ಮಂಗಳೂರು: ‘ಏಕ ಬಳಕೆ ಪ್ಲಾಸ್ಟಿಕ್ ನಿಷೇಧವಿದ್ದರೂ ಪಾಲಿಕೆಯ ವ್ಯಾಪ್ತಿಯಲ್ಲಿ ಅವುಗಳ ಬಳಕೆ ವ್ಯಾಪಕವಾಗಿದೆ. ಇದನ್ನು ಆರು ತಿಂಗಳ ಒಳಗೆ ಪರಿಣಾಮಕಾರಿಯಾಗಿ ನಿಯಂತ್ರಿಸಲು ಯೋಜನೆ ರೂಪಿಸಿದ್ದೇವೆ’ ಎಂದು ಪಾಲಿಕೆಯ ಪರಿಸರ ಎಂಜಿನಿಯರ್ ದಯಾನಂದ ಪೂಜಾರಿ ತಿಳಿಸಿದರು.
ನಿಷೇಧಿತ ಏಕ ಬಳಕೆ ಪ್ಲಾಸ್ಟಿಕ್ ವಸ್ತುಗಳ ನಿಷೇಧ ಜಾರಿ ಹಾಗೂ ಅವುಗಳಿಗೆ ಪರ್ಯಾಯವಾಗಿ ಇತರ ಪರಿಸರ ಸ್ನೇಹಿ ವಸ್ತುಗಳ ಬಳಕೆ ಕುರಿತು ಪಾಲಿಕೆ ವತಿಯಿಂದ ಗುರುವಾರ ಏರ್ಪಡಿಸಿದ್ದ ಮಾಹಿತಿ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.
‘ನಿಷೇಧಿತ ಪ್ಲಾಸ್ಟಿಕ್ ಉತ್ಪನ್ನಗಳನ್ನು ಮಾರಾಟ ಮಾಡುವ ಹಾಗೂ ಅವುಗಳನ್ನು ಗ್ರಾಹಕರಿಗೆ ನೀಡುವ ಅಂಗಡಿಗಳಿಗೆ ದಾಳಿ ನಡೆಸಿ, ಮಾಲೀಕರಿಗೆ ದಂಡ ವಿಧಿಸಲಿದ್ದೇವೆ. ಇದಕ್ಕಾಗಿ ವಿಶೇಷ ತಂಡಗಳನ್ನು ರಚಿಸಿದ್ದೇವೆ’ ಎಂದರು.
ಡಯಾಪರ್, ಸ್ಯಾನಿಟರಿ ಪ್ಯಾಡ್‌ಗಳನ್ನು ಏನೂ ಮಾಡಲಾಗುತ್ತಿಲ್ಲ. ದುರ್ವಾಸನೆಯಿಂದ ಕೂಡಿರುವ ಇವುಗಳ ವಿಲೇವಾರಿಯೂ ಕಷ್ಟ ಎಂದು ಹಸಿರು ದಳದ ನಾಗರಾಜ್ ಗಮನ ಸೆಳೆದರು.
‘ಇವುಗಳನ್ನು ಇನ್ಸಿನರೇಟರ್‌ಗಳಲ್ಲಿ ಸುಡುವುದೊಂದೇ ಇದಕ್ಕೆ ಪರಿಹಾರ. ಸದ್ಯಕ್ಕೆ ಪಾಲಿಕೆಯಲ್ಲಿಈ ವ್ಯವಸ್ಥೆ ಇಲ್ಲ’ ಎಂದು ಪರಿಸರ ಎಂಜಿನಿಯರ್ ತಿಳಿಸಿದರು.
‘ಮದುವೆ ಮತ್ತಿತರ ಸಮಾರಂಭಗಳಲ್ಲಿ ನಿಷೇಧಿತ ಏಕ ಬಳಕೆ ಪ್ಲಾಸ್ಟಿಕ್ ಅನ್ನು ಅನಗತ್ಯವಾಗಿ ಬಳಸಲಾಗುತ್ತಿದೆ. ಕೇಟರಿಂಗ್ನವರಿಗೆ, ಹಾಲ್‌ಗಳ ಮಾಲೀಕರಿಗೆ ದಂಡ ವಿಧಿಸಿ ಇದಕ್ಕೆ ಕಡಿವಾಣ ಹಾಕಬೇಕು’ ಎಂದು ನಾಗರಾಜ್ ಆಗ್ರಹಿಸಿದರು.
ಮೇಯರ್ ಮನೋಜ್ ಕುಮಾರ್ ಕೊಡಿಕಲ್, ಉಪಮೇಯರ್ ಭಾನುಮತಿ ಪಿ.ಎಸ್., ಸ್ಥಾಯಿ ಸಮಿತಿ ಅಧ್ಯಕ್ಷರಾದ ಮನೋಹರ ಕದ್ರಿ, ವೀಣಾ ಮಂಗಳ, ಸುಮಿತ್ರಾ ಮತ್ತಿತರರು ಭಾಗವಹಿಸಿದ್ದರು.
ವಿಶ್ವಸಂಸ್ಥೆಯ ಪರಿಸರ ಯೋಜನೆಯ ಅಧಿಕಾರಿ ಸುಮಿತ್ ಶರ್ಮ, ನ್ಯಾಷನಲ್ ಪ್ರೊಡಕ್ಟಿವಿಟಿ ಕೌನ್ಸಿಲ್ ಉಪನಿರ್ದೇಶಕ ವಿಜಯ್ ಕುಮಾರ್ ನೆಹ್ರಾ ಅವರು ಏಕ ಬಳಕೆ ಪ್ಲಾಸ್ಟಿಕ್ ನಿಷೇಧದ ಮಹತ್ವ ಹಾಗೂ ಪರ್ಯಾಯ ಸಾಧ್ಯತೆಗಳ ಬಗ್ಗೆ ವಿಡಿಯೊ ಕಾನ್ಫರೆನ್ಸ್ ಮೂಲಕ ವಿವರಿಸಿದರು.
ಪ್ಲಾಸ್ಟಿಕ್ ತೊಟ್ಟೆಗಳಿಂದಾಗಿ ನಗರದಲ್ಲಿ ಕಸದ ರಾಶಿ (ಬ್ಲ್ಯಾಕ್ ಸ್ಪಾಟ್) ನಿರ್ಮಾಣವಾಗುತ್ತಿವೆ. ಇವುಗಳ ನಿಷೇಧಕ್ಕೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಿಗೀತಾಸೂರ್ಯ ಎಪಿಡಿ ಪ್ರತಿಷ್ಠಾನ
ನಿಷೇಧಿತ ಪ್ಲಾಸ್ಟಿಕ್ ಉತ್ಪಾದನೆಗೇ ಅವಕಾಶ ನೀಡಬಾರದು. ಇವುಗಳನ್ನು ಉತ್ಪಾದಿಸುವ ಕಾರ್ಖಾನೆಗಳನ್ನು ಮುಚ್ಚಿಸಿದರೆ ಏಕ ಬಳಕೆ ಪ್ಲಾಸ್ಟಿಕ್ ಸಮಸ್ಯೆಯೇ ಉದ್ಭವಿಸದುಜಗದೀಶ್ ಶೆಟ್ಟಿ ಪಾಲಿಕೆ ಸದಸ್ಯ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.