ADVERTISEMENT

ಎಂಐಎ: ಮುಕ್ತ ಲಭ್ಯತೆಯ ‘ಫ್ಯುಯೆಲ್‌ ಫಾರ್ಮ್‌’ ಆರಂಭ

​ಪ್ರಜಾವಾಣಿ ವಾರ್ತೆ
Published 18 ಡಿಸೆಂಬರ್ 2023, 5:17 IST
Last Updated 18 ಡಿಸೆಂಬರ್ 2023, 5:17 IST
ಬಜಪೆಯ ಮಂಗಳೂರು ಅಂತರರಾಷ್ಟ್ರೀಯ ವಿಮಾನನಿಲ್ದಾಣದಲ್ಲಿ ಪಂಕಜ್‌ ಅಗರ್ವಾಲ್‌ ಅವರು ವಿಮಾನಸೇವೆ ಒದಗಿಸುವ ಸಂಸ್ಥೆಗಳ ಪ್ರತಿನಿಧಿಗಳಿಗೆ ಕೀಲಿಯನ್ನು ಸಾಂಕೇತಿಕವಾಗಿ ಹಸ್ತಾಂತರಿಸುವ ಮೂಲಕ ಮುಕ್ತ ಲಭ್ಯತೆಯ ಫ್ಯುಯೆಲ್‌ ಫಾರ್ಮ್‌ ಸೌಕರ್ಯದ ಕಾರ್ಯಾಚರಣೆಗೆ ಚಾಲನೆ ನೀಡಿದರು
ಬಜಪೆಯ ಮಂಗಳೂರು ಅಂತರರಾಷ್ಟ್ರೀಯ ವಿಮಾನನಿಲ್ದಾಣದಲ್ಲಿ ಪಂಕಜ್‌ ಅಗರ್ವಾಲ್‌ ಅವರು ವಿಮಾನಸೇವೆ ಒದಗಿಸುವ ಸಂಸ್ಥೆಗಳ ಪ್ರತಿನಿಧಿಗಳಿಗೆ ಕೀಲಿಯನ್ನು ಸಾಂಕೇತಿಕವಾಗಿ ಹಸ್ತಾಂತರಿಸುವ ಮೂಲಕ ಮುಕ್ತ ಲಭ್ಯತೆಯ ಫ್ಯುಯೆಲ್‌ ಫಾರ್ಮ್‌ ಸೌಕರ್ಯದ ಕಾರ್ಯಾಚರಣೆಗೆ ಚಾಲನೆ ನೀಡಿದರು   

ಎಂಐಎ: ಬಜಪೆಯ ಮಂಗಳೂರು ಅಂತರರಾಷ್ಟ್ರೀಯ ವಿಮಾನನಿಲ್ದಾಣದಲ್ಲಿ (ಎಂಐಎ) ವಿಮಾನಕ್ಕೆ ಇಂಧನ ಭರ್ತಿ ಮಾಡಲು ಮುಕ್ತ ಲಭ್ಯತೆಯ ‘ಫ್ಯುಯೆಲ್‌ ಫಾರ್ಮ್‌’ ಸೌಕರ್ಯ ಶನಿವಾರದಿಂದ ಕಾರ್ಯಾಚರಣೆ ಆರಂಭಿಸಿದೆ. 

ವಿಮಾನ ನಿಲ್ದಾಣದ ಟರ್ಮಿನಲ್‌ ವ್ಯವಸ್ಥಾಪಕ ಸಸಿಕುಮಾರನ್‌ ನಾಯರ್‌ ಪಿ. ಅವರು ವಿಮಾನನಿಲ್ದಾಣದಲ್ಲಿ ವಿಮಾನಯಾನ ಸೇವೆ ಒದಗಿಸುವ ವಿವಿಧ ಸಂಸ್ಥೆಗಳ ಪ್ರತಿನಿಧಿಗಳಿಗೆ ಸಾಂಕೇತಿಕವಾಗಿ ಕೀಲಿಯನ್ನು ಹಸ್ತಾಂತರಿಸುವ ಮೂಲಕ ಈ ಸೇವೆಗೆ ಚಾಲನೆ ನೀಡಿದರು. 

‘ಈ ಸೌಕರ್ಯವು ತೈಲ ಮಾರಾಟ ಕಂಪನಿಗಳಿಗೆ ಸಮಾನ ಅವಕಾಶ ಒದಗಿಸಲಿದೆ. ಜೆಟ್‌ ಇಂಧನ ಪೂರೈಕೆ ಜಾಲದಲ್ಲಿ ಸಮತೋಲನ ಸಾಧಿಸಲು ನೆರವಾಗಲಿದೆ. ಹೊಸ ಮಾರುಕಟ್ಟೆ ಸಂಸ್ಥೆಗಳು ಈ ಕ್ಷೇತ್ರವನ್ನು ಪ್ರವೇಶಿಸಲು ಇದ್ದ ಅಡೆತಡೆಗಳನ್ನು ನಿವಾರಿಸಲಿದೆ. ವಿಮಾನಯಾನ ಸೇವೆ ಒದಗಿಸುವ ಸಂಸ್ಥೆಗಳು ವಿಮಾನಕ್ಕೆ ಇಂಧನ ಭರ್ತಿ ಮಾಡಿಕೊಳ್ಳುವಾಗ ತಮ್ಮ ಇಷ್ಟದ ತೈಲ ಮಾರಾಟ ಸಂಸ್ಥೆಯನ್ನು ಆಯ್ಕೆ ಮಾಡಿಕೊಳ್ಳಲು ಅವಕಾಶ ಕಲ್ಪಿಸಲಿದೆ’  ಎಂದು ವಿಮಾನ ನಿಲ್ದಾಣದ ವಕ್ತಾರರು ತಿಳಿಸಿದ್ದಾರೆ.

ADVERTISEMENT

ಈ ಹೊಸ ಸೌಕರ್ಯದಡಿ ವಿಮಾನನಿಲ್ದಾಣವು  ಹೊಸ ಗ್ರೀನ್‌ಫೀಲ್ದ್‌ ಇಂಧನ ಸಂಗ್ರಹಾ‌ಗರವನ್ನು ನಿರ್ಮಿಸಿದೆ. ಅಲ್ಲದೇ,  ತೈಲ ಮಾರಾಟ ಕಂಪನಿಯ (ಒಎಂಸಿ)  ಬ್ರೌನ್‌ಫೀಲ್ಡ್‌ ಸ್ವತ್ತುಗಳನ್ನು ಸ್ವಾಧೀನಪಡಿಸಿಕೊಂಡಿದೆ. ಈ ಸೌಕರ್ಯವು ಟರ್ಮಿನಲ್‌ ಕಟ್ಟಡದ ಪಕ್ಕದಲ್ಲಿರುವ 5262.57 ಚ.ಮೀ ವಿಸ್ತೀರ್ಣದ ಜಾಗದಲ್ಲಿ ಹರಡಿಕೊಂಡಿದೆ. ಇಲ್ಲಿ 970 ಕಿಲೋ ಲೀ ಸಂಗ್ರಹ ಸಾಮರ್ಥ್ಯದ ಆರು ಇಂಧನ ತೊಟ್ಟಿಗಳಿವೆ ಎಂದು ಅವರು ಮಾಹಿತಿ ನೀಡಿದರು.

ಇಂಡಿಗೊ ಸಂಸ್ಥೆಯ ವಿಮಾನಕ್ಕೆ ಈ ಸೌಕರ್ಯ ಬಳಸಿ ಇಂಧನ ಭರ್ತಿ ಮಾಡಲಾಯಿತು. ಅದಾನಿ ಏರ್‌ಪೋರ್ಟ್‌ ಹೋಲ್ಡಿಂಗ್ಸ್‌ ಲಿಮಿಟೆಡ್‌ನ (ಎಎಎಚ್‌ಎಲ್‌) ವಹಿವಾಟು ವಿಭಾಗದ ಮುಖ್ಯಸ್ಥ ಪಂಕಜ್‌ ಅಗರ್ವಾಲ್‌, ಎಂಐಎ ಕಾರ್ಯಾಚರಣೆ ವಿಭಾಗದ ಮುಖ್ಯಸ್ಥ ಶ್ರೀಕಾಂತ್‌ ಟಾಟಾ, ವಿಮಾನದ ಪೈಲಟ್‌ ಯತೀನ್‌ ಅನಂತ್‌ ಪಂಡಿತ್‌ ಮತ್ತಿತರರು ಇದ್ದರು.  

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.