ADVERTISEMENT

ಸಾಮಾಜಿಕ ಅಭದ್ರತೆ: ಚಳವಳಿ ಹತ್ತಿಕ್ಕುವ ಯತ್ನ - ಸಿಐಟಿಯು ನೇತೃತ್ವದಲ್ಲಿ ಮೆರವಣಿಗೆ

ಸಿಐಟಿಯು ನೇತೃತ್ವದಲ್ಲಿ ಮೆರವಣಿಗೆ: ಕಾರ್ಮಿಕ ದಿನಾಚರಣೆಯಲ್ಲಿ ಮುಖಂಡರ ಆರೋಪ

​ಪ್ರಜಾವಾಣಿ ವಾರ್ತೆ
Published 1 ಮೇ 2024, 12:21 IST
Last Updated 1 ಮೇ 2024, 12:21 IST
<div class="paragraphs"><p>ವಿಶ್ವ ಕಾರ್ಮಿಕ ದಿನಾಚರಣೆ ಅಂಗವಾಗಿ ಮಂಗಳೂರಿನ ಜಿಲ್ಲಾಧಿಕಾರಿ ಕಚೇರಿಯಿಂದ ಕ್ಲಾಕ್ ಟವರ್‌ವರೆಗೆ ಸಿಐಟಿಯು ನೇತೃತ್ವದಲ್ಲಿ ವಿವಿಧ&nbsp;ಸಂಘಟನೆಗಳ ಸದಸ್ಯರು ಮೆರವಣಿಗೆ ನಡೆಸಿದರು </p></div>

ವಿಶ್ವ ಕಾರ್ಮಿಕ ದಿನಾಚರಣೆ ಅಂಗವಾಗಿ ಮಂಗಳೂರಿನ ಜಿಲ್ಲಾಧಿಕಾರಿ ಕಚೇರಿಯಿಂದ ಕ್ಲಾಕ್ ಟವರ್‌ವರೆಗೆ ಸಿಐಟಿಯು ನೇತೃತ್ವದಲ್ಲಿ ವಿವಿಧ ಸಂಘಟನೆಗಳ ಸದಸ್ಯರು ಮೆರವಣಿಗೆ ನಡೆಸಿದರು

   

–ಪ್ರಜಾವಾಣಿ ಚಿತ್ರ

ಮಂಗಳೂರು: ಅಂತರರಾಷ್ಟ್ರೀಯ ಕಾರ್ಮಿಕರ ದಿನಾಚರಣೆಯ ಅಂಗವಾಗಿ ಸಿಐಟಿಯು ನೇತೃತ್ವದಲ್ಲಿ ವಿವಿಧ ಕಾರ್ಮಿಕ ಸಂಘಟನೆಗಳ ಸದಸ್ಯರು ಬುಧವಾರ ನಗರದಲ್ಲಿ ಮೆರವಣಿಗೆ ನಡೆಸಿದರು.

ADVERTISEMENT

ನಂತರ ನಡೆದ ಸಭೆಯಲ್ಲಿ ಮಾತನಾಡಿದ ಸಿಐಟಿಯು ಜಿಲ್ಲಾ ಸಮಿತಿ ಅಧ್ಯಕ್ಷ ಬಾಲಕೃಷ್ಣ ಶೆಟ್ಟಿ, ‘ಕೇಂದ್ರ ಸರ್ಕಾರವು ಧರ್ಮದ ಆಧಾರದಲ್ಲಿ ಕಾರ್ಮಿಕರ ಚಳವಳಿ ಹತ್ತಿಕ್ಕುವ ಕೆಲಸ ಮಾಡುತ್ತಿದೆ. ಕೋಮುವಾದದ ಮೂಲಕ ಕಾರ್ಮಿಕರ ವಿಭಜನೆಗೆ ಪ್ರಯತ್ನಿಸುತ್ತಿದ್ದು, ಕಾರ್ಮಿಕರ ಒಗ್ಗಟ್ಟು ಪ್ರದರ್ಶಿಸುವ ಮೂಲಕ ಸೆಡ್ಡು ಹೊಡೆಯಬೇಕಾಗಿದೆ’ ಎಂದರು.

ಹೋರಾಟದ ಫಲವಾಗಿ ಕಾರ್ಮಿಕ ಕಾನೂನು ರೂಪುಗೊಂಡಿದೆ. ಹಲವಾರು ಕಾರ್ಮಿಕರ ತ್ಯಾಗದಿಂದ ಕಾರ್ಮಿಕರು ಸೌಲಭ್ಯ ಪಡೆದುಕೊಂಡಿದ್ದಾರೆ. ಆದರೆ, ಈಗ ಮತ್ತೆ ಬಂಡವಾಳಶಾಹಿಗಳ ಪರ ಇರುವ ಸರ್ಕಾರವು ಕಾರ್ಮಿಕರ ಹಕ್ಕು ಕಸಿಯುವ ಯತ್ನ ನಡೆಸಿದೆ. ನಿರುದ್ಯೋಗ ಸಮಸ್ಯೆ ಹೆಚ್ಚಿದೆ. ದೇಶದ ಕಾರ್ಮಿಕರಿಗೆ ಸಾಮಾಜಿಕ ಭದ್ರತೆ ಇಲ್ಲದಂತಾಗಿದೆ ಎಂದು ಆರೋಪಿದರು.

ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿಯ ರಾಜ್ಯ ಸಹ ಸಂಚಾಲಕ ಕೃಷ್ಣಪ್ಪ ಕೊಂಚಾಡಿ ಮಾತನಾಡಿ, ‘139 ವರ್ಷಗಳ ಹಿಂದೆ ಅಮೆರಿಕದ ಚಿಕಾಗೊದಲ್ಲಿ ಕಾರ್ಮಿಕರ ನಡೆಸಿದ ಹೋರಾಟ, 16 ಗಂಟೆಗಳ ದುಡಿಮೆಯ ಅವಧಿ 8 ಗಂಟೆಗೆ ಇಳಿಕೆಯಾಯಿತು, ಜೊತೆಗೆ ಮೇ 1ರಂದು ಕಾರ್ಮಿಕ ದಿನ ಆಚರಣೆ ಆರಂಭವಾಯಿತು. ಕಾರ್ಮಿಕ ವರ್ಗವು ದೇಶಪ್ರೇಮವನ್ನು ಬೋಧಿಸುತ್ತದೆಯೇ ವಿನಾ ಬಂಡವಾಳಶಾಹಿಗಳ ಲಾಭ– ನಷ್ಟ ಲೆಕ್ಕಾಚಾರದ ಕಪಟ ದೇಶಪ್ರೇಮವನ್ನಲ್ಲ’ ಎಂದರು.

ಸಿಐಟಿಯು ಜಿಲ್ಲಾ ಸಮಿತಿ ಪ್ರಧಾನ ಕಾರ್ಯದರ್ಶಿ ಸುನಿಲ್ ಕುಮಾರ್ ಬಜಾಲ್ ಮಾತನಾಡಿ, ‘ಕೇರಳ ಇನ್ನಿತರ ಕಡೆಗಳಲ್ಲಿ ಕಾರ್ಮಿಕರ ನೇತೃತ್ವದ ಸರ್ಕಾರ ಇದ್ದಲ್ಲಿ ಕಾರ್ಮಿಕರ ಹಕ್ಕು ರಕ್ಷಣೆ ಆಗುತ್ತಿದೆ. ಆದರೆ, ಕೇಂದ್ರ ಸರ್ಕಾರದ ದುರಾಡಳಿತದಿಂದ ಬಂಡವಾಳಶಾಹಿಗಳು ಬಂಡೆಗಲ್ಲಿನಷ್ಟು ಗಟ್ಟಿಯಾಗಿದ್ದಾರೆ. ಕಾರ್ಮಿಕರ ಹಕ್ಕು ರಕ್ಷಿಸಿಕೊಳ್ಳಲು ನಾವು ಇನ್ನಷ್ಟು ಬಲಗೊಳ್ಳಬೇಕಾಗಿದೆ’ ಎಂದರು.

ಮೇ ದಿನಾಚರಣೆ ಸಮಿತಿ ಗೌರವಾಧ್ಯಕ್ಷ ಬಿ.ಎನ್. ದೇವಾಡಿಗ ಅಧ್ಯಕ್ಷತೆ ವಹಿಸಿದ್ದರು. ಸಂಘಟನೆಯ ಪ್ರಮುಖರಾದ ಬಿ.ಕೆ ಇಮ್ತಿಯಾಝ್, ಮಹಮ್ಮದ್ ಮುಸ್ತಾಫ, ರವಿಚಂದ್ರ ಕೊಂಚಾಡಿ, ಯು.ಬಿ. ಲೋಕಯ್ಯ, ಜಯಂತಿ ಶೆಟ್ಟಿ, ಭಾರತಿ ಬೋಳಾರ ಇದ್ದರು.

ಬಿರು ಬಿಸಿಲಿನಲ್ಲೂ ಘೋಷಣೆ ಕೂಗುತ್ತ ಮೆರವಣಿಗೆ ಮೋದಿ ನೇತೃತ್ವದ ಸರ್ಕಾರದ ವಿರುದ್ಧ ಆಕ್ರೋಶ ಒಗ್ಗಟ್ಟಿನ ಬಲ ಪ್ರದರ್ಶಿಸಲು ಕರೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.