ADVERTISEMENT

ಮಂಗಳಮುಖಿಯರಿಗೆ ಪೊಲೀಸರಿಂದ ಆಹಾರದ ಕಿಟ್‌ ವಿತರಣೆ

​ಪ್ರಜಾವಾಣಿ ವಾರ್ತೆ
Published 28 ಮೇ 2021, 12:19 IST
Last Updated 28 ಮೇ 2021, 12:19 IST
   

ಮಂಗಳೂರು: ನಗರ ಪೊಲೀಸರು ಆರಂಭಿಸಿರುವ ‘ಕೋವಿಡ್ ಸಮನ್ವಯ’ ಹೆಲ್ಪ್‌ಲೈನ್ ವತಿಯಿಂದ ಶುಕ್ರವಾರ ನಗರದ 80 ಮಂಗಳಮುಖಿಯರಿಗೆ ದಿನಸಿ ಕಿಟ್‌ಗಳನ್ನು ಪೊಲೀಸ್ ಕಮಿಷನರ್ ಕಚೇರಿ ಆವರಣದಲ್ಲಿ ವಿತರಿಸಲಾಯಿತು.

ತಲಾ 10 ಕೆ.ಜಿ. ಅಕ್ಕಿಯೊಂದಿಗೆ ದಿನಸಿ ಕಿಟ್ ಪ್ರಾಯೋಜಿಸಿದ ಕಾರ್‌ಸ್ಟ್ರೀಟ್‌ನ ಅರುಣ್ ವಿಜಯೇಂದ್ರ ಭಟ್ ಅವರನ್ನು ಪೊಲೀಸ್ ಕಮಿಷನರ್‌ ಎನ್. ಶಶಿಕುಮಾರ್ ಅಭಿನಂದಿಸಿದರು.

ಮೇ 21ರಂದು ಮಂಗಳೂರು ನಗರ ಪೊಲೀಸ್ ವತಿಯಿಂದ ‘ಕೋವಿಡ್ ಸಮನ್ವಯ’ ಹೆಲ್ಪ್‌ಲೈನ್ ಆರಂಭಿಸಲಾಗಿದ್ದು, ಈಗಾಗಲೇ ಬಂದ ಕರೆಗಳ ಪೈಕಿ 23 ಮುಖ್ಯ ಕರೆಗಳಿಗೆ ಸ್ಪಂದಿಸಲಾಗಿದೆ. ಬೆಂಗಳೂರಿನ ರಾಗಿಣಿ ಹಾಗೂ ಮಂಗಳಮುಖಿ ಅಸೋಸಿಯೇಶನ್‌ಗಳ ರಾಜ್ಯ ಘಟಕದ ಅಧ್ಯಕ್ಷೆ ಚೈತ್ರಾ ಎಂಬವರು ಮಂಗಳೂರಿನ ಮಂಗಳಮುಖಿಯರು ಸಂಕಷ್ಟದಲ್ಲಿದ್ದು ಸಹಕರಿಸುವಂತೆ ಕೋರಿಕೊಂಡಿದ್ದರು. ಅದರಂತೆ ಈ ದಿನಸಿ ಕಿಟ್ ಒದಗಿಸುವ ವ್ಯವಸ್ಥೆ ಮಾಡಲಾಗಿದೆ. ಕಾರ್‌ಸ್ಟ್ರೀಟ್‌ನ ಅರುಣ್ ವಿಜಯೇಂದ್ರ ಭಟ್ ಅವರು ಈ ಕಿಟ್‌ಗಳನ್ನು ಪ್ರಾಯೋಜಿಸಿದ್ದಾರೆ ಎಂದು ಎನ್. ಶಶಿಕುಮಾರ್ ತಿಳಿಸಿದರು.

ADVERTISEMENT

‘ಲಾಕ್‌ಡೌನ್ ಹಿನ್ನೆಲೆಯಲ್ಲಿ ನಾವೆಲ್ಲಾ ಪರದಾಡುವ ಪರಿಸ್ಥಿತಿ ಎದುರಾಗಿದೆ. ಇಂತಹ ಸಂದರ್ಭದಲ್ಲಿ ಮಂಗಳೂರು ಪೊಲೀಸ್ ಕಮಿಷನರ್ ನಮಗೆ ಈ ಆಹಾರದ ಕಿಟ್ ಒದಗಿಸಿದ್ದಾರೆ. ನಮಗೆ ಸರ್ಕಾರದಿಂದ ಯಾವುದೇ ರೀತಿಯ ಪರಿಹಾರ ಸಿಗುತ್ತಿಲ್ಲ. ಲಾಕ್‌ಡೌನ್‌ನ ಈ ಸಂದರ್ಭದಲ್ಲಿ ಬೇರೆ ಜಿಲ್ಲೆಗಳಲ್ಲಿ ಮಂಗಳಮುಖಿಯರ ಮೇಲೆ ಪೊಲೀಸರಿಂದ ದೌರ್ಜನ್ಯ ನೋಡುತ್ತಿರುವಾಗ ಮಂಗಳೂರು ಪೊಲೀಸರಿಗೆ ನಾವು ಕೃತಜ್ಞರಾಗಿದ್ದೇವೆ’ ಎಂದು ಮಂಗಳಮುಖಿ ಅರುಂಧತಿ ಸಂತಸ ವ್ಯಕ್ತಪಡಿಸಿದರು.

ಈ ಸಂದರ್ಭ ಡಿಸಿಪಿಗಳಾದ ಹರಿರಾಂ ಶಂಕರ್, ವಿನಯ ಎ. ಗಾಂವ್ಕರ್, ಎಸಿಪಿಗಳಾದ ಎಸ್. ಮಹೇಶ್ ಕುಮಾರ್, ನಟರಾಜ್, ಸಿಸಿಬಿ ಪೊಲೀಸ್ ಇನ್ಸ್‌ಪೆಕ್ಟರ್ ಮಹೇಶ್ ಪ್ರಸಾದ್, ಪಿಎಸ್‌ಐ ರಾಜೇಂದ್ರ ಬಿ. ಮತ್ತು ಸಿಸಿಬಿ ಸಿಬ್ಬಂದಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.