ಮಂಗಳೂರು: ‘ಕಾಲಾ’ ಪದ ಬಳಕೆ ಬಗ್ಗೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೀಡಿರುವ ಹೇಳಿಕೆ ಗಮನಿಸಿಲ್ಲ. ಅವರ ಅಭಿಪ್ರಾಯ ಅವರು ಹೇಳಿರಬಹುದು’ ಎಂದು ಸಚಿವ ಜಮೀರ್ ಅಹಮದ್ ಖಾನ್ ಪ್ರತಿಕ್ರಿಯಿಸಿದರು.
ಕೇರಳದ ಕಾರ್ಯಕ್ರಮಕ್ಕೆ ತೆರಳುವ ವೇಳೆ ಶನಿವಾರ ಇಲ್ಲಿ ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗೆ ಉತ್ತರಿಸಿದ ಅವರು, ‘ಜಮೀರ್ ಪ್ರಚಾರಕ್ಕೆ ಬಂದಿದ್ದು ಅನುಕೂಲವಾಗಿದೆ ಎಂದು ಕಾಂಗ್ರೆಸ್ ಅಭ್ಯರ್ಥಿ ಸಿ.ಪಿ. ಯೋಗೇಶ್ವರ ಹೇಳಿದ್ದಾರೆ. ಜಮೀರ್ ಹೇಳಿಕೆಯಿಂದ ನಷ್ಟವೂ ಆಗಿರಬಹುದು ಎಂದಿರಬಹುದು. ನಾನು ಚನ್ನಪಟ್ಟಣದಲ್ಲಿ ಮೂರು ದಿನ ಪ್ರಚಾರ ಮಾಡಿದ್ದೇನೆ. ಯೋಗೇಶ್ವರ 18–20 ಸಾವಿರ ಮತಗಳ ಅಂತರದಿಂದ ಗೆಲ್ಲುತ್ತಾರೆ’ ಎಂದರು.
‘ಕಾಲಾ ಪದವನ್ನು ಕುಮಾರಸ್ವಾಮಿಗೆ ವೈಯಕ್ತಿಕವಾಗಿ ಬಳಕೆ ಮಾಡಿದ್ದು. ಒಕ್ಕಲಿಗ ಸಮುದಾಯದ ಬಗ್ಗೆ ನನಗೆ ಬಹಳ ಗೌರವ ಇದೆ. ನಾನು ಜೆಡಿಎಸ್ ಸೇರಲು ಆದಿಚುಂಚನಗಿರಿಯ ಹಿರಿಯ ಸ್ವಾಮೀಜಿ ಕಾರಣ. ನಾನು ಬೆಳೆದಿದ್ದು ಆ ಮಠದಲ್ಲಿ. ಸ್ವಾಮೀಜಿ ಬೆಂಗಳೂರಿಗೆ ಬಂದಾಗ ದಿನವಿಡೀ ನಾನು ಅವರ ಜೊತೆಗಿರುತ್ತಿದ್ದೆ. ಇದು ಕುಮಾರಸ್ವಾಮಿಗೂ ಗೊತ್ತು’ ಎಂದು ಹೇಳಿದರು.
‘ದೇವೇಗೌಡರ ಕುಟುಂಬ ಖರೀದಿ ಮಾಡುವುದಾಗಿ ನಾನು ಹೇಳಿಲ್ಲ. ಎಚ್.ಡಿ. ಕುಮಾರಸ್ವಾಮಿ ತಮಗೆ ಮುಸ್ಲಿಂ ಮತ ಬೇಕಾಗಿಲ್ಲ ಎಂದು ಹೇಳಿದ್ದರ ವಿಡಿಯೊ ನನ್ನ ಬಳಿ ಇದೆ. ಈ ಕಾರಣಕ್ಕೆ ಮುಸ್ಲಿಮರ ಮತ ಬೇಡವೆಂದು ಹೇಳಿ, ಹಣಕೊಟ್ಟು ಅವರನ್ನು ಕೊಂಡುಕೊಳ್ಳುತ್ತಿದ್ದೀರಲ್ಲ, ಅದು ಎಷ್ಟರ ಮಟ್ಟಿಗೆ ಸರಿ ಎಂದು ಪ್ರಶ್ನಿಸಿದ್ದೆ. ಮುಸ್ಲಿಮರು ಪಂಕ್ಚರ್ ಹಾಕುವವರು, ವೆಲ್ಡಿಂಗ್ ಮಾಡುವವರು ಎನ್ನುವ ಮೂಲಕ ಕುಮಾರಸ್ವಾಮಿ ನಮ್ಮ ಸಮುದಾಯದ ಬಗ್ಗೆ ಹಗುರವಾಗಿ ಮಾತನಾಡಿದ್ದಾರೆ. ಕುಮಾರಸ್ವಾಮಿಗೆ ‘ಯು ಟರ್ನ್’ ಗೊತ್ತಿದೆ. ಯಾವಾಗ ಬೇಕಾದರೂ ಉಲ್ಟಾ ಹೊಡೆಯಬಹುದು’ ಎಂದರು.
‘ಆದಾಯಕ್ಕಿಂತ ಹೆಚ್ಚು ಆಸ್ತಿ ಗಳಿಸಿರುವ ಆರೋಪದ ಮೇಲೆ ಜಾರಿ ನಿರ್ದೇಶನಾಲಯವು ಪ್ರಕರಣವನ್ನು ಭ್ರಷ್ಟಾಚಾರ ನಿಗ್ರಹ ದಳಕ್ಕೆ (ಎಸಿಬಿ) ವರ್ಗಾಯಿಸಿತ್ತು. ಈಗ ಈ ಪ್ರಕರಣವು ಲೋಕಾಯುಕ್ತದಲ್ಲಿದ್ದು, ಲೋಕಾಯುಕ್ತ ನೋಟಿಸ್ ನೀಡಿರುವ ಬಗ್ಗೆ ನನಗೆ ಮಾಹಿತಿ ಇಲ್ಲ. ಒಂದೊಮ್ಮೆ ನನಗೆ ನೋಟಿಸ್ ಜಾರಿಯಾಗಿದ್ದರೆ, ನಾನು ಹಾಜರಾಗಲೇ ಬೇಕಾಗುತ್ತದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.