ಮಂಗಳೂರು: ಮೂಲ್ಕಿ– ಮೂಡುಬಿದಿರೆ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸೋಮವಾರ ನಾಮಪತ್ರ ಸಲ್ಲಿಸಿರುವ ಮಿಥುನ್ ರೈ ₹ 2.63 ಕೋಟಿ ಆಸ್ತಿಯ ಒಡೆಯ.
ಮಿಥುನ್ ಅವರ ಬಳಿ ₹ 1.44 ಕೋಟಿ ಮೌಲ್ಯದ ಚರಾಸ್ತಿ ಹಾಗೂ ₹ 1.19 ಕೋಟಿ ಮೌಲ್ಯದ ಸ್ಥಿರಾಸ್ತಿ ಇದೆ. ಅವರು ಒಟ್ಟು ₹ 1.16 ಕೋಟಿ ಸಾಲವನ್ನೂ ಹೊಂದಿದ್ದಾರೆ. ಅವರಿಗೆ ವಾರ್ಷಿಕ ₹ 6.10 ಲಕ್ಷ ವರಮಾನ ಹಾಗೂ ಪತ್ನಿ ಶರಣ್ಯಾ ಡಿ.ಶೆಟ್ಟಿ ಅವರಿಗೆ ವಾರ್ಷಿಕ ₹ 6.45 ಲಕ್ಷ ವರಮಾನ ಇದೆ. ದಂಪತಿಯ ಪುತ್ರ ಮಹೀಮ್ ರೈ ಹೆಸರಿನಲ್ಲಿ ಯಾವುದೇ ಆಸ್ತಿ ಇಲ್ಲ. ಚುನಾವಣಾ ಆಯೋಗಕ್ಕೆ ಸಲ್ಲಿಸಿರುವ ಪ್ರಮಾಣಪತ್ರದಲ್ಲಿ ಈ ಕುರಿತ ವಿವರಗಳಿವೆ.
‘ತಮ್ಮ ಬಳಿ ₹ 2.55 ಲಕ್ಷ ನಗದು ಹಾಗೂ ಪತ್ನಿ ಬಳಿ ₹60 ಸಾವಿರ ನಗದು ಇದೆ. ವಿವಿಧ ಬ್ಯಾಂಕ್‌ಗಳಲ್ಲಿ ತಮ್ಮ ಹೆಸರಿನಲ್ಲಿ ₹ 38,246 ಠೇವಣಿ ಹಾಗೂ ಪತ್ನಿ ಹೆಸರಿನಲ್ಲಿ ₹ 1.21 ಲಕ್ಷ ಠೇವಣಿ ಇದೆ. ಬಾಂಡ್, ಡಿಬೆಂಚರ್ ಹಾಗೂ ಷೇರುಗಳ ರೂಪದಲ್ಲಿ ₹90.56 ಲಕ್ಷ ಹಾಗೂ ರಾಷ್ಟ್ರೀಯ ಉಳಿತಾಯ ಪತ್ರದಲ್ಲಿ ₹ 2 ಸಾವಿರ ಹೂಡಿಕೆ ಮಾಡಿದ್ದೇನೆ. ಪತ್ನಿಯ ಹೆಸರಿನಲ್ಲಿ ಯಾವುದೇ ಹೂಡಿಕೆ ಇಲ್ಲ’ ಎಂದು ಮಿಥುನ್ ರೈ ಹೇಳಿಕೊಂಡಿದ್ದಾರೆ.
ಅವರ ಬಳಿ ₹ 4.98 ಲಕ್ಷ ಮೌಲ್ಯದ ಹ್ಯುಂಡೈ ಎಲೈಟ್ ಹಾಗೂ ₹ 24.81 ಲಕ್ಷ ಮೌಲ್ಯದ ಟೊಯೋಟಾ ಇನೋವಾ ಕಾರುಗಳಿವೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು 2022ರ ಏ 12ರಂದು ನಗರದ ಓಷೀನ್ ಪರ್ಲ್ ಹೋಟೆಲ್‌ನಲ್ಲಿ ವಾಸ್ತವ್ಯ ಹೂಡಿದ್ದಾಗ, ಪಕ್ಷದ ಕಾರ್ಯಕರ್ತರನ್ನು ಒಗ್ಗೂಡಿಸಿಕೊಂಡು ಹೋಟೆಲ್‌ಗೆ ನುಗ್ಗಲು ಯತ್ನಿಸಿದ ಹಾಗೂ ಕಪ್ಪು ಬಾವುಟ ಪ್ರದರ್ಶಿಸಿದ ಪ್ರಕರಣವೂ ಸೇರಿ ಎರಡು ಪ್ರಕರಣಗಳು ಮಿಥುನ್ ರೈ ವಿರುದ್ಧ ದಾಖಲಾಗಿವೆ.
ಮಿಥುನ್ ರೈ ಪತ್ನಿ ಬಳಿ ಅರ್ಧ ಕೆ.ಜಿ ಚಿನ್ನ
ಅವರ ಬಳಿ 320 ಗ್ರಾಂ ಚಿನ್ನಾಭರಣ ( ₹17.74 ಲಕ್ಷ ಮೌಲ್ಯ), 800 ಗ್ರಾಂ ಬೆಳ್ಳಿ (₹ 64,600) ಸೇರಿದಂತೆ ಒಟ್ಟು 18.38 ಲಕ್ಷದ ಆಭರಣಗಳಿವೆ. ಅವರ ಪತ್ನಿ ಬಳಿ 560 ಗ್ರಾಂ ( ₹31.04 ಲಕ್ಷ ಮೌಲ್ಯ) ಚಿನ್ನಾಭರಣಗಳು, 3.025 ಕೆ.ಜಿ. ಬೆಳ್ಳಿ (₹ 2.42 ಲಕ್ಷ) ಹಾಗೂ 28 ಲಕ್ಷ ಮೌಲ್ಯದ ವಜ್ರಾಭರಣಗಳು ಸೇರಿ ₹61.46 ಲಕ್ಷ ಮೌಲ್ಯದ ಆಭರಣಗಳಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.