ADVERTISEMENT

ಮಂಗಳೂರು: ವೆನ್ಲಾಕ್ ಆಸ್ಪತ್ರೆಯಲ್ಲಿ ಬಂಧಿಸಿದ್ದವರ ಪೈಕಿ 40 ಮಂದಿ ಬಿಡುಗಡೆ

ಮಾನ್ಯತಾ ಪತ್ರ ಪರಿಶೀಲನೆ

​ಪ್ರಜಾವಾಣಿ ವಾರ್ತೆ
Published 20 ಡಿಸೆಂಬರ್ 2019, 7:11 IST
Last Updated 20 ಡಿಸೆಂಬರ್ 2019, 7:11 IST
ಮಂಗಳೂರುನಲ್ಲಿ ಪೊಲೀಸರು
ಮಂಗಳೂರುನಲ್ಲಿ ಪೊಲೀಸರು   

ಮಂಗಳೂರು:ಪತ್ರಕರ್ತರ ಸೋಗಿನಲ್ಲಿ ವೆನ್ಲಾಕ್ ಆಸ್ಪತ್ರೆಗೆ ನುಗ್ಗಿದ್ದಾರೆ ಎಂದು ಆರೋಪಿಸಿ 50 ಜನರನ್ನು ವಶಕ್ಕೆ ಪಡೆದಿದ್ದ ಪೊಲೀಸರು, ಮಾಧ್ಯಮಗಳ ಗುರುತಿನ ಚೀಟಿ ಹಾಗೂ ಸರ್ಕಾರ ನೀಡಿರುವ ಮಾನ್ಯತಾ ಪತ್ರವನ್ನು ಪರಿಶೀಲಿಸಿ 40 ಮಂದಿಯನ್ನು ಬಿಡುಗಡೆ ಮಾಡಿದ್ದಾರೆ.

ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಗುರುವಾರ ನಡೆದ ಪ್ರತಿಭಟನೆ ವೇಳೆ ಉಂಟಾದ ಘರ್ಷಣೆಯಲ್ಲಿ ಪೊಲೀಸರ ಗುಂಡಿಗೆ ಇಬ್ಬರು ಮೃತಪಟ್ಟಿದ್ದರು. ನ್ಯೂಸ್‌ 24, ಮೀಡಿಯಾ ಒನ್‌ ಹಾಗೂ ಏಷಿಯಾನೆಟ್‌ ಸೇರಿದಂತೆ ಕೇರಳದ ಕೆಲವು ಮಾಧ್ಯಮ ಸಂಸ್ಥೆಗಳ ಪ್ರತಿನಿಧಿಗಳು ಮಂಗಳೂರಿನಲ್ಲಿ ವರದಿ ಮಾಡಲು ಬಂದಿದ್ದರು. ವೆನ್ಲಾಕ್ ಆಸ್ಪತ್ರೆಯಲ್ಲಿ ಮುಂಜಾನೆ 50 ಜನರನ್ನು ಪೊಲೀಸರು ಬಂಧಿಸಿದ್ದರು. ಈ ಪೈಕಿ ಸರ್ಕಾರ ನೀಡಿರುವ ಮಾನ್ಯತಾ ಪತ್ರ ಪರಿಶೀಲಿಸಿ 40 ಜನರನ್ನು ಬಿಡುಗಡೆ ಮಾಡಲಾಗಿದೆ.

ಆದರೆ, ಮಾನ್ಯತಾ ಪತ್ರ ತೋರಿಸಲು ವಿಫಲರಾದ 10 ಜನರನ್ನು ರಾಜ್ಯ ಮೀಸಲು ಪೊಲೀಸ್‌ ಪಡೆಯ ವಾಹನದಲ್ಲಿ ಕೂರಿಸಲಾಗಿದೆ.

ಕೇರಳದಿಂದ ಬಂದಿರುವ 50 ಜನರು ಮಾರಕಾಸ್ತ್ರಗಳನ್ನು ಹೊಂದಿದ್ದರು ಎಂದು ಪೊಲೀಸರು ತಿಳಿಸಿದ್ದರು. ಆದರೆ, ಅವರು ಮಾರಕಾಸ್ತ್ರಗಳನ್ನು ಹೊಂದಿರಲಿಲ್ಲ ಎಂದು ಮೂಲಗಳಿಂದ ತಿಳಿದು ಬಂದಿದೆ.ನಿನ್ನೆ ನಡೆದ ಗೋಲೀಬಾರ್‌ನಲ್ಲಿ ಮೃತಪಟ್ಟವರ ಶವಗಳನ್ನು ವೆನ್ಲಾಕ್ ಆಸ್ಪತ್ರೆಯಲ್ಲಿ ಇರಿಸಲಾಗಿದ್ದು, ಮೃತಪಟ್ಟವರ ಸಂಬಂಧಿಗಳ ಸಂದರ್ಶನ ನಡೆಸಲು ಮಾಧ್ಯಮ ಪ್ರತಿನಿಧಿಗಳು ಬಂದಿದ್ದರು ಎನ್ನಲಾಗಿದೆ.

'ಮಾಧ್ಯಮ ಪ್ರತಿನಿಧಿ ಎಂಬುದಕ್ಕೆ ಅಧಿಕೃತ ಗುರುತಿನ ಚೀಟಿ ಹೊಂದಿರದ, ಯಾವುದೇ ಮುಖ್ಯವಾಹಿನಿ ಮಾಧ್ಯಮಗಳ ಪ್ರತಿನಿಧಿಗಳಲ್ಲದ ಹಾಗೂ ವರದಿಗಾರಿಕೆಗೆ ಸಂಬಂಧವೇ ಇಲ್ಲದವರನ್ನು ಪ್ರಶ್ನಿಸಲಾಗುತ್ತಿದೆ' ಎಂದು ಮಂಗಳೂರು ಪೊಲೀಸ್‌ ಕಮಿಷನರ್‌ ಪಿ.ಎಸ್‌.ಹರ್ಷ ಹೇಳಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಕೋಮು ಪ್ರಚೋದಕ ಸಂದೇಶಗಳು ಹರಿದಾಡುತ್ತಿದೆ. ಈ ಹಿನ್ನಲೆಯಲ್ಲಿ ಜಿಲ್ಲೆಯಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಮಂಗಳೂರು ಕಮಿಷನರೇಟ್‌ ವ್ಯಾಪ್ತಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 48 ಗಂಟೆಗಳ ವರೆಗೆ ಇಂಟರ್‌ನೆಟ್‌ ಸೇವೆ ಸ್ಥಗಿತಗೊಳಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.