ADVERTISEMENT

75 ಸಾವಿರ ಜನರಿಗೆ ವಸ್ತ್ರದಾನ: ಶಾಸಕ ಅಶೋಕ್‌ ಕುಮಾರ್‌ ರೈ ಟ್ರಸ್ಟ್‌ನಿಂದ ವಿತರಣೆ

​ಪ್ರಜಾವಾಣಿ ವಾರ್ತೆ
Published 27 ಅಕ್ಟೋಬರ್ 2024, 14:09 IST
Last Updated 27 ಅಕ್ಟೋಬರ್ 2024, 14:09 IST
ಅಶೋಕ್ ಕುಮಾರ್ ರೈ
ಅಶೋಕ್ ಕುಮಾರ್ ರೈ   

ಮಂಗಳೂರು: ‘ರೈ ಎಸ್ಟೇಟ್‌ ಎಜುಕೇಶನಲ್‌ ಆ್ಯಂಡ್‌ ಚಾರಿಟಬಲ್‌ ಟ್ರಸ್ಟ್‌ನಿಂದ ದೀಪಾವಳಿ ಪ್ರಯುಕ್ತ 75 ಸಾವಿರ ಜನರಿಗೆ ವಸ್ತ್ರದಾನ ಮತ್ತು ಸಹಭೋಜನ ಕಾರ್ಯಕ್ರಮ ನ. 2ರಂದು ಪುತ್ತೂರಿನಲ್ಲಿ ಆಯೋಜಿಸಲಾಗಿದೆ’ ಎಂದು ಪುತ್ತೂರು ಶಾಸಕ ಅಶೋಕ್‌ ಕುಮಾರ್‌ ರೈ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಇದು 12ನೇ ವರ್ಷದ ವಸ್ತ್ರದಾನ ಕಾರ್ಯಕ್ರಮ. ಕಳೆದ ವರ್ಷ 63,500 ಜನರಿಗೆ ವಸ್ತ್ರ ವಿತರಿಸಲಾಗಿತ್ತು. ಈ ಬಾರಿ 75 ಸಾವಿರ ಜನರಿಗೆ ವಿತರಿಸುತ್ತಿದ್ದೇವೆ. ಹೆಚ್ಚುವರಿಯಾಗಿ 10 ಸಾವಿರ ಜನರಿಗೆ ಆಗುವಷ್ಟು ವಸ್ತ್ರಗಳನ್ನು ಸಿದ್ಧವಾಗಿಟ್ಟುಕೊಂಡಿದ್ದೇವೆ. ಇದು ಪಕ್ಷಾತೀತ ಮತ್ತು ಜಾತ್ಯತೀತ ಕಾರ್ಯಕ್ರಮ’ ಎಂದರು.

‘ಒಂದು ಕುಟುಂಬಕ್ಕೆ ಐವರಿಗೆ ಕೊಡುತ್ತಿದ್ದೇವೆ. ಮಹಿಳೆಯರಿಗೆ ಸೀರೆ ಹಾಗೂ ಮಕ್ಕಳು, ಪುರುಷರಿಗೆ ಬೆಡ್‌ಶೀಟ್‌ ವಿತರಿಸುತ್ತಿದ್ದೇವೆ. ಸಾವಿರ ಕಾರ್ಯಕರ್ತರು ಕಾರ್ಯಕ್ರಮದ ಯಶಸ್ಸಿಗೆ ಶ್ರಮಿಸಲಿದ್ದಾರೆ. 300 ಬಾಣಸಿಗರು ಅಡುಗೆ ತಯಾರಿಸಲಿದ್ದಾರೆ. ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌, ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್‌ ಗುಂಡೂರಾವ್‌, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮಿ ಹೆಬ್ಬಾಳಕರ ಬರಲಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೂ ಭಾಗವಹಿಸುವ ನಿರೀಕ್ಷೆ ಇದೆ’ ಎಂದರು.

ADVERTISEMENT

‘ನಮ್ಮ ಟ್ರಸ್ಟ್‌ನಿಂದ 14 ವರ್ಷಗಳಿಂದ ಪಕ್ಷಾತೀತ, ಜಾತ್ಯತೀತವಾಗಿ ನೆರವು ನೀಡುತ್ತಾ ಬಂದಿದ್ದೇವೆ. ಬಸ್‌ ಪಾಸ್‌, ಪ್ಯಾನ್‌ ಕಾರ್ಡ್‌, ಪಾಸ್‌ಪೋರ್ಟ್‌ ಮಾಡಿಸಿಕೊಡುವುದು, ಉಚಿತ ವಾಹನ ಚಾಲನಾ ತರಬೇತಿ, ಮಹಿಳೆಯರಿಗೆ ಹೊಲಿಗೆ ಯಂತ್ರ ವಿತರಣೆಯಂತಹ ಸಾಮಾಜಿಕ ಕೆಲಸ ಮಾಡುತ್ತಿದ್ದೇವೆ’ ಎಂದರು.

ಟ್ರಸ್ಟ್‌ನಲ್ಲಿ ನೆರವು ಕೋರಿ 600 ಮಹಿಳೆಯರು ನೋಂದಣಿ ಮಾಡಿಕೊಂಡಿದ್ದಾರೆ. ಅವರಿಗೆ ನಿವೇಶನ ಕೊಡುವ ಯೋಜನೆ ಹಾಕಿಕೊಂಡಿದ್ದೇವೆ. 10 ಎಕರೆ ಜಾಗ ಖರೀದಿಸಿದ್ದು, ಪ್ರಥಮ ಹಂತದಲ್ಲಿ 240 ಜನರಿಗೆ ತಲಾ 3 ಸೆಂಟ್ಸ್‌ ಜಾಗ ನೀಡುತ್ತಿದ್ದೇವೆ. ಆ ವಸತಿ ಬಡಾವಣೆಯಲ್ಲಿ ಮೂಲಸೌಲಭ್ಯ ಕಲ್ಪಿಸುತ್ತಿದ್ದು, ಮುಂದಿನ ವರ್ಷ ನಿವೇಶನ ವಿತರಿಸಲಾಗುವುದು. ಬಡವರಿಗೆ ಸರ್ಕಾರದ ಯೋಜನೆಯಲ್ಲಿ ಇಲ್ಲಿ ಮನೆ ನಿರ್ಮಿಸಿಕೊಡುವ ಕುರಿತು ಮುಖ್ಯಮಂತ್ರಿ ಅವರೊಂದಿಗೆ ಚರ್ಚಿಸಿದ್ದು, ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ಹೇಳಿದರು.

ಗೂಡುದೀಪ ಸ್ಪರ್ಧೆ: ವಸ್ತ್ರದಾನ ಕಾರ್ಯಕ್ರಮದ  ಜೊತೆಗೆ ಗೂಡುದೀಪ ಸ್ಪರ್ಧೆಯನ್ನೂ ಆಯೋಜಿಸುತ್ತಿದ್ದು 500 ಮಂದಿ ಸ್ಪರ್ಧೆಗೆ ನೋಂದಣಿ ಮಾಡಿಸಿಕೊಂಡಿದ್ದಾರೆ. ಕ್ರಮವಾಗಿ ಪ್ರಥಮ, ದ್ವಿತೀಯ, ತೃತೀಯ ₹10 ಸಾವಿರ, ₹7,500 ಹಾಗೂ ₹5000 ಬಹುಮಾನ ನೀಡಲಾಗುವುದು ಅಶೋಕ್‌ ಕುಮಾರ್‌ ರೈ ತಿಳಿಸಿದರು.

ಅಭಿವೃದ್ಧಿ ಪರ್ವ: ‘ಪುತ್ತೂರು ಕ್ಷೇತ್ರದಲ್ಲಿ ಅಭಿವೃದ್ಧಿ ಪರ್ವ ಆರಂಭಿಸಲಾಗಿದೆ. ಕಳೆದ ವರ್ಷ ₹1,476 ಕೋಟಿ ಅನುದಾನ ತಂದಿದ್ದೇನೆ. ಪುತ್ತೂರು ಹಾಗೂ ಸುಳ್ಯ ಕ್ಷೇತ್ರದ 20 ಗ್ರಾಮಗಳಿಗೆ ಶುದ್ಧೀಕರಿಸಿದ ಕುಡಿಯುವ ನೀರು ಪೂರೈಸುವ ಯೋಜನೆಗೆ ₹1,010 ಕೋಟಿ ಅನುದಾನ ಬಂದಿದ್ದು, ಆ ಪೈಕಿ ₹410 ಕೋಟಿ ಬಿಡುಗಡೆಯಾಗಿದೆ. ಈ ವರ್ಷ ಈ ವರೆಗೆ ₹79.2 ಕೋಟಿ ಅನುದಾನ ಬಿಡುಗಡೆಯಾಗಿದೆ’ ಎಂದು ಶಾಸಕ ಹೇಳಿದರು.

‘ಉಪ್ಪಿನಂಗಡಿ– ಪುತ್ತೂರು ರಸ್ತೆಯನ್ನು ಚತುಷ್ಪಥ ಮತ್ತು ಮಾದರಿ ರಸ್ತೆಯನ್ನಾಗಿ ಅಭಿವೃದ್ಧಿ ಪಡಿಸಲಾಗುವುದು. ಇದರ ಬದಿಯಲ್ಲಿ ಹಣ್ಣಿನ ಗಿಡ ಬೆಳಸಲಾಗುತ್ತಿದೆ. ಇದಕ್ಕಾಗಿ ಶಾಸಕರ ಕ್ಷೇತ್ರಾಭಿವೃದ್ಧಿ ನಿಧಿಯಲ್ಲಿ ₹30 ಲಕ್ಷ ನೀಡಿದ್ದೇನೆ. ಪುತ್ತೂರಲ್ಲಿ ಔದ್ಯಮಿಕ ಅಭಿವೃದ್ಧಿಗಾಗಿ 300 ಎಕರೆ ಜಾಗ ಗುರುತಿಸಲಾಗಿದೆ. 15 ಎಕರೆಯನ್ನು ಕೆಎಂಎಫ್‌ಗೆ ನೀಡಿದ್ದು, ಅಲ್ಲಿ ಅವರು ಬಾಟ್ಲಿಂಗ್‌ ಘಟಕ ಆರಂಭಿಸಲಿದ್ದಾರೆ. ಇನ್ನೂ ಎರಡು ಕಂಪನಿಗಳು ₹300 ಕೋಟಿ ಹೂಡಿಕೆಗೆ ಮುಂದೆ ಬಂದಿವೆ. ನಮ್ಮ ಕ್ಷೇತ್ರದಲ್ಲಿ ಉದ್ಯೋಗ ಸೃಜನೆಗೆ ಒತ್ತು ನೀಡಲಾಗುತ್ತಿದೆ. ಪುತ್ತೂರಿಗೆ ವರ್ತುಲ ರಸ್ತೆ, ಒಳಚರಂಡಿ ವ್ಯವಸ್ಥೆಗೆ ಡಿಪಿಆರ್‌ ಸಿದ್ಧಪಡಿಸಲಾಗಿದೆ’

ಉಪ್ಪಿನಂಗಡಿಯ ಸಹಸ್ರಲಿಂಗೇಶ್ವರ ದೇವಸ್ಥಾನದ ಸಂಗಮ ಸ್ಥಳವನ್ನು ಕೂಡಲ ಸಂಗಮ ಮಾದರಿಯಲ್ಲಿ ಅಭಿವೃದ್ಧಿ ಪಡಿಸಲು ಹಾಗೂ ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದ ಅಭಿವೃದ್ಧಿ ಸೇರಿದಂತೆ ಕ್ಷೇತ್ರದಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ ₹550 ಕೋಟಿ ಮೊತ್ತದ ಯೋಜನಾ ವರದಿ ಸಿದ್ಧಪಡಿಸಲಾಗಿದೆ.  ಪುತ್ತೂರಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪನೆ, ಕ್ರೀಡಾಂಗಣ ನಿರ್ಮಾಣ, 50 ಹಾಸಿಗೆಯ ಆಯುಷ್‌ ಆಸ್ಪತ್ರೆ ನಿರ್ಮಾಣ ಹೀಗೆ ಹಲವಾರು ಯೋಜನೆಗಳನ್ನು ಹಮ್ಮಿಕೊಳ್ಳಲಾಗಿದೆ. ಅಕ್ರಮ–ಸಕ್ರಮದ 32 ಸಾವಿರ ಕಡತಗಳು ವಿಲೇವಾರಿಗೆ ಬಾಕಿ ಇದ್ದು, ಆ ಪೈಕಿ 3,400 ಕಡತಗಳನ್ನು ವಿಲೇವಾರಿ ಮಾಡಲಾಗಿದೆ ಎಂದು ಅವರು ಮಾಹಿತಿ ನೀಡಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.