ADVERTISEMENT

ಮಂಗಳ ಗಂಗೋತ್ರಿ: ವಿದ್ಯಾರ್ಥಿ ನಿಲಯ ಪೂರ್ಣಗೊಳ್ಳಲು ಬೇಕು ಇನ್ನೂ ₹25 ಕೋಟಿ!

ಅಕ್ಷರ ದೇಗುಲಕ್ಕೆ ಕಪ್ಪುಚುಕ್ಕೆಯಾದ ಅಂತರರಾಷ್ಟ್ರೀಯ ವಿದ್ಯಾರ್ಥಿ ನಿಲಯ

​ಪ್ರಜಾವಾಣಿ ವಾರ್ತೆ
Published 15 ಮೇ 2024, 8:00 IST
Last Updated 15 ಮೇ 2024, 8:00 IST
ಮಂಗಳೂರು ವಿಶ್ವವಿದ್ಯಾನಿಲಯ ಕ್ಯಾಂಪಸ್‌ನಲ್ಲಿ ಸುತ್ತ ಗಿಡ–ಗಂಟಿ ಬೆಳೆದು ಪಾಳುಬಿದ್ದ ಕಟ್ಟಡದಂತೆ ಕಾಣುವ ಅಂತರರಾಷ್ಟ್ರೀಯ ವಿದ್ಯಾರ್ಥಿಗಳ ವಿದ್ಯಾರ್ಥಿ ನಿಲಯ
ಮಂಗಳೂರು ವಿಶ್ವವಿದ್ಯಾನಿಲಯ ಕ್ಯಾಂಪಸ್‌ನಲ್ಲಿ ಸುತ್ತ ಗಿಡ–ಗಂಟಿ ಬೆಳೆದು ಪಾಳುಬಿದ್ದ ಕಟ್ಟಡದಂತೆ ಕಾಣುವ ಅಂತರರಾಷ್ಟ್ರೀಯ ವಿದ್ಯಾರ್ಥಿಗಳ ವಿದ್ಯಾರ್ಥಿ ನಿಲಯ   

ಮಂಗಳೂರು: ಅಕ್ಷರ ದೇಗುಲವಾಗಿರುವ ಮಂಗಳ ಗಂಗೋತ್ರಿಯ ವಿಶಾಲ ಕ್ಯಾಂಪಸ್‌ನಲ್ಲಿ ಪಾಳುಬಿದ್ದ ಕಟ್ಟಡದಂತೆ ಕಾಣುವ ಅಂತರರಾಷ್ಟ್ರೀಯ ವಿದ್ಯಾರ್ಥಿಗಳ ವಿದ್ಯಾರ್ಥಿ ನಿಲಯವು ಸದ್ಯದಲ್ಲಿ ಪೂರ್ಣಗೊಳ್ಳುವ ಲಕ್ಷಣಗಳು ಗೋಚರಿಸುತ್ತಿಲ್ಲ. ಆರ್ಥಿಕ ಮುಗ್ಗಟ್ಟಿನಿಂದ ಬಳಲುತ್ತಿರುವ ವಿಶ್ವವಿದ್ಯಾನಿಲಯಕ್ಕೆ ಹಣಕಾಸಿನ ಹೊಂದಾಣಿಕೆಯೇ ದೊಡ್ಡ ಸವಾಲಾಗಿದೆ.

ವ್ಯಾಸಂಗ ಹಾಗೂ ಸಂಶೋಧನೆಗೆ ಬರುವ ವಿದೇಶಿ ವಿದ್ಯಾರ್ಥಿಗಳಿಗೆ ಅನುಕೂಲ ಕಲ್ಪಿಸುವ ಮಹತ್ವಾಕಾಂಕ್ಷೆಯೊಂದಿಗೆ 2016ರಲ್ಲಿ ಅಂತರರಾಷ್ಟ್ರೀಯ ವಿದ್ಯಾರ್ಥಿ ನಿಲಯ ನಿರ್ಮಾಣ ಯೋಜನೆಯನ್ನು ಮಂಗಳೂರು ವಿಶ್ವವಿದ್ಯಾಲಯವು ಕೈಗೆತ್ತಿಕೊಂಡಿತ್ತು. ಎರಡು ಬ್ಲಾಕ್‌ಗಳ ನಿರ್ಮಾಣಕ್ಕೆ ₹32.42 ಕೋಟಿ ಜೊತೆಗೆ, ಹೆಚ್ಚುವರಿ ಕಾಮಗಾರಿಯಾಗಿ 16 ತರಗತಿ ಕೊಠಡಿಗಳ ನಿರ್ಮಾಣ, ಮಂಗಳ ಸಭಾಂಗಣ ನವೀಕರಣ, ವಿದ್ಯಾರ್ಥಿ ನಿಲಯಕ್ಕೆ ಪೀಠೋಪಕರಣ ಸೇರಿ ಅಂದಾಜು ₹48.45 ಕೋಟಿ ವೆಚ್ಚದ ಯೋಜನೆ ರೂಪಿಸಲಾಗಿತ್ತು. ಗುತ್ತಿಗೆದಾರರು ಹಾಕಿದ ಟೆಂಡರ್‌ನಲ್ಲಿ ಹೊಂದಾಣಿಕೆ ನಡೆಸಿ, ಶೇ 19.50ರಷ್ಟು ಅಧಿಕ ದರದಲ್ಲಿ (₹53.77 ಕೋಟಿ) ಟೆಂಡರ್ ನೀಡಲಾಗಿತ್ತು. ಕಾಮಗಾರಿಗೆ 18 ತಿಂಗಳುಗಳ ಕಾಲಾವಕಾಶ ನೀಡಲಾಗಿತ್ತು.

ಆದರೆ, ಕಾಮಗಾರಿ ಪ್ರಾರಂಭವಾಗಿ ಎಂಟು ವರ್ಷಗಳಾದರೂ, ಇನ್ನೂ ಕಟ್ಟಡ ಅರೆಬರೆಯಾಗಿದ್ದು, ಬಳಕೆಗೆ ಬಾರದಂತಾಗಿದೆ. ಅನುಮೋದನೆಗೊಂಡ ಮೊತ್ತದ ಜೊತೆಗೆ ಹೆಚ್ಚುವರಿ ಕಾಮಗಾರಿ ಸೇರಿ ಒಟ್ಟು ₹63.22 ಕೋಟಿ ಅಂದಾಜು ವೆಚ್ಚದ ಯೋಜನೆ ಇದಾಗಿದೆ. ಇಡೀ ಕಟ್ಟಡ ಪೂರ್ಣಗೊಳ್ಳಲು ಇನ್ನೂ ₹25 ಕೋಟಿ ಅಗತ್ಯವಿದೆ ಎನ್ನುತ್ತವೆ ವಿವಿ ಮೂಲಗಳು.

ADVERTISEMENT

‘ವಿಶ್ವವಿದ್ಯಾನಿಲಯದಲ್ಲಿ ಲಭ್ಯವಿರುವ ಅನುದಾನದಿಂದ ಹಾಸ್ಟೆಲ್‌ ನಿರ್ಮಿಸಲು ಯೋಜನೆ ರೂಪಿಸಿ ಕಾರ್ಯಾನುಷ್ಠಾನ ಮಾಡಲಾಗಿದೆ. 2016ರಲ್ಲಿ ಕಟ್ಟಡ ಕಾಮಗಾರಿ ಆರಂಭಿಸಿ, 2020ರಲ್ಲಿ ಇದಕ್ಕೆ ಸರ್ಕಾರದಿಂದ ಅನುಮತಿ ಪಡೆಯಲಾಗಿದೆ. ಅನುಮತಿ ಪಡೆಯುವ ವೇಳೆ ವಿವಿಯ ಆಂತರಿಕ ಸಂಪನ್ಮೂಲ ಬಳಕೆ ಮಾಡಿಕೊಂಡು ಕಟ್ಟಡ ನಿರ್ಮಿಸುವುದಾಗಿ ಸರ್ಕಾರಕ್ಕೆ ತಿಳಿಸಲಾಗಿತ್ತು. ಕಾಮಗಾರಿ ಪೂರ್ಣಗೊಳಿಸಲು ನಿವೃತ್ತ ಪ್ರಾಧ್ಯಾಪಕರ ಪಿಂಚಣಿಗೆ ಮೀಸಲಿದ್ದ ಹಣವನ್ನೂ ಬಳಕೆ ಮಾಡಲಾಗಿದೆ. ಆದರೂ, ಕಟ್ಟಡ ಪೂರ್ಣಗೊಳಿಸಲು ಸಾಧ್ಯವಾಗಿಲ್ಲ’ ಎಂದು ಹೆಸರು ಹೇಳಲಿಚ್ಛಿಸದ ಪ್ರಾಧ್ಯಾಪಕರೊಬ್ಬರು ತಿಳಿಸಿದರು.

‘ಪ್ರಸ್ತುತ ವಿವಿಯ ಆರ್ಥಿಕ ಸ್ಥಿತಿ ಸಂಪೂರ್ಣ ಹದಗೆಟ್ಟಿದೆ. ಅತಿಥಿ ಉಪನ್ಯಾಸಕರು, ಗುತ್ತಿಗೆ ಆಧಾರದಲ್ಲಿ ನೇಮಕಗೊಂಡಿರುವ ಸಿಬ್ಬಂದಿಗೆ ಗೌರವ ಧನ ಪಾವತಿ ಬಾಕಿ ಇದೆ. ಕಳೆದ ಎರಡು ವರ್ಷಗಳಲ್ಲಿ ನಿವೃತ್ತರಾದವರು ತಮ್ಮ ಪಿಂಚಣಿ ಮೊತ್ತ ಪಡೆಯಲು ವಿವಿಗೆ ಅಲೆದಾಡುತ್ತಿದ್ದಾರೆ. ಈ ನಡುವೆ ಅಂತರರಾಷ್ಟ್ರೀಯ ವಿದ್ಯಾರ್ಥಿ ನಿಲಯದ ಕಾಮಗಾರಿ ಗುತ್ತಿಗೆದಾರರಿಗೆ ₹ 39 ಕೋಟಿಯಷ್ಟು ಮಾತ್ರ ಬಿಲ್ ಪಾವತಿಯಾಗಿದ್ದು, ಬಾಕಿ ಮೊತ್ತ ಪಾವತಿಯಲ್ಲಿ ಆಗಿರುವ ವಿಳಂಬದ ಬಗ್ಗೆ ಅವರು ನ್ಯಾಯಾಲಯದ ಮೆಟ್ಟಿಲೇರಿದ್ದಾರೆ. ಈ ಪರಿಸ್ಥಿತಿಯಲ್ಲಿ ಕಟ್ಟಡ ಪೂರ್ಣಗೊಳ್ಳುವುದಾದರೂ ಹೇಗೆ’ ಎಂದು ಅವರು ಪ್ರಶ್ನಿಸಿದರು.

‘ವಿದ್ಯಾರ್ಥಿಗಳು ನೀಡಿದ ಶುಲ್ಕದ ಹಣದಿಂದ ವಿದ್ಯಾರ್ಥಿ ನಿಲಯ ತಲೆ ಎತ್ತಬಹುದೆಂಬ ಕನಸು ಭಗ್ನವಾಗಿದೆ. ಹಾಲಿ ಇದ್ದ ವಸತಿ ನಿಲಯಗಳಲ್ಲಿ ವಿದೇಶಿ ವಿದ್ಯಾರ್ಥಿಗಳಿಗೆ ವ್ಯವಸ್ಥೆ ಕಲ್ಪಿಸಲು ಸಾಧ್ಯವಿತ್ತು. ವಿಶ್ವವಿದ್ಯಾನಿಲಯದ ಕ್ಯಾಂಪಸ್‌ ಪ್ರವೇಶಿಸುವವರಿಗೆ ಭೂತ ಬಂಗಲೆಯ ಹಾಗೆ ಕಾಣುವ ಹಾಸ್ಟೆಲ್ ಕಟ್ಟಡ, ಪಾಚಿ ಗಟ್ಟಿದ ಗೋಡೆಗಳು, ಸುತ್ತ ಬೆಳೆದಿರುವ ಗಿಡ–ಗಂಟಿಗಳು ಶಿಕ್ಷಣ ಮಂದಿರದ ಕ್ಯಾಂಪಸ್‌ನ ಸುಂದರ ಕಲ್ಪನೆಯನ್ನು ಹೊಸಕಿ ಹಾಕುತ್ತವೆ’ ಎಂದು ಇನ್ನೊಬ್ಬ ಪ್ರಾಧ್ಯಾಪಕರು ಬೇಸರ ವ್ಯಕ್ತಪಡಿಸಿದರು.

ಅಂತರರಾಷ್ಟ್ರೀಯ ವಿದ್ಯಾರ್ಥಿನಿಲಯ ಕಟ್ಟಡ ಪೂರ್ಣಗೊಳಿಸುವ ಸಂಬಂಧ ಸರ್ಕಾರಕ್ಕೆ ₹25 ಕೋಟಿ ಪ್ರಸ್ತಾವ ಸಲ್ಲಿಸಲಾಗಿದ್ದು ಮಂಜೂರು ಆಗುವ ಭರವಸೆಯಿದೆ.

–ರಾಜು ಮೊಗವೀರ ಕುಲಸಚಿವ (ಆಡಳಿತ)

ವಾರ್ಷಿಕ ₹70 ಲಕ್ಷ ಬಾಡಿಗೆ

ಪ್ರಸ್ತುತ ವಿಶ್ವವಿದ್ಯಾನಿಲಯದಲ್ಲಿ 130ಕ್ಕೂ ಹೆಚ್ಚು ವಿದೇಶಿ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಅವರಿಗೆ ಬಾಡಿಗೆ ಕಟ್ಟಡದಲ್ಲಿ ವಸತಿ ವ್ಯವಸ್ಥೆ ಕಲ್ಪಿಸಲಾಗಿದ್ದು ವಾರ್ಷಿಕವಾಗಿ ಇದಕ್ಕೆ ₹70 ಲಕ್ಷ ವೆಚ್ಚವಾಗುತ್ತಿದೆ. ಹಾಸ್ಟೆಲ್ ಕಟ್ಟಡ ಪೂರ್ಣಗೊಂಡರೆ ಈ ಮೊತ್ತ ವಿವಿಗೆ ಉಳಿತಾಯವಾಗಲಿದೆ ಎಂದು ವಿವಿ ಮೂಲಗಳು ಹೇಳುತ್ತವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.