ADVERTISEMENT

ಮಂಗಳೂರು: ಪಿಜಿಯವರಿಗೆ ಬೇಡವಾದ ನಾಯಿಯನ್ನು ಪಾಲಿಕೆ ಕಸದ ವಾಹನದಲ್ಲಿ ಎಳೆದೊಯ್ದರು!

ಡೊಂಗರಕೇರಿಯ ಪಿ.ಜಿ. ಕಟ್ಟಡ ವಾಸಿಗಳ ನಡೆಗೆ ಪ್ರಾಣಿಪ್ರಿಯರಿಂದ ತರಾಟೆ

​ಪ್ರಜಾವಾಣಿ ವಾರ್ತೆ
Published 11 ಸೆಪ್ಟೆಂಬರ್ 2024, 9:46 IST
Last Updated 11 ಸೆಪ್ಟೆಂಬರ್ 2024, 9:46 IST
<div class="paragraphs"><p>ಮಂಗಳೂರು: ಪಾಲಿಕೆ ಕಸದ ವಾಹನದಲ್ಲಿ ಜೀವಂತ ನಾಯಿ ಸಾಗಾಟ</p></div>

ಮಂಗಳೂರು: ಪಾಲಿಕೆ ಕಸದ ವಾಹನದಲ್ಲಿ ಜೀವಂತ ನಾಯಿ ಸಾಗಾಟ

   

ಮಂಗಳೂರು: ಡೊಂಗರಕೇರಿ ವಾರ್ಡ್‌ ಭೋಜರಾವ್‌ ಕ್ರಾಸ್‌ ರಸ್ತೆ ಬಳಿ ‘ಪೇಯಿಂಗ್ ಗೆಸ್ಟ್‌’ ವಸತಿಯಲ್ಲಿ ವಾಸವಿದ್ದವರು ನಾಯಿಯನ್ನು ಪಾಲಿಕೆಯ ಸ್ವಚ್ಛತಾ ಸಿಬ್ಬಂದಿಗೆ ಹಸ್ತಾಂತರಿಸುವ ಹಾಗೂ ಅದನ್ನು ಎಳೆದೊಯ್ದು ಕಸ ಸಾಗಣೆ ವಾಹನಕ್ಕೆ ತುಂಬುವ ದೃಶ್ಯ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ. ಈ ಘಟನೆ ಕುರಿತು ಪ್ರಾಣಿ ಪ್ರಿಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿದ ಡೊಂಗರಕೇರಿ ವಾರ್ಡ್‌ನ ಪಾಲಿಕೆ ಸದಸ್ಯೆ ಜಯಶ್ರೀ ಕುಡ್ವ, ‘ನಾನು ಪ್ರತಿನಿಧಿಸುವ ವಾರ್ಡ್‌ನಲ್ಲಿ ಪಿ.ಜಿ.ಯನ್ನು ನಡೆಸುತ್ತಿದ್ದ ಕಟ್ಟಡದಲ್ಲಿ ನಾಯಿಯನ್ನು ಸಾಕಿದ್ದರು. ಕೆಲ ದಿನಗಳಿಂದ ಆ ನಾಯಿ ಉಗ್ರ ವರ್ತನೆ ತೋರಿಸಲು ಆರಂಭಿಸಿತ್ತು. ಚೌತಿ ಹಬ್ಬದ ದಿನ ಇಬ್ಬರಿಗೆ ಕಚ್ಚಿತ್ತು. ಆಗ ಪಿ.ಜಿ.ಯಲ್ಲಿ ವಾಸವಿದ್ದ ಕೆಲವರು ಪಾಲಿಕೆಯ ಕಸ ಸಾಗಿಸುವವರಿಗೆ ಕರೆ ಮಾಡಿ ನಾಯಿಯನ್ನು ಕೊಂಡೊಯ್ಯುವಂತೆ ಕೋರಿದ್ದರು. ಸತ್ತ ನಾಯಿಯ ಕಳೇಬರ ಸಾಗಿಸಲು ಕರೆ ಬಂದಿದೆ ಎಂದು ಪರಿಭಾವಿಸಿ ಕಸ ಸಾಗಿಸುವ ವಾಹನದವರು ಸ್ಥಳಕ್ಕೆ ಬಂದಿದ್ದರು. ಅಲ್ಲಿಗೆ ಬಂದಾಗಲೇ ಅದು ಜೀವಂತ ನಾಯಿ ಎಂದು ಅವರಿಗೆ ಗೊತ್ತಾಗಿದೆ. ಪಿ.ಜಿ. ಕಟ್ಟಡದಲ್ಲಿ ವಾಸವಿದ್ದವರು ಒತ್ತಾಯಿಸಿದ್ದರಿಂದ ಕಸಸಾಗಿಸುವ ವಾಹನದ ಸಿಬ್ಬಂದಿ ಅವರಿಂದ ಹಣ ಪಡೆದು, ನಾಯಿಯನ್ನು ವಾಹನದಲ್ಲಿ ಕೊಂಡೊಯ್ದಿದ್ದರು. ನಾಯಿ ದಾರಿ ಮಧ್ಯೆ ವಾಹನದಿಂದ ಜಿಗಿದು ತಪ್ಪಿಸಿಕೊಂಡಿದೆ’ ಎಂದು ತಿಳಿಸಿದರು.

ADVERTISEMENT

‘ಈ ಘಟನೆ ನಡೆದಿದ್ದು ಸೆ. 7ರಂದು. ಮಂಗಳವಾರ ಸಂಜೆಯಷ್ಟೇ (ಸೆ.10ರಂದು) ಈ ಘಟನೆ ನನ್ನ ಗಮನಕ್ಕೆ ಬಂತು. ನಾಯಿಯನ್ನು ಸಾಗಿಸಿದ್ದ ವಾಹನವೂ ನಮ್ಮ ವಾರ್ಡ್‌ನದಲ್ಲ. ಬೇರೆ ವಾರ್ಡ್‌ನ ಸ್ವಚ್ಛತಾ ವಾಹನವನ್ನು ಇದಕ್ಕೆ ಬಳಸಲಾಗಿದೆ’ ಎಂದರು.

ಈ ಘಟನೆ ಕುರಿತು ಪ್ರತಿಕ್ರಿಯಿಸಿದ ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು, ‘ಕಸ ಸಾಗಿಸುವ ವಾಹನದಲ್ಲಿ ಜೀವಂತ ನಾಯಿಯನ್ನು ಸಾಗಿಸಿದ ಘಟನೆ ನಗರದಲ್ಲಿ ಇದೇ ಮೊದಲು. ಕಸ ಸಾಗಿಸುವ ವಾಹನದ ಸಿಬ್ಬಂ‌ದಿಯನ್ನು ಕರೆಸಿ, ಈ ರೀತಿ ಮಾಡದಂತೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದೇವೆ. ದಂಡ ವಿಧಿಸುವ ಸಾಧ್ಯತೆಯ ಬಗ್ಗೆಯೂ ಪರಿಶೀಲಿಸುತ್ತಿದ್ದೇವೆ’ ಎಂದರು.

ಈ ಘಟನೆ ಬಗ್ಗೆ ಪ್ರತಿಕ್ರಿಯಿಸಿದ ಪಶುಪಾಲನೆ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ ಉಪನಿರ್ದೇಶಕ ಡಾ. ಅರುಣ್ ಕುಮಾರ್ ಶೆಟ್ಟಿ, ‘ನಾಯಿಯನ್ನು ಕಾನೂನು ಪ್ರಕಾರ ಮತ್ತೆ ಅದೇ ಸ್ಥಳಕ್ಕೆ ಬಿಡಬೇಕು. ಬೀದಿ ನಾಯಿಗಳಿಗೆ ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆ ಮಾಡಿದ ಬಳಿಕ ಅವುಗಳನ್ನು ಹಿಂದೆ ಇದ್ದ ಜಾಗದಲ್ಲೇ ಬಿಡಲಾಗುತ್ತದೆ. ನಾಯಿಯನ್ನು ಕಸದ ವಾಹನದಲ್ಲಿ ಸಾಗಿಸಿದ್ದನ್ನು ನಾಯಿ ಮೇಲಿನ ಹಿಂಸಾಚಾರ ಎಂದೇ ಪರಿಗಣಿಸಲಾಗುತ್ತದೆ. ಈ ವಿಚಾರದಲ್ಲಿ ಸ್ವಚ್ಛತಾ ಸಿಬ್ಬಂದಿಯವರಿಗೂ ತಿಳಿವಳಿಕೆ ನೀಡುವ ಅಗತ್ಯವಿದೆ. ಆ ಕಾರಣಕ್ಕಾಗಿ ಇಲಾಖೆಯ ಸಹಾಯಕ ನಿರ್ದೇಶಕ ಡಾ.ಅಶೋಕ್ ಅವರು ಪಾಲಿಕೆಗೆ ನೋಟಿಸ್ ಜಾರಿ ಮಾಡಿದ್ದಾರೆ’ ಎಂದರು.

ಮಹಿಳೆಯರಿಬ್ಬರು ಸೇರಿ ನಾಯಿಯನ್ನು ಕಸ ಸಾಗಿಸುವ ವಾಹನದ ಸಿಬ್ಬಂದಿಗೆ ಹಸ್ತಾಂತರಿಸುವ ದೃಶ್ಯವನ್ನು ಸಮೀಪದ ಕಟ್ಟಡವೊಂದರ ನಿವಾಸಿಗಳು ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದರು.

‘ಪಚ್ಚನಾಡಿ ಪರಿಸರದಲ್ಲಿ ರೈಲು ಹಳಿಯ ಬಳಿ ನಾಯಿ ಪತ್ತೆಯಾಗಿದೆ. ಅದರ ಕತ್ತಿನಲ್ಲಿ ಸರಪಣಿಯೂ ಇತ್ತು. ಅದನ್ನು ಕಟ್ಟಿ ಹಾಕಿದ್ದೇವೆ’ ಎಂದು ಪಚ್ಚನಾಡಿಯ ನಿವಾಸಿಯೊಬ್ಬರು ಸುದ್ದಿಗಾರರಿಗೆ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.