ADVERTISEMENT

ಪರಿಷತ್ ಚುನಾವಣೆ : 53 ಸೂಕ್ಷ್ಮ ಮತಗಟ್ಟೆ; ಮುಲ್ಲೈ ಮುಗಿಲನ್ ಎಂ.ಪಿ

ಹೆಚ್ಚುವರಿ ಪೊಲೀಸ್ ಬಂದೋಬಸ್ತ್ , ಮೈಕ್ರೊ ವೀಕ್ಷಕರ ನೇಮಕ

​ಪ್ರಜಾವಾಣಿ ವಾರ್ತೆ
Published 19 ಅಕ್ಟೋಬರ್ 2024, 15:37 IST
Last Updated 19 ಅಕ್ಟೋಬರ್ 2024, 15:37 IST
ಮುಲ್ಲೈ ಮುಗಿಲನ್
ಮುಲ್ಲೈ ಮುಗಿಲನ್   

ಮಂಗಳೂರು: ವಿಧಾನ ಪರಿಷತ್‌ನ ದಕ್ಷಿಣ ಕನ್ನಡ ಸ್ಥಳೀಯ ಸಂಸ್ಥೆಗಳ ಕ್ಷೇತ್ರದ ಉಪಚುನಾವಣೆಯಲ್ಲಿ 53 ಸೂಕ್ಷ್ಮ ಮತಗಟ್ಟೆಗಳಿವೆ ಎಂದು ಜಿಲ್ಲಾ ಚುನಾವಣಾಧಿಕಾರಿ ಮುಲ್ಲೈ ಮುಗಿಲನ್ ಎಂ.ಪಿ ತಿಳಿಸಿದ್ದಾರೆ.

ಸೂಕ್ಷ್ಮ ಮತಗಟ್ಟೆಗಳಲ್ಲಿ ಸಂಪೂರ್ಣ ವಿಡಿಯೊ ಚಿತ್ರೀಕರಣ ವ್ಯವಸ್ಥೆ ಹಾಗೂ ಹೆಚ್ಚುವರಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. 20ಕ್ಕಿಂತ ಹೆಚ್ಚು ಮತದಾರರು ಇರುವ ಮತಗಟ್ಟೆಗಳಲ್ಲಿ ಮೈಕ್ರೊ ವೀಕ್ಷಕರ ನೇಮಕ ಮಾಡಲಾಗಿದೆ.

ಆಯಾ ಗ್ರಾಮ ಪಂಚಾಯಿತಿಯಲ್ಲಿ ಹಾಗೂ ನಗರ ಸ್ಥಳೀಯ ಸಂಸ್ಥೆಗಳಲ್ಲಿರುವ ಸಿಸಿಟಿವಿ ಕ್ಯಾಮೆರಾಗಳನ್ನು ಚುನಾವಣಾ ಪ್ರಕ್ರಿಯೆಗೆ ಬಳಸಲಾಗುತ್ತಿದೆ. ಕ್ಷೇತ್ರದಲ್ಲಿ ಒಟ್ಟು 392 ಮತಗಟ್ಟೆಗಳಿದ್ದು 6,032 ಮತದಾರರಿದ್ದಾರೆ. ಈ ಪೈಕಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 3,552 ಹಾಗೂ ಉಡುಪಿ ಜಿಲ್ಲೆಯಲ್ಲಿ 2,480 ಮತದಾರರಿದ್ದಾರೆ ಎಂದು ತಿಳಿಸಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 223 ಗ್ರಾಮ ಪಂಚಾಯಿತಿಗಳ 3,263 ಸದಸ್ಯರು, ಮಂಗಳೂರು ಮಹಾನಗರ ಪಾಲಿಕೆಯಲ್ಲಿ 65, ಎರಡು ನಗರಸಭೆಗಳಲ್ಲಿ 64, ಮೂರು ಪುರಸಭೆಗಳಲ್ಲಿ 74 ಹಾಗೂ ಐದು ನಗರ ಪಂಚಾಯಿತಿಗಳಲ್ಲಿ 86 ಮಂದಿ ಮತ ಚಲಾಯಿಸಲು ಅರ್ಹರಾಗಿದ್ದಾರೆ.

ADVERTISEMENT

ಉಡುಪಿ ಜಿಲ್ಲೆಯಲ್ಲಿ 153 ಗ್ರಾಮ ಪಂಚಾಯಿತಿಗಳಲ್ಲಿ 2,355 ಸದಸ್ಯರು, ಉಡುಪಿ ನಗರ ಸಭೆಯಲ್ಲಿ 36, ಮೂರು ಪುರಸಭೆಗಳಲ್ಲಿ 72 ಹಾಗೂ ಒಂದು ನಗರ ಪಂಚಾಯಿತಿಯಲ್ಲಿ 17 ಮಂದಿ ಮತ ಚಲಾಯಿಸಲು ಅರ್ಹರು.

ಚುನಾವಣೆ ನಡೆಸಲು 392 ಮತಗಟ್ಟೆಗಳಿಗೆ, ಮತಗಟ್ಟೆ ಅಧಿಕಾರಿ, ಸಹಾಯಕ ಮತಗಟ್ಟೆ ಅಧಿಕಾರಿ, ಮೈಕ್ರೊ ವೀಕ್ಷಕರನ್ನು ನೇಮಿಸಲಾಗಿದೆ. ಮತ ಎಣಿಕೆ ಮಂಗಳೂರು ಸೇಂಟ್ ಅಲೋಶಿಯಸ್ ಪದವಿಪೂರ್ವ ಕಾಲೇಜಿನಲ್ಲಿ ಅ.24ರಂದು ನಡೆಯಲಿದೆ ಎಂದಿದ್ದಾರೆ.

ಭದ್ರತೆಗೆ ಸಂಬಂಧಿಸಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಒಟ್ಟು 540, ಉಡುಪಿ ಜಿಲ್ಲೆಯಲ್ಲಿ 328 ಪೊಲೀಸ್ ಅಧಿಕಾರಿ, ಸಿಬ್ಬಂದಿ ನಿಯೋಜಿಸಲಾಗಿದೆ. ಮತಗಟ್ಟೆಗಳು ಇರುವ ಪ್ರದೇಶ ವ್ಯಾಪ್ತಿಗೆ ಸಂಬಂಧಿಸಿ ಕಲಂ 163 ರಂತೆ ನಿಷೇಧಾಜ್ಞೆ ಹೊರಡಿಸಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

ಪ್ರಾಶಸ್ತ್ಯ ಮತ: ನೇರಳೆ ಪೆನ್ನು ಮತದಾರರು ಮತಗಟ್ಟೆಯಲ್ಲಿ ನೀಡುವ ನೇರಳೆ ಪೆನ್‌ನಿಂದ ಮತಪತ್ರದಲ್ಲಿ ಪ್ರಾಶಸ್ತ್ಯ ಅನುಸಾರ ಮತ ಚಲಾಯಿಸಬೇಕು. ಮೊದಲನೇ ಪ್ರಾಶಸ್ತ್ಯದ ಮತವನ್ನು ಯಾವ ಅಭ್ಯರ್ಥಿಗೆ ಚಲಾಯಿಸುತ್ತಿದ್ದಾರೆ ಎಂಬುದನ್ನು ಕ್ರಮ ಸಂಖ್ಯೆ ‘1’ ಎಂದು ಇಂಗ್ಲಿಷ್ ಕನ್ನಡ ಅಥವಾ ರೋಮನ್ ಅಂಕೆಯಲ್ಲಿ ನಮೂದಿಸಬೇಕು. ಪ್ರಾಶಸ್ತ್ಯವನ್ನು ಅಂಕಿಗಳ ಮೂಲಕ ಮಾತ್ರ ಎಂದರೆ 1 2 3 ಕ್ರಮದಲ್ಲಿ ಮಾತ್ರ ಗುರುತು ಹಾಕಬೇಕು. ಅಕ್ಷರಗಳ ರೂಪದಲ್ಲಿ ಬರೆಯಬಾರದು ಎಂದು ಸೂಚನೆ ನೀಡಲಾಗಿದೆ. ಬೇರೆ ಪೆನ್ನು ಅಥವಾ ಗುರುತು ಮಾಡುವ ಸಾಧನವನ್ನು ಬಳಸಿ ಮತ ಚಲಾಯಿಸಿದರೆ ಅಂತಹ ಮತಪತ್ರವನ್ನು ಅಸಿಂಧು ಎಂದು ಪರಿಗಣಿಸಲಾಗುವುದು. ಈ ಬಗ್ಗೆ ಈಗಾಗಲೇ ಮತದಾರರಿಗೆ ಮಾಹಿತಿ ನೀಡಲಾಗಿದೆ. ಮತಗಟ್ಟೆಗೆ ಮೊಬೈಲ್ ಫೋನ್ ಕೊಂಡೊಯ್ಯಲು ಅವಕಾಶ ಇಲ್ಲ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.