ADVERTISEMENT

ನಾನು ನಡೆದುಕೊಂಡ ರೀತಿ ನೂರಕ್ಕೆ ನೂರು ಸರಿ: ಶಾಸಕ ಪೂಂಜ

​ಪ್ರಜಾವಾಣಿ ವಾರ್ತೆ
Published 4 ಜೂನ್ 2024, 2:36 IST
Last Updated 4 ಜೂನ್ 2024, 2:36 IST
ಹರೀಶ್ ಪೂಂಜ
ಹರೀಶ್ ಪೂಂಜ   

ಮಂಗಳೂರು: ಕಲ್ಲಿನ ಅಕ್ರಮ ಗಣಿಗಾರಿಕೆ ಹಾಗೂ ಸ್ಫೋಟಕಗಳ ಅಕ್ರಮ ದಾಸ್ತಾನು ಪ್ರಕರಣದಲ್ಲಿ ಬಂಧನಕ್ಕೊಳಗಾದ ಬಿಜೆಪಿ ಯುವ ಮೋರ್ಚಾ‌ದ ಬೆಳ್ತಂಗಡಿ ಮಂಡಲದ ಅಧ್ಯಕ್ಷ ಶಶಿರಾಜ್‌ ಶೆಟ್ಟಿ ಬಿಡುಗಡೆಗೆ ಒತ್ತಾಯಿಸಿ ಪೊಲೀಸ್‌ ಠಾಣೆಗೆ ತೆರಳಿದ್ದನ್ನು ಶಾಸಕ ಹರೀಶ್‌ ಪೂಂಜ ಸಮರ್ಥಿಸಿಕೊಂಡರು.

ಇಲ್ಲಿ ಸುದ್ದಿಗೋಷ್ಠಿಯಲ್ಲಿ ಪ್ರಶ್ನೆಯೊಂದಕ್ಕೆ ಸೋಮವಾರ ಉತ್ತರಿಸಿದ ಅವರು ‘ಶಶಿರಾಜ್‌ ಶೆಟ್ಟಿಯಂತಹ ನಿರಪರಾಧಿಯನ್ನು ರಾಜಕೀಯ ಷಡ್ಯಂತ್ರದಿಂದ  ಬಂಧಿಸಿದಾಗ ಪ್ರತಿಭಟಿಸುವುದು ನನ್ನ ಹಕ್ಕು ಮತ್ತು ಬದ್ಧತೆ. ಅದನ್ನು ಮುಂದೆಯೂ ಮಾಡುತ್ತೇನೆ. ನಾನು ಅಂದು ನಡೆದುಕೊಂಡ ರೀತಿ ನೂರಕ್ಕೆ ನೂರು ಸರಿ’ ಎಂದು  ಹೇಳಿದರು.

‘ಠಾಣೆ ನಿಮ್ಮ ಅಪ್ಪನದಾ ಎಂದು ಕೇಳಿದರೆ ತಪ್ಪೇನಿದೆ’ ಎಂದು ಪ್ರಶ್ನಿಸಿದ ಅವರು, ‘ನನ್ನನ್ನು ಬಂಧಿಸಲು ಬಂದ ದಿನದ ಬೆಳವಣಿಗೆ ಬಗ್ಗೆ ಹೇಳಿಕೆ ನೀಡಿರುವ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಸಿ.ಬಿ.ರಿಷ್ಯಂತ್‌ ಕಾಂಗ್ರೆಸ್ ವಕ್ತಾರರಂತೆ ವರ್ತಿಸಿದ್ದಾರೆ. ನನ್ನನ್ನು ಬಂಧಿಸಲು 15 ಪೊಲೀಸರು ಬಂದಿದ್ದರೂ, ಮೂವರು ಪೊಲೀಸರನ್ನು ಮಾತ್ರ ಕಳುಹಿಸಿದ್ದೆ ಎಂದು ದಾರಿ ತಪ್ಪಿಸುವ ಹೇಳಿಕೆ ನೀಡಿದ್ದಾರೆ’ ಎಂದು ಆರೋಪಿಸಿದರು. 

ADVERTISEMENT

ವಕೀಲ ಶಂಭು ಶರ್ಮ, ‘ಪೂಂಜ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್‌ 353ರ ಅಡಿ ದಾಖಲಾಗಿರುವ ಪ್ರಕರಣದಲ್ಲಿ ಅವರನ್ನು ಬಂಧಿಸಬೇಕಾದರೆ  ಮೂರು ನೋಟಿಸ್ ನೀಡಬೇಕು. ಜಿಲ್ಲಾ ಪೊಲೀಸ್‌ ವರಿಷ್ಠರು ಹೇಳಿರುವಂತೆ ಪೂಂಜ ಬಂಧನವೂ ಆಗಿಲ್ಲ, ಅವರಿಗೆ ಠಾಣೆಯಲ್ಲಿ ಜಾಮೀನು ನೀಡಿಯೂ ಇಲ್ಲ’ ಎಂದರು.

ಸುದ್ದಿಗೋಷ್ಠಿಯಲ್ಲಿ ಸಂಸದ ನಳಿನ್‌ ಕುಮಾರ್‌ ಕಟೀಲ್‌, ಶಾಸಕ ಡಾ.ವೈ.ಭರತ್ ಶೆಟ್ಟಿ, ಡಿ.ವೇದವ್ಯಾಸ ಕಾಮತ್‌, ಭಾಗಿರಥಿ ಮುರುಳ್ಯ, ವಿಧಾನ ಪರಿಷತ್ ಸದಸ್ಯ ಪ್ರತಾಪಸಿಂಹ ನಾಯಕ್, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಸತೀಶ್ ಕುಂಪಲ, ಲೋಕಸಭಾ ಚುನಾವಣೆಯ ಅಭ್ಯರ್ಥಿ ಕ್ಯಾ.ಬ್ರಿಜೇಶ್‌ ಚೌಟ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.