ADVERTISEMENT

ಮಂಗಳೂರು | ಕ್ಷೀರ ಪ್ಯಾಕೆಟ್‌ಗೆ ಪಾರ್ಕ್‌ನಲ್ಲಿ ‘ಆಶ್ರಯ’

ಪ್ಲಾಸ್ಟಿಕ್ ಮಾಲಿನ್ಯ ತಡೆಗೆ ಅರೈಸ್ ಅವೇಕ್ ಉದ್ಯಾನದಲ್ಲಿ ಅಪರೂಪದ ಅಭಿಯಾನ

ಸಂಧ್ಯಾ ಹೆಗಡೆ
Published 26 ಅಕ್ಟೋಬರ್ 2024, 7:26 IST
Last Updated 26 ಅಕ್ಟೋಬರ್ 2024, 7:26 IST
ಹಾಲು, ಮೊಸರು ಪ್ಯಾಕೆಟ್ ಸಂಗ್ರಹಕ್ಕೆ ಕರಂಗಲ್ಪಾಡಿಯ ಅರೈಸ್ ಅವೇಕ್ ಉದ್ಯಾನದಲ್ಲಿರುವ ಡ್ರಮ್
ಹಾಲು, ಮೊಸರು ಪ್ಯಾಕೆಟ್ ಸಂಗ್ರಹಕ್ಕೆ ಕರಂಗಲ್ಪಾಡಿಯ ಅರೈಸ್ ಅವೇಕ್ ಉದ್ಯಾನದಲ್ಲಿರುವ ಡ್ರಮ್   

ಮಂಗಳೂರು: ಬಳಸಿ ಬಿಸಾಡುವ ಹಾಲಿನ್ ಕವರ್‌ಗಳನ್ನು ಜತನದಿಂದ ಸಂಗ್ರಹಿಸಿ ಪ್ಲಾಸ್ಟಿಕ್ ಮಾಲಿನ್ಯ ತಡೆಗಟ್ಟುವ ಪರಿಸರಸ್ನೇಹಿ ಅಭಿಯಾನವೊಂದು ಸದ್ದಿಲ್ಲದೆ ನಡೆಯುತ್ತಿದೆ. ವಾಕಿಂಗ್ ಬರುವವರು, ಕಾರಿನಲ್ಲಿ ಸಾಗುವವರು ತೊಳೆದು ಸ್ವಚ್ಛಗೊಳಿಸಿದ ಹಾಲು, ಮೊಸರಿನ ಪ್ಯಾಕೆಟ್‌ಗಳನ್ನು ನಿರ್ದಿಷ್ಟ ಡ್ರಮ್‌ ಒಳಗೆ ಹಾಕಿ ಅಭಿಯಾನಕ್ಕೆ ಕೈ ಜೋಡಿಸುತ್ತಿದ್ದಾರೆ. 

ಕೊಡಿಯಲ್‌ಬೈಲ್ ವಾರ್ಡ್‌ ವ್ಯಾಪ್ತಿಯಲ್ಲಿ ಬರುವ ಕರಂಗಲ್ಪಾಡಿಯ ಮುಖ್ಯ ರಸ್ತೆಯ ಬದಿಯಲ್ಲಿ ಅರೈಸ್ ಅವೇಕ್ ಎಂಬ ಪುಟ್ಟ ಉದ್ಯಾನವಿದೆ. ಈ ಉದ್ಯಾನದಲ್ಲಿ ಕುಳಿತುಕೊಳ್ಳಲು ಬೆಂಚ್‌ಗಳು, ವಾಕಿಂಗ್ ಮಾರ್ಗ, ಕಾಲಿಗೆ ಆಕ್ಯುಪಂಕ್ಚರ್ ಮಾಡಿಕೊಳ್ಳುವ ವ್ಯವಸ್ಥೆ, ಮಕ್ಕಳ ಆಟಿಕೆಗಳು ಇವೆ. ಅಲ್ಲೇ ಪಕ್ಕದಲ್ಲಿ ಸುಮಾರು ನಾಲ್ಕು ಅಡಿಯ ಒಂದು ಕೇಸರಿ ಬಣ್ಣದ ಡ್ರಮ್ ಇದೆ. ಅದರ ಮೇಲೆ ‘ಬಳಸಿದ ಮತ್ತು ತೊಳೆದ ಹಾಲು ಹಾಗೂ ಮೊಸರಿನ ಕವರ್‌ಗಳನ್ನು ಇಲ್ಲಿ ಹಾಕಿದ್ದಕ್ಕೆ ಧನ್ಯವಾದ’ ಎಂಬ ಒಕ್ಕಣಿಕೆಯ ಬರಹ ಇಂಗ್ಲಿಷ್‌ ಭಾಷೆಯಲ್ಲಿದೆ.

ಉದ್ಯಾನದ ಅಕ್ಕಪಕ್ಕದಲ್ಲಿರುವ ಅಪಾರ್ಟ್‌ಮೆಂಟ್‌ಗಳ ನಿವಾಸಿಗಳು, ವಾಕಿಂಗ್ ಬರುವವರು, ಪರಿಸರ ಪ್ರೇಮಿಗಳು ತಾವು ಮನೆಗೆ ಕೊಂಡೊಯ್ಯುವ ಹಾಲು, ಮೊಸರು ಪ್ಯಾಕೆಟ್‌ಗಳನ್ನು ಬಳಸಿದ ಮೇಲೆ ತೊಳೆದು, ಒಣಗಿಸಿ ತಂದು ಈ ಡ್ರಮ್‌ನಲ್ಲಿ ಹಾಕುತ್ತಾರೆ.

ADVERTISEMENT

‘ಕಟ್ ಮಾಡಿದ ಎಸೆದ ಹಾಲಿನ ಪ್ಯಾಕೆಟ್ ತುಣುಕು ಸಮುದ್ರ ಸೇರಿ, ಡಾಲ್ಫಿನ್‌ಗಳ ಜೀವಕ್ಕೆ ಅಪಾಯವೊಡ್ಡುವ ಕುರಿತು ಚಾನೆಲ್‌ವೊಂದರಲ್ಲಿ ಪ್ರಸಾರವಾದ ಕಾರ್ಯಕ್ರಮ ವೀಕ್ಷಿಸಿದಾಗ, ಈ ಪ್ರಮಾದವನ್ನು ತಪ್ಪಿಸುವ ತುಡಿತ ಮೂಡಿತು. ನಮ್ಮ ಅಪಾರ್ಟ್‌ಮೆಂಟ್ ಪಕ್ಕದ ಉದ್ಯಾನದಲ್ಲಿ ಅದನ್ನು ಇಟ್ಟು, ಹಲವರ ಬಳಿ ವಿಚಾರ ಹಂಚಿಕೊಂಡೆ. ಆರಂಭದಲ್ಲಿ ನಾಲ್ಕಾರು ಮಂದಿ, ಇದಕ್ಕೆ ಕೈ ಜೋಡಿದರು. ಈಗ 30ಕ್ಕೂ ಹೆಚ್ಚು ಜನರು ಹಾಲು, ಮೊಸರಿನ ಕವರ್‌ಗಳನ್ನು ಇದಕ್ಕೆ ತಂದು ಹಾಕುತ್ತಾರೆ’ ಎನ್ನುತ್ತಾರೆ ಅಭಿಯಾನದ ರೂವಾರಿ ಪವನ್ ಅಪಾರ್ಟ್‌ಮೆಂಟ್‌ನ ಪ್ರಭಾಕರ ಶೆಟ್ಟಿ.

‘ಕವರ್ ಕಟ್ ಮಾಡುವಾಗಲೂ ನಿರ್ದಿಷ್ಟ ವಿಧಾನವಿದೆ. ಆಸಕ್ತರಿಗೆ ಅದನ್ನು ತಿಳಿಸಿಕೊಡುತ್ತೇವೆ. ನಗರದ ವಿವಿಧ ವಾರ್ಡ್‌ಗಳಲ್ಲಿರುವ ಸ್ನೇಹಿತರ ಜೊತೆ ಚರ್ಚಿಸಿ, ಅಲ್ಲಲ್ಲಿ ಈ ರೀತಿಯ ಸಂಗ್ರಹ ತಾಣ ರೂಪಿಸಲು ಯೋಚಿಸಿದ್ದೇನೆ. ಸಾಮಾಜಿಕ ಜಾಲತಾಣಗಳ ಮೂಲಕ ಜಾಗೃತಿ ಮೂಡಿಸಲಾಗುತ್ತಿದೆ. ಎಸೆಯುವ ಈ ಕವರ್‌ಗಳನ್ನು ಬಳಸಿ, ಬ್ಯಾಗ್, ಪರ್ಸ್, ಕೀ ಚೈನ್, ಆಭರಣ ತಯಾರಿಸುವ ಉದ್ಯಮ ಪೂಣೆಯಲ್ಲಿದೆ. ರಸ್ತೆ ನಿರ್ಮಾಣಕ್ಕೂ ಇದನ್ನು ಬಳಸಬಹುದು. ಸ್ಥಳೀಯ ಕೆಲವು ಆಸಕ್ತರ ಜೊತೆ ಇಂತಹ ಉದ್ಯಮ ನಡೆಸುವ ಬಗ್ಗೆ ಚರ್ಚಿಸಿದ್ದೇನೆ’ ಎಂದು ಪ್ರಭಾಕರ ಶೆಟ್ಟಿ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ಸಂಗ್ರಹವಾಗಿರುವ ಕವರ್‌ಗಳನ್ನು ರಟ್ಟಿನ ಡಬ್ಬದಲ್ಲಿ ತುಂಬಿಸಿಟ್ಟಿರುವುದು
ಹಾಲಿನ ಕವರ್ ಕಟ್ ಮಾಡುವ ವಿಧಾನದ ಜಾಗೃತಿ

ಉದ್ಯಾನ ವರದಾನ ಈ ಪುಟ್ಟ ಉದ್ಯಾನವು ಹಿಂದೆ ಕುಡುಕರು ವ್ಯಸನಿಗಳ ತಾಣವಾಗಿತ್ತು. ಅದನ್ನು ರಾಮಕೃಷ್ಣ ಮಿಷನ್ ವಿವಿಧ ಸಂಘಟನೆಗಳು ಸ್ಥಳೀಯರ ಸಹಕಾರದಲ್ಲಿ ಸುಂದರ ತಾಣವಾಗಿ ರೂಪಿಸಲಾಗಿದೆ. ಈಗ ಹಿರಿಯ ನಾಗರಿಕರು ಮುಸ್ಸಂಜೆ ಕಳೆಯಲು ಇಲ್ಲಿ ಬರುತ್ತಾರೆ. ಹೆಂಗಸರು ಮಕ್ಕಳು ವಾಕಿಂಗ್ ಬರುತ್ತಾರೆ. ವಿದ್ಯಾರ್ಥಿನಿಯೊಬ್ಬರು ತಾವು ಮಂಡಿಸಿದ ಸಂಶೋಧನಾ ಪ್ರಬಂಧದಲ್ಲಿ ಮಲೀನಗೊಂಡ ತಾಣ ಪಾರ್ಕ್‌ ಆಗಿ ರೂಪುಗೊಂಡ ಕತೆಯನ್ನು ಬರೆದಿದ್ದಾರೆ. ಇದು ಸಂತೃಪ್ತಿ ನೀಡಿದ ಸಂಗತಿ. ಪ್ಲಾಸ್ಟಿಕ್ ಕವರ್‌ ಸಂಗ್ರಹವನ್ನು ವಾಣಿಜ್ಯಿಕವಾಗಿ ಯೋಚಿಸಿಲ್ಲ. ಮುಂದಿನ ದಿನಗಳಲ್ಲಿ ಇವುಗಳಿಂದ ಆದಾಯ ಬಂದರೆ ಉದ್ಯಾನದ ನಿರ್ವಹಣೆಗೆ ಬಳಕೆ ಮಾಡಬಹುದು ಎಂದು ಪ್ರಭಾಕರ ಶೆಟ್ಟಿ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.