ಮಂಗಳೂರು: ಕೋವಿಡ್ ಎರಡನೇ ಅಲೆ ತೀವ್ರಗೊಳ್ಳುತ್ತಿರುವ ಸಂದರ್ಭದಲ್ಲಿ ಕೊರೊನಾ ಸೇನಾನಿಗಳಾಗಿ ಮುಂಚೂಣಿಯಲ್ಲಿ ಸೇವೆ ಸಲ್ಲಿಸುವ ಪೊಲೀಸ್ ಅಧಿಕಾರಿ, ಸಿಬ್ಬಂದಿಗೆ ಮಧ್ಯಾಹ್ನದ ಊಟದ ವ್ಯವಸ್ಥೆ ಮಾಡಲಾಗಿದೆ. ಮಂಗಳೂರು ಪೊಲೀಸ್ ಕಮಿಷನರೇಟ್ ಕಚೇರಿ ಆವರಣದಲ್ಲಿ ಬುಧವಾರ ಚಾಲನೆ ನೀಡಲಾಯಿತು.
ಪೊಲೀಸ್ ಕಮಿಷನರ್ ಎನ್. ಶಶಿಕುಮಾರ್ ನೇತೃತ್ವದಲ್ಲಿ ಈ ಊಟದ ವ್ಯವಸ್ಥೆಯನ್ನು ಮಾಡಲಾಗಿದ್ದು, ವಿವಿಧ ವಿಭಾಗಗಳಲ್ಲಿ ರಾತ್ರಿ ಹಗಲೆನ್ನದೆ ಸೇವೆ ಸಲ್ಲಿಸುವ ಉತ್ತರ ಕರ್ನಾಟಕ ಸೇರಿದಂತೆ ರಾಜ್ಯದ ವಿವಿಧ ಭಾಗಗಳ ಸಿಬ್ಬಂದಿಗೆ ಅನುಕೂಲವಾಗುವಂತೆ ಈ ಮಧ್ಯಾಹ್ನದ ಉಚಿತ ಊಟದ ವ್ಯವಸ್ಥೆಯನ್ನು ಆರಂಭಿಸಲಾಗಿದೆ.
ನಿತ್ಯ ಕನಿಷ್ಠ 250ರಿಂದ 300 ಸಿಬ್ಬಂದಿಗೆ ಊಟದ ವ್ಯವಸ್ಥೆಯನ್ನು ಮಾಡಲು ಸದ್ಯ ನಿರ್ಧರಿಸಲಾಗಿದ್ದು, ಮಂಗಳೂರು ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಉತ್ತರ ಕರ್ನಾಟಕದ 1ಸಾವಿರಕ್ಕೂ ಅಧಿಕ ಮಂದಿ ಸೇರಿದಂತೆ 2ಸಾವಿರದಷ್ಟು ಸಿಬ್ಬಂದಿ ಸೇವೆಯಲ್ಲಿದ್ದಾರೆ.
‘ಕೋವಿಡ್ ಎರಡನೇ ಅಲೆಯ ಹಿನ್ನೆಲೆಯಲ್ಲಿ ಸರ್ಕಾರ ಕಠಿಣ ನಿಯಮಾವಳಿಗಳನ್ನು ಜಾರಿಗೊಳಿಸಿದೆ. ರಾತ್ರಿ ಕರ್ಫ್ಯೂ 9ರಿಂದ ಬೆಳಿಗ್ಗೆ 6 ಗಂಟೆ ಹಾಗೂ ವಾರಾಂತ್ಯದ ಕರ್ಫ್ಯೂ ಕೂಡಾ ಜಾರಿಗೊಳಿಸಲಾಗಿದೆ. ಈ ಕಾರಣದಿಂದ ಸರ್ಕಾರದ ಕೋವಿಡ್ ನಿಯಮ ಪಾಲನೆಯೊಂದಿಗೆ ಇಲ್ಲಿ ಬೆಳಿಗ್ಗೆ 11 ಗಂಟೆಯಿಂದ ಮಧ್ಯಾಹ್ನ 3 ಗಂಟೆಯವರೆಗೆ ಸಿಬ್ಬಂದಿಗೆ ಊಟದ ವ್ಯವಸ್ಥೆಯನ್ನು ಮಾಡಲಾಗಿದೆ’ ಎಂದು ಪೊಲೀಸ್ ಕಮಿಷನರ್ ಎನ್. ಶಶಿಕುಮಾರ್ ತಿಳಿಸಿದರು.
‘ಇಲಾಖೆಯಲ್ಲಿರುವ ಅಧಿಕಾರಿ ಹಾಗೂ ಸಿಬ್ಬಂದಿಯಲ್ಲಿ ಬಹಳಷ್ಟು ಯುವಕರು, ಅವಿವಾಹಿತರಿದ್ದು, ಕೆಲವರು ತಮ್ಮ ಪೋಷಕರ ಜತೆ ಇಲ್ಲೇ ವಾಸವಾಗಿದ್ದರು. ಆದರೆ ಕೋವಿಡ್ ಕಾರಣದಿಂದ ಹಲವರು ತಮ್ಮ ಕುಟುಂಬಸ್ಥರನ್ನು ಈಗಾಗಲೇ ಊರುಗಳಿಗೆ ಕಳುಹಿಸಿದ್ದಾರೆ. ಸದ್ಯ ಹೋಟೆಲ್, ರೆಸ್ಟೊರೆಂಟ್‌ಗಳಲ್ಲಿ ಊಟ ಮಾಡುವ ವ್ಯವಸ್ಥೆ ಇಲ್ಲ. ಹಾಗಾಗಿ ಸಿಬ್ಬಂದಿಗೆ ಬಹಳಷ್ಟು ತೊಂದರೆ ಆಗುವುದು ಗಮನಕ್ಕೆ ಬಂದ ಕಾರಣ ಈ ವ್ಯವಸ್ಥೆ ಮಾಡಲಾಗಿದೆ. ಹಾಗಾಗಿ ಕಮಿಷನರೇಟ್ ಕಚೇರಿ ಆವರಣದಲ್ಲಿ ಕ್ಯಾಂಟೀನ್ ತೆರೆಯಲಾಗಿದೆ’ ಎಂದು ತಿಳಿಸಿದರು.
‘ಗೃಹರಕ್ಷಕ ದಳ ಸೇರಿದಂತೆ ಪೊಲೀಸ್ ಇಲಾಖೆಯ ಸಿಬ್ಬಂದಿಗಳೇ ಸ್ವಯಂ ಇಚ್ಛೆಯಿಂದ ಅಡುಗೆ ತಯಾರಿಸಲು ಮುಂದಾಗಿದ್ದಾರೆ. ಇದು ಎಷ್ಟು ದಿನ ಮುಂದುವರಿಸಲು ಸಾಧ್ಯ ಅಲ್ಲಿಯವರೆಗೆ ನಡೆಸಲಾಗುವುದು. ಸದ್ಯ ನಾವೇ ವೆಚ್ಚವನ್ನು ಭರಿಸಿಕೊಂಡು ಈ ಕಾರ್ಯವನ್ನು ಆರಂಭಿಸಿದ್ದೇವೆ’ ಎಂದು ಹೇಳಿದರು.
ಡಿಸಿಪಿಗಳಾದ ಹರಿರಾಂ ಶಂಕರ್, ವಿನಯ್ ಗಾಂವ್ಕರ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.