ಮಂಗಳೂರು: ಜಿಲ್ಲೆಯಲ್ಲಿ ಹಾಗೂ ಮಂಗಳೂರು ನಗರದಲ್ಲಿ ರಾತ್ರಿ ವೇಳೆಯಲ್ಲಿ ಹೆದ್ದಾರಿಯಲ್ಲಿ ದರೋಡೆ ನಡೆಸಲು ಸಂಚು ರೂಪಿಸಿದ್ದ ಕುಖ್ಯಾತ ಟಿ.ಬಿ ಗ್ಯಾಂಗ್‌ನ8 ಮಂದಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಮಂಗಳೂರಿನ ಮಾರ್ನಮಿಕಟ್ಟೆ ನಿವಾಸಿ ತೌಸಿರ್ ಯಾನೆ ಪತ್ತೊಂಜಿ ತೌಸಿರ್, ಫರಂಗಿಪೇಟೆ ನಿವಾಸಿ ಮೊಹಮ್ಮದ್ ಅರಾಫತ್, ತಸ್ಲಿಂ, ತುಂಬೆ ನಿವಾಸಿ ನಾಸೀರ್ ಹುಸೇನ್, ಪುದು ನಿವಾಸಿ ಮೊಹಮ್ಮದ್ ರಫೀಕ್, ಮೊಹಮ್ಮದ್ ಸಫ್ವಾನ್, ಮೊಹಮ್ಮದ್ ಜೈನುದ್ದೀನ್ ಮತ್ತು ಮೊಹಮ್ಮದ್ ಉನೈಜ್ ಬಂಧಿತ ಆರೋಪಿಗಳು.
ಭಾನುವಾರ ರಾತ್ರಿ ಮಂಗಳೂರು ಗ್ರಾಮಾಂತರ ಠಾಣೆ ವ್ಯಾಪ್ತಿಯ ಉಳಾಯಿಬೆಟ್ಟು ಗ್ರಾಮದ ಪರಾರಿ ಎಂಬಲ್ಲಿ ಇನ್ನೋವಾ ಕಾರನ್ನು ರಸ್ತೆ ಬದಿ ಪಾರ್ಕ್ ಮಾಡಿ, ಗುಂಪಾಗಿ ನಿಂತುಕೊಂಡು ಹಾದುಹೋಗುವ ವಾಹನಗಳನ್ನು ಅಡ್ಡಹಾಕಲು ಯತ್ನಿಸುತ್ತಿದ್ದರು. ಈ ವೇಳೆ ನೈಟ್ ಕರ್ಪ್ಯೂ ವಿಶೇಷ ಕರ್ತವ್ಯದಲ್ಲಿದ್ದ ಸಿಸಿಬಿ ಪೊಲೀಸರು ಸ್ಥಳಕ್ಕೆ ದಾಳಿ ಮಾಡಿ ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ.
ಈ ಗ್ಯಾಂಗ್ ಅನ್ನು ತೌಸಿರ್ ಮತ್ತು ವಿದೇಶದಲ್ಲಿ ತಲೆಮರೆಸಿಕೊಂಡಿರುವ ರೌಡಿ ಬಾತಿಸ್ ಇಬ್ಬರು ಸೇರಿ ಕಟ್ಟಿಕೊಂಡಿದ್ದು, ಇದಕ್ಕೆ ಟಿ.ಬಿ (ತೌಶೀರ್ ಮತ್ತು ಬಾತಿಶ್) ಹೆಸರಿಸಿ ಸಹಚರರನ್ನು ಸೇರಿಸಿ, ಹಣಕಾಸಿನ ಸೆಟ್ಲ್ ಮೆಂಟ್ ವ್ಯವಹಾರ, ಹಣ ವಸೂಲಿ ಮಾಡುತ್ತಿದ್ದರು. ಹಣಕಾಸಿನ ವೈಷಮ್ಯದಲ್ಲಿ ಕೊಲೆ ಸಂಚು ರೂಪಿಸಿದ್ದರು. ಬಂಧಿತ ಆರೋಪಿಗಳ ವಿರುದ್ದ ವಿವಿಧ ಠಾಣೆಯಲ್ಲಿ ದರೋಡೆ, ಕೊಲೆ ಯತ್ನ ಮುಂತಾದ ಪ್ರಕರಣಗಳು ದಾಖಲಾಗಿವೆ ಎಂದು ನಗರ ಪೊಲೀಸ್ ಕಮಿಷನರ್ ಎನ್. ಶಶಿಕುಮಾರ್ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.