ಮಂಗಳೂರು: ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ದೇಶೀಯ ಮತ್ತು ಅಂತರರಾಷ್ಟ್ರೀಯ ಮಾರ್ಗಗಳಲ್ಲಿ ಸಂಚರಿಸುವ ಪ್ರಯಾಣಿಕರ ಸಂಖ್ಯೆ ಹೆಚ್ಚಿದೆ.
ಪ್ರಸಕ್ತ ಏಪ್ರಿಲ್‌ನಿಂದ ಆಗಸ್ಟ್ ವರೆಗಿನ ಐದು ತಿಂಗಳ ಆಗಮನದ ದತ್ತಾಂಶ ಪರಿಶೀಲಿಸಿದಾಗ, ಇಂಡಿಗೊ ಮತ್ತು ಏರ್ ಇಂಡಿಯಾ ಅವರು ನೇರವಾಗಿ ಸಂಪರ್ಕಿಸುವ ದೇಶೀಯ ತಾಣಗಳಲ್ಲಿ ಶೇ 87.5ರಷ್ಟು ಪ್ರಯಾಣಿಕರು ಇದ್ದರು. ಏರ್ ಇಂಡಿಯಾ ಎಕ್ಸಪ್ರೆಸ್ ಮತ್ತು ಇಂಡಿಗೊ ಅಂತರರಾಷ್ಟ್ರೀಯ ಮಾರ್ಗಗಳಲ್ಲಿ ಶೇ 81.7ರಷ್ಟು ಪ್ರಯಾಣಿಕರ ಸಂಖ್ಯೆ ಇತ್ತು.
ಬೆಂಗಳೂರು, ಚೆನ್ನೈ, ದೆಹಲಿ, ಹೈದರಾಬಾದ್, ಮುಂಬೈ ಮತ್ತು ಪುಣೆಯಿಂದ ಮಂಗಳೂರಿಗೆ ಈ ಐದು ತಿಂಗಳಲ್ಲಿ ಬಂದ ವಿಮಾನಗಳಲ್ಲಿ ಒಟ್ಟಾರೆ ಆಸನ ಸಾಮರ್ಥ್ಯ 3.21 ಲಕ್ಷ ಇತ್ತು. ಆ ಪೈಕಿ 2.80 ಲಕ್ಷ ಜನರು ಪ್ರಯಾಣಿಸಿದ್ದು, ಸೀಟುಗಳು ಶೇ 87.5ರಷ್ಟು ಭರ್ತಿಯಾಗಿದ್ದವು. ಮುಂಬೈನಿಂದ ಬಂದ ವಿಮಾನಗಳಲ್ಲಿ ಆಸನ ಭರ್ತಿ ಪ್ರಮಾಣ ಅತೀ ಹೆಚ್ಚು (ಶೇ 91.5) ಇದ್ದರೆ, ಪುಣೆಯಿಂದ ಬಂದ ವಿಮಾನಗಳಲ್ಲಿ ಆಸನ ಭರ್ತಿ ಪ್ರಮಾಣ (ಶೇ69) ಅತೀ ಕಡಿಮೆ ಇತ್ತು.
ಮಂಗಳೂರಿನಿಂದ ಹೊರಡುವ ದೇಶೀಯ ವಿಮಾನಗಳಿಗೆ ಚೆನ್ನೈ ಮತ್ತು ಹೈದರಾಬಾದ್‌ಗೆ ಕ್ರಮವಾಗಿ ಶೇ 89.91 ಮತ್ತು ಶೇ89.66ರಷ್ಟು ಆಸನ ಭರ್ತಿ ಆಗಿದ್ದವು. ಒಟ್ಟಾರೆ 11,700 ಆಸನಗಳ ಪೈಕಿ 10,520 ಪ್ರಯಾಣಿಕರು ಚೆನ್ನೈಗೆ ಪ್ರಯಾಣಿಸಿದರೆ, ಹೈದರಾಬಾದ್‌ಗೆ 23,836 ಸೀಟುಗಳ ಪೈಕಿ 21,370 ಪ್ರಯಾಣಿಕರು ಪ್ರಯಾಣಿಸಿದ್ದಾರೆ. ಮುಂಬೈಗೆ ವಿಮಾನಗಳಲ್ಲಿ ಆಸನ ಭರ್ತಿ ಪ್ರಮಾಣ ಶೇ 87.3ರಷ್ಟಿತ್ತು.
ಅಂತರರಾಷ್ಟ್ರೀಯ ವಲಯದಲ್ಲಿ, ಅಬುಧಾಬಿ, ಬಹ್ರೇನ್, ದಮ್ಮಾಮ್, ದೋಹಾ, ದುಬೈ, ಕುವೈತ್ ಮತ್ತು ಮಸ್ಕತ್ ನಿಂದ ಒಟ್ಟಾರೆ 1.10ಲಕ್ಷ ಪ್ರಯಾಣಿಕರು ಬಂದಿದ್ಗು, ಆಸನ ಭರ್ತಿ ಪ್ರಮಾಣ ಶೇ 81.7ರಷ್ಟು ಇತ್ತು. ಈ ಸ್ಥಳಗಳಿಗೆ ಮಂಗಳೂರಿನಿಂದ 1.12 ಲಕ್ಷ ಜನ ಪ್ರಯಾಣಿಸಿದ್ದು, ಆಸನ ಭರ್ತಿ ಪ್ರಮಾಣ ಶೇ 83.3 ರಷ್ಟಿತ್ತು ಎಂದು ವಿಮಾನ ನಿಲ್ದಾಣದ ವಕ್ತಾರರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.