ADVERTISEMENT

ಮಂಗಳೂರು ವಿಶ್ವವಿದ್ಯಾನಿಲಯ: ರಾಜ್ಯ ಶಿಕ್ಷಣ ನೀತಿ ಪಠ್ಯಕ್ರಮ ಅನುಮೋದನೆ

​ಪ್ರಜಾವಾಣಿ ವಾರ್ತೆ
Published 7 ಆಗಸ್ಟ್ 2024, 7:31 IST
Last Updated 7 ಆಗಸ್ಟ್ 2024, 7:31 IST
ಸಭೆಯಲ್ಲಿ ಕುಲಪತಿ ಪ್ರೊ.ಪಿ.ಎಲ್. ಧರ್ಮ ಮಾತನಾಡಿದರು. ಹಣಕಾಸು ಅಧಿಕಾರಿ ಪ್ರೊ.ವೈ.ಸಂಗಪ್ಪ, ಕುಲಸಚಿವ ರಾಜು ಮೊಗವೀರ ಕೆ ಹಾಗೂ ಪರೀಕ್ಷಾಂಗ ಕುಲಸಚಿವ ಪ್ರೊ.ದೇವೇಂದ್ರಪ್ಪ ಭಾಗವಹಿಸಿದ್ದರು
ಸಭೆಯಲ್ಲಿ ಕುಲಪತಿ ಪ್ರೊ.ಪಿ.ಎಲ್. ಧರ್ಮ ಮಾತನಾಡಿದರು. ಹಣಕಾಸು ಅಧಿಕಾರಿ ಪ್ರೊ.ವೈ.ಸಂಗಪ್ಪ, ಕುಲಸಚಿವ ರಾಜು ಮೊಗವೀರ ಕೆ ಹಾಗೂ ಪರೀಕ್ಷಾಂಗ ಕುಲಸಚಿವ ಪ್ರೊ.ದೇವೇಂದ್ರಪ್ಪ ಭಾಗವಹಿಸಿದ್ದರು   

ಮಂಗಳೂರು: ರಾಜ್ಯ ಶಿಕ್ಷಣ ನೀತಿಯನ್ನು (ಎಸ್‌ಇಪಿ) 2024–25ನೇ ಸಾಲಿನಿಂದಲೇ ಜಾರಿಗೆ ತರಲು ಮಂಗಳೂರು  ವಿಶ್ವವಿದ್ಯಾನಿಲಯವು ಸಿದ್ಧತೆ ನಡೆಸಿದೆ. ಈ ಸಲುವಾಗಿ ರೂಪಿಸಿರುವ ಪಠ್ಯಕ್ರಮಗಳಿಗೆ ಕುಲಪತಿ ಪ್ರೊ.ಪಿ.ಎಲ್‌.ಧರ್ಮ ಅಧ್ಯಕ್ಷತೆಯಲ್ಲಿ ನಡೆದ ವಿಶ್ವವಿದ್ಯಾನಿಲಯದ ಶೈಕ್ಷಣಿಕ ಮಂಡಳಿ ಸಭೆಯಲ್ಲಿ ಮಂಗಳವಾರ ಅನುಮೋದನೆ ನೀಡಲಾಯಿತು.

ವಿಜ್ಞಾನ ಮತ್ತು ತಂತ್ರಜ್ಞಾನ ನಿಖಾಯದ 27 ಕೋರ್ಸ್‌, ಕಲಾ ನಿಖಾಯದ 29 ಕೋರ್ಸ್‌ಗಳ ವಿವಿಧ ಸೆಮಿಸ್ಟರ್‌ಗಳ ಪಠ್ಯಕ್ರಮಗಳಿಗೆ ಅನುಮೋದನೆ ನೀಡಲಾಯಿತು. ಆದರೆ, ವಾಣಿಜ್ಯ ನಿಕಾಯದ 11 ಕೋರ್ಸ್‌ಗಳ ಮೊದಲ ಸೆಮಿಸ್ಟರ್‌ನ ಪಠ್ಯಕ್ರಮಕ್ಕೆ ಮಾತ್ರ ಅನುಮೋದನೆ ನೀಡಲಾಯಿತು.

‘ಪದವಿ ಕೋರ್ಸ್‌ಗಳಿಗೆ ರಾಜ್ಯ ಶಿಕ್ಷಣ ನೀತಿ ಆಯೋಗದ ಮಾರ್ಗಸೂಚಿಯನ್ವಯ ಅಧ್ಯಯನ ಮಂಡಳಿಗಳು ಪಠ್ಯಕ್ರಮಗಳನ್ನು ರೂಪಿಸಿವೆ. ಅಧ್ಯಯನ ಮಂಡಳಿಯ ಅಧ್ಯಾಪಕರಿಗೆ ಮುಕ್ತ ಸ್ವಾತಂತ್ರ್ಯ ನೀಡಿದ್ದೆವು. ಆಯಾ ಕ್ಷೇತ್ರದ ಈಚಿನ ಬೆಳವಣಿಗೆಗಳನ್ನು ಅವಲೋಕಿಸಿ ಉತ್ತಮ ಪಠ್ಯಕ್ರಮ ರೂಪಿಸಿದ್ದಾರೆ’ ಎಂದು ಪ್ರೊ.ಪಿ.ಎಲ್‌.ಧರ್ಮ ತಿಳಿಸಿದರು.

ADVERTISEMENT

ಈ ಹಿಂದೆ ಅರ್ಥಶಾಸ್ತ್ರ  ಸ್ನಾತಕೋತ್ತರ ಪದವಿಧರರು ವಾಣಿಜ್ಯ ನಿಕಾಯದ ಕೋರ್ಸ್‌ಗಳ ಕೆಲವು ಪಠ್ಯಗಳನ್ನು ಬೋಧಿಸುತ್ತಿದ್ದರು. ವಾಣಿಜ್ಯ ನಿಕಾಯದ ಹೊಸ ಪಠ್ಯಕ್ರಮದಲ್ಲಿ ಅರ್ಥಶಾಸ್ತ್ರದ ವಿಷಯಗಳನ್ನು ಕೈಬಿಟ್ಟು, ವಾಣಿಜ್ಯದ ಮುಖ್ಯ ವಿಷಯಗಳನ್ನು ಮಾತ್ರ ಉಳಿಸಿಕೊಳ್ಳಲಾಗಿದೆ. ವಾಣಿಜ್ಯ ನಿಕಾಯದ ಕೋರ್ಸ್‌ಗಳಲ್ಲಿ ಎರಡು ದಶಕಕ್ಕೂ ಹೆಚ್ಚು ಸಮಯ ಬೋಧನೆ ಮಾಡುತ್ತಿದ್ದ ಅರ್ಥಶಾಸ್ತ್ರ ಉಪನ್ಯಾಸಕರಿಗೆ ಹುದ್ದೆ ಕಳೆದುಕೊಳ್ಳುವ ಆತಂಕ ಎದುರಾಗಿದೆ. ಹೊಸ ಪಠ್ಯ ಕ್ರಮದಲ್ಲೂ ಅರ್ಥಶಾಸ್ತ್ರಕ್ಕೆ ಸಂಬಂಧಿಸಿದ ಪಠ್ಯಗಳನ್ನು ಸೇರಿಸಬೇಕು ಎಂದು ಶೈಕ್ಷಣಿಕ ಮಂಡಳಿ ಸದಸ್ಯರಾಗಿರುವ ಕೆಲ ಶಾಸಕರು ಕುಲಪತಿಯವರಿಗೆ ಪತ್ರ ಬರೆದಿದ್ದರು.

ಸಭೆಯಲ್ಲಿ ಈ ವಿಚಾರ ಪ್ರಸ್ತಾಪಿಸಿದ ಕುಲಪತಿಯವರು, ‘ಈ ಬಿಕ್ಕಟ್ಟನ್ನು ಬಗೆಹರಿಸಲು ಸೌಹಾರ್ದಯುತ ತೀರ್ಮಾನ ಕೈಗೊಳ್ಳಬೇಕಿದೆ. ವಾಣಿಜ್ಯ ಹಾಗೂ ಅರ್ಥಶಾಸ್ತ್ರ ವಿಷಯಗಳ ಅಧ್ಯಯನ ಮಂಡಳಿ ಅಧ್ಯಕ್ಷರ ಜಂಟಿ ಸಭೆ ನಡೆಸಿ ಒಮ್ಮತದ ತೀರ್ಮಾನಕ್ಕೆ ಬರಲು ಅವಕಾಶ ಕಲ್ಪಿಸಲಾಗುತ್ತದೆ. ಸಭೆಯ ನಿರ್ಣಯಗಳಿಗೆ ಅನುಗುಣವಾಗಿ ವಾಣಿಜ್ಯ ನಿಕಾಯದ ಕೋರ್ಸ್‌ಗಳ ಉಳಿದ ಸೆಮಿಸ್ಟರ್‌ಗಳ ಪಠ್ಯಕ್ರಮಕ್ಕೆ ಶೈಕ್ಷಣಿಕ ಮಂಡಳಿ ಅನುಮೋದನೆ ನೀಡಲಿದೆ  ಎಂದರು. 

ಬಿ.ಇಡಿ-ಮರುಮೌಲ್ಯಮಾಪನಕ್ಕೆ ಅವಕಾಶ:

ಬಿ.ಇಡಿ ಕೋರ್ಸ್‌ನ ವಿದ್ಯಾರ್ಥಿಗಳಿಗೆ ಈ ಹಿಂದೆ ಮರು ಮೌಲ್ಯ ಮಾಪನಕ್ಕೆ ಅವಕಾಶ ಇರಲಿಲ್ಲ. ಶೈಕ್ಷಣಿಕ ಮಂಡಳಿ ಸಭೆಯಲ್ಲಿ ಅನುಮೋದನೆ ನೀಡಲಾಗಿದೆ. ಶಿಕ್ಷಣ ವಿಷಯದ ಅಧ್ಯಯನ ಮಂಡಳಿಯ ಅಧ್ಯಕ್ಷ ಸಂತೋಷ್ ಜೆರಾಲ್ಡ್ ಡಿಸೋಜ,  ‘ಬಿ.ಇಡಿ ಉತ್ತರ ಪತ್ರಿಕೆಗಳ ಮೌಲ್ಯಮಾಪನಕ್ಕೆ ನಿರ್ದಿಷ್ಟ ಮಾರ್ಗಸೂಚಿ ಇರಲಿಲ್ಲ. ಹಾಗಾಗಿ ಬಿ.ಇಡಿ ವಿದ್ಯಾರ್ಥಿಗಳಿಗೆ, ಉತ್ತರ ಪತ್ರಿಕೆಯನ್ನು ನೋಡಲು, ಮರುಮೌಲ್ಯಮಾಪನ ನಡೆಸಲು ಅವಕಾಶ ನೀಡುತ್ತಿರಲಿಲ್ಲ. ಈ  ಕೊರತೆ ನೀಗಿಸಲು ಕ್ರಮವಹಿಸಲಾಗಿದೆ’ ಎಂದರು.

ಮಂಗಳೂರು ಧರ್ಮಪ್ರಾಂತ್ಯ ಕ್ರೈಸ್ತ ಧರ್ಮ ಪೀಠವು ಆರಂಭಿಸಲು ಉದ್ದೇಶಿಸಿರುವ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್‌ – ಇಂಟೆಗ್ರೇಟೆಡ್ ಪಾಸ್ಟೋರಲ್‌ ಸೋಷಿಯಲ್‌ ಕಮ್ಯೂನಿಕೇಷನ್‌ ಸರ್ಟಿಫಿಕೇಟ್‌ ಕೋರ್ಸ್‌ನ ಪಠ್ಯಕ್ರಮಕ್ಕೂ ಅನುಮೋದನೆ ನೀಡಲಾಯಿತು.

ಅರ್ಹತಾ ಮಾನದಂಡ ಬದಲಾವಣೆ

ವಸ್ತು ವಿಜ್ಞಾನದ ಎಂ.ಎಸ್‌ಸಿ ಕೋರ್ಸ್‌ಗೆ ಪ್ರವೇಶಕ್ಕೆ ಅರ್ಹತಾ ಮಾನದಂಡವನ್ನು ಮಾರ್ಪಾಡು ಮಾಡಿ ಎಂಜಿನಿಯರಿಂಗ್‌ ಪದವಿ ಹೊಂದಿದ ವಿದ್ಯಾರ್ಥಿಗಳಿಗೂ ಪ್ರವೇಶಾವಕಾಶ ನೀಡುವ ಪ್ರಸ್ತಾವಕ್ಕೆ ಸಭೆಯು ಅನುಮೋದನೆ ನೀಡಿದೆ.

‘2024–25ನೇ ಸಾಲಿನ ಪದವಿ ತರಗತಿಗಳು ಆ. 12ರಿಂದ ಹಾಗೂ ಸ್ನಾತಕೋತ್ತರ ಪದವಿ ತರಗತಿಗಳು ಸೆ.9ರಿಂದ ಆರಂಭವಾಗಲಿವೆ ಎಂದು ಪ್ರೊ.ಪಿ.ಎಲ್‌.ಧರ್ಮ ತಿಳಿಸಿದರು.2023–24ಮನೇ ಸಾಲಿನಪದವಿ ಪರೀಕ್ಷೆಗಳ ಉತ್ತರ ಪತ್ರಿಕೆ ಮೌಲ್ಯಮಾಪನ ಕಾರ್ಯ ಪ್ರಗತಿಯಲ್ಲಿದ್ದು, ಶೇ 70ರಷ್ಟು ಪೂರ್ಣಗೊಂಡಿದೆ. ಮೌಲ್ಯಮಾಪಕರ ಬಾಕಿ ಗೌರವಧನ ಪಾವತಿಗೂ ಕ್ರಮವಹಿಸಿದ್ದೇವೆ’ ಎಂದು ಅವರು ಮಾಹಿತಿ ನೀಡಿದರು.

‘ಅಂಕಪಟ್ಟಿಗಳನ್ನು ಡಿಜಿಲಾಕರ್‌ನಲ್ಲಿ ಅಳವಡಿಸಬೇಕು. ಅದನ್ನು ಮುದ್ರಿಸಿಕೊಡಲು ಅವಕಾಶ ಇಲ್ಲ ಎಂದು ಸರ್ಕಾರ ಸೂಚನೆ ನೀಡಿದ್ದು ಅದನ್ನು ನಾವು ಪಾಲಿಸುತ್ತಿದ್ದೇವೆ. ಹಾಗಾಗಿ ವಿದ್ಯಾರ್ಥಿಗಳು ಅಂಕಪಟ್ಟಿಗಳನ್ನು ಡಿಜಿಲಾಕರ್‌ನಿಂದ ಡೌನ್‌ಲೋಡ್ ಮಾಡಿಕೊಳ್ಳಬೇಕು’ ಎಂದು ಪ್ರೊ.ಪಿ.ಎಲ್‌.ಧರ್ಮ ಸ್ಪಷ್ಟಪಡಿಸಿದರು. ‘ಎಲ್ಲ ಅಂಕಪಟ್ಟಿಗಳನ್ನು ನಾವು ನ್ಯಾಷನಲ್‌ ಅಕಾಡೆಮಿಕ್ ಡೆಪೊಸಿಟರಿ (ಎನ್‌ಎಡಿ) ಸಂಸ್ಥೆಗೆ ನೀಡುತ್ತೇವೆ. ಅವರೇ ಅದನ್ನು ಕಾಲಕಾಲಕ್ಕೆ ಡಿಜಿಲಾಕರ್ ವ್ಯವಸ್ಥೆಯಲ್ಲಿ ಅಳವಡಿಸುತ್ತಾರೆ. ರಾಷ್ಟ್ರೀಯ ಶಿಕ್ಷಣ ನೀತಿಯ ಪ್ರಕಾರ ಅಂಕಪಟ್ಟಿಯಲ್ಲಿ ಅಂಕಗಳನ್ನು ಮುದ್ರಿಸಲು ಅವಕಾಶವಿಲ್ಲ. ಕೇವಲ ದರ್ಜೆಯನ್ನು ಮಾತ್ರ ನಮೂದಿಸಲಾಗುತ್ತದೆ. ಹೊಸ ವ್ಯವಸ್ಥೆ ಬಗ್ಗೆ ಅರಿವಿಲ್ಲದೇ ಕೆಲ ವಿದ್ಯಾರ್ಥಿಗಳು ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ’ ಎಂದರು.

‘ಜೀವವಿಜ್ಞಾನ ಕೋರ್ಸ್‌ಗಳು ಒಂದೇ ವೇದಿಕೆಯಡಿ’

ಜೀವವಿಜ್ಞಾನಕ್ಕೆ ಸಂಬಂಧಿಸಿದ ಸಸ್ಯವಿಜ್ಞಾನ ಪ್ರಾಣಿವಿಜ್ಞಾನ  ಆಹಾರ ಮತ್ತು ಪೌಷ್ಟಿಕಾಂಶ ಮುಂತಾದ ಕೋರ್ಸ್‌ಗಳನ್ನು ಒಂದೇ ವೇದಿಕೆಯಡಿ ತಂದು ಈ ವಿಭಾಗವನ್ನು 2025–26ನೇ ಸಾಲಿನಿಂದ ‘ಬಯಾಲಾಜಿಕಲ್ ಸೈನ್ಸ್‌ ಸ್ಕೂಲ್‌’ ಎಂದು ಮರುರೂಪಿಸುವ ಚಿಂತನೆ ಇದೆ. ಈಗಿರುವ ಕೋರ್ಸ್‌ಗಳು ಹಾಗೂ ಅವುಗಳ ಹೆಸರು ಹಾಗೆಯೇ ಮುಂದುವರಿಯಲಿದೆ. ವಿಶ್ವವಿದ್ಯಾನಿಲಯವು ಹಿರಿಯ ಪ್ರಾಧ್ಯಾಪಕರ ಕೊರತೆಯನ್ನು ಎದುರಿಸುತ್ತಿದೆ. ಲಭ್ಯ ಇರುವ ಹಿರಿಯ ಪ್ರಾಧ್ಯಾಪಕರ ಜ್ಞಾನದಿಂದ ಎಲ್ಲ ಕೋರ್ಸ್‌ಗಳ ವಿದ್ಯಾರ್ಥಿಗಳೂ ಪ್ರಯೋಜನಪಡೆಯಲು ಇದರಿಂದ ಅವಕಾಶ ಸಿಗಲಿದೆ. ಕ್ರಮೇಣ ರಸಾಯನ ವಿಜ್ಷಾನಕ್ಕೆ ಸಂಬಂಧಿಸಿದ ಕೋರ್ಸ್‌ಗಳಲ್ಲೂ ಇದೇ ರೀತಿಯ ಮಾರ್ಪಾಡು ತರುವ ಚಿಂತನೆ ಇದೆ ಎಂದು ಕುಲಪತಿ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.