ಮಂಗಳೂರು: ರಾಜ್ಯದ ವಿದ್ಯಾರ್ಥಿಗಳ ತಾಂತ್ರಿಕ ಶಿಕ್ಷಣದ ಕನಸಿನ ಆಶಾಕಿರಣವಾಗಿ ಬದುಕು ಕಟ್ಟಿಕೊಡುವ, ನಗರದ ಕದ್ರಿಯಲ್ಲಿರುವ ಕರ್ನಾಟಕ ಪಾಲಿಟೆಕ್ನಿಕ್ (ಕೆಪಿಟಿ) ಶಿಕ್ಷಣ ಸಂಸ್ಥೆ ಸ್ವಾಯತ್ತ ಸ್ಥಾನಮಾನ ಗಳಿಸಿದೆ. 78ನೇ ವರ್ಷದ ಸಂಭ್ರಮಾಚರಣೆಯಲ್ಲಿರುವ ಸಂಸ್ಥೆಯು, ಸ್ವಾಯತ್ತೆ ಸಾಧನೆ ಮಾಡಿದ ಕರ್ನಾಟಕದ ಪ್ರಥಮ ಸರ್ಕಾರಿ ಪಾಲಿಟೆಕ್ನಿಕ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಮಾನ್ಯತೆ ಪಡೆಯಲು ಒಂದೂವರೆ ವರ್ಷದ ಹಿಂದೆಯೇ ಪ್ರಕ್ರಿಯೆ ಆರಂಭಿಸಲಾಗಿತ್ತು. ಕಳೆದ ಜುಲೈನಲ್ಲಿ ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿ (ಎಐಟಿಸಿಇ) ಮೌಲ್ಯಮಾಪನ ತಂಡ ಭೇಟಿ ನೀಡಿ ಮೌಲ್ಯಮಾಪನ ನಡೆಸಿತ್ತು. ಮಾನ್ಯತೆ ಪಡೆಯಲು ಸಂಸ್ಥೆ 50 ವರ್ಷ ಪೂರೈಸಿರಬೇಕು ಎಂಬ ಅಂಶ ನಿಯಮಾವಳಿಯಲ್ಲಿತ್ತು. ಮುಂದಿನ ವರ್ಷದಿಂದಲೇ ಸ್ವಾಯತ್ತತೆಯ ಆಧಾರದಲ್ಲಿ ವಿದ್ಯಾರ್ಥಿಗಳ ಪ್ರವೇಶ ಪ್ರಕ್ರಿಯೆ, ಶೈಕ್ಷಣಿಕ ಚಟುವಟಿಕೆಗಳು ನಡೆಯಲಿವೆ. ಮಾನ್ಯತೆಯು ಮುಂದಿನ 5 ವರ್ಷಗಳಿಗೆ ಅನ್ವಯವಾಗಲಿದ್ದು, ಸಂಸ್ಥೆಯು ಮುಂದುವರಿಸಲು ಇಚ್ಛಿಸಿದಲ್ಲಿ ಅವಧಿ ಪೂರ್ಣಗೊಳ್ಳುವ 3 ತಿಂಗಳ ಒಳಗೆ ವಿಸ್ತರಣೆಗೆ ಅರ್ಜಿ ಸಲ್ಲಿಸಬೇಕು.
ಎಐಟಿಸಿಇ ಇಲ್ಲಿಯವರೆಗೆ ಡಿಪ್ಲೊಮಾ ಕಾಲೇಜುಗಳಿಗೆ ಸ್ವಾಯತ್ತೆ ಮಾನ್ಯತೆ ನೀಡುತ್ತಿರಲಿಲ್ಲ. ಎಂಜಿನಿಯರಿಂಗ್ ಕಾಲೇಜುಗಳಿಗೆ ಮಾತ್ರ ಮಾನ್ಯತೆ ನೀಡುತ್ತಿತ್ತು. ಪ್ರಸ್ತುತ ದೇಶದಲ್ಲಿ ಕೌಶಲಾಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದ್ದು, ಅದಕ್ಕೆ ಪೂರಕವಾಗಿ ಡಿಪ್ಲೊಮಾ ಕಾಲೇಜುಗಳಿಗೂ ಸ್ವಾಯತ್ತೆ ಮಾನ್ಯತೆ ನೀಡಲಾಗುತ್ತಿದೆ. ದೇಶದಲ್ಲಿ ಈಗಾಗಲೇ ಹಲವು ಸರ್ಕಾರಿ ಪಾಲಿಟೆಕ್ನಿಕ್‌ಗಳು ಸ್ವಾಯತ್ತೆ ಮಾನ್ಯತೆ ಪಡೆದಿವೆ.
ಮಾನ್ಯತೆಯಿಂದ ಅನುಕೂಲಗಳು:
ತಾಂತ್ರಿಕ ಶಿಕ್ಷಣ ಇಲಾಖೆ ಅಧೀನದ ರಾಜ್ಯದ ಎಲ್ಲಾ ಪಾಲಿಟೆಕ್ನಿಕ್‌ಗಳಿಗೆ ಏಕರೂಪದ ಪಠ್ಯಕ್ರಮ ಇದೆ. ಸ್ವಾಯತ್ತ ಸ್ಥಾನಮಾನ ಪಡೆಯುವುದರಿಂದ ಕೈಗಾರಿಕೆಗಳಿಗೆ ಪೂರಕವಾದ ಪಠ್ಯಕ್ರಮ ತಯಾರಿಸಲು ಅನುಕೂಲವಾಗಲಿದೆ. ಇದರಿಂದ ವಿದ್ಯಾರ್ಥಿಗಳಿಗೆ ಶೈಕ್ಷಣಿಕವಾಗಿ ಮತ್ತು ಔದ್ಯೋಗಿಕವಾಗಿ ಅಧಿಕ ಲಾಭವಾಗಲಿದೆ. ಸ್ವಂತ ಪಠ್ಯಕ್ರಮ ತಯಾರಿ ಅಲ್ಲದೆ ಪರೀಕ್ಷೆಗಳ ಪ್ರಶ್ನೆಪತ್ರಿಕೆ ತಯಾರಿ, ಪರೀಕ್ಷೆಗಳು, ಮೌಲ್ಯಮಾಪನ ಕಾಲೇಜಿನಲ್ಲೇ ನಡೆಯಲಿವೆ. ವಿದ್ಯಾರ್ಥಿಗಳ ದಾಖಲಾತಿ, ದಾಖಲೆಪತ್ರ ಸಂಬಂಧಿತ ಪ್ರಕ್ರಿಯೆಗಳನ್ನೂ ಕಾಲೇಜಿನಲ್ಲೇ ನಡೆಸಲು ಸಾಧ್ಯವಾಗುತ್ತದೆ. ವಿವಿಧ ರಾಜ್ಯ, ವಿದೇಶಗಳ ವಿದ್ಯಾರ್ಥಿಗಳ ದಾಖಲಾತಿ ಮಾಡಿಕೊಳ್ಳಲು ಅವಕಾಶ ಲಭಿಸಿದೆ. ದೇಶ– ವಿದೇಶದ ಕೈಗಾರಿಕೆಗಳೊಂದಿಗೆ ನೇರವಾಗಿ ಒಪ್ಪಂದಗಳನ್ನು ಮಾಡಿಕೊಳ್ಳಬಹುದು. ಇದರಿಂದ ವಿದ್ಯಾರ್ಥಿಗಳಿಗೆ ಜಾಗತಿಕ ಮಟ್ಟದ ವೇದಿಕೆ ಕಲ್ಪಿಸಲು ಸಾಧ್ಯವಾಗುತ್ತದೆ. ಎಐಸಿಟಿಇ ಅಥವಾ ಎಂಎಚ್‌ಆರ್‌ಡಿ ಅನುದಾನಗಳನ್ನು ನೀಡುವಾಗ ಆದ್ಯತೆ ದೊರೆಯಲಿದೆ ಎಂದು ಪ್ರಾಂಶುಪಾಲ ಹರೀಶ ಶೆಟ್ಟಿ ವಿವರಿಸಿದರು.
ಕೆಪಿಟಿ ಸಾಗಿ ಬಂದ ಹಾದಿ: ಸಂಸ್ಥೆಯು 1946ರಲ್ಲಿ ಆಗಿನ ಮದ್ರಾಸ್ ಸರ್ಕಾರದ ಅಧೀನದಲ್ಲಿ ಪಾಂಡೇಶ್ವರದಲ್ಲಿ ಬಾಡಿಗೆ ಕಟ್ಟಡದಲ್ಲಿ ಪ್ರಾರಂಭವಾಯಿತು. 1954ರಿಂದ ಕದ್ರಿ ಹಿಲ್ಸ್‌ನಲ್ಲಿ 19 ಎಕರೆ ವಿಸ್ತಾರವಾದ ಸ್ವಂತ ಕ್ಯಾಂಪಸ್‌ನಲ್ಲಿ ಕಾರ್ಯನಿರ್ವಹಿಸುತ್ತಿದೆ. ರಾಜ್ಯದ 2ನೇ ಅತಿದೊಡ್ಡ ಪಾಲಿಟೆಕ್ನಿಕ್ ಆಗಿರುವ ಕೆಪಿಟಿಯು ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯ 5 ಸರ್ಕಾರಿ, 4 ಅನುದಾನಿತ ಪಾಲಿಟೆಕ್ನಿಕ್‌ಗಳ ನೋಡಲ್ ಕೇಂದ್ರವಾಗಿದೆ. ಡಿಪ್ಲೊಮಾ ಎಂಜಿನಿಯರಿಂಗ್ ವಿಭಾಗಗಳಾದ ಕಂಪ್ಯೂಟರ್ ಸೈನ್ಸ್, ಕೆಮಿಕಲ್, ಎಲೆಕ್ಟ್ರಾನಿಕ್ಸ್ ಆ್ಯಂಡ್ ಕಮ್ಯುನಿಕೇಷನ್ಸ್, ಮೆಕ್ಯಾನಿಕಲ್, ಆಟೊಮೊಬೈಲ್, ಸಿವಿಲ್, ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್ ಎಂಜಿನಿಯರಿಂಗ್, ಪಾಲಿಮರ್ ಟೆಕ್ನಾಲಜಿ ವಿಭಾಗಗಳನ್ನು ಸಂಸ್ಥೆ ಹೊಂದಿದೆ.
ಲೈನ್‌ಮ್ಯಾನ್‌ಗಳಿಗೆ ಪ್ರತಿದಿನ ಸಂಜೆ ನಡೆಸುವ ತರಗತಿಯನ್ನು ಇನ್ನು ಮುಂದೆ ಶನಿವಾರ, ಭಾನುವಾರ ನಡೆಸಲಾಗುವುದು. ಮನೆಯಲ್ಲಿ ಎಲೆಕ್ಟ್ರಾನಿಕ್ ಉಪಕರಣ, ಇನ್ನಿತರ ವಿದ್ಯುತ್ ಉಪಕರಣಗಳ ನಿರ್ವಹಣೆ ಬಗ್ಗೆ ಗೃಹಿಣಿಯರಿಗೆ ಮಾಹಿತಿ ನೀಡುವ ತರಗತಿ, ಕಾರ್ಯಾಗಾರ ನಡೆಸಲಾಗುವುದು. ಸಂಸ್ಥೆಯು ಸಮಾಜಮುಖಿಯಾಗಿ ತೊಡಗಿಸಿಕೊಳ್ಳಲು ಸಾರ್ವಜನಿಕರಿಗೆ ಸಲಹಾ ಕೇಂದ್ರ, ಇನ್‌ಕ್ಯುಬೇಷನ್ ಸೆಂಟರ್ ತೆರೆಯುವ ಯೋಜನೆಯಿದೆ ಎಂದು ಹರೀಶ ಶೆಟ್ಟಿ ತಿಳಿಸಿದರು.
ನಮ್ಮ ಕಾಲೇಜಿಗೆ ಸ್ವಾಯತ್ತ ಸ್ಥಾನಮಾನ ದೊರೆತಿರುವುದರಿಂದ ವಿದ್ಯಾರ್ಥಿಗಳಿಗೆ ಲಾಭವಾಗಲಿದೆ. ಪರೀಕ್ಷೆ ಮುಂದೂಡುವುದು ವಿಳಂಬ ಕಳವಳ ತಪ್ಪಲಿದೆ. ದಾಖಲಾತಿ ಪ್ರಕ್ರಿಯೆ ಸುಲಭವಾಗಲಿದೆ. ಸಂಸ್ಥೆಯು ಉತ್ತಮ ಗುಣಮಟ್ಟದ ಶಿಕ್ಷಣ ನೀಡುತ್ತಿದೆ.–ಅನುರಾಜ್ ದ್ವಿತೀಯ ವರ್ಷದ ವಿದ್ಯಾರ್ಥಿ ಪಾಲಿಮರ್ ಟೆಕ್ನಾಲಜಿ ವಿಭಾಗ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.