ADVERTISEMENT

ಬೇರೆ ಧರ್ಮ ಗೌರವಿಸುವವರು ನಿಜವಾದ ಹಿಂದೂ: ಮಧು ಬಂಗಾರಪ್ಪ

​ಪ್ರಜಾವಾಣಿ ವಾರ್ತೆ
Published 13 ಜನವರಿ 2024, 14:03 IST
Last Updated 13 ಜನವರಿ 2024, 14:03 IST
<div class="paragraphs"><p>ಮಧು ಬಂಗಾರಪ್ಪ</p></div>

ಮಧು ಬಂಗಾರಪ್ಪ

   

ಮಂಗಳೂರು: ‘ನಾನು ಹಿಂದೂ. ಆದರೆ, ಹಿಂದೂ ಎಂದು ಹೇಳಿಕೊಂಡು ಹೋಗಲಾರೆ. ನಿಜವಾದ ಹಿಂದೂಗಳು ಮಾತ್ರ ಬೇರೆ ಧರ್ಮಗಳನ್ನು ಗೌರವಿಸುತ್ತಾರೆ. ಹಿಂದುತ್ವವನ್ನು ಮತ ಬ್ಯಾಂಕ್‌ಗಾಗಿ ಬಳಸುವುದು ಬಿಜೆಪಿಗರ ಕೆಲಸ’ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ಹೇಳಿದರು.

ಶನಿವಾರ ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ನನಗೆ ಅವಕಾಶ ಸಿಕ್ಕಾಗ ಅಯೋಧ್ಯೆಗೆ ಹೋಗುತ್ತೇನೆ. ಅಲ್ಲಿ ಮಾತ್ರವಲ್ಲ ಮಸೀದಿ, ಚರ್ಚ್, ಬೋಧ್‌ಗಯಾಕ್ಕೆ ಕೂಡ ಹೋಗುತ್ತೇನೆ. ಆದರೆ, ಎಸ್. ಬಂಗಾರಪ್ಪ ಮಗನಾಗಿ ಮತ್ತು‌ ಕಾಂಗ್ರೆಸ್ ಕಾರ್ಯಕರ್ತನಾಗಿ ದೇವರ ಹೆಸರಲ್ಲಿ ರಾಜಕೀಯ ಮಾಡುವುದಿಲ್ಲ’ ಎಂದರು.

ADVERTISEMENT

ರಾಜ್ಯದಲ್ಲಿ ಬಿಜೆಪಿ ಸೋಲಿಗೆ ನಳಿನ್‌ಕುಮಾರ್ ಕಟೀಲ್ ಕಾರಣರಾಗಿದ್ದು, ಬಂಗಾರಪ್ಪ ಕೊಟ್ಟ ಭಿಕ್ಷೆಯಲ್ಲಿ ಅವರು ಅಧಿಕಾರ ಪಡೆದಿದ್ದಾರೆ. ಬಂಗಾರಪ್ಪ ಹೆಸರಿನಲ್ಲಿ ನಳಿನ್‌ಕುಮಾರ್‌ ಸಂಸದರಾದವರು. ಪ್ರವೀಣ್ ನೆಟ್ಟಾರು ಹತ್ಯೆ ವೇಳೆ ಸಂಸದರ ವಿರುದ್ಧ ಧಿಕ್ಕಾರ ಕೂಗಿದ್ದು, ಕಾಂಗ್ರೆಸ್‌ನವರಲ್ಲ; ಬಿಜೆಪಿ, ಬಜರಂಗದಳ ಮತ್ತು ವಿಶ್ವ ಹಿಂದೂ ಪರಿಷತ್ ಕಾರ್ಯಕರ್ತರು ಕಾರು ಅಲುಗಾಡಿಸಿದ್ದರು ಎಂಬುದು ನೆನಪಿರಲಿ ಎಂದರು.

‘ನಳಿನ್‌ಕುಮಾರ್‌ಗೆ ಮತ್ತೆ ಟಿಕೆಟ್ ನೀಡಬೇಕು, ಅವರನ್ನು ಸೋಲಿಸಲು ನಾನು ಬರುತ್ತೇನೆ. ಹಿಂದುತ್ವ ಮತ್ತು ಭಾವನಾತ್ಮಕ ನೆಲೆಯಲ್ಲಿ ಅವರು ಹಿಂದಿನ ಅವಧಿಯಲ್ಲಿ ಗೆದ್ದಿದ್ದಾರೆ. ಅವರು ಮಾಡಿದ ಅಭಿವೃದ್ಧಿ ತೋರಿಸಲಿ. ಮೋದಿ ಹೆಸರು ಹೇಳುವುದನ್ನು ಬಿಟ್ಟು ಬೇರೇನು ಮಾಡಿದ್ದಾರೆ’ ಎಂದು ಪ್ರಶ್ನಿಸಿದರು.

ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಸೋತರೆ ಉಸ್ತುವಾರಿಗಳೇ ಹೊಣೆ ಎಂಬ ಹೈಕಮಾಂಡ್ ಎಚ್ಚರಿಕೆಗೆ ಪ್ರತಿಕ್ರಿಯಿಸಿದ ಸಚಿವ ಮಧು ಬಂಗಾರಪ್ಪ, ‘ಹೈಕಮಾಂಡ್ ಹೇಳಿದ್ದರಲ್ಲಿ ತಪ್ಪಿಲ್ಲ’ ಎಂದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.