ADVERTISEMENT

ಮಂಗಳೂರು: ಸಿಗದ ವಿದ್ಯಾರ್ಥಿ ವೇತನ– ಅಲ್ಪಸಂಖ್ಯಾತರ ಅಳಲು

ಅಲ್ಪಸಂಖ್ಯಾತರ ಕುಂದು ಕೊರತೆ ಸಭೆ

​ಪ್ರಜಾವಾಣಿ ವಾರ್ತೆ
Published 28 ನವೆಂಬರ್ 2023, 7:04 IST
Last Updated 28 ನವೆಂಬರ್ 2023, 7:04 IST
ಸಭೆಯಲ್ಲಿ ಅಬ್ದುಲ್ ಅಜೀಮ್ ಮಾತನಾಡಿದರು. ರಘು,  ಮುಜೀಬುಲ್‌ ಜಫಾರಿ, ಜಿನೇಂದ್ರ ಇದ್ದಾರೆ – ಪ್ರಜಾವಾಣಿ ಚಿತ್ರ 
ಸಭೆಯಲ್ಲಿ ಅಬ್ದುಲ್ ಅಜೀಮ್ ಮಾತನಾಡಿದರು. ರಘು,  ಮುಜೀಬುಲ್‌ ಜಫಾರಿ, ಜಿನೇಂದ್ರ ಇದ್ದಾರೆ – ಪ್ರಜಾವಾಣಿ ಚಿತ್ರ    

ಮಂಗಳೂರು: ಅಲ್ಪಸಂಖ್ಯಾತ ಸಮುದಾಯದ ವಿದ್ಯಾರ್ಥಿಗಳಿಗೆ ನೀಡುತ್ತಿದ್ದ ಮೆಟ್ರಿಕ್‌ ಪೂರ್ವ ವಿದ್ಯಾರ್ಥಿವೇತನವನ್ನು ದಿಢೀರ್‌ ಸ್ಥಗಿತಗೊಳಿಸಲಾಗಿದೆ. ಉನ್ನತ ಶಿಕ್ಷಣಕ್ಕೆ ಅರಿವು ಯೋಜನೆಯಡಿ ನೀಡುವ ವಿದ್ಯಾರ್ಥಿ ವೇತನಕ್ಕೂ ಕತ್ತರಿ ಹಾಕಲಾಗಿದ್ದು, ಗ್ರಾಮಿಣ ಹಾಗೂ ಬಡ ವಿದ್ಯಾರ್ಥಿಗಳಿಗೆ ಅನ್ಯಾಯವಾಗಿದೆ...

ರಾಜ್ಯ ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷ ಅಬ್ದುಲ್‌ ಅಜೀಮ್ ನೇತೃತ್ವದಲ್ಲಿ ಇಲ್ಲಿ ಸೋಮವಾರ ಏರ್ಪಡಿಸಿದ್ದ ಅಲ್ಪಸಂಖ್ಯಾತರ ಕುಂದು ಕೊರತೆ ಸಭೆಯಲ್ಲಿ ಸಮುದಾಯದ ಮುಖಂಡರು ಅಳಲು ತೋಡಿಕೊಂಡರು. 

‘ಕೊಯಿಲ ಗ್ರಾಮಪಂಚಾಯಿತಿ ವ್ಯಾಪ್ತಿಯಲ್ಲಿ 1500ಕ್ಕೂ ಅಧಿಕ ಅಲ್ಪಸಂಖ್ಯಾತರಿದ್ದಾರೆ. ಇಲ್ಲಿಗೆ ಸಮರ್ಪಕ ರಸ್ತೆ ಇಲ್ಲ. ಇಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕಾಯಂ ವೈದ್ಯರಿಲ್ಲ‘ ಎಂದು ಮುನೀರ್‌ ಕಡಬ ಗಮನ ಸೆಳೆದರು.

ADVERTISEMENT

ಅಲ್ಪಸಂಖ್ಯಾತರ ಕಾಲೊನಿ ಅಭಿವೃದ್ಧಿ ಕಾರ್ಯಕ್ರಮದ ಅಡಿ ರಸ್ತೆ ದುರಸ್ತಿಗೆ ಕ್ರಮವಹಿಸುವಂತೆ ಅಬ್ದುಲ್ ಅಜೀಮ್‌ ಸಲಹೆ ನೀಡಿದರು.

‘ಸಾಲಕ್ಕಾಗಿ ಅರ್ಜಿ ಸಲ್ಲಿಸುವ ಅಲ್ಪಸಂಖ್ಯಾತರಿಂದ ಜಮೀನಿನ ಆರ್‌ಟಿಸಿ, ಮ್ಯುಟೆಷನ್‌‌ ಎಂಟ್ರಿಗಳ ದಾಖಲೆ ಕೇಳುವ ಮೂಲಕ ಬ್ಯಾಂಕ್‌ ಅಧಿಕಾರಿಗಳು ಸತಾಯಿಸುತ್ತಿದ್ದಾರೆ’ ಎಂದು ಅಲ್ಫ್ರೆಡ್‌ ಗಮನ ಸೆಳೆದರು.

‘ಓಬೀರಾಯನ ಕಾಲದ ನಿಯಮ ಈಗಲೂ ಮುಂದುವರಿಸಿದರೆ ಹೇಗೆ. ನಗರ ವ್ಯಾಪ್ತಿಯಲ್ಲಿ ಇ–ಸ್ವತ್ತು ದಾಖಲೆ ಸಲ್ಲಿಸಿದರೆ ಸಾಕಾಗುತ್ತದೆ. ನಿಯಮ ಸರಳೀಕರಿಸಲು ಕ್ರಮ ವಹಿಸಿ’ ಎಂದು ಇಲಾಖೆಯ ಜಿಲ್ಲಾ ಅಧಿಕಾರಿಗೆ ಅಧ್ಯಕ್ಷರು ಸೂಚಿಸಿದರು.

ಸೂರಿಬೈಲ್‌ನ ಎ.ಕೆ.ಹ್ಯಾರಿಸ್, ‘ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ‌ದ ‘ಶ್ರಮ ಶಕ್ತಿ‌’ ಸಾಲ ಈ ಹಿಂದೆ ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ 500 ಫಲಾನುಭವಿಗಳಿಗೆ ಸಿಗುತ್ತಿತ್ತು.‌ ಈಗ ಫಲಾನುಭವಿಗಳ ಸಂಖ್ಯೆಯನ್ನು 20ಕ್ಕೆ ಇಳಿಸಲಾಗಿದೆ. ಈ ಸಾಲಕ್ಕೆ ಸಾವಿರಾರು ಮಂದಿ ಅರ್ಜಿ ಹಾಕುತ್ತಾರೆ. ಸ್ವಾವಲಂಬನೆ ಯೋಜನೆಯ ಸಾಲದ ಸ್ಥಿತಿಯೂ ಇದೇ ರೀತಿ ಇದೆ. ಸಿಬಿಲ್‌ ಸ್ಕೋರ್‌ ಕಡಿಮೆ ಇದೆ ಎಂದು ಇಂತಹ ಸವಲತ್ತುಗಳನ್ನು ನಿರಾಕರಿಸಲಾಗುತ್ತಿದೆ’ ಎಂದು ದೂರಿದರು.

ಶಾಹುಲ್‌ ಹಮೀದ್, ‘ಅಲ್ಪಸಂಖ್ಯಾತರ ಅಭಿವೃದ್ಧಿಗೆ ಈ ಹಿಂದೆ ಬಜೆಟ್‌ನಲ್ಲಿ ₹ 3 ಸಾವಿರ ಕೋಟಿವರೆಗೂ ಅನುದಾನವನ್ನು ಹಂಚಿಕೆ ಮಾಡಲಾಗುತ್ತಿತ್ತು. ಅದನ್ನು ಹಿಂದಿನ ಸರ್ಕಾರ ₹ 700 ಕೋಟಿಗೆ ಇಳಿಸಿದೆ. ವೃತ್ತಿಪರ ಶಿಕ್ಷಣ ಪಡೆಯುವ ವಿದ್ಯಾರ್ಥಿಗಳಿಗೆ ಅರಿವು ಯೋಜನೆಯಲ್ಲಿ ವಿದ್ಯಾರ್ಥಿವೇತನ ಕಡಿತ ಮಾಡಿ ವಿದ್ಯಾರ್ಥಿಗಳ ಕನಸುಗಳಿಗೆ ಬರೆ ಎಳೆಯಲಾಗಿದೆ. ಈ ವಿದ್ಯಾರ್ಥಿ ವೇತನವನ್ನು ನಂಬಿ ಕಾಲೇಜಿಗೆ ಸೇರಿದವರನ್ನು ಸರ್ಕಾರ ನಡು ನೀರಿನಲ್ಲಿ ಕೈಬಿಟ್ಟಿದೆ’ ಎಂದರು.

‘2022–23ನೇ ಸಾಲಿನ ಮೆಟ್ರಿಕ್‌ ನಂತರದ ವಿದ್ಯಾರ್ಥಿವೇತನ ಇನ್ನೂ ಬಿಡುಗಡೆಯಾಗಿಲ್ಲ. ಶಾದಿಭಾಗ್ಯ ಕಾರ್ಯಕ್ರಮವನ್ನೂ ಸ್ಥಗಿತಗೊಳಿಸಲಾಗಿದೆ.  ಗಂಗಾ ಕಲ್ಯಾಣ, ಸಾರಥಿ ಯೋಜನೆಯ ಫಲಾನುಭವಿಗಳ ಪ್ರಮಾಣವನ್ನು ಕಡಿತ ಮಾಡಲಾಗಿದೆ’ ಎಂದು ಗಮನ ಸೆಳೆದರು. 

‘ಮೆಟ್ರಿಕ್‌ ಪೂರ್ವ ವಿದ್ಯಾರ್ಥಿ ವೇತನ ಸ್ಥಗಿತದ ಬಗ್ಗೆ ಈಗಾಗಲೇ ಕೇಂದ್ರ ಸಚಿವೆ ಸ್ಮೃತಿ ಇರಾನಿ ಅವರನ್ನು ಭೇಟಿ ಮಾಡಿ ಚರ್ಚಿಸಿದ್ದೇನೆ. ಆ ಬಳಿಕ ₹ 48 ಕೋಟಿ ಅನುದಾನವನ್ನು ಕೇಂದ್ರ ಬಿಡುಗಡೆ ಮಾಡಿದೆ’ ಎಂದು ಅಬ್ದುಲ್‌ ಅಜೀಮ್‌ ತಿಳಿಸಿದರು.

ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ರಘು, ಆಯೋಗದ ಕಾರ್ಯದರ್ಶಿ ಮುಜೀಬುಲ್‌ ಜಫಾರಿ, ಉಪ‌ಕಾರ್ಯದರ್ಶಿ ರಘು, ಅಲ್ಪಸಂಖ್ಯಾತರ ಜಿಲ್ಲಾ‌ ಕಲ್ಯಾಣಾಧಿಕಾರಿ ಜಿನೇಂದ್ರ, ಜಿಲ್ಲಾ ವಕ್ಫ್ ಅಧಿಕಾರಿ ಅಬೂಬಕ್ಕರ್ ಇದ್ದರು.

‘ಅನಾಥಾಶ್ರಮಗಳಿಗೂ ದುಡ್ಡು ಬಂದಿಲ್ಲ’
‘ನಮ್ಮಲ್ಲಿ 300 ಅನಾಥರಿದ್ದಾರೆ. ಕೊರೊನಾ ನಂತರ ಧನ‌ಸಹಾಯ ಸರಿಯಾಗಿ ಬರುತ್ತಿಲ್ಲ.‌ ಮಂಜೂರಾದ ಮೊತ್ತದ ಬಿಡುಗಡೆಗೂ ಸತಾಯಿಸಲಾಗುತ್ತಿದೆ’ ಎಂದು ಜೆಪ್ಪು ಪ್ರಶಾಂತಿ ನಿಲಯದ ಡೊರೊತಿ ‌ಸಲ್ಡಾನ ದೂರಿದರು. ‘ಕೇಂದ್ರ ಸರ್ಕಾರವು ಪ್ರತಿ ಅನಾಥಾಶ್ರಮದ 25 ಮಂದಿಗೆ ವರ್ಷಕ್ಕೆ ₹ 21 ಲಕ್ಷ ನೀಡುತ್ತದೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯು ಅನಾಶ್ರಮಗಳಿಗೆ ನೀಡುವ ಮೊತ್ತವನ್ನು ₹8 ಲಕ್ಷದಿಂದ ₹ 15 ಲಕ್ಷಕ್ಕೆ ಹೆಚ್ಚಿಸಿದೆ. ಆದರೆ ಅಲ್ಪಸಂಖ್ಯಾತರ ಅಭಿವೃದ್ಧಿ ಇಲಾಖೆ ಈಗಲೂ ಪ್ರತಿ ವ್ಯಕ್ತಿಗೆ ತಿಂಗಳಿಗೆ ₹ 2456 ನೀಡುತ್ತಿದೆ. ಇದು ಏನೇನೂ ಸಾಲದು. ಆಹಾರ ಸಾಮಗ್ರಿ ಔಷಧ ಬೆಲೆ ಗಗನಕ್ಕೆ ಏರಿದೆ. ಈ ವರ್ಷದ ಅನುದಾನ ಇನ್ನೂ ಬಿಡುಗಡೆ ಆಗಿಲ್ಲ’ ಎಂದು ಬೆಳ್ತಂಗಡಿ ಗಂಡಿಬಾಗಿಲು ಸಿಯೋನ್‌ ಅನಾಥಾಶ್ರಮದ ಯು.ಸಿ.ಪೌಲೋಸ್‌ ಅಳಲು ತೋಡಿಕೊಂಡರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.