ADVERTISEMENT

ನಾಳೆ ಮಂಗಳೂರಿಗೆ ಪ್ರಧಾನಿ ಮೋದಿ ಭೇಟಿ; ಭಾರಿ ಭದ್ರತೆ

ಸಿಂಗಾರಗೊಂಡಿರುವ ಮಂಗಳೂರು ನಗರ; ಕೂಳೂರು ಸುತ್ತ ಪೊಲೀಸ್ ಸರ್ಪಗಾವಲು

​ಪ್ರಜಾವಾಣಿ ವಾರ್ತೆ
Published 1 ಸೆಪ್ಟೆಂಬರ್ 2022, 16:45 IST
Last Updated 1 ಸೆಪ್ಟೆಂಬರ್ 2022, 16:45 IST
ಪ್ರಧಾನಿ ನರೇಂದ್ರ ಮೋದಿ ಅವರ ಸಾರ್ವಜನಿಕ ಸಮಾವೇಶಕ್ಕೆ ಸಜ್ಜುಗೊಂಡಿರುವ ವೇದಿಕೆ –ಪ್ರಜಾವಾಣಿ ಚಿತ್ರ
ಪ್ರಧಾನಿ ನರೇಂದ್ರ ಮೋದಿ ಅವರ ಸಾರ್ವಜನಿಕ ಸಮಾವೇಶಕ್ಕೆ ಸಜ್ಜುಗೊಂಡಿರುವ ವೇದಿಕೆ –ಪ್ರಜಾವಾಣಿ ಚಿತ್ರ   

ಮಂಗಳೂರು: ರಸ್ತೆಗಳ ಡಿವೈಡರ್‌ಗಳ ಉದ್ದಕ್ಕೂ ಪ್ರಮುಖ ವೃತ್ತಗಳಲ್ಲೂ ಬಂಟಿಂಗ್ಸ್‌. ಬೀದಿಬೀದಿಗಳಲ್ಲಿ ಸ್ವಾಗತ ಫಲಕಗಳು, ಫ್ಲೆಕ್ಸ್‌ಗಳು, ಬಿಜೆಪಿ ಧ್ವಜಗಳ ಭರಾಟೆ. ವಿವಿಧ ಯೋಜನೆಗಳಿಗೆ ಚಾಲನೆ ನೀಡಲು ಮತ್ತು ಫಲಾನುಭವಿಗಳ ಸಮಾವೇಶದಲ್ಲಿ ಪಾಲ್ಗೊಳ್ಳಲು ಶುಕ್ರವಾರ ಬರಲಿರುವ ಪ್ರಧಾನಿ ನರೇಂದ್ರ ಮೋದಿ ಅವರನ್ನು ಸ್ವಾಗತಿಸಲು ಮಂಗಳೂರು ಸಜ್ಜಾಗಿದ್ದು ಸಾರ್ವಜನಿಕ ಕಾರ್ಯಕ್ರಮ ನಡೆಯಲಿರುವ ಬಂಗ್ರಕೂಳೂರಿನ ಗೋಲ್ಡ್ ಫಿಂಚ್ ಮೈದಾನದಲ್ಲಿ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ.

ಕೊಚ್ಚಿಯಿಂದ ಬರಲಿರುವ ಮೋದಿ ಅವರು ವಿಮಾನ ನಿಲ್ದಾಣದಿಂದ ಹೆಲಿಕಾಪ್ಟರ್ ಮೂಲಕ ಬಂದು ಕೂಳೂರು ಬಳಿ ನಿರ್ಮಿಸಿರುವ ಹೆಲಿಪ್ಯಾಡ್‌ನಲ್ಲಿ ಇಳಿಯಲಿದ್ದು, ನಂತರ ಗೋಲ್ಡ್ ಫಿಂಚ್ ಆವರಣಕ್ಕೆ ಬರುವರು. ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ವಿವಿಧ ತಾಲ್ಲೂಕುಗಳಿಂದ ಲಕ್ಷಾಂತರ ಕಾರ್ಯಕರ್ತರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಭರವಸೆಯನ್ನು ಬಿಜೆಪಿ ನಾಯಕರು ವ್ಯಕ್ತಪಡಿಸಿದ್ದಾರೆ.

ಸಂಸದ ಮತ್ತು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್‌, ಸಚಿವರಾದ ಆರಗ ಜ್ಞಾನೇಂದ್ರ, ಸುನಿಲ್ ಕುಮಾರ್, ಕೋಟ ಶ್ರೀನಿವಾಸ ಪೂಜಾರಿ, ಎಡಿಜಿಪಿ ಅಲೋಕ್ ಕುಮಾರ್ ಮತ್ತಿತರರು ಗುರುವಾರ ಸಿದ್ಧತೆಗಳನ್ನು ಪರಿಶೀಲಿಸಿದ್ದಾರೆ.

ADVERTISEMENT

ನಗರದ ಕಮಿಷನರ್‌, ಮೂವರು ಡಿಸಿಪಿಗಳು ಮಾತ್ರವಲ್ಲದೆ ಹೊರಗಿನಿಂದ ಎಸ್‌ಪಿ ರ‍್ಯಾಂಕ್‌ನ ಐವರು, 15 ಮಂದಿ ಡಿಎಸ್‌ಪಿ, 35 ಇನ್‌ಸ್ಪೆಕ್ಟರ್‌ಗಳನ್ನು ಕರೆಸಲಾಗಿದೆ. ಹೊರ ಜಿಲ್ಲೆಗಳಿಂದ ಬಂದ ಸಿಬ್ಬಂದಿ ಸೇರಿದಂತೆ ಒಟ್ಟು 3,000 ಸಿಬ್ಬಂದಿ ಭದ್ರತಾ ಕಾರ್ಯದಲ್ಲಿ ನಿರತರಾಗಿರುವರು. ಹೊರ ಜಿಲ್ಲೆಗಳಿಂದ 15 ಕೆಎಸ್‌ಆರ್‌ಪಿ ಪ್ಲಟೂನುಗಳು, ಒಂದು ಆರ್‌ಎಎಫ್‌ ಕಂಪನಿ, ಗರುಡ ಪಡೆಯನ್ನು ನಿಯೋಜಿಸಲಾಗಿದೆ. ಎಎನ್ಎಫ್‌ ಘಟಕವೂ ಬಂದಿದ್ದು ಸುತ್ತ ಕಾಡು ಪ್ರದೇಶ ಇರುವುದಿಂದ ಕೂಂಬಿಂಗ್‌ ಕಾರ್ಯಾಚರಣೆಯೂ ನಡೆಯಲಿದೆ.ಸಿಸಿಟಿವಿ ಕ್ಯಾಮೆರಾ ಕಣ್ಗಾವಲಿನಲ್ಲಿ ಕಾರ್ಯಕ್ರಮ ನಡೆಯಲಿದೆ ಎಂದು ಅಲೋಕ್ ಕುಮಾರ್ ಪತ್ರಕರ್ತರಿಗೆ ತಿಳಿಸಿದರು.

ಕರಪತ್ರ ಹಂಚಿ ಸ್ವಾಗತಿಸಿದ ಶಾಸಕ

ನರೇಂದ್ರ ಮೋದಿ ಅವರ ಕಾರ್ಯಕ್ರಮಕ್ಕೆ ಹೆಚ್ಚು ಮಂದಿಯನ್ನು ಸೇರಿಸುವುದಕ್ಕಾಗಿ ಪಕ್ಷದ ಕಾರ್ಯಕರ್ತರು ಮತ್ತು ಜನಪ್ರತಿನಿಧಿಗಳು ಪ್ರಯತ್ನಿಸುತ್ತಿದ್ದಾರೆ. ಸಾರ್ವಜನಿಕ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಂತೆ ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ್ ಕಾಮತ್ ಅವರು ಉರ್ವ ಪರಿಸರದಲ್ಲಿ ಮನೆ ಮನೆಗೆ ತೆರಳಿ ಕರಪತ್ರ ಹಂಚಿ ಜನರನ್ನು ಸ್ವಾಗತಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಶಾಸಕರು, ಕಾರ್ಯಕ್ರಮಕ್ಕೆ ಸಾರ್ವಜನಿಕರನ್ನು ಆಹ್ವಾನಿಸುವುದಕ್ಕಾಗಿ ಪಕ್ಷದ ಕಾರ್ಯಕರ್ತರು ಕ್ಷೇತ್ರದ ಪ್ರತಿ ಮನೆಗೂ ತೆರಳಿದ್ದಾರೆ. ಹೀಗಾಗಿ ಕಾರ್ಯಕ್ರಮಕ್ಕೆ ನಿರೀಕ್ಷೆಗೂ ಮೀರಿ ಜನ ಸೇರಲಿದ್ದಾರೆ ಎಂದು ಭರವಸೆ ವ್ಯಕ್ತಪಡಿಸಿದರು. ಪಾಲಿಕೆ ಸದಸ್ಯ ಗಣೇಶ್ ಕುಲಾಲ್ ಇದ್ದರು‌.

ಬೋಟ್ ಪೆಟ್ರೋಲಿಂಗ್: ಪ್ರಧಾನಿ ನಗರಕ್ಕೆ ಭೇಟಿ ನೀಡುತ್ತಿರುವ ಹಿನ್ನೆಲೆಯಲ್ಲಿ ಸ್ಥಳೀಯರು ಪೊಲೀಸರು ಕಾರ್ಯಕ್ರಮ ಸ್ಥಳದ ಬಳಿಯ ಕೂಳೂರು ಫಲ್ಗುಣಿ ನದಿಯಲ್ಲಿ ಗುರುವಾರ ಬೋಟ್ ಪೆಟ್ರೋಲಿಂಗ್ ನಡೆಸಿದರು.

‘ತರ್ಲೆಗಳನ್ನು ಶಾಂತಚಿತ್ತದಿಂದ ನಿರ್ವಹಿಸಿ’

ಪೊಲೀಸರು ಸಂಯಮ ಕಳೆದುಕೊಳ್ಳಬಾರದು. ನಿಮ್ಮ ಕೆಲಸವನ್ನು ಭಾವೋದ್ವೇಗವಿಲ್ಲದೆ ನಿರ್ವಹಿಸಿ. ಕೆಲವರು ತರ್ಲೆ ಮಾಡುವುದಕ್ಕೆಂದೇ ಬರುತ್ತಾರೆ. ಅವರನ್ನು ಶಾಂತಚಿತ್ತದಿಂದ ನಿರ್ವಹಿಸಿ. ಅವರ ಮೇಲೆ ದಬ್ಬಾಳಿಕೆ ಮಾಡಬೇಡಿ. ಪರಿಸ್ಥಿತಿ ನಿಮ್ಮ ಕೈಮೀರಿ ಹೋಗುತ್ತದೆ ಎಂದಾದರೆ ಮೇಲಧಿಕಾರಿಗಳಿಗೆ ತಿಳಿಸಿ. ಎರಡು ಹಂತಗಳಲ್ಲಿ ತಪಾಸಣೆ ಆಗಬೇಕು...

ಎಡಿಜಿಪಿ ಅಲೋಕ್ ಕುಮಾರ್‌ ಅವರು ಕಾರ್ಯಕ್ರಮ ನಡೆಯುವ ಸ್ಥಳದಲ್ಲಿ ಕರ್ತವ್ಯಕ್ಕೆ ನಿಯೋಜನೆಗೊಂಡಿರುವ ಪೊಲೀಸರಿಗೆ ಗುರುವಾರ ಹೇಳಿದ ಕಿವಿಮಾತು ಇದು.

ಸಿಗರೇಟ್, ಲೈಟರ್‌, ಬೆಂಕಿಪೊಟ್ಟಣ, ಕಪ್ಪು ಬಾವುಟ ಸೇರಿದಂತೆ ಅಪಾಯಕಾರಿ ಮತ್ತು ಅಹಿತಕರ ಎಂದು ಸಂದೇಹ ಬರುವ ಯಾವ ವಸ್ತುಗಳನ್ನೂ ಒಳಗೆ ತೆಗೆದುಕೊಂಡ ಹೋಗಲು ಬಿಡಬಾರದು. ಪ್ರಧಾನಿ ವಿರುದ್ಧ ಘೋಷಣೆ ಕೂಗುವುದಕ್ಕೆ ಯಾರಾದರೂ ಮುಂದಾದರೆ ತಪ್ಪಿಸಬೇಕು. ಯಾರೂ ವಿಡಿಯೊ ಮಾಡುತ್ತ, ಸೆಲ್ಫಿ ತೆಗೆದುಕೊಳ್ಳುತ್ತ ಮೈಮರೆಯಬಾರದು. ಜನರನ್ನು ನಿಯಂತ್ರಿಸುವತ್ತ ಮಾತ್ರ ಗಮನವಿರಲಿ ಎಂದು ಅವರು ಕಿವಿಮಾತು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.