ADVERTISEMENT

ಮಂಗಳೂರು ವಿಮಾನ ನಿಲ್ದಾಣಕ್ಕೆ ಕೋಟಿ- ಚೆನ್ನಯ ಹೆಸರು ನಾಮಕರಣ ಮಾಡಲು ಆಗ್ರಹ

​ಪ್ರಜಾವಾಣಿ ವಾರ್ತೆ
Published 18 ನವೆಂಬರ್ 2020, 8:08 IST
Last Updated 18 ನವೆಂಬರ್ 2020, 8:08 IST
ಮಿಥುನ್‌ ರೈ
ಮಿಥುನ್‌ ರೈ    

ಮಂಗಳೂರು: ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತುಳುನಾಡಿನ ವೀರರಾದ ಕೋಟಿ -ಚೆನ್ನಯರ ಹೆಸರು ನಾಮಕರಣ ಮಾಡಬೇಕು. ವಿಮಾನ ನಿಲ್ದಾಣಕ್ಕೆ ಅದಾನಿ ಹೆಸರು ನಾಮಕರಣ ಮಾಡಿರುವುದನ್ನು ಕೂಡಲೇ ಹಿಂಪಡೆಯಬೇಕು ಎಂದು ದಕ್ಷಿಣ ಕನ್ನಡ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್‌ ರೈ ಆಗ್ರಹಿಸಿದರು.

ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಂಗಳೂರು ವಿಮಾನ ನಿಲ್ದಾಣವನ್ನು ಅದಾನಿ ಕಂಪನಿಗೆ ಗುತ್ತಿಗೆ ನೀಡಿರುವ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರದ ಬಿಜೆಪಿ ಸರ್ಕಾರವು ಗೌತಮ್ ಅದಾನಿ ಹೆಸರನ್ನು ವಿಮಾನ ನಿಲ್ದಾಣಕ್ಕೆ ಇಡುವ ಮೂಲಕ ದಕ್ಷಿಣ ಕನ್ನಡ ಜಿಲ್ಲೆ ಗೆ ಅವಮಾನ ಮಾಡಿದೆ. ಬೆಂಗಳೂರು ವಿಮಾನ ನಿಲ್ದಾಣವನ್ನು ಖಾಸಗಿ ಕಂಪನಿಗೆ ಗುತ್ತಿಗೆಗೆ ನೀಡಿದ್ದರೂ ಕೆಂಪೇಗೌಡ ವಿಮಾನ ನಿಲ್ದಾಣ ಎಂಬ ಹೆಸರನ್ನು ಬದಲಾವಣೆ ಮಾಡಿಲ್ಲ. ಅದೇ ರೀತಿ ಗುಜರಾತ್ ಮುಂಬಯಿ ವಿಮಾನ ನಿಲ್ದಾಣಗಳ ಹೆಸರನ್ನು ಬದಲಾಯಿಸಿ ಗುತ್ತಿಗೆ ಕಂಪನಿಯ ಹೆಸರನ್ನು ಸೂಚಿಸಿಲ್ಲ. ಈ ಬಗ್ಗೆ ಇಲ್ಲಿನ ಸಂಸದರಾದ ನಳಿನ್ ಕುಮಾರ್ ಕಟೀಲ್ ತಮ್ಮ ಇಚ್ಛಾ ಶಕ್ತಿಯನ್ನು ಪ್ರದರ್ಶಿಸಬೇಕಾಗಿತ್ತು ಎಂದರು.

ಅದಾನಿ ಹೆಸರು ಬದಲಾಯಿಸುವವರೆಗೆ ನಿರಂತರ ಪ್ರತಿಭಟನೆ: ಈಗಾಗಲೇ ಅದಾನಿ ಹೆಸರನ್ನು ಬದಲಾಯಿಸಲು ಆಗ್ರಹಿಸಿ ಕಾಂಗ್ರೆಸ್ ವತಿಯಿಂದ ಒಂದು ದಿನದ ಉಪವಾಸ ಸತ್ಯಾಗ್ರಹ ನಡೆಸಲಾಗಿದೆ. ನ.18ರಂದು ನಗರದ ಸರ್ಕ್ಯೂಟ್ ಹೌಸ್ ನಿಂದ ವಿಮಾನ ನಿಲ್ದಾಣ ದ ವರೆಗೆ ಸಂಜೆ ಪಂಜಿನ ಮೆರವಣಿಗೆ ಯೊಂದಿಗೆ ಪ್ರತಿಭಟನಾ ಪ್ರದರ್ಶನ ನಡೆಯಲಿದೆ. ಈ ಬಗ್ಗೆ ಯಾವುದೇ ಕ್ರಮ ಕೈ ಗೊಳ್ಳದೆ ಇದ್ದರೆ ಅನಿರ್ದಿಷ್ಟವಾಗಿ ಮುಷ್ಕರ ಹಾಗೂ ಪ್ರತಿಭಟನೆಯನ್ನು ಹಮ್ಮಿ ಕೊಳ್ಳಲಾಗುವುದು ಎಂದು ಮಿಥುನ್ ರೈ ತಿಳಿಸಿದರು.

ADVERTISEMENT

ವಿಮಾನ ನಿಲ್ದಾಣದಲ್ಲಿ ಅದಾನಿ ಕಂಪೆನಿಯ ಆನೆಯ ಚಿಹ್ನೆ ತೆರವು ಮಾಡಿ ಹಿಂದೆ ಇದ್ದ ಹುಲಿ ಕುಣಿತದ ಚಿಹ್ನೆ ಯನ್ನು ತಕ್ಷಣ ಅಳವಡಿಸಬೇಕು ಎಂದು ಮಿಥುನ್ ರೈ ಆಗ್ರಹಿಸಿದರು.

ತುಳುನಾಡು ಎಂದು ಕರೆಸಿಕೊಂಡಿರುವ ದಕ್ಷಿಣ ಕನ್ನಡ ಜಿಲ್ಲೆಯ ಇತಿಹಾಸವನ್ನು ಮರೆಮಾಚಿ, ಮಾಜಿ ಸಂಸದ ಶ್ರೀನಿವಾಸ ಮಲ್ಯರ ಪ್ರಯತ್ನದ ಫಲವಾಗಿ ಜಿಲ್ಲೆಗೆ ಬಂದಿರುವ ವಿಮಾನ ನಿಲ್ದಾಣಕ್ಕೆ ಯಾವ ಕೊಡುಗೆಯನ್ನೂ ನೀಡದ ಅದಾನಿಯ ಹೆಸರನ್ನು ಇಟ್ಟಿರುವುದು ಜಿಲ್ಲೆಯ ಜನರಿಗೆ ಮಾಡುತ್ತಿರುವ ಅಪಮಾನ ಮತ್ತು ನಾಚಿಕೆಗೇಡಿನ ಸಂಗತಿಯಾಗಿದೆ ಎಂದು ಮಾಜಿ ಸಚಿವ ಅಭಯ ಚಂದ್ರ ಜೈನ್ ದೂರಿದರು.

ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡರಾದ ಸದಾಶಿವ ಉಳ್ಳಾಲ್, ವಸಂತ್ ಬೆರ್ನಾರ್ಡ್, ಪಿಯೂಸ್ ಮೊದಲಾದವರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.