಮಾಡಲಾಯಿತು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.