ಮಂಗಳೂರು: ರೋಟರಿ ಕ್ಲಬ್‌ನ ಮಂಗಳೂರು ಸೆಂಟ್ರಲ್ ಘಟಕವು ಇದೇ 24ರಂದು ‘ರೋಟರಿ ಚಿಣ್ಣರ ಉತ್ಸವ’ ಕ್ರೀಡಾ ಮತ್ತು ಸಾಂಸ್ಕೃತಿಕ ಸ್ಪರ್ಧಾ ಕೂಟವನ್ನು ಉರ್ವದ ಕೆನರಾ ಪ್ರೌಢಶಾಲೆಯ ಆವರಣದಲ್ಲಿ ಏರ್ಪಡಿಸಿದೆ.
ಈ ಕುರಿತು ಸುದ್ದಿಗೋಷ್ಠಿಯಲ್ಲಿ ಬುಧವಾರ ಮಾಹಿತಿ ನೀಡಿದ ರೋಟರಿ ಕ್ಲಬ್‌ನ ಮಂಗಳೂರು ಸೆಂಟ್ರಲ್ ಘಟಕದ ಅಧ್ಯಕ್ಷ ಬ್ರಾಯಾನ್ ಪಿಂಟೊ, ‘ಸಂಸದ ಕ್ಯಾ.ಬ್ರಿಜೇಶ್ ಚೌಟ ಅವರು ಉತ್ಸವವನ್ನು ಬೆಳಿಗ್ಗೆ 9ಕ್ಕೆ ಉದ್ಘಾಟಿಸುವರು. ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಎಂ.ಪಿ ಹಾಗೂ ರೋಟರಿ ಜಿಲ್ಲೆ 3181ರ ವಲಯ-2 ಸಹಾಯಕ ಗವರ್ನರ್ ಕೃಷ್ಣ ಹೆಗ್ಡೆ ಪಾಲ್ಗೊಳ್ಳಲಿದ್ದಾರೆ’ ಎಂದರು.
‘ಕ್ಲಬ್‌ನ ದಶಮಾನೋತ್ಸವದ ಸಂದರ್ಭದಲ್ಲಿ 1996ರಲ್ಲಿ ಪ್ರಾರಂಭವಾದ ರೋಟರಿ ಚಿಣ್ಣರ ಉತ್ಸವ ಮಕ್ಕಳ ಪ್ರತಿಭೆಯನ್ನು ಪೋಷಿಸಲು ಶ್ರಮಿಸುತ್ತಿದೆ. ಉತ್ಸವದಲ್ಲಿ ಕ್ರೀಡಾ ಸ್ಪರ್ಧೆ, ಗಾನ, ನೃತ್ಯ, ನಾಟಕ ಮೊದಲಾದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಈ ಉತ್ಸವದಲ್ಲಿ ಮಕ್ಕಳ ರಕ್ಷಣೆ ಮತ್ತು ಆರೈಕೆ ಕೇಂದ್ರಗಳಲ್ಲಿ ಆಶ್ರಯಪಡೆದ 550 ವಿದ್ಯಾರ್ಥಿಗಳು ಪಾಲ್ಗೊಳ್ಳಲಿದ್ದಾರೆ’ ಎಂದರು.
‘ಸಂಜೆ 5ಕ್ಕೆ ಸಮಾರೋಪ ನಡೆಯಲಿದ್ದು, ರೋಟರಿ ಜಿಲ್ಲೆ 3181ರ ಜಿಲ್ಲಾ ಗವರ್ನರ್ ವಿಕ್ರಮ್ ದತ್ತ ಹಾಗೂ ಮಂಗಳೂರು ಸೆಂಟ್ರಲ್ ರೋಟರಿ ಫೌಂಡೇಷನ್ ಅಧ್ಯಕ್ಷ ಪ್ರೇಮನಾಥ ಕುಡ್ವ ಭಾಗವಹಿಸಲಿದ್ದಾರೆ’ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಕ್ಲಬ್‌ನ ರಾಜೇಶ್ ಸೀತಾರಾಂ, ರೊನಾಲ್ಡ್ ಮೆಂಡೋನ್ಸ, ಕರಣ್ ಜೈನ್, ಅಕ್ಷಯ್ ಬಿ.ರೈ, ರಾಜ್ ಗೋಪಾಲ್ ರೈ, ರಾಜೇಶ್ ಶೆಟ್ಟಿ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.