ADVERTISEMENT

ಮಣ್ಣು ಕುಸಿತ | ಗುತ್ತಿಗೆದಾರ, ಮೇಲ್ವಿಚಾರಕರು ಸೇರಿ ನಾಲ್ವರ ವಿರುದ್ಧ ಎಫ್‌ಐಆರ್‌

ಬಲ್ಮಠ: ಮಣ್ಣು ಕುಸಿತ– ಕಾರ್ಮಿಕ ಸಾವು

​ಪ್ರಜಾವಾಣಿ ವಾರ್ತೆ
Published 5 ಜುಲೈ 2024, 4:24 IST
Last Updated 5 ಜುಲೈ 2024, 4:24 IST
   

ಮಂಗಳೂರು: ಇಲ್ಲಿನ ಬಲ್ಮಠದಲ್ಲಿ ನಿರ್ಮಾಣ ಹಂತದ ಕಟ್ಟಡದ ತಳಪಾಯಕ್ಕೆ ತೆಗೆದ ಗುಂಡಿಯ ಪಕ್ಕದ ಮಣ್ಣು ಕುಸಿತದಿಂದ ಕಾರ್ಮಿಕ ಮೃತಪಟ್ಟ ದುರ್ಘಟನೆ ಸಂಬಂಧ ಕಾಮಗಾರಿಯ ಗುತ್ತಿಗೆದಾರ ಹಾಗೂ ಮೂವರು ಮೇಲ್ವಿಚಾರಕರು ಸೇರಿದಂತೆ ಒಟ್ಟು ನಾಲ್ವರ ವಿರುದ್ಧ ನಗರ ಪೂರ್ವ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿದೆ. 

ಮಣ್ಣು ಕುಸಿತದಿಂದ ಉತ್ತರ ಪ್ರದೇಶದ ಆಜಂಗಡ ಜಿಲ್ಲೆಯ ಪರಾಸಿ ಗ್ರಾಮದ ಚಂದನ್ ಕುಮಾರ್ (30) ಬುಧವಾರ ಮೃತಪಟ್ಟಿದ್ದರು. ಇನ್ನೊಬ್ಬ ಕಾರ್ಮಿಕ  ಬಿಹಾರದ ರೋಹ್ಟಾಸ್‌ ಜಿಲ್ಲೆಯ ಅಕ್ಹೊರಾ ಗ್ರಾಮದ ಧವನಿಯಾದ ರಾಜ್ ಕುಮಾರ್ (18) ಅವರನ್ನು ರಕ್ಷಣೆ ಮಾಡಲಾಗಿತ್ತು. ‘ರೋಹನ್ ಸ್ಯೂಟ್ಸ್ ಕಮರ್ಷಿಯಲ್ ಆ್ಯಂಡ್ ಫುಲ್ಲಿ ಫರ್ನಿಷ್ಡ್ ಸ್ಟುಡಿಯೊ’ ಕಟ್ಟಡ ಸಂಕೀರ್ಣದ ತಳಪಾಯದ ತಡೆಗೋಡೆಯಲ್ಲಿ ನೀರು ಸೋರಿಕೆ ತಡೆಯುವ (ವಾಟರ್‌ಪ್ರೂಫಿಂಗ್‌) ಕೆಲಸ ನಿರ್ವಹಿಸುತ್ತಿದ್ದಾಗ ಅವರ ಮೇಲೆ ಮಣ್ಣು ಕುಸಿದಿತ್ತು.

ಕಾರ್ಮಿಕ ರಾಜ್‌ಕುಮಾರ್‌ ನೀಡಿದ ದೂರಿನನ್ವಯ ಗುತ್ತಿಗೆದಾರ ವೇಣುಗೋಪಾಲ, ಮೇಲ್ವಿಚಾರಕರಾದ ಹರ್ಷವರ್ಧನ್‌, ಸಂತೋಷ್‌ ಹಾಗೂ ನಾಗರಾಜ್‌ ಎಂಬವರ ವಿರುದ್ಧ ಎಫ್‌ಐಆರ್‌ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ADVERTISEMENT

ಮೃತ ಕಾರ್ಮಿಕನ ಪತ್ನಿಗೆ ₹ 4 ಲಕ್ಷ ಪರಿಹಾರ:

ಮಣ್ಣು ಕುಸಿತದಿಂದ ಮೃತಪಟ್ಟ ಚಂದನ್‌ ಕುಮಾರ್ ಪತ್ನಿ ಕಿರಣ ದೇವಿ ಅವರಿಗೆ ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ₹ 2 ಲಕ್ಷ ಪರಿಹಾರ ವಿತರಿಸಿದೆ. ಅಲ್ಲದೇ ಕಟ್ಟಡ ಕಾಮಗಾರಿಯ ಗುತ್ತಿಗೆದಾರರು ₹ 2 ಲಕ್ಷ ಪರಿಹಾರ ವಿತರಿಸಿದ್ದಾರೆ ಎಂದು ಕಾರ್ಮಿಕ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

ಕಟ್ಟಡ ಪರವಾನಗಿ ಅಮಾನತು:

‘ದುರ್ಘಟನೆ ನಡೆದ ಸ್ಥಳದಲ್ಲಿ 5282.79 ಚ.ಮೀ ವಿಸ್ತೀರ್ಣದ ಕಟ್ಟಡ ನಿರ್ಮಿಸಲು ರೋಹನ್ ಮೊಂತೆರೊ ಅವರು ಪಾಲಿಕೆಯಿಂದ 2024ರ ಮೇ 30ರಂದು ಪರವಾನಗಿ ಪಡೆದಿದ್ದರು. ಮಳೆಗಾಲದಲ್ಲಿ ನೆಲಮಟ್ಟದಿಂದ ಆಳಕ್ಕೆ ಅಗೆದು ಯಾವುದೇ ಕಾಮಗಾರಿ ನಡೆಸಬಾರದು ಎಂದು ಪಾಲಿಕೆ ಸೂಚನೆ ನೀಡಿದ್ದರೂ ಇಲ್ಲಿ ಕಾಮಗಾರಿ ನಡೆಸಲಾಗಿದೆ. ಈ ಕಾಮಗಾರಿಯಿಂದಾಗಿಯೇ ಮಣ್ಣು ಕುಸಿತ ಉಂಟಾಗಿದೆ. ಇಬ್ಬರು ಕಾರ್ಮಿಕರು ಮಣ್ಣಿನಡಿ ಸಿಲುಕಿದ್ದು, ಒಬ್ಬ ಕಾರ್ಮಿಕ ಮೃತಪಟ್ಟಿದ್ದಾರೆ. ಹಾಗಾಗಿ ಈ ಕಟ್ಟಡ ನಿರ್ಮಾಣಕ್ಕೆ ನೀಡಲಾದ ಪರವಾನಗಿಯನ್ನು ಮುಂದಿನ ಆದೇಶದವರೆಗೆ ಅಮಾನತು ಮಾಡಲಾಗಿದೆ’ ಎಂದು ಪಾಲಿಕೆ ಆಯುಕ್ತರು ಆದೇಶ ಮಾಡಿದ್ದಾರೆ. 

‘ಈ ಕಟ್ಟಡದ ಕಾಮಗಾರಿಯನ್ನು ಮುಂದುವರಿಸಬಾರದು. ಕಾಮಗಾರಿಯ ಸ್ಥಳದಲ್ಲಿ ಬಂದೋಬಸ್ತ್‌ ಕೈಗೊಳ್ಳಬೇಕು. ಸ್ಥಳಕ್ಕೆ ಯಾರೂ ಪ್ರವೇಶಿಸದಂತೆ ನೊಡಿಕೊಳ್ಳಬೇಕು’ ಎಂದು ಅವರು ಆದೇಶದಲ್ಲಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.