ADVERTISEMENT

ಮಂಗಳೂರು: ರಂಗಿನಾಟದಲ್ಲಿ ಮಿಂದೆದ್ದ ಕಡಲ ನಗರಿ

ಕೃಷ್ಣ ಜನ್ಮಾಷ್ಟಮಿ, ಮೊಸರು ಕುಡಿಕೆ ಉತ್ಸವ

​ಪ್ರಜಾವಾಣಿ ವಾರ್ತೆ
Published 28 ಆಗಸ್ಟ್ 2024, 6:23 IST
Last Updated 28 ಆಗಸ್ಟ್ 2024, 6:23 IST
ಶ್ರೀಕೃಷ್ಣ ಜನ್ಮಾಷ್ಟಮಿ‌ ಅಂಗವಾಗಿ ಮಂಗಳೂರಿನ ಅತ್ತಾವರರಸ್ತೆ ಯಲ್ಲಿ ಮೊಸರು ಕುಡಿಕೆ‌ ವೈಭವದಿಂದ ನಡೆಯಿತು - ಪ್ರಜಾವಾಣಿ ಚಿತ್ರ / ಫಕ್ರುದ್ದೀನ್ ಎಚ್
ಶ್ರೀಕೃಷ್ಣ ಜನ್ಮಾಷ್ಟಮಿ‌ ಅಂಗವಾಗಿ ಮಂಗಳೂರಿನ ಅತ್ತಾವರರಸ್ತೆ ಯಲ್ಲಿ ಮೊಸರು ಕುಡಿಕೆ‌ ವೈಭವದಿಂದ ನಡೆಯಿತು - ಪ್ರಜಾವಾಣಿ ಚಿತ್ರ / ಫಕ್ರುದ್ದೀನ್ ಎಚ್   

ಮಂಗಳೂರು: ಕತ್ತಲನ್ನು ಸೀಳಿ ಮಿನುಗುತ್ತಿದ್ದ ಬೆಳಕು, ಬಾನೆತ್ತರದ ಕಮಾನಿನಲ್ಲಿ ಕಂಗೊಳಿಸುತ್ತಿದ್ದ ಕುಡಿಕೆಗಳು, ಗೆಳೆಯರ ಹೆಗಲ ಏಣಿಯೇರಿ ಕುಡಿಕೆ ಒಡೆಯುವ ಯುವಕರು, ಕುಡಿಕೆಗಳಲ್ಲಿ ಅಡಗಿದ್ದ ಉಡುಗೊರೆ, ಬಾಳೆಹಣ್ಣು, ಜೂಸ್‌ ಬಾಟಲಿ, ಹಣ್ಣು, ತಿಂಡಿ ಮುಂತಾದ ವಸ್ತುಗಳನ್ನು ಕ್ಯಾಚ್ ಮಾಡಲು ಪೈಪೋಟಿಯಿಂದ ಮುಗಿಬೀಳುತ್ತಿದ್ದ ಜನ, ಕೇಕೆ ಹಾಕಿ ಹುರಿದುಂಬಿಸುವ ಪ್ರೇಕ್ಷಕರು, ಬಣ್ಣದ ಓಕುಳಿಯಲ್ಲಿ ಮಿಂದೆದ್ದ ಜನರು...

ಮಂಗಳವಾರ ಸಂಜೆ ನಗರದಲ್ಲಿ ನಡೆದ ಮೊಸರು ಕುಡಿಕೆ ಉತ್ಸವದಲ್ಲಿ ಕಂಡ ದೃಶ್ಯಗಳಿವು. ಶ್ರೀಕೃಷ್ಣ ಜನ್ಮಾಷ್ಟಮಿಯ ಎರಡು ದಿನಗಳ ಹಬ್ಬಕ್ಕೆ ಮೊಸರು ಕುಡಿಕೆ ವೈಭವ ಮೇಳೈಸಿತು. ಜಾತ್ರೆಯ ವಾತಾವರಣ ನಿರ್ಮಾಣವಾಗಿತ್ತು.

ಕೊಟ್ಟಾರ ‍ಶ್ರೀಕೃಷ್ಣ ಜ್ಞಾನೋದಯ ಭಜನಾ ಮಂದಿರ, ದ್ವಾರಕಾ ನಗರ, ದೇರೆಬೈಲು ವತಿಯಿಂದ ಅಖಂಡ ಭಜನಾ ಸಪ್ತಾಹ ಮತ್ತು ಮೊಸರು ಕುಡಿಕೆ ಉತ್ಸವ ವೈಭವದಿಂದ ನಡೆಯಿತು. ಮಂದಿರದಲ್ಲಿ ಕೃಷ್ಣನಿಗೆ ಪೂಜೆ, ಆರತಿ ನಡೆದ ಬಳಿಕ ರಥದಲ್ಲಿ ಕುಳ್ಳಿರಿಸಿ ಮೆರವಣಿಗೆ ನಡೆಸಲಾಯಿತು. ಭಜನಾ ತಂಡ, ಚೆಂಡೆ, ಸಿಂಗಾರಿ ಮೇಳ, ಕೀಲು ಕುದುರೆ ವಿಶೇಷ ಕಳೆ ನೀಡಿದವು.

ADVERTISEMENT

ಅತ್ತಾವರದಲ್ಲಿ ನಡೆದ ಮೊಸರು ಕುಡಿಕೆ ಉತ್ಸವದಲ್ಲಿ ಕುಡಿಕೆಗಳನ್ನು ಒಡೆಯಲು ಒಬ್ಬರ ಮೇಲೊಬ್ಬರು ಹತ್ತಿ ಗೋಪುರ ನಿರ್ಮಿಸುವಾಗ ಕೆಳಗೆ ನಿಂತಿದ್ದವರು ನೀರೆರಚಿ ಪ್ರತಿರೋಧ ಒಡ್ಡುತ್ತಿದ್ದರು. ಅದರ ನಡುವೆಯೂ ಯುವಕರು ಸಾಹಸದಿಂದ ಕುಡಿಕೆಗಳನ್ನು ಒಡೆಯುತ್ತಿದ್ದ ದೃಶ್ಯ ನೋಡುಗರಿಗೆ ರೋಮಾಂಚನ ನೀಡುತ್ತಿತ್ತು. ಕುಣಿತ ಭಜನೆ ಕಣ್ಣಿಗೆ ಹಬ್ಬ ನೀಡಿತ್ತು.

ಕದ್ರಿ ‍ಶ್ರೀಕೃಷ್ಣ ಜನ್ಮ ಮಹೋತ್ಸವ ಸಮಿತಿ ವತಿಯಿಂದ ನಡೆದ ಉತ್ಸವದ ಅಂಗವಾಗಿ ಕದ್ರಿ ಕಂಬಳದ ಗೋಪಾಲಕೃಷ್ಣ ಮಠದಲ್ಲಿ ಕದ್ರಿ ಮಂಜುನಾಥ ದೇವಸ್ಥಾನದಿಂದ ತಂದಿದ್ದ ಶ್ರೀಕೃಷ್ಣ ಮೂರ್ತಿಗೆ ಪೂಜೆ, ಮಂಗಳಾರತಿ ನಡೆದು ದೇವಸ್ಥಾನದವರೆಗೆ ಮೆರವಣಿಗೆ ತರಲಾಯಿತು. ಅಬ್ಬರದ ಪಿಲಿ ನಲಿಕೆ, ಚೆಂಡೆ, ಸಿಂಗಾರಿ ಮೇಳ, ಟ್ಯಾಬ್ಲೊ, ಯಕ್ಷಗಾನ ವೇಷ, ಡಿಜೆ, ವಿಶೇಷ ಕಳೆ ನೀಡಿದವು.

ಮೆರುಗು ನೀಡಿದ ಕದ್ರಿ ಸ್ಟಾರ್‌ ನೈಟ್ಸ್‌: ಕದ್ರಿ ಕ್ರಿಕೆಟರ್ಸ್‌ ವತಿಯಿಂದ ಕದ್ರಿ ಮೈದಾನದಲ್ಲಿ ಆಯೋಜಿಸಲಾಗಿದ್ದ ಕದ್ರಿ ಸ್ಟಾರ್‌ ನೈಟ್ಸ್‌, ಸಂಗೀತ ಕಾರ್ಯಕ್ರಮ ಮೆರುಗು ನೀಡಿತು. ಗಾಯಕರಾದ ಕುನಾಲ್‌ ಗಾಂಜಾವಾಲಾ, ಕೇರಳದ ಫರೀದ್‌ ಗಾಯನಕ್ಕೆ ಪ್ರೇಕ್ಷಕರು ತಲೆದೂಗಿದರು.

ಶ್ರೀಕೃಷ್ಣ ಜನ್ಮಾಷ್ಟಮಿ‌ ಅಂಗವಾಗಿ ಮಂಗಳೂರಿನ ಕೊಟ್ಟಾರ ರಸ್ತೆಯಲ್ಲಿ ಮೊಸರು ಕುಡಿಕೆ‌ ವೈಭವದಿಂದ ನಡೆಯಿತು - ಪ್ರಜಾವಾಣಿ ಚಿತ್ರ / ಫಕ್ರುದ್ದೀನ್ ಎಚ್
ಶ್ರೀಕೃಷ್ಣ ಜನ್ಮಾಷ್ಟಮಿ‌ ಅಂಗವಾಗಿ ಮಂಗಳೂರಿನ ಕದ್ರಿ ರಸ್ತೆಯಲ್ಲಿ ಮೊಸರು ಕುಡಿಕೆ‌ ಹೊಡೆಯುವ ಮೆರವಣಿಗೆಯಲ್ಲಿದ್ದ ಹುಲಿ ಕುಣಿತ ಕಲಾವಿಧರು - ಪ್ರಜಾವಾಣಿ ಚಿತ್ರ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.