ಮೂಡುಬಿದಿರೆ: ಪುರಸಭೆ ವ್ಯಾಪ್ತಿಯ ವಿದ್ಯುತ್ ತಂತಿಗಳ ಮೇಲೆ ಬಾಗುವ ಅಪಾಯಕಾರಿ ಮರದ ಗೆಲ್ಲುಗಳನ್ನು ಕಡಿದ ನಂತರ ಅವುಗಳನ್ನು ರಸ್ತೆ ಅಥವಾ ಚರಂಡಿಯಲ್ಲೇ ಬಿಟ್ಟು ಹೋಗುತ್ತಿರುವ ಘಟನೆಗಳು ಕೆಲವೆಡೆ ನಡೆದಿದೆ.
ವಿದ್ಯುತ್ ತಂತಿಗೆ ಸ್ಪರ್ಶಿಸುವ ಮರದ ಕೊಂಬೆಗಳನ್ನು ಪ್ರತಿ ಮಳೆಗಾಲ ಆರಂಭಕ್ಕೆ ಮೊದಲು ಮೆಸ್ಕಾಂ ಇಲಾಖೆಯವರು ಕಡಿದು ಮುನ್ನೆಚ್ಚರಿಕೆ ವಹಿಸುತ್ತಾರೆ. ಕಟಾವು ಮಾಡಿದ ಮರದ ಗೆಲ್ಲುಗಳು ರಸ್ತೆಗೆ, ಚರಂಡಿಗೆ ಬಿದ್ದಿದ್ದರೆ ಅದನ್ನು ಅಲ್ಲಿಂದ ತೆರವುಗೊಳಿಸುವ ಜವಾಬ್ದಾರಿಯೂ ಮೆಸ್ಕಾಂನವರದ್ದೆ ಆಗಿದ್ದು, ರೇಂಜ್ ಫಾರೆಸ್ಟ್ ರಸ್ತೆ ಪ್ರದೇಶದಲ್ಲಿ ಕೆಲವು ದಿನಗಳ ಹಿಂದೆ ಕಟಾವು ಮಾಡಿದ ಗೆಲ್ಲುಗಳನ್ನು ರಸ್ತೆ ಬದಿಯಲ್ಲಿ, ಇನ್ನು ಕೆಲವೆಡೆ ಚರಂಡಿಯಲ್ಲೆ ಬಿಟ್ಟು ಹೋಗಿದ್ದಾರೆ. ಇದರಿಂದ ವಾಹನ ಸಂಚಾರಕ್ಕೆ, ಸಾರ್ವಜನಿಕರ ಓಡಾಟಕ್ಕೆ ತೊಂದರೆ ಉಂಟಾಗಿದೆ. ಇದೇ ಪರಿಸರದ ಕೆಲವೆಡೆ ಚರಂಡಿ ಮೇಲೆ ಗೆಲ್ಲುಗಳು ಬಿದ್ದು ಚರಂಡಿ ಕಾಣದಂತಾಗಿದೆ. ಮಳೆಗಾಲದಲ್ಲಿ ಮಳೆ ನೀರು ಹರಿಯುವುದಕ್ಕೆ ಅಡಚಣೆಯಾಗಲಿದೆ. ಕಟಾವು ಮಾಡಿದ ಮರದ ಗೆಲ್ಲುಗಳನ್ನು ರಸ್ತೆ ಬದಿ, ಚರಂಡಿ ಮೇಲೆ ಎಸೆದಿರುವುದರಿಂದ ಮೂಡುಬಿದಿರೆ ಮೆಸ್ಕಾಂ ವಿರುದ್ಧ ಪರಿಸರ ಮಾಲಿನ್ಯದ ಆರೋಪ ಕೇಳಿಬಂದಿದೆ.
ವಿದ್ಯುತ್ ತಂತಿಗೆ ಅಪಾಯ ಎನಿಸಿದ ಗೆಲ್ಲುಗಳನ್ನು ಕಟಾವು ಮಾಡಿದ ಬಳಿಕ ಅವುಗಳನ್ನು ಮೆಸ್ಕಾಂನವರೇ ತೆರವುಗೊಳಿಸಬೇಕು. ಅದು ಪುರಸಭೆಯ ಕೆಲಸ ಅಲ್ಲ. ಇಂಥ ಪ್ರಕರಣಗಳ ಬಗ್ಗೆ ಮತ್ತೊಮ್ಮೆ ಮೆಸ್ಕಾಂ ಅಧಿಕಾರಿಗಳ ಗಮನಕ್ಕೆ ತರುತ್ತೇನೆ ಎಂದು ಮೂಡುಬಿದಿರೆ ಪುರಸಬೆ ಮುಖ್ಯಾಧಿಕಾರಿ ಸುಜಯ್ ಕುಮಾರ್ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.