ADVERTISEMENT

ಮಂಗಳೂರು: ಹೊಸ ಮಾರುಕಟ್ಟೆಯಲ್ಲಿ ಬೀಫ್‌ ಮಳಿಗೆ -ಶಾಸಕ ವೇದವ್ಯಾಸ್‌ ಕಾಮತ್‌ ವಿರೋಧ

​ಪ್ರಜಾವಾಣಿ ವಾರ್ತೆ
Published 7 ನವೆಂಬರ್ 2022, 19:30 IST
Last Updated 7 ನವೆಂಬರ್ 2022, 19:30 IST
ವೇದವ್ಯಾಸ್‌ ಕಾಮತ್‌
ವೇದವ್ಯಾಸ್‌ ಕಾಮತ್‌    

ಮಂಗಳೂರು: ನಗರದ ಹಳೆ ಮಾರುಕಟ್ಟೆ ನೆಲಸಮಗೊಳಿಸಿರುವ ಸ್ಥಳದಲ್ಲಿ ₹ 114 ಕೋಟಿ ವೆಚ್ಚದಲ್ಲಿ ಸುಸಜ್ಜಿತ ಕೇಂದ್ರ ಮಾರುಕಟ್ಟೆ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗಿದ್ದು, ಇಲ್ಲಿ ದನದ ಮಾಂಸ (ಬೀಫ್) ಮಾರಾಟದ 9 ಮಳಿಗೆಗಳು ಇರಲಿವೆ ಎಂಬುದು ಯೋಜನಾ ವರದಿಯಲ್ಲಿದೆ.

ಇದಕ್ಕೆ ಶಾಸಕ ವೇದವ್ಯಾಸ್‌ ಕಾಮತ್‌ ವಿರೋಧ ವ್ಯಕ್ತಪಡಿಸಿದ್ದು, ಇಲ್ಲಿ ಬೀಫ್ ಮಳಿಗೆಗಳಿದ್ದರೆ ಮಾರುಕಟ್ಟೆ ನಿರ್ಮಾಣಕ್ಕೆ ಭೂಮಿಪೂಜೆಯನ್ನೇ ಮಾಡುವುದಿಲ್ಲ ಎಂದು ತಿಳಿಸಿದ್ದಾರೆ.

ಗೋಹತ್ಯೆ ನಿಷೇಧ ಕಾನೂನು ಜಾರಿಗೊಂಡಿದ್ದು ಮಾರುಕಟ್ಟೆಯಲ್ಲಿ ಬೀಫ್ ಮಳಿಗೆಗಳಿಗೆ ಅನುಮತಿ ನೀಡಲಾಗುವುದಿಲ್ಲ. ಹಿಂದೆ ಇದ್ದ ಪ್ರಸ್ತಾವವನ್ನು ಬದಲಾಯಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಅವರು ಹೇಳಿದ್ದಾರೆ.

ADVERTISEMENT

‘ಮಹಾನಗರ ಪಾಲಿಕೆಯ ಅಧೀನದಲ್ಲಿನ ಕೇಂದ್ರ ಮಾರುಕಟ್ಟೆ ನಿರ್ಮಾಣಕ್ಕೆ ಅಧಿಕೃತ ಶಿಲಾನ್ಯಾಸ ಕೈಗೊಂಡಿಲ್ಲ. ನಿರ್ಮಾಣ ಕಾಮಗಾರಿ ಇನ್ನಷ್ಟೇ ಪ್ರಾರಂಭಿಸಬೇಕಿದೆ. ಹಳೇ ಮಾರುಕಟ್ಟೆಯಲ್ಲಿ ಈ ಹಿಂದೆ ಕಾರ್ಯನಿರ್ವಹಿಸುತ್ತಿದ್ದ ಮಾಂಸದ ಮತ್ತು ಇನ್ನಿತರ ಅಂಗಡಿ ಮುಂಗಟ್ಟುಗಳ ಆಧಾರದಲ್ಲಿ ಸ್ಮಾರ್ಟ್‌ ಸಿಟಿ ಬಹಳ ಹಿಂದೆ ಇದರ ರೂಪರೇಷೆ, ನಕ್ಷೆಯನ್ನು ತಯಾರಿಸಿತ್ತೇ ವಿನಾ ಯಾವುದೇ ಮಾಂಸದ ಅಂಗಡಿಗಳಿಗೆ ಟೆಂಡರ್ ಪ್ರಕ್ರಿಯೆಯನ್ನು ನಡೆಸಿ ಅನುಮತಿ ನೀಡಿಲ್ಲ’ ಎಂದು ಮೇಯರ್ ಜಯಾನಂದ ಅಂಚನ್ ತಿಳಿಸಿದ್ದಾರೆ.

‘ಮಹಾನಗರ ಪಾಲಿಕೆಯ ಹಿಂದಿನ ಮಾರುಕಟ್ಟೆಯಲ್ಲಿ ಬೀಫ್ ಮಳಿಗೆಗಳು ಇದ್ದವು. ಆ ಮಳಿಗೆಗಳು ಮುಂದುವರಿಯಲಿವೆ. ಸರ್ಕಾರದಿಂದ ಬೀಫ್ ಮಳಿಗೆಗಳನ್ನು ನಿಷೇಧಿಸಬೇಕೆಂಬ ಆದೇಶ ಬಂದರೆ, ಅದನ್ನು ಪಾಲಿಸುತ್ತೇವೆ’ ಎಂದು ಮಂಗಳೂರು ಮಹಾನಗರ ಪಾಲಿಕೆ ಆಯುಕ್ತ ಅಕ್ಷಯ್ ಶ್ರೀಧರ್ ಪ್ರತಿಕ್ರಿಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.