ಮಂಗಳೂರು: ಮಂಜೇಶ್ವರ ಬಂದರು ಉದ್ಘಾಟನೆ ಅಕ್ಟೋಬರ್ 1 ರಂದು ನಡೆಯಲಿದ್ದು, ಬೆಳಿಗ್ಗೆ 10.30ಕ್ಕೆ ನಡೆಯುವ ಸಮಾರಂಭದಲ್ಲಿ ವಿಡಿಯೊ ಕಾನ್ಫರೆನ್ಸ್ ಮೂಲಕ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಚಾಲನೆ ನೀಡುವರು. ಜೊತೆಗೆ ಕೊಯಿಲಾಂಡಿಯ ಬಂದರನ್ನೂ ಅವರು ಉದ್ಘಾಟಿಸುವರು.
ಕೇಂದ್ರ ಮೀನುಗಾರಿಕೆ ಸಚಿವ ಗಿರಿರಾಜ್ ಸಿಂಗ್, ಕೇರಳ ಮೀನುಗಾರಿಕೆ ಸಚಿವೆ ಮೆರ್ಸಿ ಕುಟ್ಟಿಯಮ್ಮ, ಕಂದಾಯ ಸಚಿವ ಇ.ಚಂದ್ರಶೇಖರನ್, ಸಂಸದ ರಾಜ್ ಮೋಹನ್ ಉಣ್ಣಿತ್ತಾನ್, ಶಾಸಕ ಎಂ.ಸಿ.ಕಮರುದ್ದೀನ್ ಪಾಲ್ಗೊಳ್ಳುವರು.
ಕಾಸರಗೋಡು ಜಿಲ್ಲೆಯ ಕೊಯಿಪ್ಪಾಡಿ, ಶಿರಿಯ, ಬಂಗ್ರ ಮಂಜೇಶ್ವರ ಮತ್ಸ್ಯ ಗ್ರಾಮಗಳ ಹತ್ತು ಸಾವಿರ ಮೀನುಗಾರರು ಈ ಬಂದರು ಯೋಜನೆಯ ಫಲಾನುಭವಿಗಳಾಗಿದ್ದಾರೆ. ಸ್ಥಳೀಯ 1,200ಕ್ಕೂ ಅಧಿಕ ಮೀನುಗಾರ ಕಾರ್ಮಿಕರಿಗೆ ಪ್ರತ್ಯಕ್ಷವಾಗಿ, 4,800 ಮಂದಿಗೆ ಪರೋಕ್ಷವಾಗಿ ಪ್ರಯೋಜನ ಲಭಿಸಲಿದೆ ಎಂದು ಬಂದರು ಇಲಾಖೆ ಕಾರ್ಯಕಾರಿ ಎಂಜಿನಿಯರ್ ಎ.ಮುಹಮ್ಮದ್ ಅಶ್ರಫ್ ತಿಳಿಸಿದ್ದಾರೆ.
ಮಂಜೇಶ್ವರ ಬಂದರು ಯೋಜನೆ ಒಟ್ಟು ₹48.80 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿದ್ದು, ಶೇ 75 ರಷ್ಟು ಕೇಂದ್ರ ಸರ್ಕಾರ ಹಾಗೂ ಶೇ 25 ರಾಜ್ಯ ಸರ್ಕಾರದ ಅನುದಾನ ನೀಡುತ್ತಿವೆ. ಈಗಾಗಲೇ ₹45.71 ಕೋಟಿ ವೆಚ್ಚ ನಡೆಸಲಾಗಿದೆ. ಮುಸೋಡಿ ಪ್ರದೇಶದಲ್ಲಿ 8.92 ಎಕರೆ, ಹೊಸಬೆಟ್ಟು ಪ್ರದೇಶದಲ್ಲಿ 2.85 ಎಕರೆ ಸೇರಿದಂತೆ 11.77 ಎಕರೆ ಜಾಗದಲ್ಲಿ ನಿರ್ಮಾಣ ಚಟುವಟಿಕೆಗಳಿಗಾಗಿ ಡ್ರೆಜ್ಜಿಂಗ್ ನಡೆಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.