ADVERTISEMENT

ಮೆಸ್ಕಾಂ | ವಿದ್ಯುತ್‌ ಅವಘಡ; 4 ವರ್ಷದಲ್ಲಿ 211 ಬಲಿ

ಮೆಸ್ಕಾಂ ವ್ಯಾಪ್ತಿಯ ನಾಲ್ಕು ಜಿಲ್ಲೆಗಳಲ್ಲಿ 2024–25ರಲ್ಲಿ 18 ಮಂದಿ ಸಾವು

ಪ್ರವೀಣ್‌ ಕುಮಾರ್‌ ಪಿ.ವಿ
Published 3 ಜುಲೈ 2024, 6:40 IST
Last Updated 3 ಜುಲೈ 2024, 6:40 IST
ಪದ್ಮಾವತಿ ಡಿ.
ಪದ್ಮಾವತಿ ಡಿ.   

ಮಂಗಳೂರು: ಸುಧಾರಿತ ತಂತ್ರಜ್ಞಾನಗಳ ಅಳವಡಿಕೆ ಬಳಿಕವೂ ವಿದ್ಯುದಾಘಾತದ ಸಾವುಗಳನ್ನು ತಡೆಯಲು ಸಾಧ್ಯವಾಗದಿರುವುದು ಮೆಸ್ಕಾಂ ಅಧಿಕಾರಿಗಳಿಗೆ ತಲೆನೋವಾಗಿದೆ. ಮೆಸ್ಕಾಂ ವ್ಯಾಪ್ತಿಯ ನಾಲ್ಕು ವೃತ್ತಗಳಲ್ಲಿ ಈಚಿನ ನಾಲ್ಕು ವರ್ಷಗಳಲ್ಲಿ ವಿದ್ಯುತ್ ಅವಘಡಗಳಿಂದಾಗಿ  211 ಮಂದಿ ಜೀವ ಕಳೆದುಕೊಂಡಿದ್ದಾರೆ.

ವಿದ್ಯುತ್‌ ಅವಘಡಗಳಿಂದಾಗಿ ಮೃತಪಟ್ಟವರಲ್ಲಿ 18 ಮಂದಿ ಇಂಧನ ಇಲಾಖೆ ಸಿಬ್ಬಂದಿಯಾಗಿದ್ದು, ಇನ್ನುಳಿದ 193 ಮಂದಿ ಸಾರ್ವಜನಿಕರು. 2024–25ನೇ ಸಾಲಿನಲ್ಲಿ ಇದುವರೆಗೆ 18 ಮಂದಿ ಸಾವಿಗೀಡಾಗಿದ್ದು, ಇವರಲ್ಲಿ ಒಬ್ಬರು ಇಂಧನ ಇಲಾಖೆ ಸಿಬ್ಬಂದಿ.

ದಕ್ಷಿಣ ಕನ್ನಡ, ಉಡುಪಿ, ಶಿವಮೊಗ್ಗ ಹಾಗೂ ಚಿಕ್ಕಮಗಳೂರು ಜಿಲ್ಲೆಗಳು ಮೆಸ್ಕಾಂ ವ್ಯಾಪ್ತಿಯಲ್ಲಿವೆ. ಇವುಗಳಲ್ಲಿ ವಿದ್ಯುದಾಘಾತದಿಂದ ಉಂಟಾಗುವ ಸಾವುಗಳ ಸಂಖ್ಯೆ ಚಿಕ್ಕಮಗಳೂರು ಜಿಲ್ಲೆಯಲ್ಲಿ ಜಾಸ್ತಿ ಇದ್ದು, ಇಲ್ಲಿ ನಾಲ್ಕು ವರ್ಷಗಳಲ್ಲಿ ಒಟ್ಟು 82 ಮಂದಿ ವಿದ್ಯುದಾಘಾತದಿಂದ ಮೃತಪಟ್ಟಿದ್ದಾರೆ. ಇನ್ನುಳಿದಂತೆ ದಕ್ಷಿಣ ಕನ್ನಡದಲ್ಲಿ 47, ಉಡುಪಿಯಲ್ಲಿ 22, ಶಿವಮೊಗ್ಗದಲ್ಲಿ 60  ಮಂದಿ ಅಸುನೀಗಿದ್ದಾರೆ. ಚಿಕ್ಕಮಗಳೂರು ಜಿಲ್ಲೆಯಲ್ಲಿ 2024–25ನೇ ಸಾಲಿನಲ್ಲಿ ಮೇ ವರೆಗೆ ಇಲಾಖೆಯ ಒಬ್ಬ ಸಿಬ್ಬಂದಿ ಸಹಿತ 12 ಮಂದಿ ಕೇವಲ ಮೂರು ತಿಂಗಳುಗಳಲ್ಲಿ ವಿದ್ಯುದಾಘಾತಕ್ಕೆ ಬಲಿಯಾಗಿದ್ದಾರೆ.

ADVERTISEMENT

116 ಗಾಯಾಳುಗಳು:  ಮೆಸ್ಕಾಂ ವ್ಯಾಪ್ತಿಯಲ್ಲಿ ನಾಲ್ಕು ವರ್ಷಗಳಲ್ಲಿ ಸಂಭವಿಸಿದ ವಿದ್ಯುತ್ ಅವಘಡಗಳಿಂದಾಗಿ 116 ಮಂದಿ ಗಾಯಾಳುಗಳಾಗಿದ್ದಾರೆ. ಇವರಲ್ಲಿ 59 ಮಂದಿ ಇಲಾಖೆಯ ಸಿಬ್ಬಂದಿಯಾದರೆ, ಇನ್ನುಳಿದ 57 ಮಂದಿ ಸಾರ್ವಜನಿಕರು.

ಬಹುತೇಕ ಸಾವುಗಳು ಮಳೆಗಾಲದಲ್ಲೇ ಸಂಭವಿಸುತ್ತಿವೆ. ಬೇಸಿಗೆಯಲ್ಲಿ ಮಾನವ ನಿರ್ಲಕ್ಷ್ಯದಿಂದಾಗಿ ಸಂಭವಿಸಿದ ವಿದ್ಯುತ್‌ ಅವಘಡದಿಂದಲೂ ಅನೇಕರು ಪ್ರಾಣ ಕಳೆದುಕೊಂಡಿದ್ದು, ಇನ್ನು ಕೆಲವರು ಗಾಯಾಳುಗಳಾಗಿದ್ದಾರೆ.

‘ಜೋರಾಗಿ ಗಾಳಿ ಮಳೆಯಾದಾಗ ಮರಗಳು ಅಥವಾ ಕೊಂಬೆಗಳು ವಿದ್ಯುತ್ ಮಾರ್ಗದ ಮೇಲೆ ಬಿದ್ದು, ವಿದ್ಯುತ್‌ ತಂತಿ ತುಂಡಾಗಿ ಬಿಳುತ್ತವೆ. ವಿದ್ಯುತ್ ಪ್ರವಹಿಸುತ್ತಿರುವ ಅಂತಹ ತಂತಿಗಳನ್ನು  ಸ್ಪರ್ಶಿಸುವುದರಿಂದ ಹೆಚ್ಚಿನ ಸಾವುಗಳು ಸಂಭವಿಸುತ್ತಿವೆ. ಮಳೆಗಾಲಕ್ಕೆ ಮುನ್ನವೇ ವಿದ್ಯುತ್‌ ತಂತಿಗಳ ಮೇಲೆ ಬಿಳುವ ಸಾಧ್ಯತೆ ಇರುವ ಕೊಂಬೆಗಳನ್ನು ಕತ್ತರಿಸಲು ಹಾಗೂ  ಅಪಾಯಕಾರಿ ಮರಗಳ ತೆರವಿಗೂ ಕ್ರಮ ವಹಿಸುತ್ತೇವೆ. ಅದರೂ ಕೆಲವೊಮ್ಮ ಮಳೆ–ಗಾಳಿಯ ಅಬ್ಬರ ಜಾಸ್ತಿ ಇದ್ದಾಗ ಪರಿಸ್ಥಿತಿ ಕೈಮೀರಿ ಸಾವುಗಳು ಸಂಭವಿಸುತ್ತವೆ’ ಎಂದು ಮೆಸ್ಕಾಂ ವ್ಯವಸ್ಥಾಪಕ ನಿರ್ದೇಶಕಿ ಪದ್ಮಾವತಿ ಡಿ. ಅವರು ‘ಪ್ರಜಾವಾಣಿ’ಗೆ  ಪ್ರತಿಕ್ರಿಯಿಸಿದರು. 

‘ಮಳೆಗಾಲದಲ್ಲಿ ಹೈ ಟೆನ್ಷನ್ (ಎಚ್‌.ಟಿ) ವಿದ್ಯುತ್‌ ಮಾರ್ಗಗಳಲ್ಲಿ ವಿದ್ಯುತ್‌ ತಂತಿ ತುಂಡಾಗಿ ಬಿದ್ದರೆ ತಕ್ಷಣ ಆ ಮಾರ್ಗದಲ್ಲಿ ವಿದ್ಯುತ್‌ ಸಂಪರ್ಕ ಕಡಿತಗೊಳ್ಳುವ ವ್ಯವಸ್ಥೆ ಇದೆ. ಆದರೆ, ಲೋ ಟೆನ್ಷನ್‌  (ಎಲ್‌.ಟಿ) ಮಾರ್ಗಗಳಲ್ಲಿ ಇಂತಹ ವ್ಯವಸ್ಥೆ ಇಲ್ಲ. ಪ್ರಸ್ತುತ ನಗರ ಪ್ರದೇಶಗಳಲ್ಲಿ ಬೀದಿ ದೀಪಗಳಿಗೆ ಬಳಕೆಯಾಗುವ ಎಲ್‌ಟಿ ಮಾರ್ಗಗಳಿಗೂ ಆಯಾ ಸ್ಥಳೀಯ ನಗರಾಡಳಿತ ಸಂಸ್ಥೆಗಳ ವತಿಯಿಂದ ಟ್ರಿಪರ್‌ಗಳನ್ನು (ಅರ್ಥ್‌ ಲೀಕೇಜ್ ಸರ್ಕೀಟ್‌ ಬ್ರೇಕರ್‌) ಅಳವಡಿಸಲು ಕ್ರಮ ವಹಿಸಲಾಗುತ್ತಿದೆ’ ಎಂದು ಅವರು ತಿಳಿಸಿದರು.

‘ವಿದ್ಯುತ್ ಅವಘಡಗಳನ್ನು ತಪ್ಪಿಸಲು ಅಗತ್ಯ ಇರುವಲ್ಲಿ ವಿದ್ಯುತ್ ಕಂಬಗಳನ್ನು, ಶಿಥಿಲಗೊಂಡ ವಿದ್ಯುತ್ ತಂತಿಗಳನ್ನು ಬದಲಾಯಿಸಲಾಗುತ್ತಿದೆ. ವಿದ್ಯುತ್‌ ತಂತಿಗಳು ಜೋತು ಬಿದ್ದಿರುವ ಕಡೆ ನಡುವೆ ಹೆಚ್ಚುವರಿ ವಿದ್ಯುತ್ ಕಂಬಗಳನ್ನು ಅಳವಡಿಸಲಾಗುತ್ತಿದೆ. ಕಟ್ಟಡಗಳ ಸಮೀಪದಲ್ಲಿರುವ ಅಥವಾ ಕಟ್ಟಡಗಳ ಮೇಲೆ ಕೈಗೆಟುವಂತಿರುವ ವಿದ್ಯುತ್ ತಂತಿಗಳನ್ನು ಸ್ಥಳಾಂತರಿಸಲಾಗುತ್ತಿದೆ. ಅರ್ಥಿಂಗ್ ವ್ಯವಸ್ಥೆಯ ಲೋಪಗಳ ದುರಸ್ತಿಗೂ ಕ್ರಮ ವಹಿಸಲಾಗುತ್ತಿದೆ’ ಎಂದು ಅವರು ಮಾಹಿತಿ ನೀಡಿದರು.

‘ಮಳೆಗಾಲಕ್ಕೆ ಮುನ್ನ ಮರದ ಅಪಾಯಕಾರಿ ಕೊಂಬೆಗಳನ್ನು ಕತ್ತರಿಸಲು ಪ್ರತಿ ಸೆಕ್ಷನ್‌ ಮತ್ತು ಸೇವಾ ಕೇಂದ್ರಗಳಿಗೆ ತಲಾ ಎರಡು ಟೆಲೆಸ್ಕೋಪಿಕ್ ಟ್ರೀ ಪ್ರೂನರ್‌ಗಳಂತೆ ಮೆಸ್ಕಾ ವ್ಯಾಪ್ತಿಯ ನಾಲ್ಕು ವೃತ್ತಗಳಿಗೆ  ಒಟ್ಟು 503 ಟ್ರೀ ಪ್ರೂನರ್‌ಗಳನ್ನು ಒದಗಿಸಲಾಗಿದೆ. ಪವರ್‌ ಮೆನ್‌ಗಳಿಗೆ 2,160 ಟೆಲೆಸ್ಕೋಪಿಕ್‌ ಡಿಸ್‌ಚಾರ್ಜ್ ರಾಡ್‌ಗಳು,  3400 ಮಂದಿಗೆ ಸುರಕ್ಷತಾ ಹೆಲ್ಮೆಟ್‌, ಪ್ರತಿಫಲಿಸುವ ಜಾಕೆಟ್‌, ರಬ್ಬರ್  ಕೈಗವಸು, ಟೂಲ್‌ಕಿಟ್‌, 4200 ರೇನ್‌ ಕೋಟ್‌, 610 ಸುರಕ್ಷತಾ ಕೋನ್‌ಗಳನ್ನು, 710 ಎಲ್‌ಇಡಿ ಹ್ಯಾಂಡ್‌ ಟಾರ್ಚ್‌, 710 ಅಲ್ಯುಮಿನಿಯಂ ಟೆಲೆಸ್ಕೋಪಿಕ್ ಏಣಿಗಳನ್ನು ಪೂರೈಸಲಾಗಿದೆ’ ಎಂದು  ಮಾಹಿತಿ ನೀಡಿದರು. 

‘ಇದಲ್ಲದೇ ಮೆ‌ಸ್ಕಾಂ 50 ನಾನ್‌ ಕಾಂಟ್ಯಾಕ್ಟ್‌ ವೋಲ್ಟೇಜ್‌ ಡೆಟೆಕ್ಟರ್‌, ಇನ್ಸುಲೇಟರ್‌ಗಳಲ್ಲಿನ ಸೋರಿಕೆ ಪತ್ತೆ ಹಚ್ಚುವ ಸಾಧನ  (2) ಹಾಗೂ ಅಲ್ಟ್ರಾಸೌಂಡ್‌ ಪಾರ್ಷಿಯಲ್‌ ಡಿಸ್ಚಾರ್ಜ್ ಡಿಟೆಕ್ಟರ್‌ಗಳನ್ನು  (2) ಪೂರೈಸಿದೆ. ತುರ್ತು ನಿರ್ವಹಣೆಗೆ ವಿಶೇಷ ಪಡೆಗಳನ್ನು ರಚಿಸಿದ್ದೇವೆ. 800 ಗ್ಯಾಂಗ್‌ಮನ್‌ಗಳನ್ನು ನೇಮಿಸಿದ್ದೇವೆ. ಅವುಗಳಿಗೆ ಪ್ರತ್ಯೇಕವಾಗಿ 56 ವಾಹನಗಳನ್ನು ಪೂರೈಸಲಾಗಿದೆ. ದೂರವಾಣಿ ಮೂಲಕ ಬರುವ ದೂರುಗಳ ವಿಲೇವಾರಿಗೂ ವಿಶೇಷ ತಂಡಗಳನ್ನು ರಚಿಸಲಾಗಿದ್ದು, 50ಎಲಿಫೋನ್ ಆಪರೇಟರ್‌ಗಳನ್ನು ನಿಯೋಜಿಸಲಾಗಿದೆ’ ಎಂದರು. 

DK_ಮೆಸ್ಕಾಂ ವ್ಯಾಪ್ತಿಯಲ್ಲಿ ವಿದ್ಯುತ್ ಅವಘಡ ಪ್ರಕರಣಗಳ ವಿವರ

ಮೆಸ್ಕಾಂ ವ್ಯಾಪ್ತಿಯಲ್ಲಿ ವಿದ್ಯುತ್ ಸ್ಪರ್ಶದಿಂದ ಸಾವು ಪ್ರಕರಣ –;ಇಲಾಖೆ ಸಿಬ್ಬಂದಿ (ಸಾವು; ಗಾಯ);ಸಾರ್ವಜನಿಕರು (ಸಾವು; ಗಾಯ); ಪ್ರಾಣಿ ವೃತ್ತ; 2021–22; 2022–23;2023–24;2024–25 (ಮೇ ಅಂತ್ಯದವರೆಗೆ) ಮಂಗಳೂರು; 1;4;12;5;11; 1;3;16;6;14;2;7;10;2;9;0;0;2;1;1 ಉಡುಪಿ;0;2;5;3;6;0;0;5;2;12; 2;6;8;1;5;0;1;2;0;0 ಶಿವಮೊಗ್ಗ;2;7;17;7;42;2;5;17;4;60;3;7;17;7;40; 0;0;2;1;12 ಚಿಕ್ಕಮಗಳೂರು;0;1;30;8;42;4;6;22;6;47;0;8;14;4;29; 1;0;11;0;17 –0–

350 ಪ್ರಾಣಿಗಳಿಗೂ ವಿದ್ಯುದಾಘಾತ ವಿದ್ಯುತ್‌ ಸ್ಪರ್ಶದಿಂದ ನಾಲ್ಕು ವರ್ಷಗಳಲ್ಲಿ ಸುಮಾರು 350 ಪ್ರಾಣಿಗಳ ಜೀವಕ್ಕೂ ಕುತ್ತು ಬಂದಿದೆ. ಅತೀ ಹೆಚ್ಚು ಪ್ರಾಣಿಗಳ ಸಾವು ಸಂಭವಿಸಿರುವುದು ಶಿವಮೊಗ್ಗ ಜಿಲ್ಲೆಯಲ್ಲಿ (154 ). ಅದು ಬಿಟ್ಟರೆ ಚಿಕ್ಕಮಗಳೂರು ಜಿಲ್ಲೆಯಲ್ಲಿ  135 ಪ್ರಾಣಿಗಳು ವಿದ್ಯುದಾಘಾತಕ್ಕೊಳಗಾಗಿವೆ. ದಕ್ಷಿಣ ಕನ್ನಡ (35) ಮತ್ತು ಉಡುಪಿ (23) ಜಿಲ್ಲೆಗಳಲ್ಲಿ ಪ್ರಾಣಿಗಳು ವಿದ್ಯುತ್ ಸ್ಪರ್ಶಕ್ಕೊಳಗಾಗುವ ಪ್ರಮಾಣ ಕಡಿಮೆ ಇದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.