ಮಂಗಳೂರು: ವೆಲೆನ್ಸಿಯಾ ರಸ್ತೆ ಬಳಿಯ ಅಲ್ಪಸಂಖ್ಯಾತರ ಮೆಟ್ರಿಕ್ ನಂತರದ ಬಾಲಕರ ವಿದ್ಯಾರ್ಥಿ ನಿಲಯಕ್ಕೆ ವಸತಿ, ವಕ್ಪ್ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಸಚಿವರಾದ ಜಮೀರ್ ಅಹಮದ್ ಖಾನ್ ದಿಢೀರ್ ಭೇಟಿ ನೀಡಿ ಪರಿಶೀಲಿಸಿದರು. ಅಲ್ಲಿನ ಅವ್ಯವಸ್ಥೆ ಕಂಡು ಕೆಂಡಾಮಂಡಲವಾದ ಸಚಿವರು ತಾಲೂಕು ವಿಸ್ತರಣಾ ಅಧಿಕಾರಿ ಮಂಜುನಾಥ್ ಅವರನ್ನು ಅಮಾನತು ಮಾಡುವಂತೆ ಸೂಚಿಸಿದರು.
ಹಾಸ್ಟೆಲ್ ನಲ್ಲಿ ಶುಚಿತ್ವ ಕಾಪಾಡದಿರುವುದು, ಶೌಚಾಲಯ ನಿರ್ವಹಣೆ ಸರಿ ಇಲ್ಲದಿರುವುದು ಕಂಡು ಸಿಟ್ಟಾದರು. ಹಾಸ್ಟೆಲ್ ವಿದ್ಯಾರ್ಥಿಗಳು, 'ಗುಣಮಟ್ಟದ ಆಹಾರ ಕೊಡುತ್ತಿಲ್ಲ, ಕೋಳಿ ಪದಾರ್ಥವನ್ನು ವಾರಕ್ಕೊಮ್ಮೆ ನೀಡುವ ಬದಲು ಹದಿನೈದು ದಿನಕ್ಕೊಮ್ಮೆ ನೀಡಲಾಗುತ್ತಿದೆ. ಆಹಾರ ಪಟ್ಟಿಯ ಪ್ರಕಾರ ಪೊರೈಕೆ ಮಾಡುತ್ತಿಲ್ಲ' ಎಂದು ದೂರಿದರು.
'ಐದು ವರ್ಷಗಳಾದರೂ ಬೆಡ್ ಶೀಟ್ ಕೊಟ್ಟಿಲ್ಲ, ತಲೆದಿಂಬು ಇಲ್ಲ, ನಮ್ಮ ಬಗ್ಗೆ ಯಾರೂ ತಲೆಕೆಡಿಸಿಕೊಳ್ಳುವುದಿಲ್ಲ' ಎಂದು ವಿದ್ಯಾರ್ಥಿಗಳು ಸಚಿವರಲ್ಲಿ ಅಹವಾಲು ಹೇಳಿಕೊಂಡರು.
ಡಿ.ಎಂ.ಒ ಜಿನೇಂದ್ರ ಹಾಗೂ ವಾರ್ಡನ್ ಅಶೋಕ್ ಅವರಿಗೆ ಶೋಕಾಸ್ ನೋಟಿಸ್ ನೀಡಲು ಸಚಿವರು ಸೂಚಿಸಿದರು. ಮುಖ್ಯಮಂತ್ರಿ ಯವರ ರಾಜಕೀಯ ಕಾರ್ಯದರ್ಶಿ ನಸೀರ್ ಅಹಮದ್ ಜೊತೆಯಲ್ಲಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.