ADVERTISEMENT

ಕರಾವಳಿ ರಕ್ಷಣಾ ಪಡೆಯಿಂದ ಸಮುದ್ರದಲ್ಲಿ ಸ್ಮೃತಿ ತಪ್ಪಿದ್ದ ನಾವಿಕನ ರಕ್ಷಣೆ

​ಪ್ರಜಾವಾಣಿ ವಾರ್ತೆ
Published 27 ಡಿಸೆಂಬರ್ 2023, 13:55 IST
Last Updated 27 ಡಿಸೆಂಬರ್ 2023, 13:55 IST
   

ಮಂಗಳೂರು: ಅರಬ್ಬೀ ಸಮುದ್ರದಲ್ಲಿ ನಿತ್ರಾಣಗೊಂಡು ಹಡಗಿನ ಶೌಚಾಲಯದಲ್ಲಿ ಪ್ರಜ್ಞೆ ಕಳೆದುಕೊಂಡು ಬಿದ್ದಿದ್ದ 52 ವರ್ಷದ ನಾವಿಕನನ್ನು ಕರಾವಳಿ ರಕ್ಷಣಾ ಪಡೆಯ ಸಿಬ್ಬಂದಿ ಇಂಟರ್‌ಸೆಪ್ಟೆರ್‌ ದೋಣಿಯ ಮೂಲಕ ಸಾಗಿ ಬುಧವಾರ ಮುಂಜಾನೆ ಸುರಕ್ಷಿತವಾಗಿ ತೀರಕ್ಕೆ ಕರೆತಂದಿದ್ದಾರೆ.

‘ಬುಧವಾರ ಮುಂಜಾನೆ 12.05 ಗಂಟೆ ಸುಮಾರಿಗೆ ಎಂ.ಟಿ ಐವರಿ ರೇ ಹಡಗಿನಲ್ಲಿ ನಾವಿಕರೊಬ್ಬರು ಕುಸಿದು ಬಿದ್ದಿದ್ದು, ಅವರಿಗೆ ವೈದ್ಯಕೀಯ ನೆರವಿನ ಅಗತ್ಯ ಇದೆ ಎಂದು ಅದರ ಏಜೆಂಟ್‌ ತುರ್ತು ಸಂದೇಶ ಕಳುಹಿಸಿದ್ದರು. ಕರಾವಳಿ ರಕ್ಷಣಾ ಪಡೆಯ ಸಿಬ್ಬಂದಿ ವೈದ್ಯಕೀಯ ಅಧಿಕಾರಿಯ ಜೊತೆಗೆ ಇಂಟರ್‌ಸೆಪ್ಟರ್‌ ದೋಣಿ ಸಿ–448 ನೆರವಿನಿಂದ ಆ ಹಡಗನ್ನು ತಲುಪಿದ್ದರು. ಪ್ರಜ್ಞೆ ತಪ್ಪಿ ಬಿದ್ದಿದ್ದ ನಾವಿಕನನ್ನು ವೈದ್ಯಕೀಯ ನಿಗಾ ವ್ಯವಸ್ಥೆಯೊಂದಿಗೆ ಮುಂಜಾನೆ 2.10ರ ಸುಮಾರಿಗೆ ಸಮುದ್ರದಿಂದ ದಡಕ್ಕೆ ಕರೆತಂದರು’ ಎಂದು ಕರಾವಳಿ ರಕ್ಷಣಾ ಪಡೆಯ ವಕ್ತಾರರು ‌ತಿಳಿಸಿದ್ದಾರೆ.

‘ಲೈಬೀರಿಯಾ ಧ್ವಜವನ್ನು ಹೊಂದಿದ್ದ ಹಡಗಿನಲ್ಲಿದ್ದ ನಾವಿಕ ಉಸಿರಾಟದ ಸಮಸ್ಯೆ ಎದುರಿಸುತ್ತಿದ್ದ. ಆತನಿಗೆ ಪಾರ್ಶ್ವವಾಯು ಸಮಸ್ಯೆಯೂ ಇತ್ತು. ಈ ಸಕಾಲಿಕ ಹಾಗೂ ಪರಿಣಾಮಕಾರಿ ಸ್ಪಂದನೆಯು, ಸಮುದ್ರದಲ್ಲಿ ಅಪಾಯಕ್ಕೆ ಸಿಲುಕಿದ ಜೀವಗಳ ರಕ್ಷಣೆ ಕುರಿತು ಕರಾವಳಿ ರಕ್ಷಣಾ ಪಡೆ ಹೊಂದಿರುವ ಅಚಲವಾದ ಬದ್ಧತೆಯ ಪ್ರತೀಕ. ಅಪಾಯಕ್ಕೆ ಸಿಲುಕಿದ್ದ ಹಡಗಿನ ಸಿಬ್ಬಂದಿಯನ್ನು ಕರಾವಳಿ ರಕ್ಷಣಾ ಪಡೆ, ಸಿ–448 ದೋಣಿ, ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಮತ್ತು ವೈದ್ಯಕೀಯ ಸಿಬ್ಬಂದಿಯ ನಡುವಿನ ಸಮನ್ವಯದಿಂದಾಗಿ ತ್ವರಿತವಾಗಿ ದಡಕ್ಕೆ ಕರೆತರಲು ಸಾಧ್ಯವಾಗಿದೆ’ ಎಂದು ಮಾಹಿತಿ ನೀಡಿದ್ದಾರೆ.

ADVERTISEMENT

‘ತುರ್ತು ಕರೆ ಬಂದ ತಕ್ಷಣವೇ, ಮಧ್ಯರಾತ್ರಿಯೇ ಸಂತ್ರಸ್ತ ವ್ಯಕ್ತಿಗೆ ವೈದ್ಯಕೀಯ ನೆರವು ಒದಗಿಸಿರುವುದು ಭಾರತೀಯ ಕರಾವಳಿ ರಕ್ಷಣಾ ಪಡೆಯ ಸಾಮರ್ಥ್ಯದ ಮೇಲೆ ನಾವೀಕರ ವಿಶ್ವಾಸವನ್ನು ಹೆಚ್ಚಿಸಲಿದೆ. ಆರ್ಥಿಕ ವಹಿವಾಟುಗಳನ್ನು ಮತ್ತಷ್ಟು ಆತ್ಮವಿಶ್ವಾಸದಿಂದ ನಿರ್ವಹಿಸಲು ನೆರವಾಗಲಿದೆ. ಸಮುದ್ರಯಾನದ ಸುರಕ್ಷತೆ ಮತ್ತು ಆರ್ಥಿಕ ಸುರಕ್ಷತೆಗಳೆರಡೂ ಪರಸ್ಪರ ನಂಟನ್ನು ಹೊಂದಿದ್ದು, ಇದಕ್ಕಾಗಿ ನಾವಿಕರ ಸುರಕ್ಷತೆಗೆ ಗರಿಷ್ಠ ಮಹತ್ವ ನೀಡಬೇಕಾಗುತ್ತದೆ. ಸುರಕ್ಷಿತ ಸಮುದ್ರಯಾನಕ್ಕೆ ವ್ಯವಸ್ಥೆ ಕಲ್ಪಿಸಲು ಭಾರತೀಯ ಕರಾವಳಿ ರಕ್ಷಣಾ ಪಡೆ ಬದ್ಧವಾಗಿದೆ’ ಎಂದೂ ಅವರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.